ಪುತ್ತೂರು(ಜು.02): ಇಂದಿನ ದಿನಗಳಲ್ಲಿ ಮನೆಯೊಂದನ್ನು (House) ಎಷ್ಟು ಹಣ ಖರ್ಚು ಮಾಡಿ ಕಟ್ಟಿದರೂ, ಆ ಮನೆ ಹೆಚ್ಚೆಂದರೆ 50 ವರ್ಷ ಬಾಳಿಕೆ ಬರೋದು ಕಷ್ಟ. ಅತ್ಯಾಧುನಿಕ ಸಲಕರಣೆಗಳನ್ನು ಬಳಸಿ ಕಟ್ಟಿದರೂ, ಇಷ್ಟು ಅಲ್ಪ ಸಮಯದ ಬಾಳಿಕೆ ಬರುವ ಮನೆಗಳ ನಡುವೆ ಪುರಾತನ ಕಾಲದಲ್ಲಿ ತಮ್ಮದೇ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಿದ ಮನೆಗಳು ಇಂದಿಗೂ ಗಟ್ಟಿಮುಟ್ಟಾಗಿ ನೂರಾರು ವರ್ಷ ಬಾಳಿಕೆ ಬರುತ್ತಿದೆ. ಇಂಥಹುದೇ ಒಂದು ಮನೆ ದಕ್ಷಿಣಕನ್ನಡ (Dakshina Kannada) ಗಡಿಭಾಗವಾದ ಕೇರಳದ (Kerala) ಬಾಕ್ರಬೈಲ್ (Bakrabail) ಎಂಬಲ್ಲಿದೆ. ಅಂದಹಾಗೆ ಈ ಮನೆಯ ವರ್ಷ ಕೇಳಿದ್ರೆ ನೀವೂ ಆಶ್ಚರ್ಯ ಪಡ್ತೀರಿ.
ಕೋಟಿಗಟ್ಟಲೆ ಖರ್ಚು ಮಾಡಿ ಇತ್ತೀಚಿನ ದಿನಗಳಲ್ಲಿ ಕಟ್ಟಿದ ಮನೆ, ಕಟ್ಟಡಗಳು ಹೆಚ್ಚೆಂದರೆ 50 ಅಥವಾ 100 ವರ್ಷ ಬಾಳಿಕೆ ಬರಬಹುದೇನೋ. ಆದರೆ ಪುರಾತನ ಕಾಲದಲ್ಲಿ ಮನೆ ಕಟ್ಟಲು ಈಗಿನ ರೀತಿಯ ತಂತ್ರಜ್ಞಾನಗಳು ಇಲ್ಲದಿದ್ದರೂ, ಅಂದು ಕಟ್ಟಿದ ಮನೆ, ಕಟ್ಟಡಗಳು ಇಂದಿಗೂ ಗಟ್ಟಿಮುಟ್ಟಾಗಿ ನಮ್ಮ ಮುಂದೆ ಇರುವುದನ್ನು ಕಾಣಬಹುದು.
ಕ್ರಬೈಲ್ ಚಾವಡಿ
ಅಂಥಹುದೇ ಒಂದು ಮನೆ ದಕ್ಷಿಣಕನ್ನಡ-ಕೇರಳ ಗಡಿಭಾಗವಾದ ಬ್ರಾಕ್ರಬೈಲ್ ಎಂಬಲ್ಲಿದೆ. ಕಾಸರಗೋಡು ಜಿಲ್ಲೆಯ ವರ್ಕಾಡಿ ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವ ಬ್ರಾಕ್ರಬೈಲ್ ಪ್ರದೇಶದಲ್ಲಿ ಬರುವ ಈ ಮನೆ ಬ್ರಾಕ್ರಬೈಲ್ ಚಾವಡಿ ಎಂದೇ ಗುರುತಿಸಲ್ಪಟ್ಟಿದೆ.
987 ವರ್ಷ ಹಳೆಯ ಮನೆ
ಮನೆಯಲ್ಲಿರುವ ಉಲ್ಲೇಖದ ಪ್ರಕಾರ ಈ ಮನೆಗೆ ಸುಮಾರು 987 ಕಳೆದಿದೆ. ಬಾಕ್ರಬೈಲು ದೇಯ್ಯಮ್ಮನ ಮಗ ಮಂಜಣ್ಣ ಆಳ್ವರು ಕಟ್ಟಿದ ಮನೆ ಎನ್ನುವ ಬರಹವನ್ನೂ ಈ ಮನೆಯ ಮುಂದಿನ ಮರದ ಪಕ್ಕಾಸಿನಲ್ಲಿ ಕೆತ್ತಲಾಗಿದ್ದು, ಹಳೆಗನ್ನಡದಲ್ಲಿ ಈ ಮಾಹಿತಿಯನ್ನು ಇಲ್ಲಿ ಬರೆಯಲಾಗಿದೆ.
ಒಂದೇ ಮನೆಯಲ್ಲಿ 7 ಕುಟುಂಬ ವಾಸ
ಆ ಕಾಲದಲ್ಲಿ ಧರ್ಮ ಚಾವಡಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಮನೆಯಲ್ಲಿ 7 ಕುಟುಂಬಗಳು ವಾಸಿಸುತ್ತಿದ್ದವು. ಸುಮಾರು 100 ಕ್ಕೂ ಮಿಕ್ಕಿದ ಜನ ಈ ಮನೆಯಲ್ಲಿದ್ದು, ಮನೆಗೆ ಸಂಬಂಧಪಟ್ಟ ದೈವಗಳ ಆರಾಧನೆಯನ್ನೂ ಮಾಡಿಕೊಂಡು ಬರಲಾಗಿದೆ. ಭೂ ಸುಧಾರಣೆ ಕಾಯ್ದೆಯ ಮೊದಲು 4500 ಎಕರೆಯಷ್ಟು ಭೂಮಿಯನ್ನು ಹೊಂದಿದ್ದರು.
ಈ ಕಾಲದಲ್ಲಿ ಇಡೀ ಊರಿಗೇ ಯಜಮಾನನ ಸ್ಥಾನದಲ್ಲಿತ್ತು. ಊರಿನ ಪ್ರತಿಯೊಬ್ಬರಿಗೂ , ಪ್ರತೀ ದಿನವೂ ಆಹಾರವನ್ನು ನೀಡುತ್ತಿದ್ದ ಧರ್ಮ ಚಾವಡಿ ಇದಾಗಿತ್ತು. ಅಲ್ಲದೆ ಈ ಮನೆಯಲ್ಲಿ ಸತ್ಯ ಪ್ರಮಾಣ ಕಟ್ಟೆಯೂ ಇದ್ದು, ಊರಿನಲ್ಲಿ ಯಾವುದೇ ರೀತಿಯ ವ್ಯತ್ಯಾಸಗಳಾದರೂ, ಗ್ರಾಮದ ಜನ ಈ ಮನೆಗೆ ಬಂದು ಸತ್ಯಪ್ರಮಾಣ ಮಾಡುವ ಸಂಪ್ರದಾಯವೂ ಇತ್ತು.
ಇದನ್ನೂ ಓದಿ: Life Advice: ಉತ್ತಮ ಜೀವನ ನಡೆಸುವುದು ಹೇಗೆ ಗೊತ್ತಾ? 95 ವರ್ಷದ ವೃದ್ದೆ ಏನ್ ಹೇಳಿದ್ದಾರೆ ನೋಡಿ
ಮಲರಾಯ, ಧೂಮಾವತಿ ಬಂಟ ಮೊದಲಾದ ದೈವಗಳನ್ನು ಆರಾಧಿಸಿಕೊಂಡು ಬರುತ್ತಿರುವ ಈ ಮನೆಯಲ್ಲಿ ಇಂದಿಗೂ ಈ ದೈವಗಳ ಅಸ್ತಿತ್ವವಿದ್ದು, ಈ ಕಾರಣಕ್ಕಾಗಿ ಪ್ರತೀ ದಿನವೂ ತಪ್ಪದೆ ಈ ಮನೆಯಲ್ಲಿ ದೈವಗಳಿಗೆ ದೀಪವನ್ನು ಹಚ್ಚುವ ಕೆಲಸವೂ ನಡೆಯುತ್ತಿದೆ.
ಮನೆಯೊಳಗಿನ ಮರದ ಅಲಂಕಾರ
ಈ ಮನೆಗೆ ಸಂಬಂಧಪಟ್ಟ ಮಂದಿ ಬೇರೆ ಬೇರೆ ಊರುಗಳಲ್ಲಿ ನೆಲೆ ನಿಂತ ಕಾರಣಕ್ಕಾಗಿ ಈ ಮನೆಯಲ್ಲಿ ಕೆಲವು ವರ್ಷಗಳಿಂದೀಚೆಗೆ ಜನ ವಾಸವಿಲ್ಲ. ಮಣ್ಣು, ಕಲ್ಲು ಮಿಶ್ರಿತ ಗೋಡೆಗಳ ಜೊತೆಗೆ ಅತ್ಯಂತ ಬೆಲೆ ಬಾಳುವ, ಸುಂದರ ಕಲಾಕೃತಿಗಳಿರುವ ಅಪಾರ ಪ್ರಮಾಣದ ಮರಗಳ ಪಕ್ಕಾಸು, ಕಂಬಗಳು ಮನೆಗೆ ಭೇಟಿ ನೀಡಿದವರನ್ನು ಮಂತ್ರಮುಗ್ದಗೊಳಿಸುತ್ತದೆ.
ಮನೆಯ ಪುನರುಜ್ಜೀವನ
ಈ ಮನೆಯನ್ನು ಮತ್ತೆ ಪುನರುಜ್ಜೀವನಗೊಳಿಸುವ ಯೋಜನೆಯನ್ನು ಮನೆಗೆ ಸಂಬಂಧಪಟ್ಟವರು ಮುಂದಾಗಿದ್ದು, ಸುಮಾರು 3 ಕೋಟಿ ರೂಪಾಯಿಗಳು ಈ ಯೋಜನೆಗೆ ತಗುಲಲಿದೆ ಎನ್ನುತ್ತಾರೆ ಬಾಕ್ರಬೈಲು ಚಾವಡಿಯ ಮೇಲುಸ್ತುವಾರಿಸಂತೋಷ್ ಕುಮಾರ್ ಶೆಟ್ಟಿ.
ಇದನ್ನೂ ಓದಿ: Brother and Sister: ತನ್ನ ತಮ್ಮನಿಗೆ ಎಷ್ಟು ಉದ್ದದ ಪತ್ರ ಬರೆದಿದ್ದಾಳೆ ಗೊತ್ತಾ ಈ ಅಕ್ಕ! 5 ಕೆಜಿ ತೂಗುತ್ತೆ
ಈ ಮನೆ ಇಡೀ ಊರನ್ನೇ ರಾಜಭಾರ ಮಾಡುತ್ತಿದ್ದ ಕಾಲವನ್ನು ಕಂಡವರೂ ಈ ಗ್ರಾಮದಲ್ಲಿದ್ದಾರೆ. ವಿಷು ಸಂಕ್ರಮಣ, ಯುಗಾದಿ, ಕೃಷ್ಣ ಜನ್ಮಾಷ್ಟಮಿ ಹೀಗೆ ಹಬ್ಬದ ಸಂದರ್ಭದಲ್ಲಿ ಈ ಮನೆಗೆ ಬಂದವರಿಗೆ ದಾನ-ಧರ್ಮಗಳನ್ನೂ ಮಾಡಲಾಗುತ್ತಿತ್ತು. ಊರಿಗೆ ಯಜಮಾನನ ಸ್ಥಾನದಲ್ಲಿದ್ದ, ಈ ಮನೆಗೆ ಇಡೀ ಊರಿನ ಜನ ವಿಧೇಯರಾಗಿದ್ದರು.
ದಕ್ಷಿಣಕನ್ನಡ ಮತ್ತು ಕಾಸರಗೋಡು ಜಿಲ್ಲೆಗೆ ಸಂಬಂಧಿಸಿದಂತೆ ಅತ್ಯಂತ ಹಳೆ ಕಾಲದ ಮನೆಗಳಲ್ಲಿ ಬಾಕ್ರಬೈಲ್ ಚಾವಡಿಯೂ ಒಂದಾಗಿದ್ದು, ಜಿಲ್ಲೆಯ ಯುವಜನತೆಗೆ ಈ ಮನೆ ನಿಗೂಢವಾಗಿಯೇ ಉಳಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ