Prasiddhi Singh: ವಯಸ್ಸು ಕೇವಲ ಒಂಭತ್ತು.... ಸಾಧನೆ ಮಾತ್ರ ಸಖತ್ತು..!

ಪ್ರಸಿದ್ಧಿ ಈವರೆಗೆ ಸರಿಸುಮಾರು 28500 ಹಣ್ಣಿನ ಸಸ್ಯಗಳ ನೆಡುವಿಕೆ ಹಾಗೂ 20 ಮಿನಿ ಅರಣ್ಯಗಳ ಸೃಷ್ಟಿ ಮಾಡಿ ಅವುಗಳ ಪಾಲನೆ ಪೋಷಣೆ ಮಾಡುತ್ತಿದ್ದಾಳೆ

ಪ್ರಸಿದ್ಧಿ ಸಿಂಗ್

ಪ್ರಸಿದ್ಧಿ ಸಿಂಗ್

  • Share this:
ಭೂಮಿಯ ಮೇಲಿನ ಸಕಲ ಜೀವರಾಶಿಗಳಿಗೆ ಆಶ್ರಯ ತಾಣ ಒದಗಿಸಿದ್ದರೆ, ಇದರ ಮೇಲಿರುವ ಹಸಿರಿನ ರಾಶಿ ಪ್ರತಿ ಜೀವಿಗಳ ಬದುಕು ಸಾಗುವಿಕೆಗೆ ತನ್ನದೆ ಆದ ಕೊಡುಗೆ ನೀಡುತ್ತಿದೆ. ಸಸ್ಯಗಳಿದ್ದರಷ್ಟೆ ಬದುಕು ಎಂಬ ಸತ್ಯದ ಮಹತ್ವ ನಾವಿನ್ನು ಪ್ರಬಲವಾಗಿ ಅರಿಯಬೇಕಾಗಿದೆ. ಏಕೆಂದರೆ ಮನುಷ್ಯ ಇಂದು ಎಷ್ಟೆ ದೊಡ್ಡವನಾಗಿ ಬೆಳೆದಿದ್ದರೂ ಪರಿಸರ ಸಂರಕ್ಷಣೆಯ ವಿಚಾರಕ್ಕೆ ಬಂದಾಗ ಇಂದಿಗೂ ಚಿಕ್ಕವನಾಗಿಯೇ ಇರುವುದು ಕಳವಳಕಾರಿ ಸಂಗತಿಯಾಗಿದೆ. ಆದರೆ ಚೆನ್ನೈನ (Chennai) 9 ವರ್ಷ ವಯಸ್ಸಿನ ಪುಟ್ಟ ಬಾಲಕಿ ಪರಿಸರವಾದಿ ಕಾರ್ಯಕರ್ತೆಯಾಗಿದ್ದಾಳೆ. ಹೌದು,  ಪ್ರಸಿದ್ಧಿ ಸಿಂಗ್ (Prasiddhi Singh) ಎಂಬ ಚೆನ್ನೈನಲ್ಲಿ ವಾಸಿಸುತ್ತಿರುವ ಈಕೆ ಒಬ್ಬ ಪರಿಸರವಾದಿ (Environmentalist) ಕಾರ್ಯಕರ್ತೆ. ಪರಿಸರಕ್ಕೆ (Environment) ಸಂಬಂಧಿಸಿದಂತೆ ಪ್ರಸಿದ್ಧಿ ಮಾಡಿರುವ ಕೆಲಸಗಳ ಕುರಿತು ನೀವು ತಿಳಿದರೆ ನಿಮಗೆ ಅಚ್ಚರಿಯಾಗದೆ ಇರಲಾರದು.

ಪ್ರಕೃತಿಯೊಂದಿಗೆ ಬೆಳೆದ ಪ್ರಸಿದ್ಧಿ:

ಈ ಪುಟ್ಟ ಬಾಲಕಿಯು ಪ್ರಕೃತಿಯೊಂದಿಗೆ ಅದರಲ್ಲೂ ವಿಶೇಷವಾಗಿ ಗಿಡ-ಮರಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾಳೆ. ಹುಟ್ಟಿದ ಕೇವಲ ಎರಡು ವರ್ಷದವಳಾಗಿದ್ದಾಗಲೇ ಪ್ರಸಿದ್ಧಿ ತನ್ನ ಸುತ್ತಲಿನ ನಿಸರ್ಗದ ಸೊಬಗು, ಹಕ್ಕಿಗಳ ಕಲರವ, ಅವು ಹೇಗೆ ಗಿಡ-ಮರಗಳೊಂದಿಗೆ ವ್ಯವಹರಿಸುತ್ತವೆ ಮುಂತಾದವುಗಳನ್ನು ನೋಡುತ್ತ ಮೈ ಮರೆಯುತ್ತಿದ್ದಳಂತೆ. ಇನ್ನು, "ನಾನು ಕೇವಲ ಎರಡು ವರ್ಷದವಳಿದ್ದಾಗ ಗಿಡಮರಗಳು, ಪಕ್ಷಿಗಳು ಮುಂತಾದ ದೃಶ್ಯಗಳನ್ನು ನೋಡುತ್ತಲೆ ಇರುತ್ತಿದ್ದೆ. ಈ ದೃಶ್ಯಗಳು ನನಗೆ ತುಂಬ ಸಂತಸ ನೀಡುತ್ತಿದ್ದವು"  ಎಂದು ಸ್ವತಃ ಪ್ರಸಿದ್ಧಿ ತನಗಿರುವ ಪರಿಸರದ ಮೇಲಿನ ಪ್ರೀತಿಯನ್ನು ಹೇಳಿಕೊಳ್ಳುತ್ತಾಳೆ.

ಇದನ್ನೂ ಓದಿ: 9ನೇ ವಯಸ್ಸಿಗೆ ಭರತನಾಟ್ಯದಲ್ಲಿ ದಾಖಲೆ ಬರೆದ ಮಲೆನಾಡಿ ಪೋರಿ

ಈ ಬಾಲಕಿ ನಾಲ್ಕು ವರ್ಷದವಳಾಗಿದ್ದಾಗ ಒಮ್ಮೆ ಚೆನ್ನೈ ನಗರಕ್ಕೆ ವಾರ್ದಾ ಚಂಡ ಮಾರುತ ಅಪ್ಪಳಿಸಿತ್ತು. ಈ ಸೈಕ್ಲೋನ್ ನಿಂದ ಹಲವಾರು ಗಿಡ-ಮರಗಳು ಧರೆಗುರುಳಿದ್ದವು. ಈ ವೇಳೆಯಲ್ಲಿ ಪ್ರಸಿದ್ಧಿ ತಾನು ನೆಟ್ಟಿರುವ ಸಸ್ಯಗಳ ಗತಿ ಏನಾಗುವುದೋ ಎಂದು ಚಿಂತಾಕ್ರಾಂತಳಾಗಿದ್ದಳಂತೆ. ಕೇವಲ ನಾಲ್ಕು ವರ್ಷ ವಯಸ್ಸಿನಲ್ಲೇ ಈ ರೀತಿಯಲ್ಲಿ ಗಿಡ-ಮರಗಳಿಗಾಗಿ ದುಃಖಿಸಿದ್ದು ಅವಳಲ್ಲಿನ ಪರಿಸರದ ಬಗೆಗಿನ ಕಾಳಜಿ ಹಾಗೂ ಸಸ್ಯಗಳ ಮೇಲೆ ಅವಳಿಗಿರುವ ಅನನ್ಯವಾದ ಪ್ರೀತಿಯನ್ನು ತೋರಿಸುತ್ತದೆ.

ಮಿನಿ ಅರಣ್ಯಗಳ ಸೃಷ್ಟಿ:

ದಿನಗಳು ಕಳೆದಂತೆ ಪ್ರಸಿದ್ಧಿಯ ಪರಿಸರ ಕಾಳಜಿಯು ಬೆಳೆಯತೊಡಗಿತು. ಪ್ರಸಿದ್ಧಿ ತನ್ನ ಒಂಭತ್ತನೇ ವಯಸ್ಸು ತಲುಪುವವರೆಗೆ ಮಾಡಿದ ಸಾಧನೆ ಕಡಿಮೆ ಏನಲ್ಲ. ಪ್ರಸ್ತುತ ಅವಳು ವಾಸಿಸುತ್ತಿರುವ ಮಹೀಂದ್ರ ವರ್ಲ್ಡ್ ಸಿಟಿಯಲ್ಲಿ ಸಾವಿರಾರು ಸಸಿಗಳು ನೆಟ್ಟಿದ್ದಾಳೆ. ಇದರ ಜೊತೆಗೆ ಹಲವು ಮಿನಿ ಅರಣ್ಯಗಳನ್ನು ಸೃಷ್ಟಿಸಿದ್ದಾಳೆ. ಹೌದು, ಪ್ರಸಿದ್ಧಿ ಈವರೆಗೆ ಸರಿಸುಮಾರು 28,500 ಹಣ್ಣಿನ ಸಸ್ಯಗಳ ನೆಡುವಿಕೆ ಹಾಗೂ 20 ಮಿನಿ ಅರಣ್ಯಗಳ ಸೃಷ್ಟಿ ಮಾಡಿ ಅವುಗಳ ಪಾಲನೆ-ಪೋಷಣೆ ಮಾಡುತ್ತಿದ್ದಾಳೆ.

ಇದನ್ನೂ ಓದಿ: PM Rashtriya Bal Puraskar : ಬೆಂಗಳೂರಿಗೆ ಮತ್ತೊಂದು ಹೆಮ್ಮೆಯ ಗರಿ.. ಪ್ರಧಾನ ಮಂತ್ರಿ ಬಾಲಪುರಸ್ಕಾರಕ್ಕೆ ಭಾಜನರಾದ ಇಬ್ಬರು ವಿದ್ಯಾರ್ಥಿಗಳು..

ಒಂದು ಲಕ್ಷ ಗಿಡ ನೆಡುವ ಗುರಿ:

ಪರಿಸರ ಪ್ರೇಮಿ ಪ್ರಸಿದ್ಧಿ 2022ರ ಮುಕ್ತಾಯದ ವೇಳೆಗೆ  ಒಂದು ಲಕ್ಷ ಸಸ್ಯಗಳನ್ನು ನೆಡುವ ಗುರಿ ಹೊಂದಿದ್ದಾಳೆ. ಅದಕ್ಕಾಗಿ ಅವಳಿಗೆ ಇತರೆ ಪರಿಸರ ಪ್ರೇಮಿಗಳ ಸಹಕಾರವೂ ಸಿಗುತ್ತಿದೆ. ಇಷ್ಟೆ ಅಲ್ಲದೇ ಪ್ರಸಿದ್ಧಿಯು ತನ್ನದೆ ಹೆಸರಿನಲ್ಲಿ ಫೌಂಡೇಶನ್  ಸಹ ನಡೆಸುತ್ತಿದ್ದು, ಈ ಫೌಂಡೇಶನ್ ಮೂಲಕ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು  ಹಾಗೂ ಗಿಡ-ಮರಗಳ ಸಂರಕ್ಷಣ ಮತ್ತು ಅದರಿಂದಾಗುವ ಪ್ರಯೋಜನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಬಾಲಕಿ ಪ್ರಸಿದ್ಧಿ ತೊಡಗಿಕೊಂಡಿದ್ದಾಳೆ.

ಇನ್ನು, ಇವಳ ಈ ಸಾಧನೆಗೆ 2021ರಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನೂ ಪಡೆದುಕೊಂಡಿದ್ದಾಳೆ. ಪ್ರಸಿದ್ಧಿಯ ಈ ಪರಿಸರದ ಮೇಲಿನ ಪ್ರೀತಿ, ಕಾಳಜಿ ಇಂದಿನ ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.
Published by:shrikrishna bhat
First published: