ಈ ಭೂಮಿ ಅದೆಷ್ಟೋ ಕೌತುಕಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಈ ಕೌತುಕಗಳು ವಿಜ್ಞಾನಿಗಳ (Scientist) ಬಹಳ ಪರಿಶ್ರಮದಿಂದ ಬಹಿರಂಗಗೊಳ್ಳುತ್ತಿದ್ದು, ಮನುಕುಲಕ್ಕೆ ಹೆಚ್ಚು ಸೋಜಿಗಮಯವಾದ ಅಂಶಗಳನ್ನು ಪರಿಚಯಿಸುತ್ತಿದೆ. ಯುಕಾನ್‌ನ ಡಾಸನ್ ಸಿಟಿ ಬಳಿಯ ಕ್ಲೋಂಡಿಕ್ ಚಿನ್ನದ ಹೊಲಗಳಲ್ಲಿ 2018 ರಲ್ಲಿ ಚಿನ್ನದ ಗಣಿಗಾರರೊಬ್ಬರು (Gold Miner) ನಿಗೂಢ ಕಂದು ಬಣ್ಣದ ಚೆಂಡನ್ನು ಕಂಡುಕೊಂಡರು. ನೋಡಲು ಈ ರಚನೆ ಚೆಂಡಿನಾಕಾರದಲ್ಲಿತ್ತು ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಇದು ಉಗುರು, ಪುಟ್ಟ ಕೈಗಳನ್ನು ಹೊಂದಿತ್ತು.
ಚೆಂಡಿನಾಕಾರದ ಜೀವಿ
ಯುಕಾನ್ ಸರ್ಕಾರದ ಪ್ರಾಗ್ಜೀವಶಾಸ್ತ್ರಜ್ಞ ಗ್ರಾಂಟ್ ಜಝುಲಾ ಸುದ್ದಿಮಾಧ್ಯಮಕ್ಕೆ ತಿಳಿಸಿರುವಂತೆ ಈ ಚೆಂಡಿಗೆ ಚಿಕ್ಕ ಕೈಗಳಿದ್ದು ಉಗುರುಗಳೂ ಇವೆ ಹಾಗೂ ಇದು ಸಣ್ಣದಾದ ಬಾಲವನ್ನು ಹೊಂದಿದೆ.
ಆದರೆ ರಚನೆ ಮಾತ್ರ ಚೆಂಡಿನಾಕಾರದಲ್ಲಿದೆ ಎಂಬುದು ನಂತರ ಪತ್ತೆಯಾಯಿತು ಎಂದು ತಿಳಿಸಿದ್ದಾರೆ. ಇದು 30,000 ವರ್ಷಗಳಷ್ಟು ಹಳೆಯದಾದ ಸಂರಕ್ಷಿಸಲಾದ ಅಳಿಲಾಗಿದೆ ಎಂಬುದು ಇನ್ನಷ್ಟು ಪರೀಕ್ಷೆಗಳಿಂದ ಬಹಿರಂಗಗೊಂಡಿದೆ ಎಂದು ಗ್ರಾಂಟ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೇಯಿಸಿಟ್ಟ ಮೊಟ್ಟೆಯನ್ನು 20 ವರ್ಷ ಇಟ್ರೆ ಮಾಣಿಕ್ಯವಾಗಿ ಬದಲಾಗುತ್ತಂತೆ! ವೈರಲ್ ಆಯ್ತು ಫೋಟೋ
ಆರ್ಕ್ಟಿಕ್ ನೆಲದ ಅಳಿಲು
ಇದು ಪ್ರಾಣಿಯೋ ಅಥವಾ ನಿರ್ಜೀವ ವಸ್ತುವೋ ಎಂಬುದನ್ನು ಇನ್ನಷ್ಟು ತನಿಖೆ ಮಾಡುವುದಕ್ಕಾಗಿ ಗ್ರಾಂಟ್ ಅದನ್ನು ಪಶುವೈದ್ಯರಾದ ಜೆಸ್ ಹೀತ್‌ರಲ್ಲಿಗೆ ಕೊಂಡೊಯ್ಯುತ್ತಾರೆ. ಪಶುವೈದ್ಯರು ಕೆಲವೊಂದು ಪರೀಕ್ಷೆಗಳು ಹಾಗೂ ಈ ವಸ್ತುವಿನ ಎಕ್ಸರೇಗಳನ್ನು ತೆಗೆದಿದ್ದು, ಹೆಪ್ಪುಗಟ್ಟಿದ ಕೂದಲಿನ ಚೆಂಡು ಸಣ್ಣ ಸುರುಳಿಯಾಕಾರದ ಆರ್ಕ್ಟಿಕ್ ನೆಲದ ಅಳಿಲಾಗಿದೆ ಎಂಬುದು ಬಹಿರಂಗಗೊಂಡಿತು.
ಆದರೆ ಈ ಅಳಿಲು ಮೃತಗೊಂಡಿದ್ದು ಎಳೆಯ ವಯಸ್ಸಿನಲ್ಲಿಯೇ ಸತ್ತುಹೋಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. 30,000 ವರ್ಷಗಳಷ್ಟು ಹಳೆಯದಾದ ಸಂರಕ್ಷಿಸಲಾದ ಅಳಿಲಿನ ದೇಹವಾಗಿದೆ ಎಂಬುದು ಹೆಚ್ಚಿನ ಪರೀಕ್ಷೆಗಳಿಂದ ತಿಳಿದುಬಂದಿದೆ.
ಹೆಚ್ಚಿನ ಪರೀಕ್ಷೆಗಳ ನಂತರ ಬಹಿರಂಗಗೊಂಡ ಸತ್ಯ
ಆದರೆ ಒಮ್ಮೆಲೆ ನೋಡುವಾಗ ನಿದ್ರಿಸುತ್ತಿದೆಯೋ ಎಂಬಂತೆ ಭಾಸವಾಗುತ್ತದೆ ಹಾಗೂ ಸುರಳಿ ಸುತ್ತಿಕೊಂಡೇ ಅದು ಉಸಿರಾಡುತ್ತಿದೆ ಎಂಬ ಗ್ರಹಿಕೆಯನ್ನು ನೀಡುತ್ತದೆ ಎಂದು ಪಶುವೈದ್ಯರಾದ ಜೆಸ್ ತಿಳಿಸಿದ್ದಾರೆ.
ಕಂದು ಬಣ್ಣದ ಚೆಂಡನ್ನು ಏನು ಎಂಬುದಾಗಿ ನಮಗೆ ಯಾರಿಗೂ ಗುರುತಿಸಲು ಆಗಲಿಲ್ಲ ಎಂದು ತಿಳಿಸಿರುವ ಗ್ರಾಂಟ್, ಹೆಚ್ಚಿನ ಪರೀಕ್ಷೆಗಳ ನಂತರವೇ ಇದೊಂದು ಅಳಿಲು ಎಂಬುದನ್ನು ತಿಳಿಯಪಡಿಸಿದೆ ಎಂದು ಹೇಳಿದ್ದಾರೆ. ಕಂದು ಬಣ್ಣದ ಬೊಕೆಯಂತೆ ಕಾಣುವ ಈ ರಚನೆ ಒಮ್ಮೊಮ್ಮೆ ಕಂದು ಬಣ್ಣದ ಸಣ್ಣ ಬಂಡೆಯೋ ಎಂಬಂತೆ ನಮಗೆ ಅನಿಸಿಕೆಯಾಗಿದೆ ಎಂದು ಗ್ರಾಂಟ್ ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ.
ಅನೇಕ ಪ್ರಾಣಿಗಳ ಪಳೆಯುಳಿಕೆಗಳು ದೊರೆತಿವೆ
ಯುಕಾನ್‌ನ ಕ್ಲೋಂಡಿಕ್ ಚಿನ್ನದ ತಾಣಗಳು ಹಿಮಯುಗದಿಂದಲೂ ಪರ್ಮಾಫ್ರಾಸ್ಟ್ - ಹೆಪ್ಪುಗಟ್ಟಿದ ಮಣ್ಣಿನಲ್ಲಿ ಅವಿತಿವೆ. ಇದರಿಂದ ಇಲ್ಲಿ ಮೃತಗೊಂಡಿರುವ ಅದೆಷ್ಟೋ ಪ್ರಾಣಿಗಳ ಪಳೆಯುಳಿಕೆಗಳು ದೊರೆತಿವೆ ಎಂಬುದು ಗ್ರಾಂಟ್ ಹೇಳಿಕೆಯಾಗಿದೆ. ಇಲ್ಲಿನ ಚಿನ್ನದ ಗಣಿಗಾರರಿಗೆ ಈ ಹಿಂದೆ ಸಂರಕ್ಷಿತ ತೋಳದ ಮರಿ ಹಾಗೂ ಮರಿಯಾನೆ ದೊರಕಿದೆ ಎಂದು ವರದಿಗಳು ತಿಳಿಸಿವೆ.
ಇಂಗಾಲದ ಡೈಆಕ್ಸೈಡ್ ಮತ್ತು ಮೀಥೇನ್‌ನಂತಹ ಅನಿಲಗಳ ಹೊರಸೂಸುವಿಕೆಯಿಂದಾಗಿ ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು ಈ ರೀತಿಯ ಆವಿಷ್ಕಾರಗಳು ಹೆಚ್ಚು ಸಾಮಾನ್ಯವಾಗಿದೆ ಎಂಬುದು ಗ್ರಂಟ್ ಅಭಿಪ್ರಾಯವಾಗಿದೆ.
ತಾಪಮಾನವು ಪರ್ಮಾಫ್ರಾಸ್ಟ್ ಕರಗಲು ಕಾರಣವಾಗಿದ್ದು, ರಕ್ಷಿತ ಜೀವಿಗಳಿಂದ ವೈರಸ್‌ಗಳು ಮತ್ತು ಆಂಥ್ರಾಕ್ಸ್ ನಿಕ್ಷೇಪಗಳವರೆಗಿನ ಪ್ರಮುಖ ಸಕಲ ಜೀವಚರಗಳನ್ನು ಬಹಿರಂಗಪಡಿಸುತ್ತದೆ.
ಇತರ ಅಳಿಲು ಪ್ರಭೇದಗಳಿಗಿಂತ ಆರ್ಕ್ಟಿಕ್ ನೆಲದ ಅಳಿಲುಗಳು ವಿಭಿನ್ನವಾಗಿವೆ
ಆರ್ಕ್ಟಿಕ್ ನೆಲದ ಅಳಿಲುಗಳು ಇಂದಿಗೂ ಯುಕಾನ್‌ನಾದ್ಯಂತ ಹಾಗೂ ಇತರ ಅಳಿಲುಗಳಿಗಿಂತ ವಿಭಿನ್ನವಾಗಿವೆ. ಈ ಅಳಿಲುಗಳು ತಮ್ಮ ಗೂಡುಗಳನ್ನು ನೆಲದ ಅಡಿಯಲ್ಲಿ ನಿರ್ಮಿಸುತ್ತವೆ. ಈ ಗೂಡುಗಳನ್ನು ಹಿಮಗಯುಗದಿಂದಲೂ ರಕ್ಷಿಸಲಾಗುತ್ತಿದ್ದು ಯುಕಾನ್‌ನಲ್ಲಿ ಹೆಚ್ಚು ಸಾಮಾನ್ಯವಾಗಿವೆ ಆದರೆ ಈ ರೀತಿಯ ಸಂರಕ್ಷಿತ ಅಳಿಲನ್ನು ಪತ್ತೆಹಚ್ಚುವುದು ಅತ್ಯಂತ ವಿಶೇಷವಾದುದು ಎಂದು ಗ್ರಂಟ್ ತಿಳಿಸಿದ್ದಾರೆ.
ಆರ್ಕ್ಟಿಕ್ ನೆಲದ ಅಳಿಲುಗಳ ಪಳೆಯುಳಿಕೆಗಳು, ಗೂಡುಗಳು ಇನ್ನಷ್ಟು ಹೊಸ ಅಧ್ಯಯನಕ್ಕೆ ದೊರೆತಿರುವ ಆಧಾರಗಳಾಗಿವೆ ಎಂದು ಗ್ರಂಟ್ ತಿಳಿಸಿದ್ದು, ಯುಕಾನ್ ಬೆರಿಂಗಿಯಾ ಇಂಟರ್‌ಪ್ರೆಟೀವ್ ಸೆಂಟರ್ ಈ ಅಳಿಲಿನ ಎಕ್ಸರೇಗಳನ್ನು ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಇದನ್ನು ತಾಣದಲ್ಲಿ ಶೀಘ್ರದಲ್ಲಿಯೇ ಪ್ರದರ್ಶಿಸಲಾಗುತ್ತದೆ ಎಂದು ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ