ಡೆಹ್ರಾಡೂನ್‌ನ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ವಿಶ್ವದ ಅತಿ ಎತ್ತರದ ಶಿವನ ದೇವಾಲಯವು ವಾಲುತ್ತಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI)ನಡೆಸಿದ ಅಧ್ಯಯವು ಕಂಡುಹಿಡಿದಿದೆ. ವಿಶ್ವದ ಅತಿ ಎತ್ತರದ ಶಿವನ ದೇವಾಲಯವಾಗಿರುವ ತುಂಗನಾಥ ದೇವಾಲಯವು ಸುಮಾರು 12,800 ಅಡಿ ಎತ್ತರದಲ್ಲಿ ಉತ್ತರಾಭಿಮುಖವಾಗಿ ನೆಲೆಸಿದೆ. ಸದ್ಯ ಈ ದೇವಾಲಯ ಐದರಿಂದ ಆರು ಡಿಗ್ರಿಗಳಷ್ಟು ಅಥವಾ ಸಂಕೀರ್ಣದ ಸಣ್ಣ ರಚನೆಗಳಲ್ಲಿ 10 ಡಿಗ್ರಿಗಳಷ್ಟು (Degree) ವಾಲುತ್ತಿದೆ ಎಂದು ಎಎಸ್‌ಐ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರಕ್ಕೆ (Central Government ) ತಿಳಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಂರಕ್ಷಿತ ಸ್ಮಾರಕ ಪಟ್ಟಿಗೆ ಸೇರಿಸಲು ಸಲಹೆ
ದೇಗುಲವನ್ನು ಸಂರಕ್ಷಿತ ಸ್ಮಾರಕವಾಗಿ ಸೇರಿಸಲು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕ ಎಂದು ಘೋಷಿಸುವ ಪ್ರಕ್ರಿಯೆಯನ್ನು ಸರ್ಕಾರ ಪ್ರಾರಂಭಿಸಿದೆ. ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಕೋರಿ ಅಧಿಸೂಚನೆಯನ್ನು ಹೊರಡಿಸಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇವಾಲಯ ಕುಸಿತದ ಸಾಧ್ಯತೆಯನ್ನು ತಳ್ಳಿ ಹಾಕಿಲ್ಲ ಅಧಿಕಾರಿಗಳು!
ಇನ್ನು, ತುಂಗನಾಥ ದೇವಸ್ಥಾನ ಕುಸಿಯಬಹುದಾದ ಸಾಧ್ಯತೆಯನ್ನು ಅಧಿಕಾರಿಗಳು ತಳ್ಳಿಹಾಕಿಲ್ಲ. ಈ ಬಗ್ಗೆ ಮಾತನಾಡಿರುವ ಎಎಸ್‌ಐನ ಡೆಹ್ರಾಡೂನ್ ಸರ್ಕಲ್‌ನ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಮನೋಜ್ ಕುಮಾರ್ ಸಕ್ಸೇನಾ, "ಮೊದಲು, ಹಾನಿಯ ಮೂಲ ಕಾರಣವನ್ನು ಕಂಡುಹಿಡಿದು ಅದನ್ನು ತಕ್ಷಣ ಸರಿಪಡಿಸಲು ಸಾಧ್ಯವಾದರೆ ಅದನ್ನು ಮಾಡುತ್ತೇವೆ. ಅಲ್ಲದೆ, ದೇಗುಲವನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ವಿವರವಾದ ಕಾರ್ಯಕ್ರಮವನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪುಟ್ಟ ಅಕ್ಕ-ತಮ್ಮ ಮ್ಯಾಜಿಕ್ ಮಾಡಲು ಹೋಗಿ ಏನಾಯ್ತು ಗೊತ್ತಾ? ಸಖತ್ ಕ್ಯೂಟ್ ಆಗಿದೆ ವಿಡಿಯೋ!
ಅಲ್ಲದೇ ಪ್ರಮುಖವಾಗಿ ಹೀಗೆ ವಾಲಿರುವುದರಿಂದ ದೇವಾಲಯದ ಜೋಡಣೆಯು ಬದಲಾಗಬಹುದು. ಅಗತ್ಯವಿದ್ದರೆ ತಜ್ಞರೊಂದಿಗೆ ಸಮಾಲೋಚಿಸಿದ ನಂತರ ಹಾನಿಗೊಳಗಾದ ಅಡಿಪಾಯವನ್ನು ಬದಲಾಯಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ತುಂಗನಾಥ ದೇವಾಲಯದ ಇತಿಹಾಸ
ತುಂಗನಾಥ ದೇವಾಲಯವನ್ನು ವಿಶ್ವದ ಅತಿ ಎತ್ತರದ ಶಿವ ದೇವಾಲಯವೆಂದು ಪರಿಗಣಿಸಲಾಗಿದೆ. ಇದನ್ನು 8 ನೇ ಶತಮಾನದಲ್ಲಿ ಕಟ್ಯೂರಿ ಅರಸರು ನಿರ್ಮಿಸಿದರು ಎನ್ನುತ್ತದೆ ಇತಿಹಾಸ.
ಇದು ರುದ್ರಪ್ರಯಾಗ ಜಿಲ್ಲೆಯಲ್ಲಿ ನೆಲೆಗೊಂಡಿರುವ ಐದು ಪಂಚ ಕೇದಾರ ದೇವಾಲಯಗಳಲ್ಲಿ ಅತ್ಯುನ್ನತವಾಗಿದೆ. ಅಲ್ಲದೇ ಈ ದೇವಾಲಯವು ಮಹಾಭಾರತದ ವೀರರಾದ ಪಾಂಡವರಿಗೆ ಸಂಬಂಧಿಸಿದ ಶ್ರೀಮಂತ ದಂತಕಥೆಯನ್ನು ಸಹ ಹೊಂದಿದೆ.
ಇನ್ನು, ಹವಾಮಾನವು ಸಾಮಾನ್ಯವಾಗಿ ವರ್ಷವಿಡೀ ತಂಪಾಗಿರುತ್ತದೆ. ಸರಾಸರಿ ತಾಪಮಾನವು ಹಗಲಿನಲ್ಲಿ ಸುಮಾರು 16 ಡಿಗ್ರಿ ಸೆಲ್ಸಿಯಸ್ ಇರುತ್ತದೆ.
ಚಳಿಗಾಲವು ಕೊರೆಯುವ ಚಳಿ ಹೊಂದಿರುತ್ತದೆ. ಭಾರೀ ಹಿಮಪಾತದಿಂದಾಗಿ, ಚಳಿಗಾಲದಲ್ಲಿ ತುಂಗನಾಥ ದೇವಾಲಯವು ಸುಮಾರು 6 ತಿಂಗಳ ಕಾಲ ಮುಚ್ಚಿರುತ್ತದೆ.
ಅಂದಹಾಗೆ ಈ ದೇವಾಲಯದ ಅರ್ಚಕರು ಮಕ್ಕುಮಠ ಗ್ರಾಮದ ಸ್ಥಳೀಯ ಬ್ರಾಹ್ಮಣರಾಗಿದ್ದಾರೆ. ಅಲ್ಲದೇ ಇತರ ಕೇದಾರ ದೇವಾಲಯಗಳಿಗಿಂತ ಭಿನ್ನವಾಗಿ ದಕ್ಷಿಣ ಭಾರತ ಮೂಲದ ಅರ್ಚಕರಾಗಿದ್ದಾರೆ.
ಇದನ್ನೂ ಓದಿ: ಹಾರ ಬದಲಾಯಿಸಿಕೊಳ್ಳುವಾಗ ಮದುಮಕ್ಕಳ ಹೊಡೆದಾಟ! ವಧುವನ್ನೇ ಮಂಟಪದಿಂದ ತಳ್ಳಿದ ವರ!
ಎಂಟನೇ ಶತಮಾನದಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಸಂಪ್ರದಾಯ ಇದು ಎನ್ನಲಾಗಿದೆ. ಮಕ್ಕುಮಠ ಗ್ರಾಮದ ಮೈತಾನಿ ಬ್ರಾಹ್ಮಣರು ಈ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಾರೆ ಎಂದು ಹೇಳಲಾಗುತ್ತದೆ.
ಸರ್ಕಾರಕ್ಕೆ ಹಸ್ತಾಂತರಿಸಲು ನಕಾರ!
ತುಂಗನಾಥ ದೇವಾಲಯವು ಬದ್ರಿ ಕೇದಾರ್ ದೇವಾಲಯ ಸಮಿತಿಯ (BKTC) ಆಡಳಿತದಲ್ಲಿದೆ. "ದೇವಾಲಯ ವಾಲಿರುವುದು ಹಾಗೂ ಈ ಕುರಿತು ಸರ್ಕಾರಕ್ಕೆ ನೀಡಿರುವ ಸಲಹೆಗಳ ಕುರಿತಾಗಿ ಬಿಕೆಟಿಸಿಗೆ ಪತ್ರವನ್ನೂ ಕಳುಹಿಸಲಾಗಿದೆ. ಆದರೆ, ನಮಗೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ" ಎಂದು ಸಕ್ಸೇನಾ ಹೇಳಿದ್ದಾರೆ.
ಇದಕ್ಕೆ ಮಾಧ್ಯಮದ ಮೂಲಕ ಪ್ರತಿಕ್ರಿಯೆ ನೀಡಿರುವ BKTC ಅಧ್ಯಕ್ಷ ಅಜೇಂದ್ರ ಅಜಯ್, "ಈ ವಿಷಯವನ್ನು ಇತ್ತೀಚೆಗೆ ಮಂಡಳಿಯ ಸಭೆಯಲ್ಲಿ ಚರ್ಚಿಸಲಾಗಿದೆ.
ಅಲ್ಲಿ ಎಲ್ಲಾ ಮಧ್ಯಸ್ಥಗಾರರು ಪುರಾತತ್ವ ಇಲಾಖೆಯ ಪ್ರತಿಪಾದನೆಯನ್ನು ತಿರಸ್ಕರಿಸಿದ್ದಾರೆ. ದೇವಾಲಯವನ್ನು ಅವರಿಗೆ ಹಸ್ತಾಂತರಿಸದೇ ಅದರ ಮೂಲ ಸ್ವರೂಪಕ್ಕೆ ಮರುಸ್ಥಾಪಿಸಲು ನಾವು ಅವರ ಸಹಾಯವನ್ನು ತೆಗೆದುಕೊಳ್ಳಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ