Bear Attack: ಕರಡಿ ಇವನ ಮುಖಕ್ಕೆ ಪರಚಿ ಹೋಯ್ತು, 300 ಹೊಲಿಗೆ, 4 ಗಂಟೆ ಶಸ್ತ್ರಚಿಕಿತ್ಸೆ ಬಳಿಕ ಕೊನೆಗೂ ಬದುಕುಳಿದ ವ್ಯಕ್ತಿ!

ವ್ಯಕ್ತಿಯ ಮೂಗು ಸಾಕಷ್ಟು ಹಾನಿಗೆ ಒಳಗಾಗಿದ್ದರಿಂದ ಇದನ್ನು ಸರಿಪಡಿಸುವುದು ಸವಾಲಾಗಿತ್ತಲ್ಲದೆ ಆ ವ್ಯಕ್ತಿ ಈ ಚಿಕಿತ್ಸೆ ನಡೆಯುವವರೆಗೂ ಪ್ರಜ್ಞಾಹೀನ ಸ್ಥಿತಿಯಲ್ಲೇ ಇರಬೇಕಾಗಿದ್ದುದು ಮುಖ್ಯವಾಗಿತ್ತು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಒಮ್ಮೊಮ್ಮೆ ಪ್ರಾಣಿಗಳ ಆಕ್ರಮಣ(Animal Attack) ಮನುಷ್ಯರಿಗೆ ಬಲು ದೊಡ್ಡ ಬೆಲೆ ತೆರಬೇಕಾದ ಪರಿಸ್ಥಿತಿಯನ್ನು ತಂದೊಡ್ಡುತ್ತವೆ. ಅಂತಹ ಒಂದು ಘಟನೆ ಗುಜರಾತ್‌ನ (Gujarat) ವಡೋದರಾದಿಂದ (Vadodara) ವರದಿಯಾಗಿದೆ. ಕರಡಿಯಿಂದ(Bear) ಆಕ್ರಮಣಕ್ಕೊಳಗಾಗಿದ್ದ ವ್ಯಕ್ತಿಯೊಬ್ಬನ ಮುಖವು ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು. ಇಲ್ಲಿನ ಎಸ್.ಎಸ್.ಜಿ ಸರ್ಕಾರಿ ಆಸ್ಪತ್ರೆಯೊಂದರಲ್ಲಿ(SSG Government Hospital) ಶಸ್ತ್ರಚಿಕಿತ್ಸೆ ನಡೆಸಿದ ಪ್ಲಾಸ್ಟಿಕ್ ತಜ್ಞ ವೈದ್ಯರು ಮತ್ತೆ ಆ ವ್ಯಕ್ತಿಯ ಮುಖವನ್ನು ಮೊದಲಿನ ಸ್ಥಿತಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಕರಡಿ ಹಠಾತ್ತನೆ ದಾಳಿ
ಹಾಗೆ ನೋಡಿದರೆ, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಗಳು ಬಲು ದುಬಾರಿ. ಆದರೆ ವಡೋದರಾದ ಸರ್ಕಾರಿ ಆಸ್ಪತ್ರೆಯಲ್ಲಿ ಈ ವ್ಯಕ್ತಿಯ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗಿರುವುದು ವಿಶೇಷ. ಛೋಟಾ ಉಧೇಪುರಿನ ಅಂಬಾಪುರ್ ಎಂಬ ಗ್ರಾಮದ ನಿವಾಸಿಯಾಗಿರುವ 26 ವರ್ಷದ ಧರ್ಮೇಶ್ ರತ್ವಾ ಎಂಬ ಯುವಕ ಜನವರಿ ಒಂದರಂದು ಜಮೀನೊಂದರಲ್ಲಿ ನೈಸರ್ಗಿಕ ಕರೆ ತೀರಿಸಿಕೊಳ್ಳಲು ಹೋಗಿದ್ದ ಸಂದರ್ಭದಲ್ಲಿ ಕರಡಿಯೊಂದು ಹಠಾತ್ತನೆ ಅವನ ಮೇಲೆ ದಾಳಿ ಮಾಡಿ ಮುಖದ ಮೇಲೆ ತೀವ್ರ ಗಾಯಗಳನ್ನು ಮಾಡಿತ್ತು.

ತೀವ್ರವಾಗಿ ಗಾಯಗೊಂಡಿದ್ದ ಧರ್ಮೆಶ್‌ನನ್ನು ತಕ್ಷಣ ವಡೋದರಾದ ಎಸ್.ಎಸ್.ಜಿ ಆಸ್ಪತ್ರೆಗೆ ಚಿಕಿತ್ಸೆಗೆಂದು ತರಲಾಗಿತ್ತು. ಕರಡಿಯ ಆಕ್ರಮಣದಿಂದಾಗಿ ಧರ್ಮೇಶನ ಮುಖದ ಮೂಗು, ಬಾಯಿ ಹಾಗೂ ತುಟಿಗಳು, ಕಣ್ಣುಗಳು, ಗದ್ದ ಹಾಗೂ ಗಲ್ಲಗಳು ತೀವ್ರವಾದ ಹಾನಿಗೊಳಗಾಗಿದ್ದವು.

ಇದನ್ನೂ ಓದಿ: Viral Video: ನೆಟ್ಟಿಗರನ್ನು ಒಂದು ಕ್ಷಣ ದಿಗ್ಭ್ರಮೆಗೊಳಿಸಿದ ಕರಡಿ ವಿಡಿಯೋ

ಸಿ.ಟಿ ಸ್ಕ್ಯಾನ್ ಮೂಲಕ ಯೋಜನೆ
ಈ ಘಟನೆಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಿರುವ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕ ಹಾಗೂ ವೈದ್ಯರಾದ ಡಾ. ಶೈಲೇಶ್ ಕುಮಾರ್ ಸೋನಿ "ಮೊದಲಿಗೆ ಸಂತ್ರಸ್ತನನ್ನು ಆಸ್ಪತ್ರೆಗೆ ಕರೆತಂದಾಗ ಅವನ ಮುಖದ ತುಂಬೆಲ್ಲ ಬರಿ ಎಲೆಗಳು, ಮಣ್ಣು, ಕಲ್ಲುಗಳು, ಕಸಕಡ್ಡಿಗಳು ತುಂಬಿದ್ದವು. ನಾವು ಮೊದಲಿಗೆ ಸೋಂಕು ಹರಡದಂತೆ ಕೆಲವು ಇಂಜೆಕ್ಷನ್‌ಗಳನ್ನು ನೀಡಬೇಕಾಯಿತು, ಸಿ.ಟಿ ಸ್ಕ್ಯಾನ್ ಮಾಡಿ ಮುಖವನ್ನು ಹೇಗೆ ಸರಿಪಡಿಸಬಹುದೆಂಬುದರ ಬಗ್ಗೆ ಯೋಜಿಸಲಾಯಿತು" ಎಂದು ಹೇಳಿದ್ದಾರೆ.

ಡಾ. ಸೋನಿ ತಮ್ಮ ಆಸ್ಪತ್ರೆಯ ರೆಸಿಡೆಂಟ್ ವೈದ್ಯರಾದ ಡಾ. ಭಾಗ್ಯಶ್ರೀ ದೇಶ್ಮಂಕರ್, ಡಾ. ನಳಿನ್ ಪ್ರಜಾಪತಿ, ಡಾ. ಸುದರ್ಶನ್ ಯಾದವ್ ಮತ್ತು ಡಾ. ರಿದ್ಧಿ ಸೋಂಪುರಾ ಅವರನ್ನೊಳಗೊಂಡ ತಂಡ ರಚಿಸಿ ಸುಮಾರು 4 ಗಂಟೆಗಳ ಕಾಲ ದೀರ್ಘ ಆಪರೇಷನ್ ಮಾಡುವ ಮೂಲಕ ವ್ಯಕ್ತಿ ತನ್ನ ಮೊದಲಿನ ರೀತಿಯ ಮುಖ ಹೊಂದುವಂತೆ ಮಾಡಲು ಯಶಸ್ವಿಯಾಗಿದ್ದಾರೆ. ವ್ಯಕ್ತಿಗೆ ಒಟ್ಟು 300 ಹೊಲಿಗೆಗಳನ್ನು ಹಾಕಲಾಗಿದೆ ಎಂದು ತಿಳಿದುಬಂದಿದೆ.

ಅನಸ್ಥೇಶಿಯಾ ತಜ್ಞರ ಬಳಕೆ
ವ್ಯಕ್ತಿಯ ಮೂಗು ಸಾಕಷ್ಟು ಹಾನಿಗೆ ಒಳಗಾಗಿದ್ದರಿಂದ ಇದನ್ನು ಸರಿಪಡಿಸುವುದು ಸವಾಲಾಗಿತ್ತಲ್ಲದೆ ಆ ವ್ಯಕ್ತಿ ಈ ಚಿಕಿತ್ಸೆ ನಡೆಯುವವರೆಗೂ ಪ್ರಜ್ಞಾಹೀನ ಸ್ಥಿತಿಯಲ್ಲೇ ಇರಬೇಕಾಗಿದ್ದುದು ಮುಖ್ಯವಾಗಿತ್ತು. ಅದಕ್ಕಾಗಿ ಅನಸ್ಥೇಶಿಯಾ ತಜ್ಞರಾದ ಡಾ. ಕವಿತಾ ಲಲ್ಚಂದಾನಿ, ಡಾ. ನೇಹಾ ಶಾಹ್ ಹಾಗೂ ಡಾ. ರೀಮಾ ಗೊಮೇತಿ ಅವರು ಆಪರೇಷನ್ ಪೂರ್ಣಗೊಳ್ಳುವವರೆಗೂ ಆಪರೇಷನ್ ಕೋಣೆಯಲ್ಲೇ ಇರಬೇಕಾಗಿತ್ತು. ಇನ್ನು ಹಾನಿಗೊಳಗಾಗಿದ್ದ ಮುಖದ ಭಾಗಗಳ ಬಗ್ಗೆ ಮಾತನಾಡುತ್ತ ಡಾ. ಸೋನಿ "ಸ್ವಲ್ಪ ಮಟ್ಟಿನ ಭಾಗಗಳನ್ನು ನಾವು ಮರುಪಡೆಯಲು ಶಕ್ತರಾದೇವು ಹಾಗೂ ಮಿಕ್ಕಂತೆ ಕೆಲ ಭಾಗಗಳನ್ನು ಟಿಟಾನಿಯಂ ಪ್ಲೇಟುಗಳು ಹಾಗೂ ಮೆಶ್ ಅನ್ನು ಬಳಸಿ ಮತ್ತೆ ಪುನಃ ರಚನೆ ಮಾಡಿದೆವು" ಎಂದು ಹೇಳಿದ್ದಾರೆ. ಇನ್ನು ಮುಖಕ್ಕೆ ಮೃದುವಾದ ಚರ್ಮ ಹಾಗೂ ಟಿಶ್ಯೂ ಒದಗಿಸಲು ವ್ಯಕ್ತಿಯ ಗಂಟಲು ಹಾಗೂ ತಲೆಯ ಚರ್ಮಗಳನ್ನು ಬಳಸಲಾಗಿರುವುದಾಗಿ ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ: Viral Video: ರೂಟ್‌ ಕೆನಾಲ್‌ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಹಿಮಕರಡಿ..! ವಿಡಿಯೋ ನೋಡಿ.

ಮುಖ ರಚನೆ ಸವಾಲು
ವ್ಯಕ್ತಿಯಲ್ಲಿ ವೈದ್ಯರಿಗೆ ಸಮರ್ಪಕವಾದ ಮುಖ ರಚನೆ ಮಾಡಲು ಅನುಕೂಲವಾಗುವಂತೆ ಬೇಕಾಗುವಷ್ಟು ಪ್ರಮಾಣದಲ್ಲಿ ಚರ್ಮ ಹಾಗೂ ಟಿಶ್ಯೂ ದೊರಕಿದ್ದು ಒಂದು ಅದೃಷ್ಟವೇ ಸರಿ ಎಂದು ಅವರು ಹೇಳುವುದನ್ನು ಮರೆಯುವುದಿಲ್ಲ. ಈಗ, ಧರ್ಮೇಶ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು ಕೇವಲ ದ್ರವರೂಪದ ಆಹಾರ ಪಥ್ಯದಲ್ಲಿದ್ದಾರೆ. ಕಣ್ಣುಗಳನ್ನು ಹೊರಳಾಡಿಸಲು ಹಾಗೂ ನಿರಾಯಸವಾಗಿ ಉಸಿರಾಡಲು ಸಮರ್ಥನಾಗಿರುವ ಧರ್ಮೇಶ್ ಕೆಲ ಸಮಯದಲ್ಲಿ ಪೂರ್ತಿಯಾಗಿ ಗುಣಮುಖನಾಗುವ ನಿರೀಕ್ಷೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.
Published by:vanithasanjevani vanithasanjevani
First published: