ಮಧ್ಯ ಮೆಕ್ಸಿಕೋದ ಕೃಷಿ ಭೂಮಿಯೊಂದರಲ್ಲಿ ದೈತ್ಯಗಾತ್ರದ ಗುಂಡಿಯೊಂದು ಅಚಾನಕ್ಕಾಗಿ ಕಾಣಿಸಿಕೊಂಡಿದೆ. ಆರಂಭದಲ್ಲಿ ಕೆಲವೇ ಮೀಟರ್ಗಳ ಗಾತ್ರದಲ್ಲಿದ್ದ ಈ ಗುಂಡಿ ಇನ್ನಷ್ಟು ವಿಸ್ತಾರವಾಗುತ್ತಾ ಹೋಗಿದೆ. ವಾಹ್! ಸಿನಿಮಾಗಳಲ್ಲಿ ಕಾಣ ಸಿಗುವ ಅನ್ಯಗ್ರಹ ಜೀವಿಗಳ ನೌಕೆ ಮೆಕ್ಸಿಕೋಗೆ ಬಂದಿರಬಹುದು, ಅದಕ್ಕೆ ಈ ರೀತಿ ಗುಂಡಿ ಮೂಡಿದೆ ಎಂದು ಖುಷಿಯಿಂದ ಕುಣಿದಾಡಬೇಡಿ. ಅದಕ್ಕೆ ಬೇರೆಯೇ ಕಾರಣವಿದೆ, ಅದೇನೆಂದು ತಿಳಿಯಬೇಕೆಂದರೆ ಮುಂದೆ ಓದಿ.
ಮಧ್ಯ ಮೆಕ್ಸಿಕೋದ ಕೃಷಿ ಭೂಮಿಯಲ್ಲಿ ದೈತ್ಯಾಕಾರದ ಸಿಂಕ್ಹೋಲ್ ಕಾಣಿಸಿಕೊಂಡಿದೆ. ಯಾವುದೋ ಬಾಹ್ಯಾಕಾಶ ನೌಕೆಯ ಘರ್ಷಣೆಯಿಂದ ರೂಪುಗೊಂಡ ಕುಳಿಯಂತೆ ಕಾಣುವ ಈ ಸಿಂಕ್ಹೋಲ್ ಸುತ್ತಮುತ್ತಲಿನ ಮನೆಗಳನ್ನು ಎಲ್ಲಿ ನುಂಗಿ ಹಾಕಿಬಿಡುತ್ತದೋ ಎಂಬ ಭಯ ಆವರಿಸಿಕೊಂಡಿದೆ. ಪೇಯ್ಬ್ಲಾ ರಾಜ್ಯದಲ್ಲಿ ಉಂಟಾಗಿರುವ ಈ ಸಿಂಕ್ಹೋಲ್ ತ್ವರಿತವಾಗಿ ಸುಮಾರು ಮೀಟರ್ ವ್ಯಾಸಕ್ಕೆ ಬೆಳೆದಿದ್ದು, ಇನ್ನೂ ಬೆಳೆಯುತ್ತಲೇ ಇದೆ. ಕಳೆದ ವಾರ ಇದು ಮೊದಲ ಬಾರಿಗೆ ಕಾಣಿಸಿಕೊಂಡಾಗ ಅಲ್ಲಿಗೆ ಭೇಟಿ ನೀಡಿದ ಮೆಕ್ಸಿಕೋದ ಸರ್ಕಾರಿ ಅಧಿಕಾರಿಗಳು, ಈ ರಂಧ್ರ 60 ಅಡಿ ಆಳ ಇರಬಹುದು ಎಂದು ಅಂದಾಜು ಮಾಡಿದ್ದಾರೆ. ಅದರಲ್ಲಿ ಈಗ ಅಂತರ್ಜಲ ತುಂಬಿಕೊಂಡಿದೆ. ಅಧಿಕಾರಿಗಳು ಆ ಕುಳಿಯ ಹತ್ತಿರಕ್ಕೆ ಹೋಗದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
⚠️Un #socavon de al menos 60 metros de diámetro por 15 metros de profundidad, dentro del cual hay agua, se abrió en la comunidad de Zacatepec, municipio de Juan C. Bonilla #Puebla. 🚷
En vecino del lugar captó el momento en que el #Socavón se expande en terrenos de cultivo. pic.twitter.com/5hFON9Rcm0
— Ana Laura Vásquez (@analita_vasquez) June 1, 2021
ಶನಿವಾರ ಇದು ಮೊದಲ ಬಾರಿ ಕಾಣಿಸಿಕೊಂಡಾಗ, ಕೆಲವೇ ಮೀಟರ್ಗಳ ಗಾತ್ರದಲ್ಲಿತ್ತು. ಆದರೆ ಕ್ರಮೇಣ ಬೆಳೆಯುತ್ತಾ ಹೋಗಿ, 70,000 ಚದರ ಅಡಿ ಕೃಷಿ ಭೂಮಿಯನ್ನು ನುಂಗಿ ಹಾಕಿದೆ. ಈವರೆಗೆ ಇದರಿಂದ ಯಾರೂ ಗಾಯಗೊಂಡಿಲ್ಲ, ಸುತ್ತಮುತ್ತಲಿನ ಜನರನ್ನು ಸುರಕ್ಷಿತ ಜಾಗಕ್ಕೆ ಕರೆದೊಯ್ಯಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
“6 ಗಂಟೆಗೆ ನಮಗೆ ಗುಡುಗಿನ ಶಬ್ಧ ಕೇಳಿಸಿತು. ಆಗ ನಾನು ಇದನ್ನು ನಿರೀಕ್ಷಿಸಿರಲಿಲ್ಲ, ಆದರೆ ನನ್ನ ಅತ್ತೆ-ಮಾವನಿಗೆ ಇದರ ಬಗ್ಗೆ ಅರಿವಾಯಿತು. ನಾನು ಸ್ವಲ್ಪ ಹತ್ತಿರಕ್ಕೆ ಹೋಗಿ ನೋಡಿದಾಗ ಭೂಮಿಯಲ್ಲಿ ರಂಧ್ರ ಕಂಡಿತು. ಅದರೊಳಗಿಂದ ನೀರಿನ ಗುಳ್ಳೆಗಳು ಬರುತ್ತಿರುವುದನ್ನು ನೋಡಿ ನಾನು ಭಯಭೀತಳಾದೆ” ಆ ಪ್ರದೇಶದ ನಿವಾಸಿಗಳಲ್ಲಿ ಒಬ್ಬರಾದ ಮ್ಯಾಗ್ಡಲೇನಾ ಸ್ಥಳೀಯ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆಂದು ವರದಿ ತಿಳಿಸಿದೆ.
ತಮ್ಮ ಮನೆ ಹೆಚ್ಚು ಕಾಲ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಿದ್ದಾರೆ, ಇದು ಇಲ್ಲಿನ ನಿವಾಸಿಗಳಿಗೆ ನೋವನ್ನು ಉಂಟುಮಾಡುತ್ತಿದೆ. ಅವರು ಅತ್ಯಂತ ಶ್ರಮ ಮತ್ತು ತ್ಯಾಗದಿಂದ ಈ ಮನೆಗಳನ್ನು ಕಟ್ಟಿದ್ದಾರೆ ಎಂದು ಮ್ಯಾಗ್ಡಲೇನಾ ತಿಳಿಸಿದರು.
ಆ ಕೃಷಿ ಭೂಮಿಯ ಕೆಳಗೆ, ‘ಜಾಗ್ವೇ’ ಎಂದು ಕರೆಯಲ್ಪಡುವ ದೊಡ್ಡ ಕೊಳವಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಭೂ ವೈಜ್ಞಾನಿಕ ಸಮೀಕ್ಷೆ ಪ್ರಕಾರ, ಭೂಮಿಯು ಅದರ ಮೇಲ್ಪದರದ ಭಾರವನ್ನು ಹೋರಲು ಅಸಮರ್ಥವಾದಾಗ ಸಿಂಕ್ ಹೋಲ್ ಉಂಟಾಗುತ್ತದೆ. ಅಂತರ್ಜಲ ಹಾದು ಹೋಗುವಾಗ ಭೂಮಿಯ ಕೆಳಗಿನ ಬಂಡೆಯು ಸವೆಯುವುದು ಸೇರಿದಂತೆ ಇನ್ನೂ ಅನೇಕ ಕಾರಣಗಳಿಂದ ಇದು ಉಂಟಾಗಬಹುದು. ಅದರಿಂದಾಗಿ ಆ ಭಾಗದಲ್ಲಿ ಖಾಲಿ ಜಾಗ ಉಂಟಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ