Travel Stories: ಬಿಡಿಗಾಸಿಲ್ಲದೆ 11 ರಾಜ್ಯ ಸುತ್ತಿದ ಯುವಕ: ವಿಶ್ವ ಪರ್ಯಟನೆಗಾಗಿ ಅಲೆಮಾರಿಯ ವಿನೂತನ ಅಭಿಯಾನ

ಎಲ್ಲರೂ ನಾಲ್ಕು ಗೋಡೆಗಳ ಮಧ್ಯೆ ಪುಸ್ತಕ ಹಿಡಿದು ಭವಿಷ್ಯಕ್ಕಾಗಿ ತಯಾರಿ ನಡೆಸುತ್ತಾರೆ. ಆದರೆ ಇಲ್ಲೊಬ್ಬ ಯುವಕ ಭವಿಷ್ಯ ಎನ್ನುವುದೇ ಭ್ರಮೆ. ಜೀವಿಸುವುದಾದರೆ ಆ ಕ್ಷಣದಲ್ಲಿ ಅಂತ ವಿದ್ಯಾಭ್ಯಾಸ ಅರ್ಧಕ್ಕೆ ಬಿಟ್ಟು ತನ್ನ ಕನಸನ್ನು ಸಾಕಾರ ಮಾಡಿಕೊಳ್ಳಲು ಮುಂದಾಗಿದ್ದಾನೆ. ಅದಕ್ಕೆ 23ನೇ ವಯಸ್ಸಿಗೆ ವಿಶ್ವ ಸುತ್ತುವ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಯಾರೂ ಮಾಡದ ಸಾಹಸಕ್ಕೆ ಕೈ ಹಾಕಿದ್ದಾನೆ.

Anitha E | news18
Updated:March 10, 2019, 9:36 AM IST
Travel Stories: ಬಿಡಿಗಾಸಿಲ್ಲದೆ 11 ರಾಜ್ಯ ಸುತ್ತಿದ ಯುವಕ: ವಿಶ್ವ ಪರ್ಯಟನೆಗಾಗಿ ಅಲೆಮಾರಿಯ ವಿನೂತನ ಅಭಿಯಾನ
ಎಲ್ಲರೂ ನಾಲ್ಕು ಗೋಡೆಗಳ ಮಧ್ಯೆ ಪುಸ್ತಕ ಹಿಡಿದು ಭವಿಷ್ಯಕ್ಕಾಗಿ ತಯಾರಿ ನಡೆಸುತ್ತಾರೆ. ಆದರೆ ಇಲ್ಲೊಬ್ಬ ಯುವಕ ಭವಿಷ್ಯ ಎನ್ನುವುದೇ ಭ್ರಮೆ. ಜೀವಿಸುವುದಾದರೆ ಆ ಕ್ಷಣದಲ್ಲಿ ಅಂತ ವಿದ್ಯಾಭ್ಯಾಸ ಅರ್ಧಕ್ಕೆ ಬಿಟ್ಟು ತನ್ನ ಕನಸನ್ನು ಸಾಕಾರ ಮಾಡಿಕೊಳ್ಳಲು ಮುಂದಾಗಿದ್ದಾನೆ. ಅದಕ್ಕೆ 23ನೇ ವಯಸ್ಸಿಗೆ ವಿಶ್ವ ಸುತ್ತುವ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಯಾರೂ ಮಾಡದ ಸಾಹಸಕ್ಕೆ ಕೈ ಹಾಕಿದ್ದಾನೆ.
  • News18
  • Last Updated: March 10, 2019, 9:36 AM IST
  • Share this:
- ಅನಿತಾ ಈ, 

ಕನಸಿಗೆ ಮಿತಿಯೇ ಇಲ್ಲ. ಅದಕ್ಕೆ ಯಾರೂ ಬೇಕಾದರೂ ಕನಸು ಕಾಣಬಹುದು. ವಾಸ್ತವದಲ್ಲಿ ಮಾಡಲಾಗದ್ದನ್ನ ಕನಸಿನಲ್ಲಿ ಕಂಡು ಖುಷಿಯ ಪಡುವವರದ್ದೇ ಒಂದು ಕಡೆಯಾದರೆ. ಅದಕ್ಕೆ ವಿರುದ್ಧವಾಗಿ ಕಂಡ ಕನಸನ್ನು ನನಸು ಮಾಡಿಕೊಳ್ಳುವವರು ಮತ್ತೊಂದು ಕಡೆ. ಕಂಡ ಕನಸನ್ನು ನನಸು ಮಾಡಿಕೊಳ್ಳಲು ಇಲ್ಲೊಬ್ಬ ಯುವಕ ಎಂಜಿನಿಯರಿಂಗ್​ ಅನ್ನು ಅರ್ಧಕ್ಕೆ ನಿಲ್ಲಿಸಿ, ಹೊರಟೇ ಬಿಟ್ಟ.

ಇದನ್ನೂ ಓದಿ: Yajamana Movie: ದರ್ಶನ್​ರ ಮಗ ಜೂನಿಯರ್​ ಚಾಲೆಂಜಿಂಗ್​ ಸ್ಟಾರ್​ ಎಂಟ್ರಿಗೆ ಸ್ಯಾಂಡಲ್​ವುಡ್​ನಲ್ಲಿ ಸಜ್ಜಾಗುತ್ತಿದೆ ವೇದಿಕೆ

ಆಗಿನ್ನು ಆತನಿಗೆ 22 ವರ್ಷ, ಬಿ.ಟೆಕ್​ ವ್ಯಾಸಂಗ ಮಾಡುತ್ತಿದ್ದ. ಅನಂತಪುರದ ನಿವಾಸಿಯಾಗಿದ್ದ ವಿಮಲ್​ ಕುಮಾರ್​ಗೆ ಪುಸ್ತಕ ಓದುಗ ಹವ್ಯಾಸ. ಓದುವ ಹವ್ಯಾಸದಿಂದಲೇ ಅವರಲ್ಲಿ ಹುಟ್ಟಿದ್ದು ದೇಶ ಸುತ್ತುವ ಆಸೆ. ಈ ಚಿಗುರೊಡೆದ ಆಸೆಗೆ ನೀರೆದು ಗಿಡವನ್ನಾಗಿ ಮಾಡಿದ ವಿಮಲ್​, ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಿದರು.

ದೇಶ ಸುತ್ತುವ ಆಸೆ ಕುರಿತು ಅಮ್ಮನಿಗೆ ತಿಳಿಸಿ, ಒಂದೆರಡು ಜೊತೆ ಬಟ್ಟೆ ತೆಗೆದುಕೊಂಡು ಮನೆಯಿಂದ ಬರಿಗೈಯಲ್ಲಿ ಹೊರಟೇ ಬಿಟ್ಟರು. 2016ರ ಜುಲೈ 1ರಂದು ಆರಂಭವಾದ ಪಯಣದ ಸತತ 9 ತಿಂಗಳ ಕಾಲ ಮುಂದುವರೆದಿತ್ತು.ಬಸ್ಸಿನಲ್ಲಿ ಪಯಣಿಸುವಾಗ ಒಂದೆಡರು ರೂಪಾಯಿ ಚಿಲ್ಲರೆ ಇಲ್ಲ ಎಂದರೆ, ಸಹ ಪ್ರಯಾಣಿಗರ ಬಳಿ ಕೇಳೋಕು ಸಂಕೋಚ ಪಡುತ್ತೇವೆ. ಹೀಗಿರುವಾಗ 11 ರಾಜ್ಯಗಳನ್ನು ಸತತವಾಗಿ 9 ತಿಂಗಳ ಕಾಲ ಒಂದು ರೂಪಾಯಿಯೂ ಖರ್ಚಿಲ್ಲದೆ ಸುತ್ತಿದ್ದ ವಿಮಲ್​ ಅವರನ್ನ ಮೆಚ್ಚಲೇಬೇಕು.ಹಣವಿಲ್ಲದೆ ಅಷ್ಟು ರಾಜ್ಯಗಳನ್ನು ಸುತ್ತಲು ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ ಅವರು ಕೊಡುವ ಉತ್ತರ  ಹೀಗಿದೆ.... 'ಮನುಷ್ಯರು ತುಂಬಾ ಒಳ್ಳೆಯವರು. ನಾವೇ ಈ ಸಮಾಜವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಅಭಿರುಚಿ ಹಾಗೂ ಕನಸನ್ನು ನನಸು ಮಾಡಿಕೊಳ್ಳಲು ನಾವು ಪಡುವ ಪ್ರಯತ್ನ ಕಂಡು ಸಾಕಷ್ಟು ಮಂದಿ ಸಹಾಯ ಮಾಡುತ್ತಾರೆ. ಜನರ ಪ್ರೀತಿಯಿಂದಲೇ ನಾನು ನನ್ನ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಯಿತು' ಎನ್ನುತ್ತಾರೆ ವಿಮಲ್​."ಮನೆಯಿಂದ ಹೊರಟಾಗ ನನಗೆ ಎಲ್ಲಿಗೆ ಹೋಗುತ್ತಿದ್ದೇನೆ, ಏನು ಮಾಡುತ್ತಿದ್ದೇನೆ ಅನ್ನೋದು ಗೊತ್ತಿರಲಿಲ್ಲ. ಕೈ ಯಲ್ಲಿ ಬಿಡುಗಾಸೂ ಇಲ್ಲ. ದುಡ್ಡಿಲ್ಲದೆ ದೇಶ ಸುತ್ತೋದು ಹೇಗೆ ಎಂದು ಯೋಚಿಸಲಿಲ್ಲ. ದಾರಿಯಲ್ಲಿ ಹೋಗುವವರ ಬಳಿ ಲಿಫ್ಟ್​ ಕೇಳುತ್ತಾ, ದೇವಸ್ಥಾನ, ಪೊಲೀಸ್​ ಠಾಣೆ, ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ಕಳೆಯುತ್ತಿದೆ. ದಾರಿ ಮಧ್ಯೆ ಸಿಗುವವರ ಬಳಿಯೇ ಊಟಕ್ಕೂ ವ್ಯವಸ್ಥೆ ಮಾಡಿಸಿಕೊಳ್ಳುತ್ತಿದ್ದೆ. ಯಾರೊಬ್ಬರೂ ಬೇಸರ ಮಾಡಿಕೊಳ್ಳುತ್ತಿರಲಿಲ್ಲ "

ದಕ್ಷಿಣ ಭಾರತದ ಆರು ರಾಜ್ಯಗಳೊಂದಿಗೆ ಮಹಾರಾಷ್ಟ್ರ, ಅಸ್ಸಾಂ, ನಾಗಾಲ್ಯಾಂಡ್​ ಹಾಗೂ ಪಶ್ಚಿಮ ಬಂಗಾಳವನ್ನು ವಿಮಲ್​ ಸದ್ಯ ಸುತ್ತಿ ಬಂದಿದ್ದಾರೆ. ಅವರ ಪಯಣ ಪ್ರವಾಸಿ ಸ್ಥಳಗಳಲ್ಲ. ಪ್ರತಿ ರಾಜ್ಯದಲ್ಲೂ ಹಳ್ಳಿಗಳಲ್ಲಿ ಸಂಚರಿಸಿ, ಅಲ್ಲಿನ ಜನ ಜೀವನ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಅರಿಯುವ ಪ್ರಯತ್ನ ಮಾಡುತ್ತಾರೆ."ಅಸ್ಸಾಂನಿಂದ ನಾಗಲ್ಯಾಂಡ್​ಗೆ ಹೋಗಲು ನಿರ್ಧರಿಸಿದ್ದೆ. ಆಗ ನಾಗಾಲ್ಯಾಂಡ್​ನ ದಿಮಾಪುರ ರೈಲ್ವೆ ನಿಲ್ದಾಣದಲ್ಲಿ ಇಳಿದು ಅಲ್ಲೇ ಹೊರಗಡೆ ಎನೂ ತೋಚದೆ ನಿಂತಿದ್ದೆ. ಆಗ ಅಲ್ಲೇ ನನ್ನನ್ನು ಗಮನಿಸುತ್ತಿದ್ದ ಒಬ್ಬ ಮಹಿಳೆ ನನ್ನ ಬಳಿ ಬಂದು ವಿಚಾರಿಸಿದರು. ತುಂಬಾ ಹೊತ್ತಿನಿಂದ ಇಲ್ಲೇ ನಿಂತಿದ್ದೀರಾ ಏಕೆ ಎಂದೆಲ್ಲ ಕೇಳಿದರು. ನಂತರ ಹಣವಿಲ್ಲದೆ ನಾನು ಸುತ್ತಾಡುವ ವಿಷಯ ತಿಳಿಸಿದೆ. ಖುಷಿಯಿಂದ ಅವರೂ ನನಗೆ ಸಹಾಯ ಮಾಡಿದರು. ನಂತರ ಅವರೇ ನನಗೆ ಊಟ ಕೊಡಿಸಿ, ಮುಂದಿನ ಪಯಣಕ್ಕೆ ಸಹಾಯ ಮಾಡಿದರು. ಅಲ್ಲಿಯ ವರೆಗೆ ನನಗೆ ಅವರು ಯಾರು ಎಂದು ತಿಳಿದಿರಲಿಲ್ಲ. ಆಕೆ ಓರ್ವ ಪೊಲೀಸ್ ಅಧಿಕಾರಿ. ನಾಗಾಲ್ಯಾಂಡ್​ನಲ್ಲಿ ಸುತ್ತಾಡಲು ಪರ್ಮಿಟ್​ ( Innerline permit) ಅಗತ್ಯವಿದೆ. ಅದೂ ನನಗೆ ಗೊತ್ತಿರಲಿಲ್ಲ. ನಂತರ ಅವರೇ ನನಗೆ ಪರ್ಮಿಟ್​ ಸಹ ಕೊಡಿಸಿದ್ದರು "9 ತಿಂಗಳ ಪಯಣದಲ್ಲಿ ಬಸ್​, ರೈಲು, ಸೈಕಲ್​, ಬೈಕ್​, ಆಟೋ, ಲಾರಿ ಹೀಗೆ ದಾರಿಯಲ್ಲಿ ಸಿಕ್ಕವರ ಜತೆ ಪಯಣಿಸಿದ್ದು, ಅವರ ಜತೆಗಿನ ಒಡನಾಟ, ಅನುಭವಗಳ ವಿನಿಮಯ ಎಲ್ಲವೂ ವಿಮಲ್​ನಲ್ಲಿದ್ದ ದೇಶ ಸುತ್ತುವ ಆಸೆಗೆ ಮತ್ತಷ್ಟು ನೀರೆರೆದಿವೆ. ಈಗ ಈ ಆಸೆ ಮತ್ತಷ್ಟು ದೊಡ್ಡದಾಗಿದ್ದು ವಿಶ್ವ ಪರ್ಯಟನೆಗೆ ಪ್ರೇರೇಪಿಸಿದೆ.

ಇದನ್ನೂ ಓದಿ: ಕಡಿಮೆ ಬೆಲೆಗೆ ವಿದೇಶದಿಂದ ಚಿನ್ನ ತರುವುದು ಎಷ್ಟು ಸುಲಭ ಗೊತ್ತಾ!

ಅದಕ್ಕಾಗಿ ವಿಮಲ್​ ಈಗ ವ್ಯಾನ್​ ಖರೀದಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಅವರಿಗೆ 8 ಲಕ್ಷದ ಅಗತ್ಯವಿದೆ. ಈ ವ್ಯಾನ್ ಅನ್ನು ಫುಟ್​ ಟ್ರಕ್​ ಆಗಿ ಮಾರ್ಪಾಟು ಮಾಡಿ, ಅದರಲ್ಲಿ ವ್ಯವಹಾರ ಮಾಡುತ್ತಲೇ ಸತತ ನಾಲ್ಕು ವರ್ಷಗಳ ಕಾಲ ದೇಶ ಸುತ್ತುವ ಕನಸು ಕಂಡಿದ್ದಾರೆ. ಈ ಪಯಣದಲ್ಲಿ ದಾರಿ ಮಧ್ಯೆ ಸಿಗುವ ಅನಾಮಿಕರಿಗೂ ಉಚಿತವಾಗಿ ಅವರ ಗಮ್ಯ ತಲುಪಲು ಸಹಾಯ ಮಾಡುವ ಮನಸ್ಸು ಹೊಂದಿದ್ದಾರೆ ವಿಮಲ್​.

ವಿಶ್ವ ಪರ್ಯಟನೆಗಾಗಿ ವಿಭಿನ್ನ ಹಾಗೂ ವಿನೂತನ ಅಭಿಯಾನ

ವ್ಯಾನ್​ ಖರೀದಿಸಲು ಅಗತ್ಯವಿರುವ ಹಣಕ್ಕಾಗಿ ನಿಧಿ ಸಂಗ್ರಹಕ್ಕೆ ಮುಂದಾಗಿದ್ದಾರೆ ವಿಮಲ್​. ಅದಕ್ಕಾಗಿ ಗ್ರೂಪ್​ ಫಂಡಿಂಗ್​ ಅಭಿಯಾನ ಆರಂಭಿಸಿದ್ದಾರೆ. ಈ ಲಿಂಕ್​ ಕ್ಲಿಕ್​ ಮಾಡಿದರೆ ವಿಮಲ್​ ಕನಸು ಹಾಗೂ ಅವರಿಗೆ ಸಹಾಯ ಮಾಡಲು ಈ ಲಿಂಕ್​ ಕ್ಲಿಕ್​ ಮಾಡಿ... ketto.org/helpvimal  ಇಲ್ಲಿ ಯಾರೂ ಬೇಕಾದರೂ ಅವರಿಗೆ ಸಹಾಯ ಮಾಡಬಹುದು. ನಿಮ್ಮ ಕೈಲಾಷ್ಟು ಹಣ ಸಹಾಯ ಅಥವಾ ಸುತ್ತಾಟಕ್ಕೆ ಅಗತ್ಯ ಯಾವುದೇ ರೀತಿಯ ಸಹಾಯವನ್ನು ಅವರಿಗೆ ಮಾಡಬಹುದಾಗಿದೆ.

'Buy a Tea From a Seasoned Traveller' ಅಭಿಯಾನ

'ಗ್ರೂಪ್​ ಫಂಡಿಂಗ್'​ ಜತೆಗೆ ವಿಮಲ್​ ಸದ್ಯ ಅಲೆಮಾರಿಯಿಂದ ಚಹಾ ಖರೀದಿಸಿ ಅನ್ನೋ ಅಭಿಯಾನ ಸಹ ಆರಂಭಿಸಿದ್ದಾರೆ. ಕಳೆದ ಮೂರು ದಿನಗಳಿಂದ ಬೆಂಗಳೂರಿನ ರಸ್ತೆಗಳಲ್ಲಿ ವಿಮಲ್​ ತಾವೇ ಖುದ್ದು ತಯಾರಿಸಿರುವ ಟೀ ಹಾಗೂ ಮಜ್ಜಿಗೆಯನ್ನು ಮಾರುತ್ತಿದ್ದಾರೆ. ಯಾರೇ ಇವರ ಬಳಿಯಿಂದ ಟೀ/ಮಜ್ಜಿಗೆ ಖರೀದಿಸಲು ಹೋದರೆ, ಅವರಿಗೆ ತನ್ನ ಕನಸಿನ ಬಗ್ಗೆ ವಿವರಿಸುತ್ತಾರೆ. ನಂತರ ಅವರು ಇಷ್ಟಪಟ್ಟು ಯಾವುದೇ ರೀತಿಯ ಸಹಾಯ ಮಾಡಿದರು ಖುಷಿಯಿಂದ ಸ್ವೀಕರಿಸುತ್ತಾರೆ. ಈ ಅಭಿಯಾನಗಳಿಂದ ಸದ್ಯ 50 ಸಾವಿರ ನಿಧಿ ಸಂಗ್ರಹವಾಗಿದೆ. 23 ವರ್ಷದ ವಿಮಲ್​ 24 ವರ್ಷ ತುಂಬುವ ಮೊದಲೇ ವಿಶ್ವ ಪರ್ಯಟನೆ ಆರಂಭಿಸಬೇಕು ಎಂಬುದು ವಿಮಲ್​ ಕನಸು."9 ತಿಂಗಳ ಸುತ್ತಾಟದ ನಂತರ ನನ್ನ ತಂಗಿಯ ಸ್ಕೂಟರ್​ ಏರಿ ಆಗಾಗ ಸುತ್ತಾಡಲು ಹೊಟು ಬಿಟುತ್ತಿದ್ದೆ. ಹೀಗೆ ಸುತ್ತಾಟದಲ್ಲಿದ್ದಾಗ  ಒಮ್ಮೆ ನನ್ನ ಬಳಿ ಹಣ ಇರಲಿಲ್ಲ. ಆಗ ನಾನಿದ್ದ ಕಡೆ ಒಂದು ಎನ್​ಜಿಓ ತ್ತು. ಅಲ್ಲಿ ಮಕ್ಕಳಿಗೆ ಒಂದು ತಿಂಗಳ ಕಾಲ ಪಾಠ ಮಾಡಿದ್ದೆ. ಅದರಿಂದ ಬಂದ ಹಣದಲ್ಲಿ ಪೆಟ್ರೋಲ್​ ಖರೀದಿಸಿ, ಪಯಣ ಮುಂದುವರೆಸಿದ್ದೆ. ಉಳಿದ ಹಣದಲ್ಲಿ ಸ್ವಲ್ಪ ಗೊಂಬೆಗಳನ್ನು ಖರೀದಿಸಿ, ದಾರಿ ಮಧ್ಯೆ ಹಣದ ಅಗತ್ಯ ಬಿದ್ದಾಗ, ಅದನ್ನು ಮಾರುತ್ತಿದ್ದೆ"

ನಾಲ್ಕು ಗೋಡೆಗಳ ಮಧ್ಯೆ ಪುಸ್ತಕ ಹಿಡಿದು ಕಲಿಯುವುದಕ್ಕಿಂತ ರಸ್ತೆ ಎಂಬ ವಿಶ್ವ ವಿದ್ಯಾಲಯದಲ್ಲಿ ಸಿಗುವ ಅನುಭವವೆಂಬ ಗುರುವಿನಿಂದ ಕಲಿಯುವ ಪಾಠ ನಿಜಕ್ಕೂ ಅನನ್ಯ ಎನ್ನುವುದು ವಿಮಲ್​ ಅಭಿಪ್ರಾಯ. ತನ್ನ ಕನಸನ್ನು ನನಸಾಗಿಸಿಕೊಳ್ಳಲು ಶ್ರಮಿಸುತ್ತಿರುವ ವಿಮಲ್​ಗೆ ಸಹಾಯ ಮಾಡುವ ಮನಸ್ಸಿದ್ದಲ್ಲಿ ನೀವೂ ಅವರಿಗೆ ನೆರವಾಗಬಹುದು.

ಅಲೆಮಾರಿಯ ಪ್ರಯತ್ನ ಹಾಗೂ ಕನಸು ಏನೆಂದು ಅವರ ಮಾತಲ್ಲೇ ಕೇಳಿ....


 
First published:March 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ