• Home
  • »
  • News
  • »
  • trend
  • »
  • Arshabh Behera: ಫಾರೆವರ್ ಸ್ಟಾರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​​ನಲ್ಲಿ ಹೆಸರು ದಾಖಲಿಸಿದ 7 ವರ್ಷದ ಬಾಲಕ

Arshabh Behera: ಫಾರೆವರ್ ಸ್ಟಾರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​​ನಲ್ಲಿ ಹೆಸರು ದಾಖಲಿಸಿದ 7 ವರ್ಷದ ಬಾಲಕ

ಅರ್ಷಭ್ ಬೆಹೆರಾ

ಅರ್ಷಭ್ ಬೆಹೆರಾ

ಬೆಳವಣಿಗೆಯ ವಿಳಂಬದಿಂದಾಗಿ ತೀವ್ರವಾದ ಸಂವಹನ ಸಮಸ್ಯೆಯ ಹೊಂದಿದ್ದ ಈ ಪುಟ್ಟ ಮಗು ಎಷ್ಟು ದೊಡ್ಡ ಸಾಧನೆ ಮಾಡಿದೆ ನೋಡಿ.

  • News18 Kannada
  • Last Updated :
  • New Delhi, India
  • Share this:

ಕೆಲವು ಮಕ್ಕಳು ಬೇಗ ಬೇಗ ತೊದಲು ಮಾತುಗಳನ್ನಾಡುತ್ತಾ ಕ್ರಮೇಣ ಪರಿಣಾಮಕಾರಿ ಸಂವಹನವನ್ನು (Communication)  ನಡೆಸುತ್ತಾರೆ. ಆದರೆ ಕೆಲ ಮಕ್ಕಳಿಗೆ ತಡವಾಗಿ ಮಾತನಾಡಲು ಬರುತ್ತದೆ. ಇಂತಹ ಮಕ್ಕಳನ್ನು ಕೆಲ ಸಂದರ್ಭದಲ್ಲಿ ಕೀಳಾಗಿ ಕಾಣುವ ಪ್ರಸಂಗವನ್ನು ಕೂಡ ನೋಡುತ್ತೇವೆ. ಕೋಲ್ಕತ್ತಾದ ನ್ಯೂಟೌನ್‌ನ ಇಂಟರ್‌ನ್ಯಾಶನಲ್ ಸ್ಕೂಲ್‌ನ (International School) ಆರ್ಕಿಡ್ಸ್‌ನ ಏಳು ವರ್ಷದ ಅರ್ಷಭ್ ಬೆಹೆರಾ ಜೀವನದಲ್ಲೂ ಕೂಡ ಇಂತದ್ದೇ ಘಟನೆಗಳು ನಡೆದಿದ್ದವು. ಬೆಳವಣಿಗೆಯ ವಿಳಂಬದಿಂದಾಗಿ ತೀವ್ರವಾದ ಸಂವಹನ ಸಮಸ್ಯೆಯನ್ನು (Problem) ಎದುರಿಸುತ್ತಿದ್ದ ಅರ್ಷಭ್ (Arshabh) ಹಲವಾರು ಬಾರಿ ತಿರಸ್ಕಾರಕ್ಕೆ ಒಳಗಾಗಿದ್ದನು.


ʼಫಾರೆವರ್ ಸ್ಟಾರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಅರ್ಷಭ್ ಹೆಸರು


ಸ್ಪಷ್ಟವಾದ ಸಂವಹನ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಹೊಂದಿಲ್ಲದ ಕಾರಣ ಹಲವಾರು ಶಾಲೆಗಳು ಅರ್ಷಭ್‌ನನ್ನು ಕೀಳಾಗಿ ನೋಡುತ್ತಿದ್ದವು. ನಿರಂತರ ನಿರಾಕರಣೆಯು ಚಿಕ್ಕ ಮನಸ್ಸಿನಲ್ಲಿ ಪರಿಣಾಮ ಬೀರಿತ್ತು. ಆದಾಗ್ಯೂ, ಪೋಷಕರು ಮತ್ತು ಶಿಕ್ಷಕರ ಬೆಂಬಲದೊಂದಿಗೆ ಮಗು ಎಲ್ಲರನ್ನೂ ಬೆರಗುಗೊಳಿಸುವ ಸಾಧನೆಯನ್ನು ಮಾಡಿದ್ದಾನೆ. 230 ದೇಶಗಳ ಧ್ವಜಗಳನ್ನು 8 ನಿಮಿಷಗಳಲ್ಲಿ ಗುರುತಿಸುವ ಮೂಲಕ ವಿಶ್ವದಾಖಲೆ ಮಾಡಿದ್ದು, ‘ಫಾರೆವರ್ ಸ್ಟಾರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಅರ್ಷಭ್ ಸ್ಥಾನ ಗಳಿಸಿದ್ದಾನೆ.


ಮಗನ ಬಗ್ಗೆ ತಾಯಿಯ ಮೆಚ್ಚುಗೆಯ ಮಾತುಗಳು


“ಅರ್ಷಭ್ ಕೇವಲ 5 ವರ್ಷದವನಾಗಿದ್ದಾಗ ಯೂಟ್ಯೂಬ್‌ನಲ್ಲಿ ವಿವಿಧ ದೇಶಗಳ ಹೆಸರುಗಳು ಮತ್ತು ಧ್ವಜಗಳ ಬಗ್ಗೆ ವೀಡಿಯೊಗಳನ್ನು ವೀಕ್ಷಿಸಲು ಪ್ರಾರಂಭಿಸಿದಾಗ, ಆತನಿಗೆ ಇದರಲ್ಲಿ ಆಸಕ್ತಿ ಇದೆ ಎಂದು ನಮಗೆ ತಿಳಿಯಿತು.


ಈಗ ಅರ್ಷಭ್‌ 230ಕ್ಕೂ ಹೆಚ್ಚು ದೇಶಗಳ ಧ್ವಜಗಳನ್ನು ಗುರುತಿಸುತ್ತಾನೆ. ಅರ್ಷಭ್ ಸಂವಹನ ಸಮಸ್ಯೆಗಳನ್ನು ಹೊಂದಿದ್ದಾನೆ ಮತ್ತು ಅವನಿಗೆ ಸಾಮಾಜಿಕ ಕೌಶಲ್ಯಗಳ ಕೊರತೆಯಿದೆ. ಜನರೊಂದಿಗೆ ಮಾತನಾಡಲು, ಬೆರೆಯಲು ಸಮಯ ತೆಗೆದುಕೊಳ್ಳುತ್ತಾನೆ.


ಎಲ್ಲಾ ಶಾಲೆಗಳು ನನ್ನ ಮಗನನ್ನು ನಿರಾಕರಿಸಿದರೂ ಕೂಡ ಆರ್ಕಿಡ್‌ ಶಾಲೆ ಅವನಿಗೆ ವಿಶ್ವಾಸ ತುಂಬುವ ಕೆಲಸ ಮಾಡಿತು ಮತ್ತು ನನ್ನ ಮಗನ ಪ್ರತಿಭೆಯನ್ನು ಹೊರಹಾಕಲು ಸಹಾಯ ಮಾಡಿದರು" ಎಂದು ಅರ್ಷಭ್ ತಾಯಿ ಶ್ರೀಮತಿ ಸ್ಮೃತಿ ರೇಖಾ ಬೆಹೆರಾ ಹೇಳಿದರು.


ಇತರೆ ಪ್ರಶಸ್ತಿಗಳಿಗೂ ಭಾಜನ


ಅರ್ಷಭ್‌ಗೆ ಇದು ಮೊದಲನೆಯ ಸಾಧನೆಯಲ್ಲ, ಈ ಹಿಂದೆ ಕೂಡ ಅನೇಕ 'ಐಕಾನಿಕ್ ಸ್ಟಾರ್ ನ್ಯಾಷನಲ್ ಲೆವೆಲ್ ಟ್ಯಾಲೆಂಟ್ ಸರ್ಚ್ ಈವೆಂಟ್', 'ಇನ್ಸ್ಪೈರಿಂಗ್ ಟ್ಯಾಲೆಂಟ್ ಅವಾರ್ಡ್ಸ್', ಎಂಬ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾನೆ.


ಅರ್ಷಭ್‌ಗಿರುವ ಉತ್ಸಾಹ, ಆಸಕ್ತಿ ಶ್ಲಾಘನೀಯ


ತರಗತಿ ಶಿಕ್ಷಕಿ ಶ್ರೀಮತಿ ಸೋನಿಯಾ ಪಾಲ್, ಅರ್ಷಭ್ ಪ್ರತಿಭೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಮಾತನಾಡುವಲ್ಲಿ ನಿರರ್ಗಳವಾಗಿರದಿದ್ದರೂ, ಆತನ ಉತ್ಸಾಹವು ಶ್ಲಾಘನೆಗೆ ಅರ್ಹವಾಗಿದೆ. ಅವನ ಪೋಷಕರು ಮತ್ತು ಶಿಕ್ಷಕರು ಸಹ ಶಾಲೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತಾರೆ.


ಅವನ ಬೆಳವಣಿಗೆಯನ್ನು ನೋಡಿ ನಮಗೆ ಖುಷಿಯಾಗುತ್ತಿದೆ. ತಮ್ಮ ಸಂವಹನ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಮಯ ತೆಗೆದುಕೊಳ್ಳುವ ಮಕ್ಕಳು ಫಲಪ್ರದ ಜೀವನವನ್ನು ನಡೆಸಲು ಸಮಾನವಾಗಿ ಸಮರ್ಥರಾಗಿದ್ದಾರೆ ಎಂಬುದನ್ನು ಅರ್ಷಭ್ ಅವರ ಸಾಧನೆಗಳು ಸಾಬೀತುಪಡಿಸಿವೆ. ಆತನಿಗೆ ಬೇಕಾಗಿರುವುದು ಸ್ವಲ್ಪ ಸಮಯ ಮತ್ತು ತಾಳ್ಮೆ. ಅವನಿಗೆ ಎಲ್ಲದಕ್ಕೂ ಪ್ರೋತ್ಸಾಹಿಸಿದರೆ, ಆತ ಇನ್ನೂ ಉತ್ತಮ ಸಾಧನೆ ಮಾಡುತ್ತಾನೆ ಎಂದರು.


ಇದನ್ನೂ ಓದಿ: 32 ವರ್ಷಗಳಿಂದ ಪಂಜರದಲ್ಲಿ ಬಂಧಿಯಾದ ಗೊರಿಲ್ಲ! ಬಿಡುಗಡೆ ಮಾಡಲು 6 ಕೋಟಿ ಕೇಳಿದ ಮಾಲಿಕ


“ಅರ್ಷಭ್‌ನಂತಹ ಮಕ್ಕಳನ್ನು ಎಚ್ಚರಿಕೆಯಿಂದ ಮತ್ತು ತಾಳ್ಮೆಯಿಂದ ನಿರ್ವಹಿಸಬೇಕು. ನಮ್ಮ ಮಗನ ಒಟ್ಟಾರೆ ಬೆಳವಣಿಗೆಗೆ ಬಂದಾಗ ನನ್ನ ಪತಿ ಮತ್ತು ನಾನು ತುಂಬಾ ತಾಳ್ಮೆಯಿಂದಿರುತ್ತೇವೆ. ಅವನಿಗೆ ಹೆಚ್ಚು ಸಮಯ ಬೇಕು, ಹೀಗಾಗಿ ನಮ್ಮ ಹೆಚ್ಚಿನ ಸಮಯವನ್ನು ಆತನಿಗೆ ಮೀಸಲಿಡುತ್ತೇನೆ" ಎನ್ನುತ್ತಾರೆ ಅರ್ಷಭ್‌ ತಾಯಿ


ಅರ್ಷಭ್‌ನ ಇತರೆ ಆಸಕ್ತಿಗಳು


ಅರ್ಷಭ್‌ಗೆ ಇನ್ನೂ ಯಾವ ವಿಷಯದಲ್ಲಿ ಆಸಕ್ತಿ ಎಂದು ಕೇಳಿದಾಗ ಆ ಬಾಲಕ “ಧ್ವಜಗಳ ಹೊರತಾಗಿ, ನಾನು ಒಗಟುಗಳು ಮತ್ತು ಗಣಿತದ ಸಮಸ್ಯೆಗಳನ್ನು ಪರಿಹರಿಸಲು ಆಸಕ್ತಿ ಹೊಂದಿದ್ದೇನೆ. ಆದಾಗ್ಯೂ, ವಿವಿಧ ಭಾಷೆಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು ನನ್ನ ಆಸಕ್ತಿಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ; ನನಗೆ ರಷ್ಯನ್, ಗ್ರೀಕ್ ಮತ್ತು ಸ್ಪ್ಯಾನಿಷ್ ವರ್ಣಮಾಲೆಗಳು ತಿಳಿದಿದೆ ಮತ್ತು ಪ್ರಸ್ತುತ ನಾನು ಜಪಾನೀಸ್ ವರ್ಣಮಾಲೆಯನ್ನೂ ಕಲಿಯುತ್ತಿದ್ದೇನೆ" ಎಂದು ತಿಳಿಸಿದನು.


ಸಂವಹನ ತೊಂದರೆಗಳು ಒಬ್ಬರ ಭಾವನೆಗಳನ್ನು ವ್ಯಕ್ತಪಡಿಸುವುದರಿಂದ ಅಥವಾ ದಿನನಿತ್ಯದ ದೈನಂದಿನ ಕೆಲಸಗಳನ್ನು ನಿರ್ವಹಿಸುವುದರಿಂದ ಹಿಡಿದು ಜೀವನದ ವಿವಿಧ ಅಂಶಗಳನ್ನು ನಿಭಾಯಿಸುವ ವ್ಯಕ್ತಿಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಆದಾಗ್ಯೂ, ಆತ್ಮ ವಿಶ್ವಾಸದಿಂದ ಒಬ್ಬರು ತಮ್ಮ ಹಿಂಜರಿಕೆ, ಭಯವನ್ನು ಜಯಿಸಲು ಸಾಧ್ಯವಾಗುತ್ತದೆ.


"ಈ ಗೆಲುವಿನೊಂದಿಗೆ, ನಾನು ಹೆಚ್ಚು ಆತ್ಮವಿಶ್ವಾಸ ಹೊಂದುತ್ತಿದ್ದೇನೆ ಮತ್ತು ಈಗ ನನ್ನ ಬಿಡುವಿನ ವೇಳೆಯಲ್ಲಿ ನಾನು ಒಗಟುಗಳನ್ನು ಪರಿಹರಿಸುವುದನ್ನು ಮತ್ತು ಪದಬಂಧದಂತಹ ಆಟಗಳನ್ನು ಆಡುತ್ತಿದ್ದೇನೆ." ಎನ್ನುತ್ತಾನೆ ಅರ್ಷಭ್.


"ನನ್ನ ತಾಯಿಯೇ ನನಗೆ ಸ್ಪೂರ್ತಿ"


ನಿನಗೆ ಸ್ಪೂರ್ತಿ ಯಾರು ಎಂಬ ಪ್ರಶ್ನೆಗೆ ಅರ್ಷಭ್‌ “ನನಗೆ ನನ್ನ ತಾಯಿಯೇ ದೊಡ್ಡ ಸ್ಫೂರ್ತಿ. ನನ್ನ ಕಷ್ಟದ ಸಮಯದಲ್ಲಿಯೂ ನನ್ನನ್ನು ನಗುವಂತೆ ಮಾಡುತ್ತಾರೆ. ಅಲ್ಲದೆ, ಪ್ರತಿದಿನ ನನ್ನ ತಂದೆಯನ್ನು ಗಮನಿಸುವುದು ನನಗೆ ಪ್ರತಿದಿನ ತಾಳ್ಮೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ" ಎಂದು ಪುಟ್ಟ ಬಾಯಲ್ಲಿ ದೊಡ್ಡ ಮಾತುಗಳನ್ನಾಡುತ್ತಾನೆ ಅರ್ಷಭ್.


ಇದನ್ನೂ ಓದಿ: ಮಿಸ್ ಯೂನಿವರ್ಸ್ ಸ್ಪರ್ಧೆಯನ್ನು $20 ಮಿಲಿಯನ್‌ಗೆ ಖರೀದಿಸಿದ ಥಾಯ್ಲೆಂಡ್‌ನ ಟ್ರಾನ್ಸ್‌ಜೆಂಡರ್ ಉದ್ಯಮಿ


‌ಯಾವುದೇ ಮಕ್ಕಳಾಗಿರಲಿ ಕಲಿಕೆಗೆ ಅವರಿಗಿನ್ನೂ ಚಿಕ್ಕ ವಯಸ್ಸು ಎನ್ನುವ ತಪ್ಪು ಕಲ್ಪನೆಯನ್ನು ಎಲ್ಲಾ ಪೋಷಕರು ಬಿಡಬೇಕು. ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಎಲ್ಲವನ್ನೂ ಕಲಿಯುವ, ಗ್ರಹಿಸುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದರೆ ಅವರಿಗೆ ಸಮಯ, ಪ್ರೀತಿ, ಪ್ರೋತ್ಸಾಹದ ಹೆಚ್ಚಿನ ಅಗತ್ಯವಿರುತ್ತದೆ, ಪೋಷಕರು ಈ ನಿಟ್ಟಿನಲ್ಲಿ ತಮ್ಮನ್ನು ಮಕ್ಕಳ ಜೊತೆ ತೊಡಗಿಸಿಕೊಳ್ಳಬೇಕು.

First published: