ಭೂಮಿ-ಸೂರ್ಯ (Earth - Sun) ಎರಡೂ ತಮ್ಮದೇ ಪಥದಲ್ಲಿ ಚಲಿಸುತ್ತಾ ಇದ್ದರೆ ಮಾತ್ರ ಜಗತ್ತು ಸುವ್ಯಸ್ಥೆಯಿಂದ ನಡೆಯುತ್ತದೆ. ಈ ವಿದ್ಯಾಮಾನ ಸ್ವಲ್ಪ ಅತ್ತಿತ್ತವಾದರೂ ಲೋಕ ಏನಾಗುತ್ತದೆ ಎಂದು ಊಹಿಸುವುದು ಸಹ ಕಷ್ಟ. ಇಂಥಹದರಲ್ಲಿ ಸೂರ್ಯನ ಪರಿಮಂಡಲದಲ್ಲಿ ಕಾಣಿಸಿಕೊಂಡಿರುವ ರಂಧ್ರಗಳು ಈಗ ಹಿಗ್ಗುತ್ತಿದ್ದು, ಭವಿಷ್ಯದಲ್ಲಿ ಭೂಮಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಖಗೋಳ ಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಕರೋನಲ್ ಹೋಲ್ ಎಂದು ಕರೆಯಲ್ಪಡುವ ಸೂರ್ಯನ ದೈತ್ಯ ಕಪ್ಪು ಪ್ರದೇಶವನ್ನು ಸೋಮವಾರ ನಾಸಾದ (NASA) ಸೌರ ಡೈನಾಮಿಕ್ಸ್ ಅಬ್ಸರ್ವೇಟರಿ ಗುರುತಿಸಿದ್ದು, ಅದು ದಿನದಿಂದ ದಿನಕ್ಕೆ ತನ್ನ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ನಾಸಾ ವರದಿ ಮಾಡಿದೆ.
ಹಿಗ್ಗುತ್ತಿದೆ ಕರೋನಲ್ ಹೋಲ್
"ಪ್ರಸ್ತುತ ಕರೋನಲ್ ರಂಧ್ರವು ಇದೀಗ ದೊಡ್ಡದಾಗಿದೆ, ಸುಮಾರು 300,000 ರಿಂದ 400,000 ಕಿಲೋಮೀಟರ್ಗಳಷ್ಟು ಅಡ್ಡಲಾಗಿ ಇದೆ" ಎಂದು NASA ಗೊಡ್ಡಾರ್ಡ್ನ ಹೀಲಿಯೊಫಿಸಿಕ್ಸ್ ಸೈನ್ಸ್ ವಿಭಾಗದ ವಿಜ್ಞಾನದ ಸಹಾಯಕ ನಿರ್ದೇಶಕ ಅಲೆಕ್ಸ್ ಯಂಗ್ ಇಮೇಲ್ ಮೂಲಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಏನಿದು ಕರೋನಲ್ ರಂಧ್ರ?
ಸೌರ ರಂಧ್ರಗಳು ಕಡಿಮೆ ಸಾಂದ್ರತೆಯನ್ನು ಸೂರ್ಯನ ಮೇಲ್ಮೈಯ ಇತರ ಭಾಗಗಳಿಗೆ ಹೋಲಿಸಿದರೆ ಕಡಿಮೆ ಉಷ್ಣತೆಯನ್ನು ಹೊಂದಿವೆ. ಇದು ಸೌರ ಮೇಲ್ಮೈಯಲ್ಲಿ ಭೌತಿಕ ರಂಧ್ರವಲ್ಲ. ಕರೋನಲ್ ರಂಧ್ರವು ಸೌರ ಕರೋನಾದಲ್ಲಿ ತುಲನಾತ್ಮಕವಾಗಿ ತಂಪಾದ, ಕಡಿಮೆ ದಟ್ಟವಾದ ಪ್ಲಾಸ್ಮಾದ ತಾತ್ಕಾಲಿಕ ಪ್ರದೇಶವಾಗಿದ್ದು, ಆದ್ದರಿಂದ ಅವು ಸೂರ್ಯನ ಇತರ ಪ್ರದೇಶಗಳಂತೆ ಪ್ರಕಾಶಮಾನವಾಗಿ ಹೊಳೆಯುವುದಿಲ್ಲ ಮತ್ತು ಕಪ್ಪು ಬಣ್ಣದಲ್ಲಿ ಗೋಚರಿಸುತ್ತವೆ.
ಇದನ್ನೂ ಓದಿ: ಚಲಿಸುತ್ತಿರುವ ಟ್ರೈನ್ ಕೋಚ್ ಬೇರೆಯಾಗಿದೆ ಅಂತ ಚಾಲಕನಿಗೆ ಹೀಗೆ ತಿಳಿಯುತ್ತಂತೆ
ನಾಸಾ ಬಿಡುಗಡೆ ಮಾಡಿರುವ ವರದಿಗೆ ಸೌರ ಭೌತಶಾಸ್ತ್ರಜ್ಞ ಮತ್ತು ನ್ಯಾಷನಲ್ ಸೆಂಟರ್ ಫಾರ್ ಅಟ್ಮಾಸ್ಫಿಯರಿಕ್ ರಿಸರ್ಚ್‌ನ ಉಪನಿರ್ದೇಶಕ ಸ್ಕಾಟ್ ಮೆಕಿಂತೋಷ್ ಪ್ರತಿಕ್ರಿಯಿಸಿದ್ದು, "ಕರೋನಲ್ ರಂಧ್ರಗಳು ಸಾಮಾನ್ಯವಾಗಿದ್ದು, ಇಲ್ಲಿ ಅಸಹಜವಾದದ್ದೇನೂ ಇಲ್ಲ" ಎಂದು ತಿಳಿಸಿದ್ದಾರೆ.
ಬಿರುಗಾಳಿ ಬೀಸುವ ಸಂಭವ
ಈ ರಂಧ್ರಗಳು ಸೌರ ಕಣಗಳ ಅತಿವೇಗದ ಬಿರುಗಾಳಿಯ ಮೂಲವಾಗಿರುವುದರಿಂದ ಭೂಮಿಯಲ್ಲಿ ಸೌರಜ್ವಾಲೆಯ ಬಿರುಗಾಳಿ ಸೃಷ್ಟಿಯಾಗುವ ಅಪಾಯ ಕೂಡ ಇದೆ ಎನ್ನಲಾಗುತ್ತಿದೆ. ಈ ಬಿರುಗಾಳಿ ಸೆಕೆಂಡಿಗೆ ಸುಮಾರು 500-800 ಕಿಮೀ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿರಬಹುದು ಎಂದು ಯಂಗ್ ತಿಳಿಸಿದ್ದಾರೆ. ಅಷ್ಟೇ ಅಲ್ಲ ಈ ರಂಧ್ರಗಳ ಗಾತ್ರದ ಹೆಚ್ಚಳ ಪರಿಣಾಮ ಈ ವಾರದ ಅಂತ್ಯದ ವೇಳೆಗೆ ಭೂಮಿಯನ್ನು ತಲುಪ ಬಹುದು ಅಂದರೆ ಬಿರುಗಾಳಿ ಎಳಬಹುದು ಎಂದು ಅವರು ತಿಳಿಸಿದ್ದಾರೆ.
ಭೂಮಿಯ 30 ಪಟ್ಟು ಹಿಗ್ಗಿದ 'ರಂಧ್ರ'.. ಮುಂದಾಗುವ ಸಮಸ್ಯೆಗಳೇನು?
"ಭೂಮಿಯ 30 ಪಟ್ಟು ಗಾತ್ರದ 'ರಂಧ್ರ' ಸೂರ್ಯನಾದ್ಯಂತ ಹರಡಿದೆ, ಈ ವಾರದ ಅಂತ್ಯದ ವೇಳೆಗೆ ಭೂಮಿಗೆ ಸೌರ ಮಾರುತಗಳು ಅಪ್ಪಳಿಸಬಹುದು. ಬಹುಶಃ ಮಾರ್ಚ್ 24 ರಂದು ಹೆಚ್ಚು ಗಾಳಿ ಇರಬಹುದು" ಎಂದು ಯಂಗ್ ಕರೋನಲ್ ಹೋಲ್ ಗಾತ್ರದ ಹೆಚ್ಚಳದ ಪರಿಣಾಮವನ್ನು ತಿಳಿಸಿದರು. ಜೊತೆಗೆ ಸ್ವಲ್ಪ ಮಟ್ಟಿಗೆ ಇದರ ಪರಿಣಾಮ ಭೂಮಿಯಲ್ಲಿ ಉಪಗ್ರಹಾಧರಿತ ಇಂಟರ್ನೆಟ್, ಮೊಬೈಲ್ ಸೇರಿದಂತೆ ಎಲ್ಲ ಸಂವಹನಗಳಿಗೆ ತೊಡಕಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಭಾರತದ ಈ ಒಂದು ಹಳ್ಳಿಯಲ್ಲಿ ಸೈರನ್ ಮೊಳಗಿದ್ರೆ ಟಿವಿ, ಮೊಬೈಲ್, ಲ್ಯಾಪ್‌ಟಾಪ್ ಎಲ್ಲವೂ ಸ್ವಿಚ್ ಆಫ್!
ಈ ರಂಧ್ರಗಳು ಇನ್ನೂ ಗಾತ್ರದಲ್ಲಿ ದೊಡ್ಡದಾಗುತ್ತಿದ್ದರೆ ಈ ಸಮಸ್ಯೆ ವ್ಯಾಪಕವಾಗಬಹುದು ಮತ್ತು ಇದು ಭವಿಷ್ಯದಲ್ಲಿ ಮಂಗಳಯಾನ ಸೇರಿದಂತೆ ಅಂತರಿಕ್ಷದಲ್ಲಿ ಕಾರ್ಯಾಚರಿಸುವ ನೌಕೆಗಳು ಮತ್ತು ಗಗನಯಾತ್ರಿಗಳಿಗೆ ಅಪಾಯ ತಂದೊಡ್ಡಬಹುದು ಎನ್ನಲಾಗಿದೆ.
ಸಾಮಾನ್ಯವಾಗಿ ಒಮ್ಮೆ ಇಂಥ ರಂಧ್ರಗಳು ಕಾಣಿಸಿಕೊಂಡರೂ ಕೆಲವೇ ಸಮಯದಲ್ಲಿ ಪೂರ್ವ ಸ್ಥಿತಿಗೆ ಬರುತ್ತವೆ ಆದರೆ ಈ ರಂಧ್ರ ಹಿಗ್ಗುತ್ತಿರುವುದನ್ನು ನೋಡಿದರೆ ಮುಂದಿನ ಪರಿಣಾಮದ ಬಗ್ಗೆ ಆತಂಕವಾಗುತ್ತಿದೆ ಎಂದು ಯಂಗ್ ತಿಳಿಸಿದರು.
ಸೌರ ಚಟುವಟಿಕೆಯು ಹೆಚ್ಚಾದಂತೆ ತನಗೆ ಮತ್ತು ಇತರ ಸೌರ ವಿಜ್ಞಾನಿಗಳಿಗೆ "ಇದು ಹೆಚ್ಚು ಹೆಚ್ಚು ರೋಮಾಂಚನಕಾರಿ ಮತ್ತು ಆಸಕ್ತಿದಾಯಕವಾಗಿದೆ" ಎಂದು ಒಟ್ಟಾರೆ ವಿದ್ಯಾಮಾನದ ಬಗ್ಗೆ ಗೊಡ್ಡಾರ್ಡ್ನ ಹೀಲಿಯೊಫಿಸಿಕ್ಸ್ ಸೈನ್ಸ್ ವಿಭಾಗದ ವಿಜ್ಞಾನದ ಸಹಾಯಕ ನಿರ್ದೇಶಕ ಅಲೆಕ್ಸ್ ಯಂಗ್ ಇಮೇಲ್‌ನಲ್ಲಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ