ಸೊಳ್ಳೆ(Mosquito) ನೋಡುವುದಕ್ಕೆ ತುಂಬಾನೇ ಚಿಕ್ಕ ಕೀಟ(Insect) ಅಂತ ಅನ್ನಿಸಬಹುದು, ಆದರೆ ಅದು ತುಂಬಾ ದೊಡ್ಡ ದೊಡ್ಡ ರೋಗಗಳನ್ನು ತಂದೊಡ್ಡಬಹುದು ಅನ್ನೋ ವಿಷಯ ನಮಗೆಲ್ಲಾ ಗೊತ್ತೇ ಇದೆ. ಸೊಳ್ಳೆ ಕಚ್ಚುವಿಕೆಯು ಚರ್ಮದ(Skin) ಮೇಲೆ ತುರಿಕೆ ಮತ್ತು ದದ್ದು ಬರಲು ಕಾರಣವಾಗಬಹುದು. ಇದರ ಜೊತೆಗೆ, ಸೊಳ್ಳೆಗಳ ಅನೇಕ ಪ್ರಭೇದಗಳು ಅನೇಕ ರೀತಿಯ ಕಾಯಿಲೆಗಳನ್ನು ಸಹ ಉಂಟು ಮಾಡುತ್ತವೆ.
ಸೊಳ್ಳೆಗಳು ಮಲೇರಿಯಾ ಮತ್ತು ಫೈಲೇರಿಯಾಸಿಸ್ ನಂತಹ ಪರಾವಲಂಬಿ ರೋಗಗಳ ಪ್ರಮುಖ ವಾಹಕಗಳಾಗಿವೆ, ಮತ್ತು ಹಳದಿ ಜ್ವರ, ಚಿಕೂನ್ ಗುನ್ಯಾ, ವೆಸ್ಟ್ ನೈಲ್, ಡೆಂಗ್ಯೂ ಜ್ವರ ಮತ್ತು ಜಿಕಾದಂತಹ ಆರ್ಬೋವೈರಲ್ ಕಾಯಿಲೆಗಳ ಪ್ರಮುಖ ವಾಹಕಗಳಾಗಿವೆ. ರೋಗಗಳನ್ನು ಹರಡುವ ಮೂಲಕ, ಸೊಳ್ಳೆಗಳು ಇತರ ಯಾವುದೇ ಪ್ರಾಣಿ ಗಿಂತಲೂ ಹೆಚ್ಚು ಜನರ ಸಾವಿಗೆ ಕಾರಣವಾಗುತ್ತವೆ ಎಂದು ಹೇಳಲಾಗುತ್ತಿದೆ. ಇಲ್ಲಿಯವರೆಗೆ 3,500 ಕ್ಕೂ ಹೆಚ್ಚು ಜಾತಿಯ ಸೊಳ್ಳೆಗಳಿವೆ ಎಂದು ವೈಜ್ಞಾನಿಕ ಸಾಹಿತ್ಯದಲ್ಲಿ ವಿವರಿಸಲಾಗಿದೆ.
ತೀವ್ರ ಕಾಯಿಲೆಗಳನ್ನು ಉಂಟು ಮಾಡುತ್ತೆ ಸೊಳ್ಳೆ ಕಡಿತ
ಸೊಳ್ಳೆಗಳು ತುಂಬಾ ಚಿಕ್ಕ ಕೀಟ ಅಂತ ನಿರ್ಲಕ್ಷ್ಯ ಮಾಡಲೇಬೇಡಿ, ಏಕೆಂದರೆ ಈ ಸಣ್ಣ ರಕ್ತ ಹೀರುವ ಕೀಟಗಳ ಕಡಿತವು ಚಿಟಿಕೆಯಂತೆ ಭಾಸವಾಗುತ್ತದೆ, ಇದು ನಮ್ಮ ಚರ್ಮವನ್ನು ತುರಿಕೆ ಮತ್ತು ಸ್ವಲ್ಪ ಊದಿಕೊಂಡಂತೆ ಮಾಡುತ್ತದೆ. ಕೆಲವೊಮ್ಮೆ ಸೊಳ್ಳೆಗಳು ಮಾನವರಲ್ಲಿ ಮಾರಣಾಂತಿಕ ವೈರಸ್ ಗಳನ್ನು ಸಹ ಹರಡಿ, ತೀವ್ರ ಕಾಯಿಲೆಗಳನ್ನು ಉಂಟು ಮಾಡಬಹುದು. ಅದಕ್ಕೆ ಜ್ವಲಂತ ಸಾಕ್ಷಿ ಎಂಬಂತೆ ಜರ್ಮನಿಯ ಈ ಮನುಷ್ಯನ ಜೊತೆ ನಡೆದ ಘಟನೆಯನ್ನು ಒಮ್ಮೆ ಓದಿ. ಈ ವ್ಯಕ್ತಿ ಒಂದು ಸೊಳ್ಳೆ ಕಡಿತದಿಂದ ಎಷ್ಟೆಲ್ಲಾ ಅಪಾಯವನ್ನು ಎದುರಿಯಬೇಕಾಯಿತು ಅಂತ ನೀವು ಕೇಳಿದರೆ ಶಾಕ್ ಆಗುವುದಂತೂ ಗ್ಯಾರೆಂಟಿ.
ಇದನ್ನೂ ಓದಿ: Trend: ಮೊಟ್ಟೆಗಳನ್ನು ಬಾಹ್ಯಾಕಾಶದಿಂದ ಬಿಟ್ಟರೂ ಒಡೆಯುತ್ತಿಲ್ಲ, ಸಖತ್ ವೈರಲ್ ಆಗ್ತಿದೆ ಈ ವಿಡಿಯೋ
ಸೊಳ್ಳೆ ಕಡಿತದಿಂದ ಕೋಮಾಗೆ ಜಾರಿದ ಜರ್ಮನಿ ವ್ಯಕ್ತಿ
ಜರ್ಮನಿಯ ರೋಡರ್ಮಾರ್ಕ್ ನಿವಾಸಿಯಾದ 27 ವರ್ಷದ ಸೆಬಾಸ್ಟಿಯನ್ ರೊಟ್ಶ್ಕೆ 2021 ರ ಬೇಸಿಗೆಯ ತಿಂಗಳಲ್ಲಿ ಏಷ್ಯಾದ ಒಂದು ಪ್ರಭೇದದ ಸೊಳ್ಳೆಯಿಂದ ಕಚ್ಚಲ್ಪಟ್ಟ ನಂತರ ತನ್ನ ಪ್ರಾಣವನ್ನು ಕಳೆದುಕೊಳ್ಳುವ ಹಂತಕ್ಕೆ ಹೋಗಿ ತಲುಪಿದ್ದರು. ಏಷ್ಯಾದ ಟೈಗರ್ ಮಸ್ಕಿಟೊ ಅಂತ ಹೇಳುವ ಈ ಸೊಳ್ಳೆಯು ಈಸ್ಟರ್ನ್ ಈಕ್ವೈನ್ ಎನ್ಸೆಫಾಲಿಟಿಸ್ (ಇಇಇ), ವೆಸ್ಟ್ ನೈಲ್ ವೈರಸ್ ಮತ್ತು ಡೆಂಗ್ಯೂ ಜ್ವರದಂತಹ ರೋಗಗಳಿಗೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ, ಸೆಬಾಸ್ಟಿಯನ್ ತನ್ನ ಎರಡು ಕಾಲ್ಬೆರಳುಗಳನ್ನು ಭಾಗಶಃ ಕತ್ತರಿಸಿಕೊಳ್ಳಬೇಕಾಯಿತು ಮತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ ಮೂವತ್ತು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು. ನಾಲ್ಕು ವಾರಗಳ ಕಾಲ ಕೋಮಾದಲ್ಲಿದ್ದರು.
ಡೈಲಿ ಸ್ಟಾರ್ ಪ್ರಕಾರ, ಜರ್ಮನ್ ನಿವಾಸಿ ರಕ್ತದ ವಿಷದಿಂದ ಬಳಲುತ್ತಿದ್ದರು ಮತ್ತು ಹಲವಾರು ಸಂದರ್ಭಗಳಲ್ಲಿ ಯಕೃತ್ತು, ಮೂತ್ರಪಿಂಡ, ಹೃದಯ ಮತ್ತು ಶ್ವಾಸಕೋಶದ ವೈಫಲ್ಯವನ್ನು ಎದುರಿಸಿದರು. ಸೆಬಾಸ್ಟಿಯನ್ ತನ್ನ ತೊಡೆಯ ಮೇಲೆ ಚರ್ಮವನ್ನು ಕಸಿ ಮಾಡಿಸಿಕೊಳ್ಳಲು ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕಾಯಿತು. ಆ ಸ್ಥಳದಲ್ಲಿ ರೂಪುಗೊಂಡ ಗಡ್ಡೆಯನ್ನು ತೆಗೆದು ಹಾಕಬೇಕಾಯಿತು. ಅಂಗಾಂಶದ ಮಾದರಿಯ ಪ್ರಕಾರ, ಸೆರಾಟಿಯಾ ಮಾರ್ಸೆಸೆನ್ಸ್ ಎಂಬ ಮಾರಕ ಬ್ಯಾಕ್ಟೀರಿಯಾವು ಅವನ ಎಡ ತೊಡೆಯ ಅರ್ಧದಷ್ಟು ಭಾಗವನ್ನು ತಿಂದು ಹಾಕಿದ್ದರಿಂದ ಬದುಕುಳಿಯುವ ಸಾಧ್ಯತೆಗಳು ಕಡಿಮೆಯಿತ್ತು ಅಂತ ಆ ವ್ಯಕ್ತಿ ಆಗಿನ ಪರಿಸ್ಥಿತಿಯನ್ನು ನೆನಪಿಸಿಕೊಂಡರು.
ತನ್ನ ಭಯಾನಕ ಪರಿಸ್ಥಿತಿಯ ಬಗ್ಗೆ ಸೆಬಾಸ್ಟಿಯನ್ ಹೇಳಿದ್ದೇನು?
ತಮ್ಮ ಜೀವಕ್ಕೆ ಅಪಾಯವನ್ನುಂಟು ಮಾಡುವ ಅನುಭವವನ್ನು ಮೆಲುಕು ಹಾಕಿದ ಸೆಬಾಸ್ಟಿಯನ್ "ನಾನು ವಿದೇಶಕ್ಕೆ ಹೋಗಿಲ್ಲ. ಸೊಳ್ಳೆ ಕಚ್ಚಿದ್ದರೂ ನನಗೆ ಇಲ್ಲಿಯೇ ಕಚ್ಚಿರಬೇಕು. ನಂತರ ಮೆಲ್ಲಗೆ ಹಲವು ರೋಗಗಳು ಉಲ್ಬಣವಾಗಲು ಪ್ರಾರಂಭವಾಯಿತು. ನಾನು ಹಾಸಿಗೆ ಹಿಡಿದೆ, ಎದ್ದು ನಡೆದುಕೊಂಡು ನನಗೆ ಬಾತ್ರೂಮ್ ಗೂ ಹೋಗುವುದಕ್ಕೂ ಸಾಧ್ಯವಾಗಲಿಲ್ಲ. ತುಂಬಾನೇ ಜ್ವರದಿಂದ ಬಳಲುತ್ತಿದ್ದೆ ಮತ್ತು ಆಹಾರ ತಿನ್ನಲು ಸಹ ಸಾಧ್ಯವಾಗಲಿಲ್ಲ. ಇನ್ನೂ ನಾನು ಜೀವಂತವಾಗಿರುವುದಿಲ್ಲ ಅಂತ ನಾನು ಭಾವಿಸಿದೆ. ಇದ್ದಕ್ಕಿದ್ದಂತೆ ನನ್ನ ತೊಡೆಯ ಬೆವರಿನಿಂದ ಪ್ಯಾಂಟ್ ಸಂಪೂರ್ಣವಾಗಿ ನೆನೆದಿರುವುದನ್ನು ನಾನು ನೋಡಿದೆ. ಇದ್ದಕ್ಕಿದ್ದಂತೆ, ನನ್ನ ಎಡ ತೊಡೆಯ ಮೇಲೆ ಒಂದು ದೊಡ್ಡ ಹುಣ್ಣು ಆಗಿರುವುದನ್ನು ನೋಡಿದೆ" ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ