ಜೈಲಿನಲ್ಲಿರುವ (Jail) ಕೈದಿಗಳಿಗೆ ಇರುವ ಸೌಲಭ್ಯದ ಬಗ್ಗೆ ಎಲ್ಲರಿಗೂ ತಿಳಿದಿರುವಂತದ್ದು. ಹೊರಗೆ ಕೆಲವರು ಸೂರಿಲ್ಲದೇ, ಒಂದು ತುತ್ತಿಗೂ ಪರದಾಡುತ್ತಿದ್ದರೆ, ಕೊಲೆ-ಸುಲಿಗೆ, ದರೋಡೆ (Robbery) ಮಾಡಿದಂತಹ ಪಾಪಿಗಳಿಗೆ ಜೈಲಿನಲ್ಲಿ ಆಶ್ರಯ ಕೊಟ್ಟು ಊಟ (Food) ಕೂಡ ಹಾಕಲಾಗುತ್ತಿದೆ. ಹೊರಗಿನ ಪ್ರಪಂಚದ ಯಾವುದೇ ಗಂಧ-ಗಾಳಿ ಇರುವುದಿಲ್ಲ ಎಂಬುದನ್ನು ಬಿಟ್ಟರೆ ಹೊತ್ತೊತ್ತಿಗೆ ಊಟ, ಮಲಗಲು ಜಾಗ, ಮಾಡಲು ಕೆಲಸ ಎಲ್ಲವನ್ನೂ ಕೈದಿಗಳಿಗೆ ಸರ್ಕಾರವು ನೀಡುತ್ತಿದೆ.
ಕರ್ನಾಟಕ ರಾಜ್ಯವು ಕೈದಿಗಳಿಗೆ ಜೈಲಿನಲ್ಲಿ ಕೆಲಸದ ವೇತನವನ್ನು ಹೆಚ್ಚಿಸಿದಾಗಲಂತೂ ಅನೇಕ ಟ್ರೋಲರ್‌ಗಳು ಐಟಿ-ಬಿಟಿಯಲ್ಲಿ ಕೆಲಸ ಮಾಡುವವರಿಗಿಂತ ಇವರಿಗೇ ಹೆಚ್ಚು ಸಂಬಳ, ನಾವೂ ಕೂಡ ಜೈಲು ಸೇರಿದ್ರೆ ಉತ್ತಮ ಸಂಬಳ ಪಡೆಯಬಹುದು ಹೀಗೆ ನಾನಾ ಟ್ರೋಲ್‌ಗಳನ್ನು ಇಂಟರ್‌ನೆಟ್‌ನಲ್ಲಿ ಹರಿಬಿಟ್ಟಿದ್ದರು.
ಊಟಕ್ಕಾಗಿ ಜೈಲು ಸೇರಿದ ನಿರುದ್ಯೋಗಿ
ಹೌದು, ಕೆಲಸ, ಸಂಬಳ ಅದಕ್ಕೆ ತಕ್ಕ ಊಟ ಇವೆಲ್ಲಾ ಕೈದಿಗಳಿಗೆ ಜೈಲಿನಲ್ಲಿ ನೀಡುವ ಸೌಕರ್ಯ. ಊಟಕ್ಕೋಸ್ಕರ ಜೈಲಿಗೆ ಹೋಗುವಂತಹ ಪರಿಕಲ್ಪನೆಯನ್ನು ನಾವು ನೀವು ಟಿವಿ, ಪುಸ್ತಕದಲ್ಲಿನ ಕಾಲ್ಪನಿಕ ಕಥೆಗಳಲ್ಲಿ ಮಾತ್ರ ಕೇಳಿರುತ್ತೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ನಿಜವಾಗಿಯೂ ನಡೆದಿದೆ. ಕೇವಲ ಒಂದು ಹೊತ್ತಿನ ಊಟಕ್ಕಾಗಿ ವ್ಯಕ್ತಿಯೊಬ್ಬ ಜೈಲು ಸೇರುವ ಪ್ಲ್ಯಾನ್ ಮಾಡಿದ್ದಾನೆ.
ಇದನ್ನೂ ಓದಿ: ಪಿಯುಸಿಯಲ್ಲಿ ಕಡಿಮೆ ಅಂಕ ಪಡೆದ ವಧುವನ್ನು ಮದುವೆಯಾಗಲ್ಲ ಎಂದ ವರ! ಮಂಟಪದವರೆಗೆ ಬಂದ ಮದುವೆ ಕ್ಯಾನ್ಸಲ್
ಹೌದು, ತಮಿಳುನಾಡಿನಲ್ಲಿ ನಿರುದ್ಯೋಗಿಯೊಬ್ಬ ಕೆಲಸ ಸಿಗದೇ ಊಟಕ್ಕೆ ಪರದಾಡುತ್ತಿರುವಾಗ ಜೈಲಿಗೆ ಹೋದರೆ ಊಟ ಸಿಗುತ್ತದೆ ಎಂದು ಭಾವಿಸಿ ಅದಕ್ಕೆ ಒಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾನೆ. ಅದಕ್ಕೆ ಆತ ಮಾಡಿರುವ ಪ್ಲ್ಯಾನ್ ಕೇಳಿದ್ರೆ ನೀವು ಶಾಕ್ ಆಗ್ತಿರಾ..!
ಜೈಲಿಗೆ ಹೋಗಲು ಬಾಂಬ್ ಬೆದರಿಕೆ ಕರೆ
ಕೊಯಮತ್ತೂರಿನ 34 ವರ್ಷದ ವ್ಯಕ್ತಿ ಸಂತೋಷ್ ಕುಮಾರ್ ಎಂಬಾತ ತಮಿಳುನಾಡಿನ ಈರೋಡ್‌ನ ರೈಲ್ವೇ ನಿಲ್ದಾಣ ಮತ್ತು ಮುಖ್ಯ ಬಸ್ ನಿಲ್ದಾಣದಲ್ಲಿ ಬಾಂಬ್‌ಗಳಿದ್ದು, ಇನ್ನೇನು ಸ್ವಲ್ಪ ಹೊತ್ತಿಗೆ ಸ್ಫೋಟಿಸುತ್ತವೆ ಎಂದು ಚೆನ್ನೈ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಸುಳ್ಳು ಮಾಹಿತಿ ನೀಡಿದ್ದನು. ಮಾಹಿತಿ ಆಧಾರದ ಮೇಲೆ ಇಲಾಖೆ ಎಚ್ಚೆತ್ತುಕೊಂಡು ಈರೋಡ್‌ನ ರೈಲ್ವೇ ನಿಲ್ದಾಣ ಮತ್ತು ಮುಖ್ಯ ಬಸ್ ನಿಲ್ದಾಣ ಹಾಗು ಮಾರುಕಟ್ಟೆ ಸೇರಿದಂತೆ ಅನೇಕ ಸ್ಥಳಗಳಲ್ಲಿ ತೀವ್ರ ಹುಡುಕಾಟ ನಡೆಸಿದ್ದರು. ಎಲ್ಲಾ ಕಡೆ ಹುಡುಕಿದ ನಂತರವೂ ಯಾವುದೇ ಬಾಂಬ್ ಸಿಗದೇ ಇದ್ದ ಕಾರಣ ಫೋನ್ ಕಾಲ್ ಬಂದ ಸಂಖ್ಯೆಯನ್ನು ಪತ್ತೆ ಹಚ್ಚಿ ಸಂತೋಷ್‌ನನ್ನು ಹುಡುಕಿದ್ದಾರೆ.
ನಂತರ ಶನಿವಾರ ತಮಿಳುನಾಡಿನ ಈರೋಡ್‌ನ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಬಾಂಬ್ ಕುರಿತು ಸುಳ್ಳು ಬೆದರಿಕೆ ಹಾಕಿದ್ದಕ್ಕಾಗಿ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.
ಜೈಲಿನಲ್ಲಿ ಊಟ ಸಿಗುತ್ತದೆ ಎಂದು ಅಪರಾಧ ಎಸಗಿದ ವ್ಯಕ್ತಿ
ಠಾಣೆಗೆ ಸಂತೋಷನನ್ನು ಕರೆದೊಯ್ದು ವಿಚಾರಣೆ ನಡೆಸಿದ ವೇಳೆ ಸುಳ್ಳು ಕರೆ ಮಾಡಿದ್ದರ ಕಾರಣ ಬಹಿರಂಗ ಪಡಿಸಿದ್ದಾನೆ. ಒಂದು ಕ್ಷಣ ಪೊಲೀಸರು ಈ ಕಾರಣ ಕೇಳಿ ಅಯ್ಯೋ ಪಾಪ ಎಂದಿದ್ದಾರೆ. ನನಗೆ ಎಲ್ಲೂ ಕೆಲಸ ಸಿಗುತ್ತಿಲ್ಲ, ಜೀವನ ನಡೆಸುವುದೇ ಕಷ್ಟವಾಗಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಜೈಲಿಗಾದರೂ ಬಂದರೆ ಊಟ ಸಿಗುತ್ತದೆ ಎಂದು ಈ ರೀತಿ ಮಾಡಿರುವುದಾಗಿ ಪೊಲೀಸರ ಎದುರು ತಿಳಿಸಿದ್ದಾನೆ.
ಸಂತೋಷ್ ವಿರುದ್ಧ ಕೇಸ್
ಪ್ರಸ್ತುತ ಸಂತೋಷ್ ಕುಮಾರ್ ಉದ್ದೇಶ ನೆರವೇರಿದ್ದು ತಮಿಳುನಾಡು ಪೊಲೀಸರು ಅಪರಾಧಿ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಮತ್ತು 507 (ಅನಾಮಧೇಯ ಸಂವಹನದಿಂದ ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಸಂತೋಷ್ ಹೇಳಿಕೆಗಳ ಆಧಾರದ ಮೇಲೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
2019 ಮತ್ತು 2021 ರಲ್ಲಿ ಇದೇ ರೀತಿಯ ಘಟನೆಗಳು ನಡೆದಿವೆ, ಅವರನ್ನೂ ಕೂಡ ಬಂಧಿಸಲಾಗಿತ್ತು. ಕೇವಲ ಊಟದ ಉದ್ದೇಶಕ್ಕಾಗಿಯೇ ಕೆಲವರು ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ