ನಾವು ಏನೋ ಪಡೆಯಬೇಕೆಂದು ಬಲೆ ಬೀಸಿರುತ್ತೇವೆ, ಆದರೆ ಒಮ್ಮೊಮ್ಮೆ ನಮ್ಮ ಬಲೆಯಲ್ಲಿ ಇನ್ನೆನೋ ಸಿಕ್ಕಿರುತ್ತೆ. ಇದು ಜೀವನದಲ್ಲಿ ಹೆಚ್ಚು ಕಮ್ಮಿ ಎಲ್ಲಾ ಸಂದರ್ಭಕ್ಕೂ ಅನ್ವಯವಾಗುವ ಮಾತು. ಇಲ್ಲಿ ನಾವು ಮಾತನಾಡುತ್ತಿರುವುದು ಒಬ್ಬ ಮೀನುಗಾರನ ನೈಜ ಘಟನೆಯ ಬಗ್ಗೆ. ಬರೇಲಿಯ ಒನ್ಲಾ ಹತ್ತಿರದಲ್ಲಿರುವ ಸಿರೌಲಿ ಘಾಟ್‌ನಲ್ಲಿ ಒಬ್ಬ ಮೀನುಗಾರನು ದಿನನಿತ್ಯದಂತೆ ತನ್ನ ಬಲೆಯನ್ನು ತೆಗೆದುಕೊಂಡು ನದಿಯಲ್ಲಿ ಮೀನುಗಳನ್ನು ಹಿಡಿಯಲು ಹೋದವನಿಗೆ ಆಶ್ಚರ್ಯವೊಂದು ಕಾದು ಕುಳಿತಿತ್ತು.
ರಾಮಗಂಗಾ ನದಿಯಲ್ಲಿ ಬಲೆ ಬೀಸಿದ ನಂತರ ಮೀನುಗಾರನ ಬಲೆಯೂ ತುಂಬಾ ಭಾರ ಅನ್ನಿಸುತ್ತದೆ. ಈ ಭಾರವನ್ನು ನೋಡಿ ಅವನು ತನ್ನ ಜೊತೆಗಾರರನ್ನು ಕರೆಯುತ್ತಾನೆ. ಬಲೆಯ ತೂಕ ಹೆಚ್ಚಿರುವುದನ್ನು ನೋಡಿದ ಮೀನುಗಾರರು ದೊಡ್ಡ ಮೀನು ಬಲೆಗೆ ಬಿದ್ದಿರಬಹುದು ಎಂದುಕೊಂಡು ಅದನ್ನು ತುಂಬಾ ಉತ್ಸಾಹದಿಂದ ಮೇಲಕ್ಕೆ ಎಳೆದು ತರುತ್ತಾರೆ. ಎಲ್ಲರ ನೆರವಿನಿಂದ, ಆತ ಅಂತಿಮವಾಗಿ ಬಲೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾದನು ಮತ್ತು ನಿಧಾನವಾಗಿ ಬಲೆಯನ್ನು ಬಿಡಿಸಿ ನೋಡಿದರೆ ಅದರಲ್ಲಿ ದೊಡ್ಡ ಮೊಸಳೆಯೊಂದು ಇರುವುದನ್ನು ನೋಡಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.
ದೈತ್ಯ ಮೊಸಳೆಯೊಂದು ತನ್ನನ್ನು ತಾನು ಮೀನುಗಾರನ ಬಲೆಯಿಂದ ಮುಕ್ತಗೊಳಿಸಿಕೊಳ್ಳಲು ಹೆಣಗಾಡಿ, ನಂತರ ಇಬ್ಬರು ಮೀನುಗಾರರು ಸಹ ಅದರ ಬಾಲವನ್ನು ಹಿಡಿದು ಹಿಂದಕ್ಕೆ ಎಳೆಯಲು ಪ್ರಯತ್ನಿಸಿದರೂ, ಅವರ ಸಾಮರ್ಥ್ಯವು ಮೊಸಳೆಯ ಶಕ್ತಿಗೆ ಹೊಂದಿಕೆಯಾಗದೇ ಬಲೆಯಿಂದ ಮುಕ್ತಗೊಳಿಸಿಕೊಂಡು ಪುನಃ ನದಿಗೆ ತೆರಳುವಲ್ಲಿ ಯಶಸ್ವಿಯಾಗಿದೆ. ಆಗಸ್ಟ್ 11 ಬುಧವಾರದಂದು ನಡೆದ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದೆ ಮತ್ತು ಈ ವೀಡಿಯೋವನ್ನು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ ಎಂದು ಸುದ್ದಿ ಮಾಧ್ಯಮದ ಮೂಲಕ ತಿಳಿದು ಬಂದಿದೆ.
ವೀಡಿಯೋ ನೋಡಿದ ಬರೇಲಿಯ ವಿಭಾಗೀಯ ಅರಣ್ಯ ಅಧಿಕಾರಿ ಭರತ್ ಲಾಲ್ ಅವರು ಮೀನುಗಾರರು ದೈತ್ಯ ಮೊಸಳೆಯನ್ನು ತುಂಬಾ ಹತ್ತಿರದಿಂದ ನೋಡಿದ್ದು ಮತ್ತು ಅದರ ಬಾಲವನ್ನು ಹಿಡಿದು ಹಿಂದಕ್ಕೆ ಎಳೆದಿರುವುದು ತುಂಬಾ ಅಪಾಯಕಾರಿ ಎಂದು ಹೇಳಿದ್ದಾರೆ. ಮೊಸಳೆಯ ಬಾಲವನ್ನು ಹಿಡಿದು ಹಿಂದಕ್ಕೆ ಎಳೆದದ್ದು ಪ್ರಾಣಿ ಮೇಲೆ ಕ್ರೌರ್ಯದ ಕೃತ್ಯವಾಗಿದ್ದು, ವೀಡಿಯೊದಲ್ಲಿ ಕಂಡುಬರುವ ಜನರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಘಟನೆ ನಡೆದಂತಹ ಸ್ಥಳಕ್ಕೆ ಭೇಟಿ ನೀಡಿ ಮತ್ತು ವಿಡಿಯೋದಲ್ಲಿ ಕಾಣುವ ಜನರ ಬಗ್ಗೆ ವಿವರಗಳನ್ನು ಸಂಗ್ರಹಿಸುವಂತೆ ಒನಾಲ್ ಅರಣ್ಯ ವ್ಯಾಪ್ತಿಯ ಅಧಿಕಾರಿಯೊಬ್ಬರಿಗೆ ನಿರ್ದೇಶಿಸಿದ್ದಾರೆ.ರಾಮಗಂಗಾ ನದಿಯಲ್ಲಿ ಮೊಸಳೆಗಳನ್ನು ಕಾಣುವುದು ದಿನನಿತ್ಯದ ಘಟನೆಯಾಗಿದ್ದು, ಈ ರೀತಿಯ ಮೀನುಗಾರರ ಬಲೆಯಲ್ಲಿ ಮೊಸಳೆ ಸಿಕ್ಕಿದ್ದು ತುಂಬಾ ಅಪರೂಪದ ಘಟನೆ. ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಮೂಲಕ ರಾಮಗಂಗಾ ನದಿ ಹರಿಯುತ್ತದೆ ಮತ್ತು ಈ ಉದ್ಯಾನವನದಲ್ಲಿ ಮೊಸಳೆಗಳ ಸಂಖ್ಯೆ ಜಾಸ್ತಿ ಇದೆ.
ವರದಿಯ ಪ್ರಕಾರ, 2008 ರಲ್ಲಿ 64 ಮೊಸಳೆಗಳಿದ್ದವು, 2017 ರಲ್ಲಿ ನದಿಯಲ್ಲಿನ ಮೊಸಳೆಗಳ ಸಂಖ್ಯೆಯು 133 ಕ್ಕೆ ಏರಿಕೆಯಾಗಿತ್ತು. ಸದ್ಯಕ್ಕೆ ಸುಮಾರು 122 ಮೊಸಳೆಗಳು ಇವೆ ಎಂದು ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಿಂದ ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ