Lady Driver: ಇಂಧನ ಟ್ಯಾಂಕರ್ ಓಡಿಸುವ ಮಲಯಾಳಿ ಹುಡುಗಿ: ಭೇಷ್ ಎನ್ನುತ್ತಿರುವ ನೆಟ್ಟಿಗರು

Delisha Davis: ಸ್ನಾತಕೋತ್ತರ ವಿದ್ಯಾರ್ಥಿನಿ ಡೆಲಿಶಾ, ತನ್ನ ತಂದೆ ಡೇವಿಸ್ ಪಿ.ವಿ ಅವರಿಂದ ಡ್ರೈವಿಂಗ್ ತರಬೇತಿ ಪಡೆದಿದ್ದು, ದ್ವಿಚಕ್ರ, ನಾಲ್ಕು ಚಕ್ರ ಮತ್ತು ಆರು ಚಕ್ರ ವಾಹನಗಳ ಚಾಲನಾ ಪರವಾನಗಿ ಹೊಂದಿದ್ದಾರೆ.

Delisha Davis

Delisha Davis

  • Share this:

“ಕಳೆದ ಮೂರು ವರ್ಷಗಳಿಂದ ನಾನು ಟ್ಯಾಂಕರ್ ಲಾರಿಯನ್ನು ಓಡಿಸುತ್ತಿರುವುದನ್ನು ಯಾರೂ ನೋಡಿಲ್ಲ ಎಂಬುದನ್ನು ನನಗೆ ನಂಬಲಿಕ್ಕೇ ಆಗುವುದಿಲ್ಲ” ಎಂದು ನಗುತ್ತಾಳೆ ಡೆಲಿಶಾ ಡೇವಿಸ್. ಕೇರಳದ ತ್ರಿಶೂರ್ ಜಿಲ್ಲೆಯ ಕಂದಸಂಕದವು ಎಂಬಲ್ಲಿನ 23 ವರ್ಷ ವಯಸ್ಸಿನ ಯುವತಿ, ಕೆಲವು ವಾರಗಳ ಹಿಂದೆ ಎರ್ನಾಕುಲಂನ ಇರುಂಪನಮ್‍ನ ಹಿಂದುಸ್ಥಾನ್ ಪೆಟ್ರೋಲಿಯಂ ಎಲ್‍ಪಿಜಿ ಪ್ಲಾಂಟ್‍ನಿಂದ ಮಲಪ್ಪುರಂ ಜಿಲ್ಲೆಯ ತಿರೂರ್‌ಗೆ ಟ್ಯಾಂಕರ್ ಓಡಿಸುವ ಮೂಲಕ ಸುದ್ದಿ ಮಾಡಿದ್ದರು.


“ಸಾಮಾನ್ಯವಾಗಿ, ಡೀಸೆಲ್ ಅಥವಾ ಪೆಟ್ರೋಲ್ ತೆಗೆದುಕೊಂಡು ಹೋಗುವ ವಾಹನಗಳನ್ನು ಮೋಟಾರ್ ವೆಹಿಕಲ್ ಇನ್‍ಸ್ಪೆಕ್ಟರ್‌ಗಳು ನಿಲ್ಲಿಸುವುದಿಲ್ಲ, ಏಕೆಂದರೆ ಅವು ಅಗತ್ಯ ವಸ್ತುಗಳು. ಆದರೆ, ಕೆಲವು ವಾರಗಳ ಹಿಂದೆ, ಮಹಿಳೆಯೊಬ್ಬಳು ಇಂಧನ ಸಾಗಣೆ ವಾಹನವನ್ನು ಓಡಿಸುತ್ತಿರುವುದನ್ನು ಕಂಡ ಅಧಿಕಾರಿಯೊಬ್ಬರು, ನನ್ನಲ್ಲಿ ಪರವಾನಗಿ ಇಲ್ಲವೆಂದು ಊಹಿಸಿ, ಕೂಡಲೇ ಮುಂದಿನ ಚೆಕ್‍ಪೋಸ್ಟ್‌ಗೆ ಮಾಹಿತಿ ನೀಡಿದರು. ಆದರೆ ನನ್ನನ್ನು ತಡೆದ ಅಧಿಕಾರಿ, ನನ್ನ ಪರವಾನಗಿ ಮತ್ತು ಕಂಪೆನಿ ನೀಡಿರುವ ಪಾಸ್ ಹಾಗೂ ಮತ್ತಿತರ ದಾಖಲೆಗಳನ್ನು ನೋಡಿ ಅಚ್ಚರಿಗೊಂಡರು. ಈ ಬಗ್ಗೆ ಇದುವರೆಗೆ ಇಲಾಖೆಗೆ ನನ್ನ ಬಗ್ಗೆ ಮಾಹಿತಿ ಇಲ್ಲದಿರಲು ಹೇಗೆ ಸಾಧ್ಯ ಎಂದು ಸೋಜಿಗವಾಗಿ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪ್ರಚಾರ ಮಾಡಿದರು” ಎನ್ನುತ್ತಾರೆ ಡೆಲಿಶಾ.


ಸ್ನಾತಕೋತ್ತರ ವಿದ್ಯಾರ್ಥಿನಿ ಡೆಲಿಶಾ, ತನ್ನ ತಂದೆ ಡೇವಿಸ್ ಪಿ.ವಿ ಅವರಿಂದ ಡ್ರೈವಿಂಗ್ ತರಬೇತಿ ಪಡೆದಿದ್ದು, ದ್ವಿಚಕ್ರ, ನಾಲ್ಕು ಚಕ್ರ ಮತ್ತು ಆರು ಚಕ್ರ ವಾಹನಗಳ ಚಾಲನಾ ಪರವಾನಗಿ ಹೊಂದಿದ್ದಾರೆ.


“ಸದ್ಯಕ್ಕೆ ಕೇರಳದಲ್ಲಿ ನನ್ನನ್ನು ಹೊರತು ಪಡಿಸಿ, ಬೇರೆ ಯಾರಾದರೂ ಮಹಿಳೆ ಅಪಾಯಕಾರಿ ವಾಹನವನ್ನು ಓಡಿಸುವ ಪರವಾನಗಿ ಪಡೆದಿದ್ದಾರೆಯೇ ಎಂಬುದು ನನಗೆ ತಿಳಿದಿಲ್ಲ. ನನಗೆ ಬಾಲ್ಯದಿಂದಲೂ ವಾಹನಗಳು ಮತ್ತು ವಾಹನ ಚಾಲನೆಯ ಬಗ್ಗೆ ವಿಪರೀತ ಆಸಕ್ತಿಯಿತ್ತು. ನನಗಿಬ್ಬರು ಸಹೋದರಿಯರು ಇದ್ದಾರೆ. ಅವರಿಗೆ ಇದರಲ್ಲಿ ಆಸಕ್ತಿ ಇಲ್ಲ. ನನ್ನ ತಂದೆ ನಿತ್ಯದ ಟ್ರಿಪ್‍ಗಳಿಗೆ ಬರುತ್ತೀಯ ಎಂದು ಕೇಳಿದಾಗ, ನಾನು ಒಪ್ಪಿಕೊಂಡೆ. ಕ್ರಮೇಣ ನನಗೆ ಟ್ಯಾಂಕರ್ ಚಾಲನೆಯಲ್ಲಿ ಆಸಕ್ತಿ ಬಂತು” ಎನ್ನುತ್ತಾರೆ ಅವರು.


ಅವರು ಮೂರು ವರ್ಷಗಳ ಹಿಂದೆ ಚಾಲನಾ ಪರವಾನಗಿ ಪಡೆದಿದ್ದರೂ ಕೂಡ, ತರಗತಿಗಳು ಇಲ್ಲದ ದಿನ ಮಾತ್ರ, ಅಂದರೆ ಶನಿವಾರ ಟ್ರಿಪ್‍ಗಳಿಗೆ ಹೋಗುತ್ತಿದ್ದರು. ಆದರೆ ಮಾರ್ಚ್ 2020ನಲ್ಲಿ ಲಾಕ್‍ಡೌನ್ ಆರಂಭವಾದಾಗ ಅವರಿಗೆ ರಾತ್ರಿ ಆನ್‍ಲೈನ್ ತರಗತಿಗಳು ಇರುತ್ತಿದ್ದವು. ಆಗ ಅವರು ನಿತ್ಯದ ಟ್ರಿಪ್‍ಗಳನ್ನು ಆರಂಭಿಸಿದರು. ಈ ಕೆಲಸದಲ್ಲಿ ಸಹಾಯಕರು ಇರಬೇಕಾಗಿರುವುದು ಕಡ್ಡಾಯವಾದ್ದರಿಂದ, ತಂದೆ ಆ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.


ಡೆಲಿಶಾ ಒಂದು ಟ್ರಿಪ್‍ಗೆ ಸುಮಾರು 300 ಕಿಮೀ ದೂರವನ್ನು ಕ್ರಮಿಸುತ್ತಾರೆ. ಆಕೆ ತನ್ನ ಮನೆಯಿಂದ ನಸುಕಿನ ಜಾವ 2.30ಕ್ಕೆ ಹೊರಡುತ್ತಾರೆ ಮತ್ತು ಎರಡು ಗಂಟೆಯೊಳಗೆ (75ಕಿಮೀ) ಇರುಂಪನಮ್ ತಲುಪುತ್ತಾರೆ. “ಆ ಬಳಿಕ ನಾನು ಕಂಪೆನಿ ತೆರೆಯುವ ಸಮಯ ಅಂದರೆ ಬೆಳಗ್ಗೆ 8.30-9.30 ವರೆಗೆ ಕಾಯುತ್ತೇನೆ. ಅಲ್ಲಿಂದ ತಿರೂರಿಗೆ ಪ್ರಯಾಣಿಸುತ್ತೇನೆ, ಎಲ್ಲಿಯೂ ನಿಲ್ಲಿಸದಿದ್ದರೆ ನಾಲ್ಕು ಗಂಟೆಯ ಒಳಗೆ (ಸುಮಾರು 145 ಕಿಮೀ) ಅಲ್ಲಿಗೆ ತಲುಪಬಹುದು. ಇಂಧನ ತಲುಪಿಸಿ , 2.30ಕ್ಕೆ ಮರು ಪ್ರಯಾಣ ಆರಂಭಿಸುತ್ತೇನೆ. ಸಂಜೆ 4 - 4.30ಕ್ಕೆ ಮನೆ ತಲುಪುತ್ತೇನೆ” ಎನ್ನುತ್ತಾರೆ ಅವರು.
Delisha Davisಓದು ಮತ್ತು ಕೆಲಸ ಎರಡನ್ನು ಒಟ್ಟಿಗೆ ನಿರ್ವಹಿಸುವುದು ಅವರಿಗೆ ಕಷ್ಟವಾಗುತ್ತಿಲ್ಲವಂತೆ. “ನಾವು ವಾರಕ್ಕೆ 5-6 ದಿವಸ ವಾಹನ ಓಡಿಸಿದರೂ ಸುಸ್ತಾಗುವುದಿಲ್ಲ, ಏಕೆಂದರೆ ಅದು ನನ್ನಿಷ್ಟದ ಕೆಲಸ. ಈಗ ನನ್ನ ತರಗತಿಗಳು ಮುಗಿದಿವೆ ಮತ್ತು ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ. ಈಗ ಲಾಕ್‍ಡೌನ್ ಇರುವುದರಿಂದ ಪಂಪ್‍ಗಳಲ್ಲಿ ವ್ಯಾಪಾರ ಇಳಿಕೆಯಾಗಿದ್ದು, ನಾನು ವಾರದಲ್ಲಿ ಎರಡು ಅಥವಾ ಮೂರು ದಿನ ಮಾತ್ರ ಟ್ರಿಪ್‍ಗೆ ಹೋಗುತ್ತೇನೆ” ಎನ್ನುತ್ತಾರೆ ಡೆಲಿಶಾ.


ಟ್ಯಾಂಕರ್ ವಾಹನ ಚಲಾಯಿಸುವುದು ಅಪಾಯಕಾರಿ ಎನ್ನುತ್ತಾರೆ ಡೆಲಿಶಾ. ಅವರಿಗೆ ಅದರ ಪ್ರಾಥಮಿಕ ಕಲಿಕೆಗೆ ಒಂದು ವರ್ಷ ಬೇಕಾಯಿತಂತೆ. ಅವರು ಇಂಧನ ವಾಹನ ಚಲಾಯಿಸುವ ಮೊದಲು ಖಾಲಿ ಟ್ಯಾಂಕರ್ ಓಡಿಸುವುದನ್ನು ಕಲಿತರು. ನಿರಂತರವಾಗಿ 3 - 4 ಗಂಟೆ ವಾಹನ ಓಡಿಸುವುದು ಆರಂಭದಲ್ಲಿ ಸುಲಭವಾಗಿರಲಿಲ್ಲ.” ಅದು ಬಿಸಿ ಕೂಡ ಇರುತ್ತದೆ. ಇದನ್ನು ಕಷ್ಟಪಟ್ಟು ಕಲಿತಿರುವುದರಿಂದ, ಎಂದಿಗೂ ಇದನ್ನು ಬಿಟ್ಟುಬಿಡುವ ಯೋಚನೆ ಮಾಡಲಿಲ್ಲ” ಎನ್ನುತ್ತಾರೆ ಅವರು.


ಅವರು, ಇಂಧನ ಸಾಗಾಣೆ ಮಾಡುವ ಅಶೋಕ ಲೇಲ್ಯಾಂಡ್‍ನ 2012 ಮಾಡೆಲ್ ಲಾರಿಯನ್ನು ಓಡಿಸುತ್ತಾರೆ. “ ಸರಿಯಾದ ಸಮಯಕ್ಕೆ ಇಂಧನ ಪೂರೈಕೆ ಮಾಡಿದರೆ, ಅವರಿಗೆ ಮಹಿಳಾ ಚಾಲಕರ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಇಲ್ಲಿ ವಾಹನ ಚಾಲನ ಕೌಶಲ, ಅನುಭವ ಮತ್ತು ಎಚ್ಚರಿಕೆ ಮುಖ್ಯವೇ ಹೊರತು ಲಿಂಗವಲ್ಲ. ಸಾಮಾನ್ಯವಾಗಿ, ವಾಹನ ಚಾಲನೆ ಮಾಡುವ ಮಹಿಳೆಯರನ್ನು ಕಂಡು ಹಾಸ್ಯ ಮಾಡುತ್ತಾರೆ. ಅಂತವರ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ಉತ್ತಮ. ಯಾರಾದರೂ ಲಾರಿ ಓವರ್‌ಟೇಕ್‌ ಮಾಡಿದರೆ ಅಥವಾ ಒಮ್ಮೆಲೆ ಬ್ರೇಕ್ ಹಾಕಿದರೆ ಅಪಾಯಕರ” ಎನ್ನುತ್ತಾರೆ ಅವರು.ಡೆಲಿಶಾಗೆ ಯಾವತ್ತಾದರೂ ವೋಲ್ವೋ ಬಸ್ ಓಡಿಸುವ ಕನಸಿದೆ. ಅದರ ತರಬೇತಿ ಬೆಂಗಳೂರಿನಲ್ಲಿ ಮಾತ್ರ ಲಭ್ಯ ಇರುವುದರಿಂದ, ಪಬ್ಲಿಕ್ ಸರ್ವಿಸ್ ಪರೀಕ್ಷೆ ಪಾಸಾಗಿ, ಸರಕಾರಿ ಕೆಲಸ ಸೇರುವ ನಿರೀಕ್ಷೆಯಲ್ಲಿದ್ದಾರೆ. ಕೇರಳ ರೋಡ್ ಟ್ರಾನ್ಸ್‌ಪೋರ್ಟ್‌ ಕಾರ್ಪೊರೇಶನ್‍ನಲ್ಲಿ ಕೆಲಸ ಪಡೆಯುವ ಆಸೆ ಆಕೆಗಿದೆ.


First published: