ಜಗತ್ತಿನಲ್ಲಿಯೇ (World) ಅತಿ ದೊಡ್ಡ ಪ್ರಾಣಿ (Largest Animal) ಎನ್ನಲಾಗುವ ಸಾಗರದಾಳದಲ್ಲಿ ಜೀವಿಸುವ ತಿಮಿಂಗಲನ್ನು (Whale) ನೋಡುವುದೇ ಅಪರೂಪದ ಮಾತೆಂದು ಹೇಳಬಹುದು. ಅಂಥದ್ದರಲ್ಲಿ ಅಂತಹ ತಿಮಿಂಗಲೊಂದು ತನ್ನ ಮಗುವಿಗೆ (Baby) ಜನ್ಮ (Birth) ನೀಡುವ ಪ್ರಕ್ರಿಯೆಯನ್ನು ನೇರವಾಗಿ ಬರಿಗಣ್ಣಿನಿಂದ ನೋಡುವುದು ಯವುದೇ ಚಮತ್ಕಾರಕ್ಕಿಂತ (Miracle) ಕಮ್ಮಿ ಇಲ್ಲ ಅನ್ನಬಹುದು. ಇಂತಹ ಜೀವಮನಾದಲ್ಲೊಮ್ಮೆ ಅನ್ನಬಹುದಾದ ಅಪರೂಪದ ಅನುಭವವನ್ನು ಕ್ಯಾಲಿಫೋರ್ನಿಯಾದಲ್ಲಿ (California) ಕೆಲ ಪ್ರವಾಸಿಗರು ಪಡೆದುಕೊಂಡಿದ್ದಾರೆಂದು ಅಮೆರಿಕದ ಮೆಟ್ರೋ ಮಾಧ್ಯಮ ವರದಿ ಮಾಡಿದೆ.
ವರದಿಗಳ ಪ್ರಕಾರ, ಕ್ಯಾಲಿಫೋರ್ನಿಯಾದ ಡಾನಾ ಪಾಯಿಂಟ್ ನ ಕ್ಯಾಪ್ಟನ್ ಡೇವ್ ಅವರ ಡಾಲ್ಫಿನ್ ಮತ್ತು ವ್ಹೇಲ್ ಸಫಾರಿ ಪ್ರವಾಸೋದ್ಯಮದ ಮೂಲಕ ಸಾಗರದ ಸಫಾರಿ ಅನುಭವ ಪಡೆಯುತ್ತಿದ್ದ ಕೆಲ ಪ್ರವಾಸಿಗರು ಈ ರೋಚಕ ಪ್ರಕ್ರಿಯೆಯನ್ನು ತಮ್ಮ ಕಣ್ಣಾರೆ ನೋಡಿ ಪುಳಕಿತರಾಗಿದ್ದಾರೆ.
ವರದಿಯಾಗಿರುವಂತೆ, ಆ ಸಮುದ್ರದಲ್ಲಿ 35 ಅಡಿಗಳಷ್ಟು ಉದ್ದದ ಗ್ರೇ ತಿಮಿಂಗಲೊಂದನ್ನು ಕಂಡಾಗ ಅಲ್ಲಿದ್ದವರಿಗೆ ಮೊದಲು ಅದು ವಲಸೆ ಹೋಗುತ್ತಿರುವಂತೆ ಭಾಸವಾಗಿತ್ತು. ಆದರೆ, ಅದರ ಬಳಿ ದೋಣಿಯನ್ನು ತೆಗೆದುಕೊಂಡು ಹೋದಾಗ ಅದು ಒಂದು ರೀತಿಯಲ್ಲಿ ವಿಚಿತ್ರವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ.
ಹೀಗೆ ಎಲ್ಲರೂ ಅದರ ವಿಚಿತ್ರ ವರ್ತನೆಯನ್ನು ನೋಡುತ್ತಿರುವ ಸಂದರ್ಭದಲ್ಲೇ ಅಚಾನಕ್ಕಾಗಿ ಅದರ ದೇಹದಿಂದ ಮರಿಯೊಂದು ಹೊರ ಹೊಮ್ಮಿ ಅಲ್ಲಿದ್ದ ನೀರೆಲ್ಲ ರಕ್ತದಿಂದ ಕೆಂಪಾಯಿತು. ಕೆಲ ಕ್ಷಣಗಳಲ್ಲೆ ಆ ತಿಮಿಂಗಲಿನ ಮರಿಯು ಉತ್ಸಾಹದಿಂದ ತನ್ನ ತಾಯಿಯ ಬಳಿಯಲ್ಲೇ ಚಲಿಸುತ್ತಿರುವುದನ್ನು ಪ್ರವಾಸಿಗರು ನೋಡಿದರು.
ಇದು ನಿಜಕ್ಕೂಒಂದು ಅಪರೂಪದ ಕ್ಷಣವಾಗಿತ್ತು. ಹೀಗೆ ತಾಯಿ ತಿಮಿಂಗಲು ತನ್ನ ಮರಿಗೆ ಜನ್ಮ ನೀಡುತ್ತಿರುವ ಪ್ರಕ್ರಿಯೆಯನ್ನು ದೋಣಿಯ ಮೂಲಕ ಜನರು ಕೇವಲ ಬೆರಳೆಣಿಕೆಯಷ್ಟು ಮೀಟರ್ ಅಂತರದಿಂದ ವೀಕ್ಷಿಸಿದ್ದರು. ಹಲವರಿಗೆ ಇದೊಂದು ಶಾಕ್ ಆದ ಅನುಭವ ನೀಡಿದರೆ ಇನ್ನು ಕೆಲವರು ತಮ್ಮ ಮೊಬೈಲ್ ಮೂಲಕ ಈ ಅಪರೂಪದ ಕ್ಷಣಗಳನ್ನು ವಿಡಿಯೋ ಮಾಡಿಕೊಂಡರು.
ಇದಲ್ಲದೆ, ಸಫಾರಿಗೆಂದು ಕರೆದೊಯ್ದಿದ್ದ ಆ ದೋಣಿ ಪ್ರವಾಸೋದ್ಯಮ ಸಂಸ್ಥೆಯೂ ಸಹ ತನ್ನ ಅಧಿಕೃತ ಯುಟ್ಯೂಬ್ ಚಾನೆಲ್ ನಲ್ಲಿ ಈ ಅಪರೂಪದ ಕ್ಷಣದ ವಿಡಿಯೋ ಹಂಚಿಕೊಂಡಿದೆ. ಆ ವಿಡಿಯೋದಲ್ಲಿ ತಾಯಿ ತಿಮಿಂಗಲು ತಾನು ಆಗಷ್ಟೆ ಜನ್ಮ ನೀಡಿದ್ದ ತನ್ನ ಮರಿಯನ್ನು ಸಮುದ್ರದ ಮೇಲ್ಮೈಗೆ ತಳ್ಳುತ್ತಿರುವುದನ್ನು ನೋಡಬಹುದಾಗಿದೆ.
ಪ್ರವಾಸೋದ್ಯಮ ಸಂಸ್ಥೆಯು ಈ ವಿಡಿಯೋ ಹಂಚಿಕೊಳ್ಳುವ ಸಂದರ್ಭದಲ್ಲಿ ಆ ಪ್ರಸಂಗದ ಬಗ್ಗೆ ಹೀಗೆ ಬರೆದುಕೊಂಡಿದೆ, "ನಮ್ಮ ದೋಣಿಯು ನಿಧಾನವಾಗಿ ಆ ದೈತ್ಯ ಪ್ರಾಣಿಯನ್ನು ಸಮೀಪಿಸುತ್ತಿದ್ದಂತೆ ನಮ್ಮ ಸಿಬ್ಬಂದಿ ಅದರ ವರ್ತನೆಯಲ್ಲಿ ಅಸಹಜತೆಯನ್ನು ಕಂಡರು, ಅಷ್ಟರಲ್ಲೆ ಸಿಬ್ಬಂದಿ ಹಾಗೂ ಪ್ರವಾಸಿಗರಿಗೆ ನೀರಿನ ಸ್ವಲ್ಪ ಕೆಳಗೆ ಆರೆಂಜ್ ಹಾಗೂ ಕೆಂಪು ಬಣ್ಣವು ಕಂಡುಬಂದಿತು, ಅದನ್ನವರು ಮೊದಲಿಗೆ ಕಡಲ ಕಳೆಯಾಗಿರಬಹುದೆಂದು ಊಹಿಸಿದರು.
ಆದರೆ ಕೆಲ ಕ್ಷಣದಲ್ಲೇ ಮರಿಯೊಂದು ಮೇಲ್ಮೈ ಮೇಲೆ ಬಂದಿತ್ತು. ಆಗ ಇದು ಶಾರ್ಕ್ ಮೀನಾಗಿರಬಹುದು ಹಾಗೂ ಇಲ್ಲಿ ಬೇಟೆಯ ಪ್ರಸಂಗ ಇರಬಹುದೆಂದುಕೊಳ್ಳಲಾಯಿತು. ಆದರೆ ವಾಸ್ತವ ಅದಾಗಿರಲಿಲ್ಲ, ಒಂದು ಬಾಳಿನ ಕೊನೆಯ ಘಟ್ಟದಲ್ಲಿ ಇನ್ನೊಂದು ಬಾಳಿನ ಪ್ರಾರಂಭ ಅದಾಗಿತ್ತು.
ಅಲ್ಲದೆ ತನ್ನ ಮರಿಯ ಜನ್ಮದಿಂದ ತಾಯಿ ತಿಮಿಂಗಲು ಹೆಮ್ಮೆ ಹಾಗೂ ಸಂತಸ ಎರಡೂ ಪಟ್ಟಿರುವಂತೆ ಭಾಸವಾಗುತ್ತಿತ್ತು. ತನ್ನ ಹೆಮ್ಮೆಯ ಪ್ರತೀಕವಾಗಿ ಅದು ಮರಿಯನ್ನು ನಮ್ಮ ದೋಣಿಯ ಬಳಿ ತಂದು ನಮಗೆಲ್ಲ ಅದರ ದರುಶನ ಮಾಡಿಸಿ "ನಮಸ್ಕಾರ" ಎಂದು ಹೇಳುವಂತಿತ್ತು.
ಇನ್ನೊಂದೆಡೆ ಈಗಷ್ಟೇ ಹುಟ್ಟಿರುವ ತನ್ನ ಮರಿಗೆ ನೀರಿನಲ್ಲಿ ಈಜುವ ಬಗ್ಗೆ ತರಬೇತಿಯನ್ನು ನೀಡುವಂತಿತ್ತು ಆ ಪ್ರಸಂಗ. ಒಟ್ಟಿನಲ್ಲಿ ತಾಯಿ ಮಗುವಿನ ಅನುಪಮ ಬಾಂಧವ್ಯದ ಸಂಕೇತವಾಗಿ ಆ ಕ್ಷಣ ಎಲ್ಲರ ಕಣ್ಮನಗಳನ್ನು ಕಟ್ಟಿತ್ತು" .
ಈಗಾಗಲೇ ಈ ವಿಡಿಯೋ ಒಂದು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನುಗಳಿಸಿಕೊಂಡಿದ್ದು ನೂರಾರು ಕಮೆಂಟ್ ಗಳು ಹರಿದುಬಂದಿವೆ. ಈ ಬಗ್ಗೆ ಕಮೆಂಟ್ ಮಾಡುತ್ತ ನೆಟ್ಟಿಗರೊಬ್ಬರು "ಹೊಸ ತಾಯಿಗೆ ಶುಭಾಶಯಗಳು, ದೇವರ ಮತ್ತೊಂದು ಪವಾಡ ಹಾಗೂ ಗ್ರೇ ವ್ಹೇಲ್ ಗಳ ಸಂತತಿ ಹೆಚ್ಚುತ್ತಿದೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: New Zealand Whale Stranding: 500 ತಿಮಿಂಗಿಲಗಳ ಸಾಮೂಹಿಕ ಸಾವು; ಜೀವ ಉಳಿದರೆ ದಯಾಮರಣ
ಇನ್ನೊಬ್ಬರು, "ಅಲ್ಲಿ ದೇಹಸಮೇತ ಉಪಸ್ಥಿತವಿದ್ದು ಈ ಪ್ರಸಂಗವನ್ನು ಬರಿಗಣ್ಣಿನಿಂದ ನೋಡುವುದು ಅತ್ಯದ್ಭುತವಾಗಿದೆ, ವಾವ್" ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಹಲವರು ಈ ಅಪರೂಪದ ಕ್ಷಣವನ್ನು ಮೆಚ್ಚಿಕೊಂಡು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ