ಬಾಲ್ಯದಲ್ಲಿ ಕಂಡ ಕನಸನ್ನು 88ನೇ ವಯಸ್ಸಿನಲ್ಲಿ ನನಸಾಗಿಸಿದ ರೈತ

news18
Updated:July 17, 2018, 10:40 PM IST
ಬಾಲ್ಯದಲ್ಲಿ ಕಂಡ ಕನಸನ್ನು 88ನೇ ವಯಸ್ಸಿನಲ್ಲಿ ನನಸಾಗಿಸಿದ ರೈತ
news18
Updated: July 17, 2018, 10:40 PM IST
-ನ್ಯೂಸ್ 18 ಕನ್ನಡ

ಬಾಲ್ಯದಲ್ಲಿ ನಮ್ಮನ್ನು ಅನೇಕ ವಿಷಯಗಳು ಆಕರ್ಷಿಸಿರುತ್ತದೆ. ಅವುಗಳನ್ನು ಪಡೆಯುವುದೇ ಮುಂದಿನ ಕನಸೆಂದು ಭಾವಿಸಿರುತ್ತೇವೆ. ಹಾಗೆಯೇ ಕಾಲಕ್ಕನುಗುಣವಾಗಿ ಅಂತಹ ಕನಸಿನ ಜಾಗದಲ್ಲಿ ಇನ್ಯಾವುದೊ ಹೊಸ ಕನಸುಗಳು ಆವರಿಸಿಕೊಳ್ಳುತ್ತವೆ.

ಆದರೆ ಬಾಲ್ಯದಲ್ಲಿ ಕಂಡಂತಹ ಕನಸೊಂದನ್ನು ತಮಿಳುನಾಡಿನ ರೈತರೊಬ್ಬರು ನನಸು ಮಾಡಿ ಸುದ್ದಿಯಾಗಿದ್ದಾರೆ ​. ಎಲ್ಲರಂತೆ ಎಳೆ ವಯಸ್ಸಿನಲ್ಲಿ ಮರ್ಸಿಡಿಸ್ ಬೆಂಝ್ ಖರೀದಿಸಬೇಕೆಂದು ದೇವರಾಜನ್ ಬಯಸಿದ್ದರು. ಹಾಗೆಯೇ ಜೀವನದುದ್ದಕ್ಕೂ ಬೆಂಝ್ ಕಾರು ಕೊಂಡುಕೊಳ್ಳುವ ಇಚ್ಛೆಯೊಂದಿಗೆ ಅವರು ಬದುಕಿದ್ದರು. ಆದರೆ ತಾವು ಕಂಡ ಕನಸಿಗೆ ವರ್ಷಗಳು ಉರುಳಿದರೂ ದೇವರಾಜನ್ ಸೋಲೊಪ್ಪಿರಲಿಲ್ಲ.

ಇವರ ಕನಸಿನ ಛಲಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಎಳೆ ವಯಸ್ಸಿನಲ್ಲಿ ಕಂಡಂತಹ ಕನಸನ್ನು ದೇವರಾಜನ್ ಇಳಿ ವಯಸ್ಸಿನಲ್ಲಿ ಈಡೇರಿಸಿಕೊಂಡಿದ್ದಾರೆ. ಈ ಮೂಲಕ ಕನಸು ಕಾಣಬೇಕು...ಕಂಡರೆ ಅದನ್ನು ಎಷ್ಟೇ ಕಷ್ಟಪಟ್ಟಾದರೂ ಪಡೆಯಬೇಕೆಂದು ಸಾರಿ ಹೇಳಿದ್ದಾರೆ.

8 ನೇ ವಯಸ್ಸಿನ ಕನಸಿಗೆ 80 ವರ್ಷ 

ತಮಿಳುನಾಡು ಮೂಲದ ದೇವರಾಜನ್ ಕೆಲ ದಿನಗಳ ಹಿಂದೆ 33 ಲಕ್ಷ.ರೂ ಮೊತ್ತದ Mercedes-Benz B-Class ಕಾರು ಖರೀದಿಸಿದ್ದಾರೆ. ಕಾರು ಖರೀದಿಸಿದ್ದಾರೆ ಅನ್ನುವುದಕ್ಕಿಂತ ತಮ್ಮ ಕನಸನ್ನು ಪೂರೈಸಿಕೊಂಡಿದ್ದಾರೆ.

80 ವರ್ಷಗಳ ಹಿಂದೆ ಆಟವಾಡುತ್ತಿದ್ದಾಗ ರಸ್ತೆಯಲ್ಲಿ ಧೂಳೆಬ್ಭಿಸುತ್ತಾ ಚಲಿಸುತ್ತಿದ್ದ ಬೆಂಝ್​ ಕಾರೊಂದು ದೇವರಾಜನ್ ಕಣ್ಣಿಗೆ ಬಿದ್ದಿತ್ತು. ಮೊದಲ ನೋಟಕ್ಕೆ ಕಾರಿನ ವಿನ್ಯಾಸಕ್ಕೆ ಅವರು ಮನಸೋತಿದ್ದರು.
Loading...

ಅಂದೇ ದೇವರಾಜನ್ ಅವರಿಗೆ ಇಂತಹದೊಂದು ಕಾರು ಖರೀದಿಸಬೇಕೆಂದು ಕನಸು ಹುಟ್ಟಿಕೊಂಡಿದೆ. ಕಾರಿನ ಹೆಸರು ತಿಳಿಯದಿದ್ದರೂ ದೇವರಾಜನ್ ಕಾರಿನ ಲೋಗೊವನ್ನು ನೆನಪಿಟ್ಟುಕೊಂಡಿದ್ದಾರೆ. ಮೂಲತಃ ರೈತರಾಗಿದ್ದ ದೇವರಾಜ್ ಕುಟುಂಬವಂತು ಆ ಕಾರು ಖರೀದಿಸುವ ಸ್ಥಿತಿಯಲ್ಲಿರಲಿಲ್ಲ.

ಆದರೆ ತಮ್ಮ ಕನಸನ್ನು ಕೈ ಬಿಡುವ ಆಲೋಚನೆ ಮಾತ್ರ ದೇವರಾಜನ್​ ಅವರಿಗೆ ಇರಲಿಲ್ಲ . ಅಂದಿನಿಂದ ಕನಸಿನ ಕಾರಿಗಾಗಿ ಕಠಿಣ ಪರಿಶ್ರಮ ವಹಿಸಿದ್ದಾರೆ. ಈ ನಡುವೆ ದೇವರಾಜನ್ ಅವರು ದುಡಿಮೆ, ಉಳಿತಾಯದೊಂದಿಗೆ ​ 80 ವರ್ಷಗಳನ್ನು ದೂಡಿದ್ದಾರೆ. ಕೊನೆಗೂ 8 ವಯಸ್ಸಿನಲ್ಲಿ ಕಂಡ ಕಾರಿನ ಕಂಪನಿಯ ವಾಹನವನ್ನು 88 ವರ್ಷದಲ್ಲಿ ಖರೀದಿಸುವ ಮೂಲಕ ತಮ್ಮ ಕನಸನ್ನು ಸಕಾರಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೀಡಿಯೋ ವೈರಲ್

ದೇವರಾಜನ್ ಅವರು  ತಮ್ಮ ಬಾಲ್ಯದ ಕನಸನ್ನು ಈಡೇರಿಸಿಕೊಳ್ಳುವ ವೀಡಿಯೋವನ್ನು Mercedes-Benz ಕಾರು ವಿತರಕ ಕಂಪನಿ ಶೇರ್ ಮಾಡಿದ್ದಾರೆ. ತಮ್ಮ ಕನಸಿನ ಕಾರನ್ನು ಖರೀದಿಸಲು ಪತ್ನಿ ನೀಡಿದ ಸಂಪೂರ್ಣ ಬೆಂಬಲವನ್ನು ದೇವರಾಜನ್ ಈ ವೇಳೆ ಸ್ಮರಿಸಿಕೊಂಡರು.

ದೇವರಾಜನ್​ ಸ್ಟೋರಿ ತಿಳಿದಿದ್ದ ಕಾರು ವಿತರಕ ಕಂಪನಿ, ವಿಶೇಷ ಕೇಕ್ ಒಂದನ್ನು ತರಿಸಿ ಅವರಿಂದ ಕಟ್​ ಮಾಡಿಸುವ ಮೂಲಕ ಕನಸಿನ ಕಾರಿನ ಖುಷಿಯನ್ನು ಡಬಲ್ ಮಾಡಿದ್ದಾರೆ. ಅಲ್ಲದೆ ದೀರ್ಘಕಾಲದ ಕನಸಿಗೆ ಸಾಥ್ ನೀಡಿದ ಕಂಪನಿಗೆ ದೇವರಾಜನ್ ಧನ್ಯವಾದ ತಿಳಿಸಿದರು. ಈ ಶುಭ ಘಳಿಗೆಯನ್ನು ವೀಡಿಯೋ ಮೂಲಕ Mercedes-Benz ವಿತರಕ ಕಂಪನಿ ಸಾಮಾಜಿಕ ತಾಣದಲ್ಲಿ ಹರಿ ಬಿಟ್ಟು, ಇತರರ ಬಾಲ್ಯದ ಕನಸುಗಳನ್ನು ಮೆಲುಕು ಹಾಕುವಂತೆ ಮಾಡಿದ್ದಾರೆ.

8ನೇ ವಯಸ್ಸಿನಲ್ಲಿ ಕಂಡ ಕಾರಿನ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ದೇವರಾಜನ್​ ಅವರಂತು ಯಶಸ್ವಿಯಾಗಿದ್ದಾರೆ. ಹಾಗೆಯೇ ಬಾಲ್ಯದಲ್ಲಿ ನಾವು ಕಂಡಂತಹ ಕನಸನ್ನೊಮ್ಮೆ  ಪುನರಾವರ್ತನೆ ಮಾಡಿಕೊಳ್ಳಬೇಕಿದೆ ಅಲ್ಲವೇ...
First published:July 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ