ಇಂಜೆಕ್ಶನ್ (Injection) ಭಯ ಯಾರಿಗಿಲ್ಲ ಹೇಳಿ? ಮಕ್ಕಳ ವಿಷಯ ಬಿಡಿ ದೊಡ್ಡವರು ಕೂಡ ಇಂಜೆಕ್ಶನ್ ಪದ ಕೇಳುವಾಗ ಹೌಹಾರಿಬಿಡುತ್ತಾರೆ. ದೊಡ್ಡವರನ್ನೇ ಇಷ್ಟು ಭಯಪಡಿಸುವ ಇಂಜೆಕ್ಶನ್ ಮಕ್ಕಳಿಗೆ ಕೂಡ ಕಣ್ಣಲ್ಲಿ ನೀರು ತರಿಸುವಂತೆ ಮಾಡಿಬಿಡುತ್ತದೆ. ಆಸ್ಪತ್ರೆ, ಡಾಕ್ಟರ್, ನರ್ಸ್ ಹೀಗೆ ಇಂಜೆಕ್ಶನ್ ಕೊಡುವವರೆಲ್ಲಾ ಮಕ್ಕಳಿಗೆ ಶತ್ರುಗಳಂತೆ ಕಂಡುಬರುತ್ತಾರೆ. ಮಕ್ಕಳಿಗೆ ಇಂಜೆಕ್ಶನ್ ಕೊಡಿಸುವ ತಂದೆ ತಾಯಿಯರ ವೇದನೆ ಇನ್ನೊಂದೆಡೆ. ಮಕ್ಕಳನ್ನು ಸಂಭಾಳಿಸಿಕೊಂಡು ಇಂಜೆಕ್ಶನ್ ಚುಚ್ಚಿಸಿಕೊಂಡು ಬರುವಷ್ಟರಲ್ಲಿ ಅವರಿಗೆ ಹೋದ ಜೀವ ಬಂದಂತಾಗಿರುತ್ತದೆ. ಆದರೆ ಈ ಮಾತಿಗೆ ಅಪವಾದ ಎಂಬಂತೆ ಎಸ್ಎಸ್ಆರ್ ಲೇಔಟ್ನ ಡಾ. ಹೈಫೈವ್ (HiFi) ವೈದ್ಯ ಮುಜೇದ್ ಹುಸೇನ್ ಕ್ಲಿನಿಕ್ಗೆ ಮಕ್ಕಳು ಖುಷಿಯಿಂದ ಹೋಗುತ್ತಾರೆ ಹಾಗೂ ಇಂಜೆಕ್ಶನ್ ವಿಷಯದಲ್ಲಿ ತಗಾದೆ ತೆಗೆಯುವುದೇ ಇಲ್ಲವಂತೆ ಎಂಬುದು ಮಕ್ಕಳ ಪೋಷಕರ ಮಾತಾಗಿದೆ.
ಇಂಜೆಕ್ಶನ್ ಡಾಕ್ಟರ್ ಎಂದೇ ಫೇಮಸ್
ಬೆಂಗಳೂರಿನ ಎಸ್ಎಸ್ಆರ್ ಲೇಔಟ್ನಲ್ಲಿರುವ ಮುಜೇದ್ ಹುಸೇನ್ ಕ್ಲಿನಿಕ್ಗೆ ಎಷ್ಟೋಷ್ಟೇ ದೂರದಿಂದ ಇಂಜೆಕ್ಶನ್ ಚುಚ್ಚಿಸಿಕೊಳ್ಳಲು ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ ಎಂದರೆ ಈ ವೈದ್ಯರು ಎಷ್ಟು ನಿಸ್ಸೀಮರು ಎಂಬುದನ್ನು ಊಹಿಸಿ ನೋಡಿ.
ಮುಜೇದ್ ಹುಸೇನ್ ತಮ್ಮ ಕ್ಲಿನಿಕ್ ಅನ್ನು ಮಕ್ಕಳಿಗೆ ಇಷ್ಟವಾಗುವ ರೀತಿಯಲ್ಲಿ ನಿರ್ಮಿಸಿದ್ದಾರೆ. ಅವರಿಗೆ ಆಟಿಕೆಗಳನ್ನು ನೀಡುವ ಮೂಲಕ ಅವರೊಂದಿಗೆ ಮಾತನಾಡುತ್ತಾ ಮುಜೇದ್ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಚುಚ್ಚುಮದ್ದು ಚುಚ್ಚುತ್ತಾರೆ.
ಇನ್ಸ್ಟಾದಲ್ಲಿ ಫೇಮಸ್ ಈ ಹೈಫೈವ್ ಡಾಕ್ಟರ್
ಮುಜೇದ್ ಸಾಮಾಜಿಕ ತಾಣದಲ್ಲಿ ಕೂಡ ಖ್ಯಾತಿ ಪಡೆದುಕೊಂಡಿದ್ದು ಇನ್ಸ್ಟಾಗ್ರಾಮ್ನಲ್ಲಿ 2.8 ಲಕ್ಷ ಫಾಲೋವರ್ಗಳನ್ನು ಹೊಂದಿದ್ದಾರೆ ಹಾಗೂ ಇನ್ಸ್ಟಾದಲ್ಲಿ ಡಾ_ಹೈಫೈವ್ (dr_hifive) ಹೆಸರಿನಿಂದಲೇ ಫೇಮಸ್ ಆಗಿದ್ದಾರೆ. ಮಕ್ಕಳಿಗೆ ಹೇಗೆ ವ್ಯಾಕ್ಸಿನೇಶನ್ ಅನ್ನು ನೀಡುತ್ತಾರೆ ಎಂಬ ವಿಡಿಯೋಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಳ್ಳುವ ವೈದ್ಯರು ಶ್ಲಾಘನೆಯನ್ನು ಪಡೆದುಕೊಂಡಿದ್ದಾರೆ.
ಮಕ್ಕಳ ಮನಸ್ಸು ಅರಿತು ಚುಚ್ಚುಮದ್ದು ನೀಡುವ ಹುಸೇನ್
2012 ರಲ್ಲಿ ತಮ್ಮ ಕ್ಲಿನಿಕ್ ಗುಡ್ವಿಲ್ ಚಿಲ್ಡ್ರನ್ಸ್ ಕ್ಲಿನಿಕ್ ಅನ್ನು ತೆರೆದ ಮುಜೇದ್, ಹಲವಾರು ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ ವೃತ್ತಿಪರರು ಜೊತೆಗೆ ಮಕ್ಕಳ ಮನಸ್ಸನ್ನು ಗೆಲ್ಲುವ ಮೂಲಕ ಅವರಿಗೆ ಹಿತಕಾರಿಯಾಗಿ ಹೇಗೆ ಚಿಕಿತ್ಸಿಸಬಹುದು ಎಂಬುದನ್ನು ಕಲಿತುಕೊಂಡ ನುರಿತ ಮಕ್ಕಳ ವೈದ್ಯರಾಗಿದ್ದಾರೆ.
ಇಂಜೆಕ್ಶನ್ ಕೊಡಲು ಹುಸೇನ್ ಅನುಸರಿಸುವ ಟೆಕ್ನಿಕ್ ಏನು?
ಇಂಜೆಕ್ಶನ್ ಚುಚ್ಚುವ ಸಮಯದಲ್ಲಿ ಮಕ್ಕಳಿಗೆ ಮೃದುವಾದ ಆಟಕೆಗಳನ್ನು ವೈದ್ಯರು ನೀಡುತ್ತಾರೆ. ಮಕ್ಕಳು ಆಟದಲ್ಲಿ ಮಗ್ನರಾಗಿರುವ ಸಮಯದಲ್ಲೇ ವೈದ್ಯರು ತಮ್ಮ ಕೆಲಸ ಮುಗಿಸುತ್ತಾರೆ ನಂತರ ಮಕ್ಕಳಿಗೆ ಹೈಫೈವ್ ನೀಡಿ ಅವರನ್ನು ಕಳುಹಿಸಿಕೊಡುತ್ತಾರೆ. ಕ್ಲಿನಿಕ್ನ ವಾತಾವರಣವನ್ನು ಮೆಚ್ಚುವ ಮಕ್ಕಳು ಹಾಗೂ ಅವರ ಪೋಷಕರು ವೈದ್ಯರು ಮಕ್ಕಳಿಗೆ ಇಂಜೆಕ್ಶನ್ ನೀಡುವ ವಿಧವನ್ನು ಕೂಡ ತುಂಬಾ ಮೆಚ್ಚಿಕೊಳ್ಳುತ್ತಾರೆ.
ಇಂಜೆಕ್ಶನ್ ಟೆಕ್ನಿಕ್ ವಿಡಿಯೋ ಹಂಚಿಕೊಳ್ಳುವ ವೈದ್ಯರು
ಇನ್ಸ್ಟಾದಲ್ಲಿ ಮುಜೇದ್ ಇಂಜೆಕ್ಶನ್ ನೀಡುವ ತಂತ್ರಗಳನ್ನು ಹಂಚಿಕೊಳ್ಳುತ್ತಾರೆ ಹಾಗೂ ಫಾಲೋವರ್ಸ್ ಈ ತಂತ್ರಗಳನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ ಎಂಬುದು ಕಾಮೆಂಟ್ಗಳಿಂದ ತಿಳಿದುಬರುತ್ತದೆ. ಮುಜೇದ್ ಫಾಲೋವರ್ ಆಗಿರುವ ಆಯಿಷಾ ಅಕ್ತರ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಮಕ್ಕಳಿಗೆ ತಾವು ಕ್ಲಿನಿಕ್ನಲ್ಲಿದ್ದೇವೆ ಎಂದು ಅನ್ನಿಸುವುದೇ ಇಲ್ಲ ಎಂದು ತಿಳಿಸುತ್ತಾರೆ. ಮಕ್ಕಳನ್ನು ಆಟದಲ್ಲಿ ತಲ್ಲೀನಗೊಳಿಸುವ ಮುಜೇದ್ ಟೆಕ್ನಿಕ್ ನಿಜಕ್ಕೂ ಅದ್ಭುತ ಎಂದು ಇನ್ನೊಬ್ಬ ಫಾಲೋವರ್ ಕಾಮೆಂಟ್ ಮಾಡಿದ್ದಾರೆ.
View this post on Instagram
ಇಂಜೆಕ್ಶನ್ ಚುಚ್ಚುವ ಕಲೆಯಲ್ಲಿ ಬಹಳಷ್ಟು ವರ್ಷಗಳಿಂದ ಪಳಗಿರುವ ಮುಜೇದ್, ಮಕ್ಕಳ ಜೊತೆ ಮಾತನಾಡುತ್ತಲೇ ಇಂಜೆಕ್ಶನ್ ನೀಡುವಷ್ಟು ಸಿದ್ಧಹಸ್ತರಾಗಿದ್ದಾರೆ. ಕೆಲವೊಂದು ಇಂಜೆಕ್ಶನ್ಗಳು ಮಕ್ಕಳಿಗೆ ನೋವುಂಟು ಮಾಡುವುದು ಸಹಜ ಈ ಸಮಯದಲ್ಲಿ ನಾವು ಏನೂ ಮಾಡಲಾಗುವುದಿಲ್ಲ ಆದರೆ ಚುಚ್ಚುವ ಮುನ್ನ ಅವರೊಂದಿಗೆ ಭಾವನಾತ್ಮಕವಾಗಿ ಸಂಪರ್ಕಗೊಂಡಿರುವುದು ಮುಖ್ಯವಾಗಿರುತ್ತದೆ. ಹೀಗೆ ಸಂಪರ್ಕಗೊಂಡಾಗ ಮಕ್ಕಳಿಗೆ ನೋವಿನ ಅನುಭವವುಂಟಾಗುವುದಿಲ್ಲ ಎಂಬುದು ಮುಜೇದ್ ಮಾತಾಗಿದೆ.
ಮಕ್ಕಳ ಮನಸ್ಸು ಅರಿತುಕೊಂಡು ಚುಚ್ಚುಮದ್ದು ನೀಡುವ ವೈದ್ಯರು
ಮಕ್ಕಳು ನನ್ನ ಕ್ಲಿನಿಕ್ಗೆ ಭೇಟಿ ನೀಡಿದಾಗ ಅವರ ಚಟುವಟಿಕೆಗಳಿಂದ ಅವರು ಹೇಗೆ ಎಂಬುದನ್ನು ಅರಿತುಕೊಳ್ಳುತ್ತೇನೆ. 3-5 ವರ್ಷದ ಮಕ್ಕಳು ಸೂಜಿ ನೋಡಿದೊಡನೆ ಭಯಪಡುತ್ತಾರೆ ಹಾಗಿದ್ದಾಗ ನಾನು ಅವರಿಗೆ ಸೂಜಿಯನ್ನು ತೋರಿಸುವುದಿಲ್ಲ ಆದಷ್ಟು ಮರೆಮಾಡುತ್ತೇನೆ. ಈ ಸಮಯದಲ್ಲಿ ಅವರ ಮನಸ್ಸನ್ನು ಬೇರೆಡೆಗೆ ತಿರುಗಿಸುತ್ತೇನೆ. ಹೀಗೆ ಮಕ್ಕಳು ಇಂಜೆಕ್ಶನ್ ವಿಷಯವನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ಮನವರಿಕೆಯಾದ ಮೇಲೆಯೇ ನಾನು ಇಂಜೆಕ್ಶನ್ ನೀಡುತ್ತೇನೆ ಎಂದು ಮುಜೇದ್ ತಿಳಿಸುತ್ತಾರೆ.
ಮುಜೇದ್ ಕ್ಲಿನಿಕ್ಗೆ ಮೈಸೂರು, ಹೊಸಕೋಟೆ, ಕುಣಿಗಲ್, ದಾವಣಗೆರೆಯಿಂದ ಕೂಡ ಪೋಷಕರು ಚುಚ್ಚುಮದ್ದಿಗಾಗಿ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. ಮಕ್ಕಳನ್ನು ರಂಜಿಸಿ ಆಟವಾಡಿಸಿ ಇಂಜೆಕ್ಶನ್ ಕೊಡುವ ಕೈಚಳಕಕ್ಕೆ ಮಾರುಹೋಗಿ ಎಷ್ಟೋಷ್ಟೋ ದೂರದಿಂದ ಪೋಷಕರು ಮಕ್ಕಳನ್ನು ಕ್ಲಿನಿಕ್ಗೆ ಕರೆದುಕೊಂಡು ಬರುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ