ಸಾಮಾನ್ಯವಾಗಿ ಒಂದು ಅಥವಾ ಎರಡು ಸರ್ಜರಿಗಳಾದರೆ ತಿಂಗಳುಗಟ್ಟಲೆ ರೆಸ್ಟ್ ಮಾಡೋದು ಅನಿವಾರ್ಯವಾಗುತ್ತದೆ. ವೈದ್ಯರು (Doctor) ಕೂಡ ಅದನ್ನೇ ಹೇಳ್ತಾರೆ. ಅದರಲ್ಲೂ ಕಾಲಿನ ಮೂಳೆ ಮುರಿದುಹೋಗಿದ್ದರಂತೂ ಅದು ಸರಿಹೋಗಲು ಇನ್ನಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದ್ರೆ ಇಲ್ಲೊಬ್ಬ ರಸ್ತೆ ಅಪಘಾತದಿಂದ ಒಂದಲ್ಲಎರಡಲ್ಲ ಬರೋಬ್ಬರಿ 14 ಶಸ್ತ್ರಚಿಕಿತ್ಸೆಗಳಾಗಿದ್ದರೂ (Surgeries) ಆಶ್ಚರ್ಯವೆಂಬಂತೆ 6 ತಿಂಗಳಿಗೇ ನಡೆಯಲು ಆರಂಭಿಸಿದ್ದಾರೆ. ಹೌದು, ಕಳೆದ ಜುಲೈನಲ್ಲಿ 35 ವರ್ಷದ ಬಸುದೇವ್ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಅವರ ಎಡಗಾಲಿಗೆ ತೀವ್ರ ಗಾಯಗಳಾಗಿ ಬರೋಬ್ಬರಿ 14 ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದೀಗ ಆಶ್ಚರ್ಯ ಎಂಬಂತೆ ಸರ್ಜರಿಯಾಗಿ 6 ತಿಂಗಳ ಬಳಿಕ ಅವರು ನಡೆಯಲು ಆರಂಭಿಸಿದ್ದಾರೆ.
ಬೈಕ್ಗೆ ಡಿಕ್ಕಿ ಹೊಡೆದಿತ್ತು ಟ್ರಕ್!:
ಅಂದಹಾಗೆ ಪಶ್ಚಿಮ ಬಂಗಾಳ ಮೂಲದ ಬಸುದೇವ್, ಕಳೆದ ಎಂಟು ವರ್ಷಗಳಿಂದ ಪುಣೆಯ ಉಂಡ್ರಿಯಲ್ಲಿ ನೆಲೆಸಿದ್ದಾರೆ. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು ಕಳೆದ ವರ್ಷ ಜುಲೈನಲ್ಲಿ ತಮ್ಮ ಪತ್ನಿಯೊಂದಿಗೆ ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದರು. ಆಗ ಪಿಸೋಲಿ ರಸ್ತೆಯಲ್ಲಿ ಅವರ ವಾಹನಕ್ಕೆ ಹಿಂಬದಿಯಿಂದ ಟ್ರಕ್ ಡಿಕ್ಕಿ ಹೊಡೆದಿದೆ. ಇದರ ಅವರ ಪರಿಣಾಮ ಎಡಗಾಲಿಗೆ ತೀವ್ರವಾದ ಗಾಯಗಳಾಗಿದ್ದವು.
ಬಸುದೇವ್ ಪರಿಸ್ಥಿತಿ ಗಂಭೀರವಾಗಿತ್ತು!:
ನನ್ನ ಹೆಂಡತಿ ರಸ್ತೆಯ ಎಡಭಾಗಕ್ಕೆ ಬಿದ್ದಳು. ಆದರೆ ನನ್ನ ಸ್ಕೂಟರ್ ಇನ್ನೂ ಓಡುತ್ತಲೇ ಇತ್ತು ಮತ್ತು ಹೊಡೆತದ ಪ್ರಭಾವದಿಂದಾಗಿ ನಾನು ಕನಿಷ್ಠ 50 ಅಡಿಗಳಷ್ಟು ಎಳೆಯಲ್ಪಟ್ಟೆ. ನನ್ನ ಎಡಗಾಲು ನಜ್ಜುಗುಜ್ಜಾಗಿತ್ತು ಎಂದು ಬಸುದೇವ್ ಹೇಳಿದ್ದಾರೆ. ಇಡೀ ಎಡ ಕಾಲಿಗೆ ರಕ್ತ ಪೂರೈಕೆ ಇರಲಿಲ್ಲ ಮತ್ತು ಪಾಪ್ಲೈಟಲ್ ಅಪಧಮನಿ (ಮೊಣಕಾಲು ಪ್ರದೇಶದಲ್ಲಿ ಮತ್ತು ಕೆಳ ಕಾಲಿನಲ್ಲಿ) ಹಾನಿಗೊಳಗಾಗಿತ್ತು. ತೀವ್ರ ಗಾಯದಿಂದಾಗಿ ಸಾಕಷ್ಟು ಪ್ರಮಾಣದ ರಕ್ತವನ್ನು ಕಳೆದುಕೊಂಡಿದ್ದೆ. ಆದರೂ ಡಾ. ಘೋಷ್ ಅವರು ತಮ್ಮ ಕಾಲನ್ನು ಕತ್ತರಿಸದಂತೆ ಉಳಿಸಲು ಪ್ರಯತ್ನಿಸಲು ನಿರ್ಧರಿಸಿದ್ದರು ಎಂದು ಬಸುದೇವ್ ಹೇಳಿದ್ದಾರೆ.
ಇದನ್ನೂ ಓದಿ: Marathon: 80ರಲ್ಲೂ ಈ ಅಜ್ಜಿ ಹೇಗೆ ಓಡ್ತಾರೆ ನೋಡಿ, ಈಗಿನ ಕಾಲದವ್ರು ಇವ್ರನ್ನು ನೋಡಿ ಕಲಿತುಕೊಳ್ಳಬೇಕು!
ಅಂದಹಾಗೆ ರೂಬಿ ಹಾಲ್ ಕ್ಲಿನಿಕ್ನ ಮೈಕ್ರೊವಾಸ್ಕುಲರ್ ಸರ್ಜನ್ ಡಾ. ಅಭಿಷೇಕ್ ಘೋಷ್ ಬಸುದೇವ್ಗೆ ಚಿಕಿತ್ಸೆ ನೀಡಿದ್ದರು. ರೋಗಿಯ ಎಡಗಾಲು ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು. ಡಿಗ್ಲೋವ್ ಆಗಿತ್ತು ಎಂದು ನೆನಪಿಸಿಕೊಳ್ಳುವ ವೈದ್ಯರು ಮೂಳೆ ಶಸ್ತ್ರಚಿಕಿತ್ಸಕ ಡಾ. ಅಶ್ರಫ್ ಖಾನ್ ಅವರೊಂದಿಗೆ ಶಸ್ತ್ರಚಿಕಿತ್ಸೆಗೆ ಕರೆದೊಯ್ದಿದ್ದರು.
ನಾಳೀಯ ಬೈಪಾಸ್ ಉಳಿಸಿತು ಜೀವ:
ಬಸುದೇವ್ ಅವರನ್ನು ತುರ್ತು ಶಸ್ತ್ರಚಿಕಿತ್ಸೆಗೆ ಕರೆದೊಯ್ಯಲಾಯಿತು. ನಾಳೀಯ ಬೈಪಾಸ್ ಅನ್ನು ಯೋಜಿಸಲಾಯಿತು ಮತ್ತು ಹಾನಿಗೊಳಗಾದ ಅಪಧಮನಿಯನ್ನು ಪುನರ್ನಿರ್ಮಿಸಲು ರೋಗಿಯ ಸ್ವಂತ ರಕ್ತನಾಳಗಳನ್ನು ತೆಗೆದುಕೊಳ್ಳಲು ಡಾ. ಘೋಷ್ ನಿರ್ಧರಿಸಿದರು. ಅಪಧಮನಿಯು ಮೂಳೆಯ ಹಿಂದೆ ಹೋಗುವ ಹಂತದವರೆಗೆ ಹಾನಿಗೊಳಗಾಗಿತ್ತು. ಆದ್ದರಿಂದ ಅಪಧಮನಿಯನ್ನು ಅನಾಸ್ಟೊಮೋಸ್ ಮಾಡಲು ಸ್ಥಳವಿಲ್ಲದ್ದರಿಂದ ತುಂಬಾ ಕಷ್ಟಕರವಾಗಿತ್ತು.
ಸೂಕ್ಷ್ಮದರ್ಶಕದ ಅಡಿಯಲ್ಲಿ ಅಪಧಮನಿಯನ್ನು ಪುನರ್ನಿರ್ಮಿಸಲಾಯಿತು ಮತ್ತು ರಕ್ತದ ಹರಿವನ್ನು ಪುನಃಸ್ಥಾಪಿಸಲಾಯಿತು. ಇದರಿಂದ ರಕ್ತಸ್ರಾವವನ್ನು ನಿಲ್ಲಿಸಲಾಯಿತು ಎಂದು ಡಾ.ಘೋಷ್ ಹೇಳಿದ್ದಾರೆ. ಅಲ್ಲದೇ ಈ ಕೇಸ್ನಲ್ಲಿ ಸೋಂಕನ್ನು ನಿಯಂತ್ರಿಸುವುದು ಮತ್ತು ರೋಗಿಯ ನಿಯತಾಂಕಗಳನ್ನು ನಿರ್ವಹಿಸುವುದು ದೊಡ್ಡ ಸವಾಲಾಗಿತ್ತು ಎಂದು ವೈದ್ಯರು ನೆನಪಿಸಿಕೊಂಡರು. ಸದ್ಯ ಬಸುದೇವ್ ಚೇತರಿಸಿಕೊಂಡಿದ್ದಾರೆ, ಮತ್ತೆ ನಡೆಯಲು ಸಮರ್ಥರಾಗಿದ್ದಾರೆ ಎಂದು ಡಾ. ಘೋಷ್ ಹೇಳಿದ್ದಾರೆ.
ಒಟ್ಟಾರೆ, ಅಂಥ ದೊಡ್ಡ ಅಪಘಾತವಾದರೂ ಅದೃಷ್ಟವಶಾತ್ ಈ ವ್ಯಕ್ತಿ ಪಾರಾಗಿದ್ದಾರೆ. ಅಲ್ಲದೇ 14 ಶಸ್ತ್ರಚಿಕಿತ್ಸೆಯ ನಂತರವೂ ಕೇವಲ 6 ತಿಂಗಳಲ್ಲಿ ನಡೆಯಲು ಆರಂಭಿಸಿದ್ದಾರೆ. ಇಲ್ಲಿ ಬಸುದೇವ್ ಅವರ ಅದೃಷ್ಟ ಹಾಗೂ ತಜ್ಞ ವೈದ್ಯರ ಶ್ರಮದಿಂದಾಗಿ ಅವರು ಕಡಿಮೆ ಸಮಯದಲ್ಲಿ ಚೇತರಿಸಿಕೊಂಡಿದ್ದಾರೆ. ಇದು ಬಸುದೇವ್ ಹಾಗೂ ಅವರ ಕುಟುಂಬಕ್ಕೆ ಅಪಾರ ಸಂತೋಷ ತಂದಿರುವುದಂತೂ ಸತ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ