ಸುಮಾರು 10 ವರ್ಷಗಳ ಕಾಲ ಯುಕೆಯಲ್ಲಿ (UK) ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ ನಂತರ ಹಾಲಿ ಕೀಸರ್ ಎಂಬ ಮಹಿಳೆ (Woman) ಏನಾದರೂ ಆಸಕ್ತಿಕರವಾದುದನ್ನು ಮಾಡಬೇಕೆಂಬ ನಿರ್ಧಾರ ತಾಳಿದರು. ಹೀಗಾಗಿ ದಕ್ಷಿಣ ಐಸ್ಲ್ಯಾಂಡ್ (Iceland) ಪ್ರಯಾಣಿಸಿದ ಕೀಸರ್ ಪ್ರಪಂಚವನ್ನು ಇನ್ನಷ್ಟು ಸುತ್ತಬೇಕೆಂಬ ಆಸೆ ಹೊಂದಿದ್ದರು. ಅಲ್ಲಿಗೆ ಬರುವ ಪ್ರವಾಸಿಗರಿಗೆ (Tourist) ಮಾರ್ಗದರ್ಶಿಯಾಗಿ ನೆರವಾಗುತ್ತಿದ್ದ ಹಾಲಿ ಕೀಸರ್‌ಗೆ ಇನ್ನೇನಾದರೂ ಸಾಧಿಸಬೇಕೆಂಬ ತುಡಿತ ಮನದಲ್ಲಿ ಕಾಡುತ್ತಲೇ ಇತ್ತು. ಇದೀಗ ಅದನ್ನೇ ಗುರಿಯಾಗಿಸಿಕೊಂಡು ಎಲ್ಲರನ್ನು ಅಚ್ಚರಿಗೊಳಿಸುವ ಒಂದು ಕೆಲಸ ಮಾಡಿದ್ದಾರೆ.
ಮಂಜಿನ ನಗರಿಯಲ್ಲಿ ಕಾಫಿ ಶಾಪ್
ಐಸ್‌ಲ್ಯಾಂಡ್‌ನ ಸುಂದರ ಪ್ರಪಂಚದಲ್ಲಿ ಕಾಲ ಕಳೆಯುತ್ತಿದ್ದ ಕೀಸರ್‌ಗೆ ಕಾಫಿ ಶಾಪ್ ತೆರೆಯಬೇಕೆಂಬ ಹಂಬಲ ಮನದಲ್ಲಿ ಮೂಡಿತು ಅಂತೆಯೇ ಅಲ್ಲೆಲ್ಲೂ ಸುತ್ತಲೂ ಯಾವುದೇ ಕಾಫಿ ಶಾಪ್ ಇಲ್ಲದೇ ಇರುವುದು ಆಕೆಯ ಗಮನಕ್ಕೆ ಬಂದಿತು.
ಕೂಡಲೇ ಆಕೆ ತನ್ನ ಕನಸನ್ನು ವಾಸ್ತವ ರೂಪಕ್ಕೆ ತರಲು ಸಿದ್ಧರಾದರು. ಇನ್ನು ಅಲ್ಲಿನ ಕೆಲವೆಡೆಗಳಲ್ಲಿದ್ದ ಕಾಫಿ ಶಾಪ್‌ಗಳು ತುಂಬಾ ಕಿರಿದಾಗಿದ್ದವು ಹಾಗೂ ಸಾಕಷ್ಟು ಜನರು ಒಟ್ಟಿಗೆ ಕುಳಿತುಕೊಂಡು ಕಾಫಿ ಆಸ್ವಾದಿಸಲು ಸ್ಥಳಾವಕಾಶ ಇರಲಿಲ್ಲ. ಈ ಎಲ್ಲಾ ಅಂಶಗಳನ್ನು ಕೀಸರ್ ಗಮನಕ್ಕೆ ತೆಗೆದುಕೊಂಡು ತಾನೇ ಒಂದು ಕಾಫಿ ಶಾಪ್ ಆರಂಭಿಸಬೇಕೆಂಬ ನಿರ್ಧಾರ ತಾಳಿದರು.
ಇದನ್ನೂ ಓದಿ: ಮಿಂಚುಹುಳುಗಳಿಗೆಂದೇ ಈ ನಗರದಲ್ಲಿ ಹಬ್ಬ ಮಾಡ್ತಾರೆ! ಇಲ್ಲಿ ಕೀಟಗಳು ಬಿಟ್ರೆ ಬೇರೇನೂ ಕಾಣಲ್ಲ
ಕಾಫಿ ಶಾಪ್‌ಗೆ ಮುರಿದ ಹಳೆಯ ಶಾಲಾ ಬಸ್ ಅನ್ನು ಆರಿಸಿದ ಕೀಸರ್
ತಮ್ಮದೇ ಒಂದು ಅದ್ಭುತವಾದ ಕಾಫಿ ಶಾಪ್ ತೆರೆಯಬೇಕೆಂಬ ನಿಟ್ಟಿನಲ್ಲಿ ಕೀಸರ್ ಒಂದು ಸುಂದರ ಸ್ಥಳವನ್ನು ಹುಡುಕಾಡತೊಡಗಿದರು. ಕೊನೆಗೆ 2018 ರಲ್ಲಿ ಶಾಲಾ ಬಸ್ ಒಂದನ್ನು ಖರೀದಿಸಿ ಅದರಲ್ಲಿಯೇ ತಮ್ಮ ಕಾಫಿ ಶಾಪ್ ಅನ್ನು ಆರಂಭಿಸುವ ನಿರ್ಧಾರ ತಾಳಿದರು.
ಅಂತೂ ಇಂತೂ ಬಸ್ ಖರೀದಿಗೆ ಬೇಕಾಗಿರುವ ಹಣ ಸಂಗ್ರಹಿಸಿ ಕೀಸರ್ ಬಸ್‌ನೊಳಗೆಯೇ ವ್ಯವಸ್ಥಿತವಾದ ಕಾಫಿ ಶಾಪ್ ಅನ್ನು ತೆರೆಯುವ ತಮ್ಮ ಪ್ರಯತ್ನಕ್ಕೆ ಮುಂದಾದರು.
ಹಳೆಯ ಬಸ್‌ಗೆ ಹೊಸ ಲುಕ್ ನೀಡಿದ ತಂಡ
ಹಳೆಯ ಬಸ್ ಅನ್ನೇ ಸುಂದರ ಕಾಫಿ ಶಾಪ್ ಅನ್ನಾಗಿ ಪರಿವರ್ತಿಸಲು ಕೀಸರ್ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಬಸ್‌ನ ರೂಪಾಂತರಕ್ಕಾಗಿ ಬರೋಬ್ಬರಿ ಎರಡು ವರ್ಷಗಳನ್ನು ಕೀಸರ್ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿರುವ ಕೀಸರ್ ಇಟ್ಟಿಗೆ ಗಾರೆ ಹೀಗೆ ಕಟ್ಟಡ ರಚನೆಯ ಆಕಾರಕ್ಕಿಂತ ಟ್ರಕ್ ಶೈಲಿಯ ತೆರೆದ ಕಾಫಿ ಶಾಪ್ ರಚನೆಯೇ ಸೂಕ್ತ ಎಂಬ ನಿರ್ಧಾರವನ್ನು ತಾಳಿದರು. ಪಾಳುಬಿದ್ದ ಸ್ಥಿತಿಯಲ್ಲಿದ್ದ ಶಾಲಾ ಬಸ್‌ಗೆ ಸುಂದರ ರೂಪವನ್ನು ನೀಡಿ ಅದರಲ್ಲಿಯೇ ಕಾಫಿ ಶಾಪ್ ಆರಂಭಿಸಬೇಕೆಂಬ ತಮ್ಮ ಕನಸಿಗೆ ಜೀವಂತಿಕೆ ನೀಡಲು ಕೀಸರ್ ಮುಂದಾದರು.
ಹಳೆಯದಾದರೂ ಹೊಸತನದ ಮೆರುಗು ನೀಡಿದ ಕೀಸರ್ ಹಾಗೂ ಸ್ನೇಹಿತರು
ಇದಕ್ಕೂ ಮುನ್ನ ಆಕೆ ಅನೇಕ ಟ್ರಕ್‌ಗಳು ಹಾಗೂ ಇನ್ನಿತರ ವಾಹನಗಳನ್ನು ಅನ್ವೇಷಿಸಿದ್ದರು. ತಮ್ಮ ಕಾಫಿ ಶಾಪ್ ಸುಂದರವಾಗಿರಬೇಕು ಹಾಗೂ ಭಿನ್ನವಾಗಿರಬೇಕೆಂಬ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿದರು. ಕೀಸರ್‌ಗೆ ಕಣ್ಣಿಗೆ ಬಿದ್ದ ಶಾಲಾ ಹಳೆಯ ಬಸ್ ಅಮೇರಿಕನ್ ವಾಯುನೆಲೆಗೆ ಸೇರಿತ್ತು ಎಂದು ಬಸ್ ಮಾಲೀಕರು ತಿಳಿಸಿರುವುದಾಗಿ ಇನ್‌ಸೈಡರ್‌ಗೆ ಕೀಸರ್ ತಿಳಿಸಿದ್ದಾರೆ.
ರಾಫ್ಟಿಂಗ್ ಕಂಪನಿಯು ದೋಣಿಗಳನ್ನು ಎಳೆಯಲು ಹಾಗೂ ಪ್ರಯಾಣಿಕರನ್ನು ಸಾಗಿಸಲು ಇದೇ ಬಸ್ ಅನ್ನು ಬಳಸುತ್ತಿತ್ತು. ಆದರೆ ಇದೀಗ ಶಿಥಿಲಾವಸ್ಥೆಯಲ್ಲಿರುವ ಬಸ್ ಅನ್ನು ಬಳಸದೇ ಎರಡು ವರ್ಷಗಳೇ ಕಳೆದಿತ್ತು ಎಂದು ಕೀಸರ್ ಬಸ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಬಸ್‌ಗೆ ಸಂಪೂರ್ಣ ಹೊಸ ಮಾದರಿ ನೀಡಿದ ತಂಡ
38 ಅಡಿ ಉದ್ದದ ಬಸ್ ಅನ್ನು ಕೀಸರ್ 100,000 ISK ಅಥವಾ ಆ ಸಮಯದಲ್ಲಿ ಸರಿಸುಮಾರು $ 800 ಕೊಟ್ಟು ಖರೀದಿಸಿದರು. ಬಸ್‌ನ ಇಂಜಿನ್ ಕೆಟ್ಟುಹೋಗಿತ್ತು ಅಂತೆಯೇ ಬಸ್‌ನ ಒಳಭಾಗವನ್ನು 20 ಇಂಚುಗಳಷ್ಟು ಮಣ್ಣು ತುಂಬಿಕೊಂಡಿತ್ತು. ಕೀಸರ್ ತನ್ನ ಮೆಕ್ಯಾನಿಕ್ ಸ್ನೇಹಿತರ ನೆರವಿನಿಂದ ಇಂಜಿನ್ ಅನ್ನು ಸರಿಪಡಿಸಿದರು ಹಾಗೂ ಬಸ್ ಅನ್ನು ಪೂರ್ಣ ಪ್ರಮಾಣದಲ್ಲಿ ಕಾಫಿ ಶಾಪ್ ಅನ್ನು ಪರಿವರ್ತಿಸುವ ಕೀಸರ್ ಪ್ರಯತ್ನ ಇಲ್ಲಿಂದಲೇ ಆರಂಭಗೊಂಡಿತು.
ಬಸ್ ಅನ್ನು ಪೂರ್ಣ ಪ್ರಮಾಣದಲ್ಲಿ ನವೀಕರಿಸುವ ಮೊದಲ ಪ್ರಯತ್ನದಲ್ಲಿ ಮೊದಲಿಗೆ ಬಸ್‌ನೊಳಗೆ 20 ಇಂಚುಗಳಷ್ಟು ತುಂಬಿಕೊಂಡಿದ್ದ ಮಣ್ಣನ್ನು ಸರಿಸಿದರು ಅಂತೆಯೇ ಬಸ್‌ನ ಒಳಭಾಗ ಹೇಗಿದೆ ಎಂಬುದನ್ನು ಕೀಸರ್ ಹಾಗೂ ಅವರ ಸ್ನೇಹಿತರು ಪರಿಶೀಲಿಸಿದರು.
ಐಸ್‌ಲ್ಯಾಂಡ್‌ನ ದಕ್ಷಿಣದಲ್ಲಿರುವ ಗ್ರಾಮವಾದ ಕಿರ್ಕ್ಜುಬೇಜಾರ್ಕ್ಲೌಸ್ಟೂರ್‌ನಲ್ಲಿಯೇ ಬಸ್ ಅನ್ನು ನಿಲುಗಡೆ ಮಾಡಿ ಕೀಸರ್ ಹಾಗೂ ಅವರ ಸ್ನೇಹಿತರು ಬಸ್ ಅನ್ನು ಪೂರ್ಣ ಪ್ರಮಾಣದಲ್ಲಿ ಕಾಫಿ ಶಾಪ್ ಅನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಮುಂದಾದರು.
ಬಸ್‌ನ ಹರಿದ ಆಸನ ಹಾಗೂ ಗೋಡೆಗಳ ರಿಪೇರಿ
ಬಸ್‌ನ ನೆಲದ ಭಾಗದಲ್ಲಿ ಮಣ್ಣನ್ನು ಹೊರಹಾಕಿದ ನಂತರ ಹಳೆಯ ಹಾಗೂ ಹರಿದು ಹೋಗಿದ್ದ ಆಸನಗಳನ್ನು ತೆಗೆದು ಹೊಸ ಹಾಗೂ ನವೀನ ಮಾದರಿಯ ಆಸನದ ವ್ಯವಸ್ಥೆಗಳನ್ನು ಜೋಡಿಸಿದರು. ಒಳಭಾಗದ ಗೋಡೆಗಳನ್ನು ಮೂರು ಬಣ್ಣದ ಪದರಗಳಲ್ಲಿ ನಿರ್ಮಿಸಿದರು ಅಂತೆಯೇ ತುಕ್ಕು ತೆಗೆಯಲು ಸ್ಯಾಂಡ್‌ಪೇಪರ್ ಅನ್ನು ಬಳಸಿದ್ದಾರೆ.
ಎಂಟು ಅಡಿ ಅಗಲದ ಜಾಗದಲ್ಲಿ ಕುರ್ಚಿಗಳು, ಟೇಬಲ್‌ಗಳು, ಸರ್ವಿಂಗ್ ಕೌಂಟರ್ ಹಾಗೂ ಅಗ್ಗಸ್ಟಿಕೆಯನ್ನು ಬಸ್‌ನೊಳಗೆಯೇ ಕೀಸರ್ ಅಳವಡಿಸಿದ್ದು ಕೌಂಟರ್‌ಗಳ ನಿರ್ಮಾಣಕ್ಕಾಗಿ ಸೆಕೆಂಡ್ ಹ್ಯಾಂಡ್ ಮರವನ್ನು ಬಳಸಿರುವುದಾಗಿ ಇನ್‌ಸೈಡರ್‌ಗೆ ತಿಳಿಸಿದ್ದಾರೆ. ಸ್ಥಳೀಯ ಜಂಕ್‌ಯಾರ್ಡ್‌ನಿಂದ ತೆಗೆದ ಮರದ ತುಂಡುಗಳಿಂದ ಬಸ್‌ನ ಸರ್ವಿಂಗ್ ಕೌಂಟರ್ ನಿರ್ಮಿಸಲು ಕೀಸರ್‌ನ ಇಂಜಿನಿಯರ್ ತಂದೆ ಬ್ರಿಟನ್‌ನಿಂದ ಐಸ್‌ಲ್ಯಾಂಡ್‌ಗೆ ಪ್ರಯಾಣಿಸಿದ್ದಾರೆ ಹಾಗೂ ಮಗಳ ಕನಸಿಗೆ ಸಾಥ್ ನೀಡಿದ್ದಾರೆ.
ಪ್ರತಿಯೊಂದು ಯೋಜನೆಯಂತೆಯೇ ರೂಪಿಸಲಾಗಿದೆ
ಕಾಫಿ ಕೌಂಟರ್ ಅನ್ನು ಬಸ್‌ನ ಪ್ರವೇಶದ್ವಾರದಲ್ಲಿಯೇ ಅಳವಡಿಸಿದ್ದರಿಂದ ಗ್ರಾಹಕರು ಬಸ್‌ನ ಮುಂದಿನ ದ್ವಾರವನ್ನು ಬಳಸಿ ಕೌಂಟರ್ ಪ್ರವೇಶಿಸುತ್ತಾರೆ ಹಾಗೂ ಆರ್ಡರ್ ಮಾಡುತ್ತಾರೆ. ಹೀಗೆಯೇ ಪ್ರತಿಯೊಂದನ್ನು ಯೋಜಿಸಿಕೊಂಡು ಅದರಂತೆಯೇ ಮುಂದುವರಿದಿರುವುದಾಗಿ ಕೀಸರ್ ತಿಳಿಸಿದ್ದಾರೆ. ಕೀಸರ್ ತಂದೆ ಕಪಾಟುಗಳು, ಉದ್ದವಾದ ಮರದ ಕೌಂಟರ್ ಹಾಗೂ ಗ್ರಾಹಕರಿಗೆ ಆನಂದವಾಗಿ ಕಾಫಿ ಹೀರಲು ಅನುಕೂಲಕರವಾಗಿರುವಂತೆ ಮೂರು ಟೇಬಲ್‌ಗಳನ್ನು ನಿರ್ಮಿಸಿದರು.
ಬಸ್‌ನ ಹೊರಭಾಗವನ್ನು ಮೊದಲಿನಂತೆಯೇ ಇರಿಸಿದ್ದ ಕೀಸರ್ ಒಳಾಂಗಣವನ್ನು ಮಾತ್ರವೇ ವಿನ್ಯಾಸ ಮಾಡಿದ್ದರು. ಬಸ್‌ನ ಹೊರಭಾಗಕ್ಕೆ ಆ್ಯಂಟಿ ರಸ್ಟ್ ಶಿಪ್ ಪೇಟಿಂಗ್ ಅನ್ನು ಬಳಸಿ ಬಣ್ಣ ಬಳಿದಿದ್ದು ಹಿಂದಿನ ಅದೇ ಮಾದರಿಯಲ್ಲಿ ಬಸ್‌ನ ಹೊರಭಾಗವನ್ನು ಇರಿಸಲಾಗಿದೆ ಎಂದು ಕೀಸರ್ ಮಾಹಿತಿ ನೀಡಿದ್ದಾರೆ.
ತುಕ್ಕು ಹಿಡಿಯದಂತೆ ಮುಂಜಾಗ್ರತೆ
ತಮ್ಮ ಕೆಫೆ ಸಮುದ್ರಕ್ಕೆ ಹತ್ತಿರವಾಗಿರುವುದರಿಂದ ಉಪ್ಪು ಗಾಳಿಯು ತುಕ್ಕಿಗೆ ಕಾರಣವಾಗಬಹುದು ಎಂಬ ನಿಟ್ಟಿನಲ್ಲಿ ಕೀಸರ್ ಹವಾಮಾನ ನಿರೋಧಕ ಬಣ್ಣವನ್ನು ಎರಡು ಪದರಗಳಲ್ಲಿ ಬಳಸಿ ಬಸ್‌ನ ಹೊರಭಾಗವನ್ನು ಅಂದಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ತಮ್ಮ ಗೆಳೆಯನ ಸಹಾಯವನ್ನು ಬಸ್‌ನ ನವೀಕರಣಕ್ಕಾಗಿ ಪಡೆದುಕೊಂಡಿರುವುದಾಗಿ ಕೀಸರ್ ತಿಳಿಸಿದ್ದು ಬಸ್‌ಗೆ ಪೇಂಟಿಂಗ್ ಮಾಡುವುದು ಅತ್ಯಂತ ಆನಂದದಾಯಕ ಕೆಲಸವಾಗಿತ್ತು ಹಾಗೂ ಇದೊಂದು ವಿನೂತನ ಅನುಭವ ಎಂದು ಹಂಚಿಕೊಂಡಿದ್ದಾರೆ.
ಕೀಸರ್ ತಿಳಿಸಿರುವಂತೆ, ಬಸ್, ಕಾಫಿ ಶಾಪ್ ಅನುಮತಿಗಳು ಮತ್ತು ಸಾಮಾಗ್ರಿಗಳನ್ನು ಖರೀದಿಸುವುದು ಸೇರಿದಂತೆ ಬಸ್‌ನ ನವೀಕರಣಕ್ಕೆ ತಗುಲಿದ ಒಟ್ಟು ವೆಚ್ಚವು $36,000 ಆಗಿದೆ. ಐಸ್‌ಲ್ಯಾಂಡ್‌ನಲ್ಲಿ ಖರೀದಿಸುವುದಕ್ಕಿಂತ ವಿದೇಶದಿಂದ ಆಮದು ಮಾಡಿಕೊಳ್ಳುವುದು ಅಗ್ಗವಾದ್ದರಿಂದ ಪ್ರತಿಯೊಂದನ್ನು ಅಲ್ಲಿಂದಲೇ ತರಿಸಿಕೊಂಡಿರುವುದಾಗಿ ಕೀಸರ್ ಇನ್‌ಸೈಡರ್‌ಗೆ ತಿಳಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಕೂಡ ಆರ್ಡರ್ ತೆಗೆದುಕೊಳ್ಳುತ್ತಾರೆ
ತಮ್ಮ ಕನಸಿಗೆ ಸಾಕಾರ ನೀಡಿದ ಕೀಸರ್ ಸ್ಕೂಲ್ ಬೀನ್ಸ್ ಕಾಫಿ ಶಾಪ್ ಹೆಸರಿನ ಬಸ್‌ನಲ್ಲಿ ತಮ್ಮ ಕಾಫಿ ಶಾಪ್ ಅನ್ನು ತೆರೆದೇಬಿಟ್ಟರು ಅಂತೆಯೇ ವ್ಯವಹಾರದ ಮೊದಲ ದಿನದಂದು ಆಕೆಯ ಪೋಷಕರು ಹಾಗೂ ಸ್ನೇಹಿತ ಸಹಾಯ ಮಾಡಿದ್ದಾಗಿ ಇನ್‌ಸೈಡರ್‌ಗೆ ಕೀಸರ್ ತಿಳಿಸಿದ್ದಾರೆ.
ಕಾಫಿ ಶಾಪ್‌ನ ಆರ್ಡರ್‌ಗಳನ್ನು ಇನ್‌ಸ್ಟಾಗ್ರಾಮ್ ಮೂಲಕ ಸ್ವೀಕರಿಸುತ್ತಿದ್ದ ಕೀಸರ್ ಇನ್ನು ಬಸ್‌ಗೆ ಬಂದು ಆತಿಥ್ಯ ಸ್ವೀಕರಿಸುತ್ತಿದ್ದ ಗ್ರಾಹಕರಿಗೂ ಖುಷಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು ಎಂಬ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಹಿಮಗಾಳಿಗೆ, ಮಂಜಿನಿಂದ ಬಸ್‌ಗೆ ಹಾನಿಯುಂಟಾಗುತ್ತದೆ
ಐಸ್ಲ್ಯಾಂಡ್ ಪ್ರಯಾಣದ ಪ್ರಕಾರ ವಿಕ್ ಐಸ್‌ಲ್ಯಾಂಡ್‌ನ ದಕ್ಷಿಣದ ಪಟ್ಟಣವಾಗಿದೆ ಮತ್ತು ಇದು ಸಾಕಷ್ಟು ಮಳೆ, ಗಾಳಿ ಮತ್ತು ಹಿಮಕ್ಕೆ ಗುರಿಯಾಗುತ್ತದೆ. ಚಳಿಗಾಳಿಯ ಪ್ರಖರತೆಯನ್ನು ಹಂಚಿಕೊಂಡಿರುವ ಕೀಸರ್ ಬಸ್‌ನ ಕಿಟಕಿಗಳಿಗೆ ಬಂಡೆಗಳು ಗುದ್ದಿ ಹಾನಿಮಾಡಿರುವುದನ್ನು ತಿಳಿಸಿದ್ದಾರೆ. ಹಿಮದ ಬಿರುಗಾಳಿಯಿಂದ ಬಸ್‌ನ ಕಿಟಕಿ ಹಾಗೂ ಬಾಗಿಲುಗಳೆಲ್ಲಾ ಜಂಖಂ ಗೊಂಡವು ಎಂದು ತಿಳಿಸಿದ್ದಾರೆ. ಬಸ್ ಸಂಪೂರ್ಣವಾಗಿ ಹಿಮದ ರಾಶಿಯಿಂದ ರಾತ್ರಿಯಿಡೀ ಆವೃತಗೊಂಡಿತ್ತು ಎಂದು ಕೀಸರ್ ತಿಳಿಸಿದ್ದಾರೆ.
ಬಸ್ ಉರುಳದಂತೆ ತಡೆಯಲು ಕಾಂಕ್ರೀಟ್ ತುಂಬಿದ ತೈಲ ಬ್ಯಾರೆಲ್‌ಗಳನ್ನು ಬಸ್‌ನ ಟೈರ್‌ಗಳಿಗೆ ಅಳವಡಿಸಿರುವುದಾಗಿ ಕೀಸರ್ ತಿಳಿಸಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಹೊಂದಿದ್ದರೂ ಕೀಸರ್ ತಮ್ಮ ಕಾಫಿ ಶಾಪ್ ಅನ್ನು ನಡೆಸುತ್ತಿದ್ದಾರೆ ಹಾಗೂ ನಾನು ಮಾಡುವ ಕೆಲಸದಲ್ಲಿ ನನಗೆ ಸಂಪೂರ್ಣ ತೃಪ್ತಿಯಿದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ