VIDEO: ಹಿಂಗೂ ಬಲೂನ್​ಗೆ ಗಾಳಿ ತುಂಬಿಸಬಹುದು: ಬಡ ಕಾರ್ಮಿಕನ ಸದ್ಯದ ಗುರಿ ಗಿನ್ನೆಸ್ ದಾಖಲೆ

2017 ರಲ್ಲಿ ಚಾಂದ್ ಪಾಷ 70 ಸೆಂಟಿಮೀಟರ್ ಉದ್ದದ ಬಲೂನ್ ಅನ್ನು ಕಿವಿಯಿಂದ ತುಂಬಿಸಿ ಸಂಘಟಕರಿಂದ ಬಹುಮಾನವನ್ನು ಪಡೆದಿದ್ದರು. ಅಲ್ಲದೆ 2018 ರ ಜೂನ್‌ನಲ್ಲಿ ಪಾಷ ಅವರು ಜಿಲ್ಲಾಧಿಕಾರಿಯಿಂದ ‘ಅತ್ಯುತ್ತಮ ಸಾಹಸ ಕಲಾವಿದ’ ಪ್ರಶಸ್ತಿಯನ್ನು ಪಡೆದಿದ್ದರು.

zahir | news18-kannada
Updated:August 16, 2019, 8:33 PM IST
VIDEO: ಹಿಂಗೂ ಬಲೂನ್​ಗೆ ಗಾಳಿ ತುಂಬಿಸಬಹುದು: ಬಡ ಕಾರ್ಮಿಕನ ಸದ್ಯದ ಗುರಿ ಗಿನ್ನೆಸ್ ದಾಖಲೆ
ಸಾಂದರ್ಭಿಕ ಚಿತ್ರ
  • Share this:
ಸಾಮಾನ್ಯವಾಗಿ ಬಲೂನ್​ಗಳಿಗೆ ಬಾಯಿಯಿಂದ ಗಾಳಿ ತುಂಬಲಾಗುತ್ತದೆ. ಇದರ ಹೊರತಾಗಿ ಏರ್​ ಪಂಪ್​ಗಳನ್ನು ಬಳಸುವುದು ಗೊತ್ತಿರುವ ವಿಷಯ. ಆದರೆ 35 ವರ್ಷದ ಚಾಂದ್​ ಪಾಷ ಮಾತ್ರ ವಿಭಿನ್ನವಾಗಿ ಬಲೂನ್​ಗಳಿಗೆ ಗಾಳಿ ತುಂಬಿಸುತ್ತಾರೆ. ವಿಚಿತ್ರ ಅನಿಸಿದರೂ ಅಂತಹದೊಂದು ಶಕ್ತಿ ತೆಲಂಗಾಣದ​ ಪಾಷಗೆ ಲಭಿಸಿದೆ.

ಚಾಂದ್ ಪಾಷ ಮೂಲತಃ ತೆಲಂಗಾಣ ರಾಜ್ಯದ ಕಾಮರೆಡ್ಡಿ ಜಿಲ್ಲೆಯ ಯೆಲ್ಲರೆಡ್ಡಿ ಪಟ್ಟಣಕ್ಕೆ ಸೇರಿದವರು. ಬಡ ಕುಟುಂಬದಲ್ಲಿ ಜನಿಸಿದ ಇವರು ಜೀವನೋಪಾಯಕ್ಕೆ ಕೆಲವು ಸಾಹಸಗಳನ್ನು ಅಭ್ಯಾಸ ಮಾಡಿದ್ದರು. ಅದರಲ್ಲೊಂದು ಗಾಳಿಯೊಂದಿಗಿನ ಆಟ. ಎಲ್ಲರೂ ಬಾಯಿಯಿಂದ ಬಲೂನ್​ಗೆ ಗಾಳಿ ತುಂಬಿಸಿದರೆ, ಪಾಷ ಮಾತ್ರ ಕಿವಿಯನ್ನೇ ಪಂಪ್ ಮಾಡಿಕೊಂಡಿದ್ದಾರೆ. ತಮ್ಮ ಕಿವಿ ಮೂಲಕ ಗಾಳಿಯನ್ನು ಹೊರಬಿಡುವ ಇವರು ಬಲೂನ್​ಗಳಿಗೆ ನಿರಾಯಾಸವಾಗಿ ಗಾಳಿ ತುಂಬಿಸಿ ನೋಡುಗರನ್ನು ಆಶ್ಚರ್ಯಚಕಿತಗೊಳಿಸುತ್ತಾರೆ.

ಪ್ರತಿಭಾ ಸಂಗಮವನ್ನೇ ಹೊಂದಿರುವ ಪಾಷ ಅನೇಕ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲೂ ತಮ್ಮ ಪ್ರತಿಭೆಯನ್ನು ಧಾರೆಯೆರೆದಿದ್ದಾರೆ. ಬಲೂನ್​ಗೆ ಗಾಳಿ ತುಂಬಿಸುವುದಲ್ಲದೆ, ಸೈಕ್ಲಿಂಗ್, ತಲೆಗೆ ಟ್ಯೂಬ್ ಲೈಟ್ ಹೊಡೆಯುವಂತಹ ಸಾಹಸಗಳನ್ನು ಮಾಡುತ್ತಾರೆ. ಇದರಿಂದ ಸಿಗುವ ಹಣದಿಂದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಈ ಬಡ ಪ್ರತಿಭೆ.

ಕೈ ಹಿಡಿದ ಕಿವಿ:
ಅಂದಹಾಗೆ ಪಾಷ ಅವರಿಗೆ ತನ್ನಲ್ಲಿ ಇಂತಹದೊಂದು ಶಕ್ತಿ ಇರುವುದು ಗೊತ್ತಾಗಿದ್ದು 26ನೇ ವಯಸ್ಸಿನಲ್ಲಿ. ಕೆರೆಯಲ್ಲಿ ಈಜಾಡುತ್ತಿದ್ದ ವೇಳೆ ಪಾಷ ಅವರ ಕಿವಿಗೆ ನೀರು ತುಂಬಿತ್ತು. ಈ ನೀರನ್ನು ಹೊರ ಚೆಲ್ಲಲು ಮೂಗು ಮುಚ್ಚಿ ಕಿವಿ ಮೂಲಕ ಗಾಳಿ ಬಿಡಲು ಪ್ರಯತ್ನಿಸಿದರು. ಕಿವಿಗೆ ಒತ್ತಡವನ್ನು ಹಾಕಿ ನೀರನ್ನು ಹೊರತೆಗೆದಿದ್ದರು. ಇದೇ ವೇಳೆ ಮೂಗು ಮತ್ತು ಕಿವಿಯ ನಡುವೆ ಸಂಬಂಧವಿದೆ ಎಂದು ಅರಿತುಕೊಂಡ ಪಾಷ, ಈ ಮೂಲಕ ಹೊಸದಾಗಿ ಏನು ಸಾಹಸ ಮಾಡಬಹುದೆಂದು ಯೋಚಿಸಿದರಂತೆ.

ಹೀಗಾಗಿ ಮೂಗಿನಿಂದ ಉಸಿರಾಡುತ್ತೇವೆ. ಅದೇ ರೀತಿ ಕಿವಿಯ ಮೂಲಕ ಕೂಡ ಉಸಿರಾಡುವಂತೆ ಮಾಡಲು ಅಭ್ಯಾಸವನ್ನು ಪ್ರಾರಂಭಿಸಿದರು. ಈ ಪ್ರಯತ್ನ ಫಲ ಕೊಡುತ್ತಿದ್ದಂತೆ ಪಾಷ ಇದರ ಮೂಲಕವೇ ಜನರನ್ನು ರಂಜಿಸಲು ನಿರ್ಧರಿಸಿದರು. ಅದರಂತೆ ಬಲೂನ್​ಗೆ ಗಾಳಿ ತುಂಬಿಸಲು ಆರಂಭಿಸಿದ ಇವರು ಬಳಿಕ ಕಿವಿಯಿಂದಲೇ ಸಾಹಸ ಮಾಡಿ ಜನರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾದರು.

ಬಡ ಕಾರ್ಮಿಕ ಕುಟುಂಬ ಹಿನ್ನೆಲೆ ಹೊಂದಿರುವ ಪಾಷ ಸದ್ಯ ಜೀವನೋಪಾಯಕ್ಕೆ ದೈನಂದಿನ ಸಣ್ಣ ಪುಟ್ಟ ಕೆಲಸಗಳನ್ನೇ ನೆಚ್ಚಿಕೊಂಡಿದ್ದಾರೆ. ಇದರ ಹೊರತಾಗಿ ಯಾವುದೇ ಶಾಲೆ ಅಥವಾ ಕಾಲೇಜುಗಳಿಗೂ ಸಾಹಸ ಪ್ರದರ್ಶನಕ್ಕೆ ಕರೆದರೆ ಹೋಗುತ್ತಾರೆ. ಅಲ್ಲಿಂದ ಸಿಗುವ ಅಲ್ಪ ಸ್ವಲ್ಪ ಹಣದಿಂದ ಜೀವನವನ್ನು ಸಾಗಿಸುತ್ತಿದ್ದಾರೆ.2017 ರಲ್ಲಿ ಚಾಂದ್ ಪಾಷ 70 ಸೆಂಟಿಮೀಟರ್ ಉದ್ದದ ಬಲೂನ್ ಅನ್ನು ಕಿವಿಯಿಂದ ತುಂಬಿಸಿ ಸಂಘಟಕರಿಂದ ಬಹುಮಾನವನ್ನು ಪಡೆದಿದ್ದರು. ಅಲ್ಲದೆ 2018 ರ ಜೂನ್‌ನಲ್ಲಿ ಪಾಷ ಅವರು ಜಿಲ್ಲಾಧಿಕಾರಿಯಿಂದ ‘ಅತ್ಯುತ್ತಮ ಸಾಹಸ ಕಲಾವಿದ’ ಪ್ರಶಸ್ತಿಯನ್ನು ಪಡೆದಿದ್ದರು.

ಪಾಷ ಅವರ ಸಾಹಸಗಳಿಗೆ ಅನೇಕ ಚಾನೆಲ್​ಗಳು ಕೂಡ ವೇದಿಕೆ ಒದಗಿಸಿದೆ. ಅನೇಕ ಕಡೆ ತಮ್ಮ ವಿಭಿನ್ನ ಸಾಹಸದಿಂದ ಬಹುಮಾನ ಮತ್ತು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸದ್ಯ ಗಿನ್ನೆಸ್ ದಾಖಲೆ ನಿರ್ಮಿಸಬೇಕೆಂಬ ಹಂಬಲ ಹೊಂದಿರುವುದಾಗಿ ನ್ಯೂಸ್ 18 ಗೆತಿಳಿಸಿರುವ ಪಾಷ, ನನಗೆ ಸರ್ಕಾರದಿಂದ ಪ್ರೋತ್ಸಾಹ ಮತ್ತು ಆರ್ಥಿಕ ನೆರವು ಸಿಕ್ಕರೆ ಮತ್ತಷ್ಟು ಸಾಹಸ ಮೆರೆಯುವುದಾಗಿ ಹೇಳಿದ್ದಾರೆ. ಇಷ್ಟೆಲ್ಲಾ ಸಾಹಸ ಮರೆದಿರುವ ಪಾಷ ಸದ್ಯ ಗಿನ್ನೆಸ್ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಪಡೆಯುವ ಇರಾದೆಯಲ್ಲಿದ್ದಾರೆ. ಅವರ ಈ ಕನಸು ಆದಷ್ಟು ಬೇಗ ಈಡೇರಲಿ ಎಂಬುದು ಎಲ್ಲರ ಆಶಯ.

First published: August 16, 2019, 8:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading