Kerala: ಕೇರಳ ಪ್ರವಾಸ ನಡೆಸಿದರೆ, ಈ 3 ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ

ಸಾಂಕ್ರಾಮಿಕದಂತಹ ಕೆಟ್ಟ ಅನುಭೂತಿಯಿಂದ ಹೊರಬರಲು ಅದೇ ರೀತಿ ಬದಲಾವಣೆಗಳನ್ನು ಆವಾಹಿಸಿಕೊಳ್ಳಲು ದೇವರ ನಾಡೆಂದೇ ಪ್ರಸಿದ್ಧಗೊಂಡಿರುವ ಕೇರಳ ಅತ್ಯಂತ ಉತ್ತಮ ಆಯ್ಕೆಯಾಗಿದೆ.

ಕೇರಳ ಪ್ರವಾಸೋದ್ಯಮದ ಒಂದು ದೃಶ್ಯ

ಕೇರಳ ಪ್ರವಾಸೋದ್ಯಮದ ಒಂದು ದೃಶ್ಯ

  • Share this:
ಕೊರೋನಾ ವೈರಸ್ (Covid 19 virus) ಸಾಂಕ್ರಾಮಿಕಕ್ಕೆ ಒಳಗಾದ ನಂತರ ಕಳೆದೆರಡು ವರ್ಷಗಳಲ್ಲಿ ಜನರ ಜೀವನ ಮಟ್ಟವೇ ಬದಲಾವಣೆ ಕಂಡುಕೊಂಡಿತು. ಸುಲಲಿತವಾಗಿ ಸಾಗುತ್ತಿದ್ದ ಬದುಕು ಹಿಂದೆಂದೂ ಕಂಡಿರದ ಕೆಳಮಟ್ಟವನ್ನು ತಲುಪಿತು. ಮುಂದೇನು ಎಂಬ ಭಯ ಚಿಂತೆ ಅದೆಷ್ಟೋ ಮಂದಿಯನ್ನು ಖಿನ್ನತೆಗೆ (Depression) ತಳ್ಳಿ ಅವರ ಬದುಕನ್ನೇ ಸಮಾಪ್ತಿಗೊಳಿಸಿತು. ಇನ್ನು ಕೆಲವರು ಬದುಕಿನಲ್ಲಿ ಬಂದಿರುವುದನ್ನು ಬಂದಂತೆ ಸ್ವೀಕರಿಸೋಣ ಎಂಬ ಸ್ಥೈರ್ಯದಿಂದ ಮುನ್ನುಗ್ಗಿದರು. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ಎಂಬ ಮಾತಿನಂತೆ, ದೇವರು ಬದುಕಲು ಏನಾದರೂ ದಾರಿ ತೋರಿಸುತ್ತಾರೆ ಎಂಬ ಅಂಶವನ್ನು ಮನಗಂಡರು.

ಇದೀಗ ಪ್ರತಿಯೊಬ್ಬರೂ ಸಾಂಕ್ರಾಮಿಕದೊಂದಿಗೆ ಬದುಕಲು ಕಲಿತಿದ್ದಾರೆ ಎಂದೇ ಹೇಳಬಹುದು. ತಮ್ಮ ತಮ್ಮ ಹೊಟ್ಟೆಪಾಡಿಗಾಗಿ ಸಾಂಕ್ರಾಮಿಕವನ್ನು ಮೆಟ್ಟಿ ನಿಲ್ಲಬೇಕಾದಂತಹ ಅನಿವಾರ್ಯತೆ ಉಂಟಾಗಿದೆ. ಹೀಗೆ ಬದುಕು ಏರು ತಗ್ಗುಗಳನ್ನು ಕಂಡುಕೊಳ್ಳುತ್ತಾ ಮುಂದುವರಿಯುತ್ತಿದೆ.

ಸಾಂಕ್ರಾಮಿಕದ ನಂತರ ಜನರು ವಿಶ್ವವನ್ನು ನೋಡುವ ಹಾಗೂ ಪರಿಸ್ಥಿತಿಗಳನ್ನು ಅರ್ಥೈಸಿಕೊಳ್ಳುವ ವಿಧಾನ ಬದಲಾಯಿತು ಎಂದೇ ಹೇಳಬಹುದು. ಹೊಸ ಹೊಸ ಸ್ಥಳಗಳನ್ನು ಹೊಸ ಹೊಸ ಉದ್ಯಮಗಳನ್ನು ಅನ್ವೇಷಿಸುವ ಅರಿತುಕೊಳ್ಳುವ ಬಗೆ ಮಾರ್ಪಾಡಾಯಿತು.

ನಿಧಾನವಾಗಿ ಚೇತರಿಕೆ ಹಾದಿಯಲ್ಲಿ ಪ್ರವಾಸೋದ್ಯಮ

ವಿಶ್ವವು ನಿಧಾನವಾಗಿ ಚೇತರಿಕೆ ಕಂಡುಕೊಳ್ಳುತ್ತಾ ತನ್ನ ಬಾಹುಗಳನ್ನು ಪ್ರಯಾಣಿಕರಿಗೆ ತೆರೆದುಕೊಳ್ಳುತ್ತಿದೆ. ಸಾಂಕ್ರಾಮಿಕದ ಸಮಯದಲ್ಲಿ ಮೂಲೆಗುಂಪಾಗಿದ್ದ ಪ್ರವಾಸೋದ್ಯಮವೂ ನಿಧಾನವಾಗಿ ಗರಿಗೆದರುತ್ತಿದೆ. ಎಲ್ಲಾ ಕ್ಷೇತ್ರಗಳು ಮರಳಿ ತಮ್ಮ ತಮ್ಮ ವೇಗದತ್ತ ದಾಪುಗಾಲು ಹಾಕುತ್ತಿವೆ. ಸಾಂಕ್ರಾಮಿಕದಂತಹ ಕೆಟ್ಟ ಅನುಭೂತಿಯಿಂದ ಹೊರಬರಲು ಅದೇ ರೀತಿ ಬದಲಾವಣೆಗಳನ್ನು ಆವಾಹಿಸಿಕೊಳ್ಳಲು ದೇವರ ನಾಡೆಂದೇ ಪ್ರಸಿದ್ಧಗೊಂಡಿರುವ ಕೇರಳ ಅತ್ಯಂತ ಉತ್ತಮ ಆಯ್ಕೆಯಾಗಿದೆ.

ತೇವಾಂಶದ ಮಣ್ಣಿನ ಸುಗಂಧ ಗಾಳಿಯಲ್ಲಿ ನವಿರಾಗಿ ತೇಲಿ ನಮ್ಮನ್ನು ತಲುಪುತ್ತದೆ. ಸುತ್ತಲೂ ಕಣ್ಣು ಕುಕ್ಕುವ ಹಸಿರು ನೆಲ ನಮ್ಮನ್ನು ಸ್ವಾಗತಿಸುತ್ತದೆ. ಹೀಗೆ ಈ ಸ್ಥಳದ ಪ್ರತಿ ಅನುಭವವು ಅನನ್ಯ ಸ್ಮರಣೆ ಹೆಣೆಯಲು ಅವಕಾಶವನ್ನೀಯುತ್ತದೆ.

ವಯನಾಡ್ (Wayanad):

ಅನನ್ಯ, ಸಸ್ಯ ಸಂಪತ್ತನಿಂದ ಸುಭಿಕ್ಷವಾಗಿರುವ ಹಾಗೂ ಮರೆಯಲಾಗದ ಸ್ಮರಣೆಗಳನ್ನು ಉಣಬಡಿಸುವ ವಯನಾಡ್ ಪರಿಸರ ಪ್ರೇಮಿಗಳಿಗೆ ಸ್ವರ್ಗವಾಗಿದೆ. ತಮಿಳುನಾಡು ಹಾಗೂ ಕರ್ನಾಟಕದೊಂದಿಗೆ ಗಡಿ ಹಂಚಿಕೊಂಡಿರುವ ಏಕೈಕ ಜಿಲ್ಲೆ ವಯನಾಡ್ ಆಗಿದೆ. ಕೋಯಿಕ್ಕೋಡ್ ಕರಾವಳಿ ಭಾಗದಿಂದ 76 ಕಿ.ಮೀ ದೂರದಲ್ಲಿರುವ ವಯನಾಡ್ ಕಣ್ಣುಕುಕ್ಕುವ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಭತ್ತ ಹಾಗೂ ಕಾಫಿ ತೋಟಗಳು ಹಸಿರು ಹೊದಿಕೆಗಳು, ಪಶ್ಚಿಮ ಘಟ್ಟಗಳಿಂದ ಪರ್ವತಗಳಿಂದ ಆವೃತವಾದ ಭೂಪ್ರದೇಶ ಅಲ್ಲಲ್ಲಿ ಕಂಡುಬರುವ ಗ್ರಾಮಗಳ ನೋಟ ಹೀಗೆ ವಯನಾಡ್ ಎಂಬ ಊರು ಭೂಲೋಕದಲ್ಲಿರುವ ಸ್ವರ್ಗವೆಂದೇ ಹೆಸರುವಾಸಿ.

ರೋಮಾಂಚನಕಾರಿ ಅನುಭೂತಿ

ಇಲ್ಲಿನ ಕಡಿದಾದ ಶಿಖರಗಳು ಹಾಗೂ ದಟ್ಟವಾದ ಕಾಡುಗಳು ರೋಮಾಂಚಕಾರಿಯಾದ ಸಾಹಸಗಳನ್ನು ನಡೆಸಲು ಅನುಕೂಲಕರವಾಗಿವೆ. ವಯನಾಡ್‌ ಪರ್ವತಗಳ ಅಡಿಯಲ್ಲಿರುವ ಪೂಕೋಟ್ ಸರೋವರದಲ್ಲಿ ಬೋಟಿಂಗ್ ನಡೆಸುತ್ತಿರುವಾಗಲೇ ಪ್ರಕೃತಿಯ ಸುಂದರ ಅನುಭವ ಕಣ್ತುಂಬಿಕೊಳ್ಳಬಹುದು. ವಯನಾಡ್‌ನಲ್ಲೇ ಅತ್ಯುನ್ನತ ಶಿಖರವಾಗಿರುವ ಸಮುದ್ರ ಮಟ್ಟದಿಂದ 2100 ಅಡಿ ಎತ್ತರದಲ್ಲಿರುವ ಚೆಂಬ್ರಾ ಪರ್ವತ ಶ್ರೇಣಿಯಿದೆ. ಟ್ರೆಕ್ಕಿಂಗ್ ಪ್ರಿಯರು ನೀವಾಗಿದ್ದರೆ ಈ ಬೆಟ್ಟಗಳಲ್ಲಿ ನೀವು ಸಾಹಸ ಚಟುವಟಿಕೆಗಳನ್ನು ನಡೆಸಬಹುದು. ಆನಂದದಾಯಕ ಚಾರಣದ ಅನುಭೂತಿಯನ್ನು ಈ ಶಿಖರ ಒದಗಿಸುತ್ತದೆ.

16 ಕಿಮೀ ದೂರದಲ್ಲಿ, ಅಂಬುಕುತಿ ಬೆಟ್ಟದ ಮೇಲೆ, ಮತ್ತೊಂದು ನವಶಿಲಾಯುಗದ ಅದ್ಭುತವಾದ ಎಡಕ್ಕಲ್ ಗುಹೆಗಳಿವೆ. ನವಶಿಲಾಯುಗದ ಮನುಷ್ಯರು ಕೆತ್ತಿರುವ ಸುಮಾರು 6000 BCEಯಷ್ಟು ಹಳೆಯದಾದ ಕಲಾತ್ಮಕ ಕೆತ್ತನೆಗಳನ್ನು ಕಾಣಬಹುದಾಗಿದೆ. ಎಡಕ್ಕಲ್ ಗುಹೆಗಳಲ್ಲಿ ಕಂಡುಬರುವ ಶಿಲಾಯುಗದ ಕೆತ್ತನೆಗಳು ಬಹಳ ಅಪರೂಪವೆಂದು ಪರಿಗಣಿಸಲಾಗಿದೆ.

ಸಂಪೂರ್ಣವಾಗಿ ಕನ್ನಡಿಯಿಂದಲೇ ತಯಾರಿಸಲಾದ ಕೂಟ್ಟಮುಂಡು ದೇವಸ್ಥಾನ ಕೂಡ ಕಣ್ತುಂಬಿಕೊಳ್ಳಲು ಅತ್ಯದ್ಭುತ ಸ್ಥಳವಾಗಿದೆ. ಭಾರತದ ಅತಿದೊಡ್ಡ ಡ್ಯಾಮ್, ಬಾಣಾಸುರ ಹಾಗೂ ವನ್ಯಜೀವಿ ಅಭಯಾರಣ್ಯ - ಕೇರಳದ ಮುತಂಗ ವನ್ಯಜೀವಿ ಅಭಯಾರಣ್ಯ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಮತ್ತು ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅನನ್ಯ ವೀಕ್ಷಣೆಗೆ ನೀವು ಸಾಕ್ಷಿಯಾಗಬಹುದು.

ಸರ್ಗಾಲಯ (Sargaalaya):

ಕೇರಳದ ಕೋಯಿಕ್ಕೋಡ್‌ನ ವಡಕರ ಬಳಿಯಿರುವ ಇರಿಂಗಲ್ ಎಂಬ ಒಂದು ರಮಣೀಯ ಗ್ರಾಮವು ಐತಿಹಾಸಿಕವಾಗಿ ಕೂಡ ಇತಿಹಾಸದಲ್ಲಿ ಸ್ಥಾನ ಪಡೆದಿದೆ. 16ನೇ ಶತಮಾನದಲ್ಲಿ ಪೋರ್ಚುಗೀಸರ ವಿರುದ್ಧ ಝಮೋರಿನ್‌ ನೌಕಾಪಡೆಯ ನಾಯಕತ್ವ ವಹಿಸಿದ್ದ ಮತ್ತು ಅನೇಕ ಯುದ್ಧಗಳನ್ನು ಮುನ್ನಡೆಸಿದ ಧೀರ ಅಡ್ಮಿರಲ್ ಕುನ್ಹಾಲಿ ಮರಕ್ಕರ್ ಜನ್ಮಸ್ಥಳವಾಗಿ ಈ ಗ್ರಾಮ ಹೆಸರುವಾಸಿಯಾಗಿದೆ. ಕದನ ಕಲಿಗಳು ಹಾಗೂ ಶೂರರಿಗೆ ಹೆಸರಾಗಿದ್ದ ಈ ಗ್ರಾಮ ಇಂದು ಸಾಂಪ್ರದಾಯಿಕ ಕುಶಲಕರ್ಮಿಗಳ ತವರೂರಾಗಿದೆ. ಪ್ರವಾಸೋದ್ಯಮ ಹೊಣೆಗಾರಿಕೆ ಪರಿಕಲ್ಪನೆ ಆಧರಿಸಿ ಕೇರಳ ಪ್ರವಾಸೋದ್ಯಮ ಇಲಾಖೆಯು 2011ರಲ್ಲಿ ಇರಿಂಗಲ್‌ನಲ್ಲಿ ಸರ್ಗಾಲಯ ಕೇರಳ ಕಲೆ ಮತ್ತು ಕರಕುಶಲ ಗ್ರಾಮವನ್ನು ಸ್ಥಾಪಿಸಿತು.

ಸರ್ಗಾಲಯವು ಕೇರಳ ರಾಜ್ಯದಾದ್ಯಂತ ಇರುವ ಹಳ್ಳಿಗಳಿಂದ 80ಕ್ಕೂ ಹೆಚ್ಚು ನುರಿತ ಕುಶಲಕರ್ಮಿಗಳಿಗೆ ನೆಲೆಯಾಗಿದೆ, ಎಲ್ಲರೂ ಒಂದೇ ಸೂರಿನಡಿಯಲ್ಲಿ ನೆಲೆಸಿದ್ದಾರೆ. ಈ ಗ್ರಾಮವು 27 ಕುಟೀರಗಳನ್ನು ಒಳಗೊಂಡಿದೆ. ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಅಭ್ಯಾಸ ಮಾಡುವ ಕುಶಲಕರ್ಮಿಗಳಿಗೆ ಈ ಗ್ರಾಮ ನೆಲೆಯಾಗಿದೆ. ಉತ್ಪಾದನೆಯ ಇತ್ತೀಚಿನ ತಂತ್ರಗಳ ಕುರಿತು ತರಬೇತಿಯನ್ನು ಕುಶಲಕರ್ಮಿಗಳಿಗೆ ನೀಡಲಾಗುತ್ತದೆ. ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಹೊಸತನ ಪರಿಚಯಿಸಲು ಅನುವು ಮಾಡಿಕೊಡಲಾಗುತ್ತದೆ.

ಕರಕುಶಲ ಗ್ರಾಮವು ಪ್ರವಾಸಿಗರಿಗೆ ಅನನ್ಯ ಅನುಭವ ನೀಡುತ್ತದೆ. ಏಕೆಂದರೆ ಇಲ್ಲಿ ಕಾರ್ಯನಿರತರಾಗಿರುವ ಕುಶಲಕರ್ಮಿಗಳನ್ನು ವೀಕ್ಷಿಸಬಹುದು ಮತ್ತು ಅವರೊಂದಿಗೆ ಸಂವಹನ ನಡೆಸಲು ಮತ್ತು ಕಲಿಯಲು ಪ್ರೋತ್ಸಾಹ ನೀಡಲಾಗುತ್ತದೆ. ಪ್ರವಾಸಿಗರು ಶಾಸ್ತ್ರೀಯ ಮತ್ತು ಜಾನಪದ ಕಲಾ ಪ್ರಕಾರಗಳ ಪ್ರದರ್ಶನಗಳನ್ನು ಸಹ ಆನಂದಿಸಬಹುದು. ಗ್ರಾಮವು 400ಕ್ಕೂ ಹೆಚ್ಚು ಜನರಿಗೆ ನೇರವಾಗಿ ಮತ್ತು 1,000ಕ್ಕೂ ಹೆಚ್ಚು ಜನರಿಗೆ ಪರೋಕ್ಷವಾಗಿ ಉದ್ಯೋಗ ಸೃಷ್ಟಿಸಿದೆ.

ವಾಗಮೋನ್ (Vagamon):

ವ್ಯಾಗಮೋನ್ (Wagamon) ಎಂದೂ ಕರೆಯಲಾದ ವಾಗಮೋನ್ ಕೇರಳದ ಅತ್ಯುತ್ತಮ ರಹಸ್ಯ ತಾಣವಾಗಿದೆ. ಸುತ್ತಲೂ ದಟ್ಟವಾದ ಮಂಜಿನಿಂದ ಆವೃತವಾಗಿರುವ, ಹಚ್ಚಹಸಿರಿನ ಹುಲ್ಲುಗಾವಲುಗಳಿಂತ ತುಂಬಿರುವ ಎಕರೆಗಟ್ಟಲೆ ನೆಲದಲ್ಲಿ ಕಣ್ಣುಹಾಯಿಸಿದರೂ ಚಹಾ ಹಾಗೂ ಏಲಕ್ಕಿ ಕೃಷಿ ನಿಮ್ಮನ್ನು ತುಂಬು ಹೃದಯದಿಂದ ಸ್ವಾಗತಿಸುತ್ತದೆ. ಇಡುಕ್ಕಿಯ ಆಗ್ನೇಯ ಜಿಲ್ಲೆಯಲ್ಲಿರುವ ಒಂದು ಸಣ್ಣ ಗಿರಿಧಾಮವಾಗಿದೆ ಈ ವಾಗಮೋನ್. ಅಕ್ಕಪಕ್ಕದ ಗಿರಿಧಾಮಗಳಾದ ಮುನ್ನಾರ್‌ನಂತಹ ಜನನಿಬಿಡ ಯಾತ್ರಾಸ್ಥಳದಿಂದ ಮೌನವಾಗಿ ಅದೃಶ್ಯವಾಗಿರುವ ಈ ಸುಂದರ ತಾಣ ಪ್ರವಾಸಿಗರಿಗೆ ಶಾಂತಿ ತಾವಳವಾಗಿದೆ.

ಈ ಸುಂದರ ಪರಿಸರದಲ್ಲಿ ಸಮಯ ಜಾರುವುದು ನಿಮಗೆ ತಿಳಿಯುವುದೇ ಇಲ್ಲ. ಗಾಳಿಯ ಸುಮಧುರ ಹಾಡು ನಿಮ್ಮ ಅತ್ಯದ್ಭುತವಾದ ಪ್ರಯಾಣಕ್ಕೆ ಸಾಥ್ ನೀಡುತ್ತದೆ. ಪ್ರಕೃತಿಯ ನಡುವೆ ಚಾರಣ ಮಾಡಲು ನೀವು ಬಯಸಿದಲ್ಲಿ ವಾಗಮೋನ್ ಹಲವಾರು ಭೂದೃಶ್ಯಗಳನ್ನು ಕಣ್ತುಂಬುವಂತೆ ಮಾಡುತ್ತದೆ. ಕೊಟ್ಟಾಯಮ್‌ನಲ್ಲಿ ಹುಟ್ಟಿ ಸಣ್ಣ ಪಟ್ಟಣಗಳಾದ್ಯಂತ ಹರಿಯುವ ಮೀನಾಚಿಲ್ ನದಿಯ ಪಿಸುಧ್ವನಿಯನ್ನು ನೀವು ಆಲಿಸಬಹುದಾಗಿದೆ.

ಇದನ್ನು ಓದಿ: ಯುರೋಪ್‌ನಲ್ಲಿ ಅರಳಿದ ಕೆಟ್ಟ ಶವದ ದುರ್ವಾಸನೆ ಬೀರುವ ಹೂವು

ಸಾಹಸಿ ಪ್ರಿಯ ನೆಚ್ಚಿನ ಸ್ಥಳ

ಸಾಹಸ ಪ್ರಿಯರನ್ನು ಕೈಬೀಸಿ ಕರೆಯುತ್ತಿರುವ ವಾಗಮೋನ್ ಪರ್ವತಾರೋಹಣ ರಾಕ್ ಕ್ಲೈಂಬಿಂಗ್ ನಡೆಸಲು ಅತ್ಯುತ್ತಮವಾಗಿದೆ. ಚಳಿಗಾಲದಲ್ಲಿ ಮಂಜಿನ ಹೊದಿಕೆಗಳಿಂದ ಆವೃತವಾಗಿರುವ ಈ ಸ್ಥಳವು ಪ್ಯಾರಾಗ್ಲೈಡರ್‌ಗಳಿಗೆ ಉತ್ತಮ ಆನಂದ ನೀಡುತ್ತದೆ. ಸಾಂಬಾರು ಪದಾರ್ಥಗಳಿಂದ ತುಂಬಿರುವ ತೋಟಗಳು, ಸೈಕಲ್ ಸವಾರಿ ಮಾಡುವುದರೊಂದಿಗೆ ಬೆಟ್ಟಗಳ ಸೊಬಗನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ವಾಗಮೋನ್ ಸಾಮರಸ್ಯದ ನೆಲೆಯಾಗಿದೆ. ಪಟ್ಟಣವು ಧಾರ್ಮಿಕ ಪ್ರಾಮುಖ್ಯತೆ ಹೊಂದಿರುವ 3 ಬೆಟ್ಟಗಳಾದ ತಂಗಲ್, ಮುರುಗನ್ ಹಾಗೂ ಕುರಿಸುಮಲದೊಂದಿಗೆ ಜೊತೆಯಾಗಿದೆ.

ಇದನ್ನು ಓದಿ: ದೀಪಾವಳಿಯಂದು ದೀಪ ಹಚ್ಚುವಾಗ ಯಾವುದೇ ಕಾರಣಕ್ಕೂ ಈ ತಪ್ಪು ಮಾಡಬೇಡಿ

ಮುಸ್ಲಿಮರಿಗೆ ಪ್ರಮುಖ ಧಾರ್ಮಿಕ ಸ್ಥಳವಾಗಿರುವ ಶೇಕ್ ಫರಿದುದ್ದೀನ್ ಅವರ ಸಮಾಧಿ ತಂಗಲ್ಪಾರದಲ್ಲಿದ್ದರೆ, ಹಿಂದೂಗಳಿಗೆ ಮಹತ್ವದ ಸ್ಥಳವಾಗಿರುವ ಶಿವನ ಪುತ್ರ ಮುರುಗನ್ ಆಲಯವನ್ನು ಮುರುಗನ್ಮಲೆ ಹೊಂದಿದೆ. ನಜ್ರಾನಿ ಕ್ಯಾಥೋಲಿಕರ ಯಾತ್ರಾ ಸ್ಥಳವಾಗಿರುವ ಕುರಿಸುಮಲ ಆಶ್ರಮವನ್ನು ಕುರಿಸುಮಲ ಹೊಂದಿದೆ. ಈ ಬೆಟ್ಟದ ಬುಡದಲ್ಲಿ ಸಂತ ಥಾಮಸ್ ಮೌಂಟ್ ಇದೆ. ಎಲ್ಲಾ ಮೂರು ಬೆಟ್ಟಗಳು ಮತ್ತು ಅವು ಪ್ರತಿನಿಧಿಸುವ ಮೌಲ್ಯಗಳಿಂದ ದಶಕಗಳಿಂದ ಸಾಮರಸ್ಯದಿಂದ ಸಹಬಾಳ್ವೆ ನಡೆಸುತ್ತಿವೆ.

ಧಾರ್ಮಿಕ ಆಶಯಗಳೊಂದಿಗೆ ಪರಿಸರ ಪ್ರವಾಸೋದ್ಯಮದ ಆಸಕ್ತಿ ನಿಮ್ಮದಾಗಿದ್ದರೆ ಡೈರಿ ಫಾರ್ಮ್ ವೀಕ್ಷಿಸಲು ಕುರಿಸುಮಲ ಆಶ್ರಮಕ್ಕೆ ಭೇಟಿ ನೀಡುವುದು ವಿಶೇಷವಾದುದಾಗಿದೆ. ಜರ್ಸಿ ದ್ವೀಪದಿಂದ ಆಮದು ಮಾಡಿಕೊಳ್ಳಲಾದ ಜಾನುವಾರುಗಳನ್ನು ಇಲ್ಲಿನ ಸನ್ಯಾಸಿಗಳು ಸಾಕುತ್ತಾರೆ ಹಾಗೂ ಈ ಸ್ಥಾಪನೆಯು ಇಂಡೋ-ಸ್ವಿಸ್ ಯೋಜನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ರಮಣೀಯ ಸ್ಥಳಗಳ ಪ್ರತಿಯೊಂದು ಮೂಲೆಗಳೂ ಅವಿಸ್ಮರಣೀಯವಾದ ಅನುಭೂತಿ ನೀಡುತ್ತವೆ. ನಿಮ್ಮ ರಜೆಯನ್ನು ವಿಶಿಷ್ಟವಾಗಿ ಕಳೆಯಲು ಕೇರಳದ ಈ ಸ್ಥಳಗಳು ಅರ್ಹವಾದುದಾಗಿದೆ.


First published: