ನಿವೃತ್ತಿ ಘೋಷಿಸಿದ ಏಷ್ಯಾದ ಶ್ರೀಮಂತ ಉದ್ಯಮಿ ಜಾಕ್ ಮಾ

news18
Updated:September 8, 2018, 12:44 PM IST
ನಿವೃತ್ತಿ ಘೋಷಿಸಿದ ಏಷ್ಯಾದ ಶ್ರೀಮಂತ ಉದ್ಯಮಿ ಜಾಕ್ ಮಾ
news18
Updated: September 8, 2018, 12:44 PM IST
-ನ್ಯೂಸ್ 18 ಕನ್ನಡ

ವಿಶ್ವದ ದೈತ್ಯ ಇ-ಕಾಮರ್ಸ್​ ಉದ್ಯಮ ಅಲಿಬಾಬಾ ಸಂಸ್ಥೆಯ ಸಂಸ್ಥಾಪಕ, ಕಾರ್ಯ ನಿರ್ವಾಹಕ ಅಧ್ಯಕ್ಷ ಜಾಕ್ ಮಾ ಶೀಘ್ರದಲ್ಲೇ ನಿವೃತ್ತಿ ಘೋಷಿಸಲಿದ್ದಾರೆ. 53ರ ಹರೆಯದ ಉದ್ಯಮಿ ನಿವೃತ್ತಿಯ ಬಳಿಕ ಶಿಕ್ಷಣ ಮತ್ತು ಸಾಮಾಜಿಕ ಕಾರ್ಯದಲ್ಲಿ ಸಮಯವನ್ನು ವಿನಿಯೋಗಿಸಲು ಬಯಸಿರುವುದಾಗಿ ತಿಳಿಸಿದ್ದಾರೆ. 1999ರಲ್ಲಿ ಸ್ಥಾಪನೆಗೊಂಡಿದ್ದ ಆಲಿಬಾಬಾ ಸಂಸ್ಥೆಯ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿರುವ ಜಾಕ್ ಮಾ ಇದೇ ಸೆಪ್ಟಂಬರ್ 10 ರಂದು ತಮ್ಮ ನಿವೃತ್ತಿ ಪ್ರಕಟಿಸಲಿದ್ದಾರೆ ಎಂದು ನ್ಯಾಯಾರ್ಕ್ ಟೈಮ್ಸ್​  ವರದಿ ಮಾಡಿದೆ.

ಚೀನಾದ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆಗಳಲ್ಲಿ ಒಂದಾಗಿರುವ ಅಲಿಬಾಬಾ ಕಂಪನಿ ವಾಣಿಜ್ಯೋದ್ಯಮವಲ್ಲದೆ, ಆನ್​ಲೈನ್ ಪಾವತಿ, ಬ್ಯಾಂಕಿಂಗ್, ಮನರಂಜನೆ. ಕ್ಲೌಡ್ ಕಂಪ್ಯೂಟಿಂಗ್ ಸೇರಿದಂತೆ ವಿಶ್ವದಾದ್ಯಂತ ಹಲವು ವ್ಯವಹಾರಗಳನ್ನು ನಡೆಸುತ್ತಿದೆ. ಅಷ್ಟೇ ಅಲ್ಲದೆ ಕೆಲ ಚೀನಿ ಬ್ಲಾಗ್ ಮಾಧ್ಯಮಗಳಲ್ಲಿ ಬಂಡವಾಳ ಹೂಡಿದೆ.

ಸದ್ಯ ನಿವೃತ್ತಿಯ ಸುದ್ದಿ ಹೊರ ಬಿದ್ದಿದ್ದರೂ ಮುಂಬರುವ ದಿನಗಳಲ್ಲಿ ಕಂಪೆನಿಯ ನಿರ್ದೇಶಕರ ಮಂಡಳಿಯಲ್ಲಿ ಜಾಕ್ ಮಾ ಮುಂದುವರೆಯಲಿದ್ದಾರೆ ಎನ್ನಲಾಗಿದೆ. ಹಾಗೆಯೇ ಕಂಪೆನಿಯ ಆಡಳಿತ ಮಂಡಳಿಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುವುದಾಗಿ ಅವರು ತಿಳಿಸಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ.

524 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಅಲಿಬಾಬಾ ಕಂಪನಿಯು ಕಳೆದ ವರ್ಷ 40 ಬಿಲಿಯನ್ ಡಾಲರ್ ಆದಾಯ ಗಳಿಸಿಕೊಂಡಿತ್ತು. ಅಲ್ಲದೆ ಸಂಸ್ಥೆಯ ಇತ್ತೀಚಿನ ತ್ರೈಮಾಸಿಕ ಆದಾಯ 10 ಮಿಲಿಯನ್ ಡಾಲರ್ ಎಂದು ಇದೇ ವರದಿಯಲ್ಲಿ ಸೂಚಿಸಲಾಗಿದೆ. ನಿವೃತ್ತಿಯ ಸುದ್ದಿಗಳು ಪ್ರಕಟವಾಗುತ್ತಿದ್ದಂತೆ ಅಲಿಬಾಬಾ ಸಂಸ್ಥೆಯ ಷೇರುಗಳು ಶೇ.2ರಷ್ಟು ಕುಸಿತ ಕಂಡಿದೆ ಎನ್ನಲಾಗಿದೆ.

2014ರಲ್ಲಿ ಜಾಕ್​ ಮಾ ಫೌಂಡೇಷನ್ ಸ್ಥಾಪಿಸಿರುವ ಚೀನಾದ ಉದ್ಯಮಿ ಈ ಸಂಘಟನೆಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುಧಾರಣೆ ಮತ್ತು ಬಡ ವಿದ್ಯಾರ್ಥಿಗಳ ಸಹಾಯಕ್ಕೆ ನಿಂತಿದ್ದಾರೆ. ತಮ್ಮ ನಿವೃತ್ತಿಯು ಹೊಸ ಯುಗಾರಂಭವಾಗಿದ್ದೂ, ಇದನ್ನು ಯುಗಾಂತ್ಯವೆಂದು ಪರಿಗಣಿಸಬೇಕಿಲ್ಲ ಎಂದು ಜಾಕ್ ಮಾ ನಿವೃತ್ತಿಯ ಕುರಿತು ಮಾರ್ಮಿಕವಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇದೇ ಸೋಮವಾರ 54ನೇ ಹುಟ್ಟುಹಬ್ಬ ಆಚರಿಸಲಿರುವ ಜಾಕ್ ಮಾ ತಮ್ಮ ನಿವೃತ್ತಿಯನ್ನು ಅಂದೇ  ಪ್ರಕಟಿಸಲಿದ್ದಾರೆ. ಚೀನಾದಲ್ಲಿ ಸೆಪ್ಟಂಬರ್ 10  ಶಿಕ್ಷಕರ ದಿನವಾಗಿದ್ದು, ತಮ್ಮ ನಿವೃತ್ತಿ ಮೂಲಕ ಜ್ಯಾಕ್ ಮಾ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿಯಾಡಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಅಲಿಬಾಬಾ ಸಂಸ್ಥೆಯಿಂದ ಇನ್ನೂ ಕೂಡ ಯಾವುದೇ ಅಧಿಕೃತ ಹೇಳಿಕೆಗಳು ಬಿಡುಗಡೆಯಾಗಿಲ್ಲ.
Loading...

ಇತ್ತೀಚೆಗಷ್ಟೇ ಏಷ್ಯಾದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಭಾರತದ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಹಿಂದಿಕ್ಕಿದ್ದು, ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಗೆ ಜಾಕ್ ಮಾ ಪಾತ್ರರಾಗಿದ್ದರು.

 
First published:September 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ