• Home
  • »
  • News
  • »
  • trend
  • »
  • Kamal Kishor Mandal: ಅಂದು ಜವಾನ, ಇಂದು ಕಾಲೇಜ್ ಸಹಾಯಕ ಪ್ರಾಧ್ಯಾಪಕ! ಇವರ ಕಥೆ ಎಲ್ಲರಿಗೂ ಸ್ಫೂರ್ತಿ

Kamal Kishor Mandal: ಅಂದು ಜವಾನ, ಇಂದು ಕಾಲೇಜ್ ಸಹಾಯಕ ಪ್ರಾಧ್ಯಾಪಕ! ಇವರ ಕಥೆ ಎಲ್ಲರಿಗೂ ಸ್ಫೂರ್ತಿ

ಕಮಲ್ ಕಿಶೋರ್ ಮಂಡಲ್

ಕಮಲ್ ಕಿಶೋರ್ ಮಂಡಲ್

ಬಿಹಾರದ ವ್ಯಕ್ತಿಯೊಬ್ಬರು ನಿನ್ನೆಯವರೆಗೆ ಜವಾನರಾಗಿ ಮತ್ತು ರಾತ್ರಿ ಕಾವಲುಗಾರನಾಗಿ ಸೇವೆ ಸಲ್ಲಿಸಿದ ವಿಶ್ವವಿದ್ಯಾಲಯದ ಅದೇ ವಿಭಾಗದಲ್ಲಿ ಇಂದು ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಈ ಮೂಲಕ ಈ ಹಳೆಯ ಗಾದೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ ನೋಡಿ.

  • Share this:

ನಾವು ಚಿಕ್ಕವರಾಗಿದ್ದಾಗ ನಮ್ಮ ಶಾಲೆಯಲ್ಲಿ ಮೇಷ್ಟ್ರು ‘ಮನಸ್ಸಿದ್ದರೆ ಮಾರ್ಗ’ ಅಂತ ಹೇಳುವುದನ್ನು ಅನೇಕ ಬಾರಿ ಕೇಳಿರುತ್ತೇವೆ. ಆದರೆ ಇಲ್ಲಿ ನಡೆದಿರುವ ಘಟನೆ ಇದಕ್ಕೆ ಒಳ್ಳೆಯ ಉದಾಹರಣೆ. ಹೌದು.. ಬಿಹಾರದ (Bihar) ವ್ಯಕ್ತಿಯೊಬ್ಬರು ನಿನ್ನೆಯವರೆಗೆ ಜವಾನರಾಗಿ ಮತ್ತು ರಾತ್ರಿ ಕಾವಲುಗಾರನಾಗಿ ಸೇವೆ ಸಲ್ಲಿಸಿದ ವಿಶ್ವವಿದ್ಯಾಲಯದ ಅದೇ ವಿಭಾಗದಲ್ಲಿ ಇಂದು ಸಹಾಯಕ ಪ್ರಾಧ್ಯಾಪಕರಾಗುವ (Assistant Professor) ಮೂಲಕ ಈ ಹಳೆಯ ಗಾದೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ ನೋಡಿ. ಬಿಹಾರದ ಭಾಗಲ್ಪುರ್ ಪಟ್ಟಣದ ಮುಂಡಿಚಕ್ ಪ್ರದೇಶದ ನಿವಾಸಿಯಾದ 42 ವರ್ಷದ ಕಮಲ್ ಕಿಶೋರ್ ಮಂಡಲ್ (Kamal Kishore Mandal) ಅವರು ಆರಂಭದಲ್ಲಿ 2003 ರಲ್ಲಿ ಮುಂಗೇರ್ ನ ಆರ್‌ಡಿ ಮತ್ತು ಡಿಜೆ ಕಾಲೇಜಿನಲ್ಲಿ ರಾತ್ರಿ ಕಾವಲುಗಾರನಾಗಿ ನೇಮಕಗೊಂಡರು.


ಆಗ ಅವರು ರಾಜ್ಯಶಾಸ್ತ್ರ ವಿಷಯದಲ್ಲಿ ಪದವಿಯನ್ನು ಪಡೆದಿದ್ದರು, ಆದರೆ ಅವರಿಗೆ ಹಣದ ತುರ್ತು ಅಗತ್ಯವಿರುವುದರಿಂದ ಓದನ್ನು ಅಲ್ಲಿಗೆ ನಿಲ್ಲಿಸಿ ಕೆಲಸಕ್ಕೆ ಸೇರಿದ್ದರು. ಕೆಲಸಕ್ಕೆ ಸೇರಿದ ಕೇವಲ ಒಂದು ತಿಂಗಳ ನಂತರ ಅವರನ್ನು ತಿಲ್ಕಾ ಮಾಂಝಿ ಭಾಗಲ್ಪುರ್ ವಿಶ್ವವಿದ್ಯಾಲಯದ (ಟಿಎಂಬಿಯು) ನಲ್ಲಿ ‘ಅಂಬೇಡ್ಕರ್ ಚಿಂತನೆ ಮತ್ತು ಸಮಾಜಿಕ ಕಾರ್ಯ ವಿಭಾಗಕ್ಕೆ (ಸ್ನಾತಕೋತ್ತರ ಪದವಿ) ಡೆಪ್ಯುಟೇಶನ್ ಮೇಲೆ ಕಳುಹಿಸಿದಾಗ ಇವರ ಜೀವನ ಬದಲಾಯಿತು. 2008 ರಲ್ಲಿ ಅವರ ಪೋಸ್ಟ್ ಅನ್ನು ಜವಾನ ಎಂದು ಬದಲಾಯಿಸಲಾಯಿತು.


ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳನ್ನು ನೋಡಿ ಮತ್ತೆ ಓದಲು ಶುರು ಮಾಡಿದ್ರಂತೆ ಮಂಡಲ್
ವಿಶ್ವವಿದ್ಯಾಲಯದಲ್ಲಿ, ಅವರು ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಮಗ್ನರಾಗಿದ್ದನ್ನು ನೋಡಿ ಇವರಿಗೂ ಸಹ ತಾನು ಮುಂದಕ್ಕೆ ಓದಬೇಕು ಅಂತ ಅನ್ನಿಸಿತು.


"ಹೆಚ್ಚಿನ ಅಧ್ಯಯನ ಮಾಡಲು ನನಗೆ ಅನುಮತಿ ನೀಡುವಂತೆ ನಾನು ಇಲಾಖೆಗೆ ವಿನಂತಿಸಿದೆ, ಅದನ್ನು ಅವರು ಒಪ್ಪಿದರು. ಶೀಘ್ರದಲ್ಲಿಯೇ ನಾನು ಅಧ್ಯಯನವನ್ನು ಪುನರಾರಂಭಿಸಿದೆ ಮತ್ತು 2009 ರಲ್ಲಿ ‘ಅಂಬೇಡ್ಕರ್ ಚಿಂತನೆ ಮತ್ತು ಸಾಮಾಜಿಕ ಕಾರ್ಯ’ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ" ಎಂದು ಮಂಡಲ್ ಹೇಳಿದರು. 2009 ರಲ್ಲಿ, ಅವರು ಪಿಎಚ್‌ಡಿ ಮಾಡಲು ಅನುಮತಿ ಕೋರಿದರು. ಇಲಾಖೆ ಮೂರು ವರ್ಷಗಳ ನಂತರ ಎಂದರೆ 2012 ರಲ್ಲಿ ಇದಕ್ಕೆ ಒಪ್ಪಿಗೆಯನ್ನು ನೀಡಿತು.


2019 ರಲ್ಲಿ ಪಿಎಚ್‌ಡಿ ಪದವಿ ಪಡೆದ ಮಂಡಲ್
ಅವರು 2013 ರಲ್ಲಿ ಪಿಎಚ್‌ಡಿ ಗೆ ನೋಂದಾಯಿಸಿಕೊಂಡರು ಮತ್ತು 2017 ರಲ್ಲಿ ಪ್ರಬಂಧವನ್ನು ಸಲ್ಲಿಸಿದರು. ಅವರಿಗೆ 2019 ರಲ್ಲಿ ಪಿಎಚ್‌ಡಿ ಪದವಿಯನ್ನು ನೀಡಲಾಯಿತು. ಇದರ ನಡುವೆ, ಅವರು ಉಪನ್ಯಾಸಕ್ಕಾಗಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಎಂದರೆ ನೆಟ್ ಪರೀಕ್ಷೆಯನ್ನು ಬರೆದು ಉತ್ತೀರ್ಣರಾದರು ಮತ್ತು ಖಾಲಿ ಇರುವ ಹುದ್ದೆಗಳನ್ನು ಹುಡುಕುವುದನ್ನು ಮುಂದುವರಿಸಿದರು.


ಇದನ್ನೂ ಓದಿ: Viral Video: ಊಟಕ್ಕೆ ಬಂದಿದ್ದ ಗ್ರಾಹಕನ ಜೀವ ಉಳಿಸಿದ ಮಹಿಳಾ ಸಿಬ್ಬಂದಿ; ವಿಡಿಯೋ ನೋಡಿ


ಅಂತಿಮವಾಗಿ 2020 ರಲ್ಲಿ ಬಿಹಾರ ರಾಜ್ಯ ವಿಶ್ವವಿದ್ಯಾಲಯ ಸೇವಾ ಆಯೋಗವು ಟಿಎಂಬಿಯುನಲ್ಲಿ ಸಂಬಂಧಪಟ್ಟ ಇಲಾಖೆಯಲ್ಲಿ ನಾಲ್ಕು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಖಾಲಿ ಇರುವ ಹುದ್ದೆಗಳಿಗೆ ಜಾಹೀರಾತು ನೀಡಿದಾಗ ಇವರ ಕಾಯುವಿಕೆ ಕೊನೆಗೊಂಡಿತು.


ಹನ್ನೆರಡು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಯಿತು, ಅದರಲ್ಲಿ ಮಂಡಲ್ ಅವರು ಜವಾನರಾಗಿ ಸೇವೆ ಸಲ್ಲಿಸಿದ ಟಿಎಂಬಿಯುನ ಅದೇ ‘ಅಂಬೇಡ್ಕರ್ ಚಿಂತನೆ ಮತ್ತು ಸಮಾಜಿಕ ಕಾರ್ಯ’ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಕಗೊಂಡರು. ಇವರ ಆಯ್ಕೆಯ ಫಲಿತಾಂಶವನ್ನು ಮೇ 19, 2022 ರಂದು ಘೋಷಿಸಲಾಯಿತು.


ಮಂಡಲ್ ತಂದೆ ಹೊಟ್ಟೆಪಾಡಿಗಾಗಿ ಚಹಾ ಮಾರುತ್ತಾರೆ
ಮಂಡಲ್ ಅವರ ತಂದೆ ಗೋಪಾಲ್ ಮಂಡಲ್ ಅವರು ಇನ್ನೂ ತಮ್ಮ ಕುಟುಂಬವನ್ನು ನಡೆಸಲು ರಸ್ತೆ ಬದಿಯ ಅಂಗಡಿಯಲ್ಲಿ ಚಹಾ ಮಾರುತ್ತಾರೆ. ತಮ್ಮ ಯಶಸ್ಸನ್ನು ತಮ್ಮ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರಿಗೆ ಅರ್ಪಿಸುತ್ತಾರೆ ಮಂಡಲ್. "ಬಡತನ ಮತ್ತು ಕೌಟುಂಬಿಕ ಸಮಸ್ಯೆಗಳು ನನ್ನ ಅಧ್ಯಯನಕ್ಕೆ ಅಡ್ಡಿಯಾಗಲು ನಾನು ಎಂದಿಗೂ ಅವಕಾಶ ನೀಡಲಿಲ್ಲ. ನಾನು ಬೆಳಿಗ್ಗೆ ತರಗತಿಗಳಿಗೆ ಹಾಜರಾಗಿದ್ದೆ ಮತ್ತು ಮಧ್ಯಾಹ್ನ ಕೆಲಸಕ್ಕೆ ಹಾಜರಾಗಿದ್ದೆ, ಆದರೆ ತರಗತಿಯ ಅಧ್ಯಯನವನ್ನು ಮಾಡಲು ರಾತ್ರಿ ಸಮಯವನ್ನು ಬಳಸಿದೆ" ಎಂದು ಮಂಡಲ್ ಹೇಳಿದರು.


ಇದನ್ನೂ ಓದಿ: Flesh-Eating Bacteria: ಕಾಸ್ಮೆಟಿಕ್ ಸರ್ಜರಿಯಿಂದ ಅಂಗಾಂಗ ಹಾನಿಗೊಳಗಾದ ಮಹಿಳೆಯ ಪ್ರಾಣ ಉಳಿಸಿದ ದುಬೈ ವೈದ್ಯ


"ಮಂಡಲ್ ಸಮಾಜಕ್ಕೆ ಸ್ಫೂರ್ತಿಯಾಗಿದ್ದಾರೆ, ಏಕೆಂದರೆ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಒಬ್ಬ ವ್ಯಕ್ತಿ ಹೇಗೆ ಯಶಸ್ಸನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ" ಎಂದು ನೆಟ್ ಪರೀಕ್ಷೆಯ ಸಿದ್ಧತೆಗಾಗಿ ಅವರ ಉಚಿತ ತರಬೇತಿ ಸಂಸ್ಥೆಯಲ್ಲಿ ಪಾಠ ಹೇಳಿಕೊಟ್ಟ ಪ್ರೊಫೆಸರ್ ಸಂಜಯ್ ಕುಮಾರ್ ಜೈಸ್ವಾಲ್ ಹೇಳಿದರು.

Published by:Ashwini Prabhu
First published: