ಸಾಮಾನ್ಯವಾಗಿ ಶುದ್ದ ಸಸ್ಯಾಹಾರಿಗಳು (Vegetarian) ಯಾವಾಗಲೂ ಊಟ ಮತ್ತು ತಿಂಡಿ ಮಾಡಲು ಸದಾ ಸಸ್ಯಾಹಾರಿ ಹೊಟೇಲ್ ಗಳನ್ನೇ ಹುಡುಕುತ್ತಾರೆ. ಏಕೆಂದರೆ ಅವರ ಮನಸ್ಸಿನಲ್ಲಿ ‘ಸಸ್ಯಾಹಾರ ಮತ್ತು ಮಾಂಸಾಹಾರ ಎರಡು ಸಿಗುವ ಹೊಟೇಲ್ ಗೆ ಹೋದರೆ ಎಲ್ಲಿ ಹೊಟೇಲ್ ನವರು ಅಪ್ಪಿ ತಪ್ಪಿ ಸಸ್ಯಾಹಾರದ ಬದಲಿಗೆ ಮಾಂಸಾಹಾರವನ್ನು ಟೇಬಲ್ (Table) ಮೇಲೆ ತಂದು ಇಡುತ್ತಾರೋ, ಎಲ್ಲಿ ನಾವು ಅದನ್ನು ಅಪ್ಪಿ ತಪ್ಪಿ ಹಸಿವಿನಿಂದ ಬಾಯಿಗೆ ಇಟ್ಟುಕೊಳ್ಳುತ್ತೇವೆಯೊ’ ಅನ್ನೋ ಭಯ ಸದಾ ಇರುತ್ತದೆ. ಹಾಗಾಗಿ ಸಸ್ಯಾಹಾರ ಸಿಗುವ ಹೊಟೇಲ್ (Hotel) ಗಳನ್ನು ಹೆಚ್ಚಾಗಿ ಹುಡುಕಿಕೊಂಡು ಹೋಗ್ತಾರೆ ಈ ಸಸ್ಯಾಹಾರಿಗಳು.
ಸಸ್ಯಾಹಾರಿಯ ಟೇಬಲ್ ಗೆ ಮಾಂಸಾಹಾರವನ್ನು ತಂದಿಟ್ಟಿದ್ದಕ್ಕೆ ದೊಡ್ಡ ಅವಾಂತರ ಆಗಿದೆ!
ಇದನ್ನೆಲ್ಲಾ ಈಗೇಕೆ ಹೇಳುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು, ಇಲ್ಲೊಬ್ಬ ಸಸ್ಯಾಹಾರಿಗೆ ಹೊಟೇಲ್ ನಲ್ಲಿ ಮಾಂಸಾಹಾರವನ್ನು ತಂದು ಕೊಟ್ಟಿದ್ದಾರೆ ನೋಡಿ. ಅದನ್ನು ನೋಡಿ ಫುಲ್ ಗರಂ ಆದ ವ್ಯಕ್ತಿ ಈಗ ತನಗೆ ಹೊಟೇಲ್ ನವರು ಈ ತಪ್ಪಿಗಾಗಿ 1 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಕೋರ್ಟ್ ಮೆಟ್ಟಿಲು ಹತ್ತಿದ್ದಾನೆ.
ಹೊಟೇಲ್ ನಲ್ಲಿ ಗ್ರಾಹಕನಿಗೆ ಸರಿಯಾದ ಊಟದ ಆರ್ಡರ್ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಕಾರಣ ಆಗ್ರಾದ ಪ್ರತಿಷ್ಠಿತ ಐಷಾರಾಮಿ ಹೋಟೆಲ್ ಗೆ 1 ಕೋಟಿ ರೂಪಾಯಿ ಪರಿಹಾರ ನೀಡುವಂತೆ ವ್ಯಕ್ತಿ ಆಗ್ರಹಿಸಿದ್ದಾನೆ.
ಸಸ್ಯಾಹಾರಿಯಾಗಿರುವ ಅತಿಥಿ ತನಗೆ ಮಾಂಸಾಹಾರಿ ಆಹಾರವನ್ನು ನೀಡಲಾಗಿದೆ ಎಂದು ಹೇಳಿಕೊಂಡಿದ್ದಾನೆ. ಮಾಂಸಾಹಾರವು ತನ್ನ ಧಾರ್ಮಿಕ ಭಾವನೆಗಳನ್ನು ನೋಯಿಸುವುದಲ್ಲದೆ, ತನ್ನ ಜೀವವನ್ನು ಅಪಾಯಕ್ಕೆ ದೂಡುತ್ತದೆ ಎಂದು ಅವರು ಹೇಳಿದ್ದಾರೆ.
ಸಸ್ಯಾಹಾರ ಅಂದುಕೊಂಡು ಮಾಂಸಾಹಾರ ಸೇವಿಸಿದ್ದಕ್ಕೆ ಆರೋಗ್ಯ ಸಹ ಹದಗೆಟ್ಟಿದೆಯಂತೆ
ಮೂಲಗಳ ಪ್ರಕಾರ, ಪ್ರತಿಷ್ಠಿತ ಅಂತರರಾಷ್ಟ್ರೀಯ ಐಷಾರಾಮಿ ಹೋಟೆಲ್ ಗಳಿಗೆ ಸೇರಿದ ಈ ಹೋಟೆಲ್, ಆರ್ಡರ್ ಮಾಡಿದಂತೆ ಸಸ್ಯಾಹಾರಿ ಆಹಾರದ ಬದಲು ಅತಿಥಿಗೆ ಮಾಂಸಾಹಾರಿ ಆಹಾರವನ್ನು ನೀಡಿದೆಯಂತೆ.
ತಾನು ಮಾಂಸಾಹಾರಿ ಆಹಾರವನ್ನು ಸೇವಿಸಿದ್ದೇನೆ ಎಂದು ಅತಿಥಿ ಅರಿತುಕೊಂಡಾಗ, ತನ್ನ ಆರೋಗ್ಯ ಹದಗೆಟ್ಟಿದೆ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ದಟ್ಟಾರಣ್ಯದ ನಡುವೆ ನಿರ್ಮಿಸಿರುವ ಸುಂದರ ರೈಲು ನಿಲ್ದಾಣಗಳಿವು! ಅತ್ಯುತ್ತಮ ಪ್ರವಾಸಿ ತಾಣ ಕೂಡ ಹೌದು
ಈ ವ್ಯಕ್ತಿಯನ್ನು ಅರ್ಪಿತ್ ಗುಪ್ತಾ ಎಂದು ಗುರುತಿಸಲಾಗಿದ್ದು, ಹೋಟೆಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಹೋಟೆಲ್ ಆಡಳಿತ ಮಂಡಳಿಗೆ ನೋಟಿಸ್ ಕಳುಹಿಸುವ ಮೂಲಕ 1 ಕೋಟಿ ರೂಪಾಯಿಗಳ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದಾನೆ ಅಂತ ಹೇಳಲಾಗುತ್ತಿದೆ.
ಏನೆಲ್ಲಾ ನಡೆದಿದೆ ನೋಡಿ ಈ ವ್ಯಕ್ತಿ ಜೊತೆಗೆ
ಅರ್ಪಿತ್ ಗುಪ್ತಾ ಅವರ ವಕೀಲ ನರೋತ್ತಮ್ ಸಿಂಗ್ ಸುದ್ದಿ ಮಾಧ್ಯಮದೊಂದಿಗೆ ಮಾತನಾಡುತ್ತಾ “ತಮ್ಮ ಕಕ್ಷಿದಾರರು ಏಪ್ರಿಲ್ 14 ರಂದು ತಮ್ಮ ಸ್ನೇಹಿತ ಸನ್ನಿ ಗಾರ್ಗ್ ಅವರೊಂದಿಗೆ ಆಗ್ರಾದ ಫತೇಹಾಬಾದ್ ರಸ್ತೆಯಲ್ಲಿರುವ ಹೋಟೆಲ್ ಗೆ ಹೋಗಿದ್ದರು ಮತ್ತು ಅಲ್ಲಿ ಅರ್ಪಿತ್ ಸಸ್ಯಾಹಾರಿ ರೋಲ್ ಅನ್ನು ಆರ್ಡರ್ ಮಾಡಿದರು” ಅಂತ ಹೇಳಿದರು.
“ಸಸ್ಯಾಹಾರಿಯಾದ ಅರ್ಪಿತ್, ತಾನು ಚಿಕನ್ ಸೇವಿಸಿದ್ದೇನೆಂದು ತಿಳಿದ ನಂತರ ವಾಂತಿ ಮಾಡಲು ಪ್ರಾರಂಭಿಸಿದನು ಮತ್ತು ಅವನ ಆರೋಗ್ಯವು ಸಹ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ಕರೆ ತರಬೇಕಾಯಿತು” ಅಂತ ವಕೀಲರಾದ ಸಿಂಗ್ ಹೇಳಿದರು.
ಹೋಟೆಲ್ ನವರು ತಮ್ಮ ತಪ್ಪನ್ನು ಮರೆಮಾಚಲು ಊಟದ ಬಿಲ್ ಸಹ ನೀಡಿಲ್ಲ ಎಂದು ನರೋತ್ತಮ್ ಸಿಂಗ್ ಹೇಳಿದ್ದಾರೆ. ಮತ್ತೊಂದೆಡೆ, ಅವರ ಕ್ಲೈಂಟ್ ಇಡೀ ಘಟನೆಯನ್ನು ತನ್ನ ಫೋನ್ ನಲ್ಲಿ ರೆಕಾರ್ಡ್ ಮಾಡಿದ್ದರು.
ಇದನ್ನೂ ಓದಿ: 58 ಲಕ್ಷ ಸಂಬಳ ಇದ್ರೂ ಈ ಇಂಜಿನಿಯರ್ಗೆ ಗರ್ಲ್ ಫ್ರೆಂಡ್ ಸಿಕ್ಕಿಲ್ಲ!
ಹೋಟೆಲ್ ನಿಂದ ಒಂದು ಕ್ಷಮೆಯಾಚನೆ ಸಾಕಾಗುವುದಿಲ್ಲ ಮತ್ತು ತನ್ನ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಹೋಟೆಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ತನ್ನ ಕಕ್ಷಿದಾರರು ಬಯಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಹೊಟೇಲ್ ನವರು ಇದರ ಬಗ್ಗೆ ಕ್ಷಮೆ ಕೇಳಿದ್ದಾರಂತೆ..
ಮತ್ತೊಂದೆಡೆ, ಹೋಟೆಲ್ ಆಡಳಿತವು ಇದು ತಪ್ಪು ಎಂದು ನಂಬಿದೆ ಮತ್ತು ಈಗಾಗಲೇ ಅರ್ಪಿತ್ ಅವರಿಗೆ ಕ್ಷಮೆಯಾಚಿಸಿದೆ. ಸುದ್ದಿ ಮಾಧ್ಯಮವು ಸಂಪರ್ಕಿಸಿದಾಗ ಹೋಟೆಲ್ ನ ಜನರಲ್ ಮ್ಯಾನೇಜರ್ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಲು ಲಭ್ಯವಿರಲಿಲ್ಲ.
ಇಂತಹ ಸಂದರ್ಭಗಳಲ್ಲಿ ಧಾರ್ಮಿಕ ಸಂವೇದನೆಗಳಿಗೆ ಧಕ್ಕೆ ತರುವುದು, ಆಹಾರ ಸುರಕ್ಷತಾ ಕಾಯ್ದೆ ಮತ್ತು ಕಲುಷಿತ ಆಹಾರವನ್ನು ಪೂರೈಸುವುದು ಮುಂತಾದ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು ಎಂದು ಕಾನೂನು ತಜ್ಞ ಮತ್ತು ಮಾಜಿ ಜಿಲ್ಲಾ ಸರ್ಕಾರಿ ವಕೀಲ ಅಶೋಕ್ ಗುಪ್ತಾ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ