ಭಾರತದ ನಂಬರ್ 1 ಮೆಸೇಜಿಂಗ್ ಅಪ್ಲಿಕೇಶನ್ (Messaging Application) ಆಗಿರುವ ವಾಟ್ಸಾಪ್ (WhatsApp) ಈ ಬಾರಿ ಹಲವಾರು ಫೀಚರ್ಸ್ ಅನ್ನು ಬಳಕೆದಾರರಿಗೆ ಪರಿಚಯಿಸಿದೆ. ಅದ್ರಲ್ಲೂ ಈ ಬಾರಿ ಹೊಸ ವರ್ಷಕ್ಕೆ ಹಲವು ರೀತಿ ಸ್ಟಿಕ್ಕರ್ಸ್ಗಳನ್ನು ಪರಿಚಯಿಸಿದೆ. ಅನೇಕ ಜನರು ಸೋಶಿಯಲ್ ಮೀಡಿಯಾ (Social Media) ಮೂಲಕ ಹೊಸ ವರ್ಷವನ್ನು ಆಚರಿಸುತ್ತಿದ್ದರು. ಅದೇ ರೀತಿ ಬಳಕೆದಾರರಿಗೆ ವಾಟ್ಸಾಪ್ ಕೂಡ ಉತ್ತಮ ಅನುಭವವನ್ನು ನೀಡುವಂತಹ ಕೆಲವೊಂದು ಫೀಚರ್ಸ್ಗಳನ್ನು ಪರಿಚಯಿಸಿದೆ. ವಾಟ್ಸಾಪ್ ಮೆಸೇಜಿಂಗ್ ಅಪ್ಲಿಕೇಶನ್ ಜನರಿಗೆ ಹಲವು ರೀತಿಯಲ್ಲಿ ಸಹಕಾರಿಯಾಗಿದೆ. ಇದರ ಉತ್ತಮ ಫೀಚರ್ಸ್ನಿಂದನೇ ಎಲ್ಲರ ಗಮನ ಸೆಳೆದಿದೆ. ಆದರೆ ಇದೀಗ ವಾಟ್ಸಾಪ್ ಭಾರತೀಯರಿಗೆ ಬೇಸರವಾಗುವಂತಹ ಒಂದು ಕೆಲಸವನ್ನು ಮಾಡಿದೆ.
ವಾಟ್ಸಾಪ್ ತನ್ನ ಗುಣಮಟ್ಟದ ಕಾರ್ಯವೈಖರಿ ಮೂಲಕ ಎಲ್ಲರ ಗಮನ ಸೆಳೆದಿದೆ. ಆದರೆ ಇದೀಗ ವಾಟ್ಸಾಪ್ ತನ್ನ ಒಂದು ಪೋಸ್ಟ್ ಮೂಲಕ ಭಾರತೀಯರಲ್ಲಿ ಬೇಸರವನ್ನುಂಟು ಮಾಡಿದೆ. ಆದರೂ ಕೊನೆಗೆ ಕ್ಷಮೆಯಾಚಿಸಿದೆ. ಹಾಗಿದ್ರೆ ವಾಟ್ಸಾಪ್ ಕ್ಷಮೆಯಾಚಿಸಲು ಕಾರಣವೇನು? ಅಷ್ಟಕ್ಕೂ ವಾಟ್ಸಾಪ್ ಮಾಡಿದ್ದಾದರೇನು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಅಷ್ಟಕ್ಕೂ ವಾಟ್ಸಾಪ್ ಮಾಡಿದ್ದೇನು?
ಹೊಸವರ್ಷದ ಹಿಂದಿನ ದಿನ ಅಂದರೆ ಜನವರಿ 31 ರಂದು ವಾಟ್ಸಾಪ್ ತನ್ನ ಟ್ವಿಟರ್ನ ಅಧಿಕೃತ ಪೇಜ್ನಲ್ಲಿ ವಾಟ್ಸಾಪ್ ಗ್ರಾಫಿಕ್ಸ್ ಅನ್ನು ಶೇರ್ ಮಾಡಿಕೋಂಡಿತ್ತು. ಈ ಗ್ರಾಫಿಕ್ಸ್ನಲ್ಲಿ ಏನಿತ್ತೆಂದರೆ ಇದರಲ್ಲಿ ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಪ್ರದೇಶಗಳನ್ನು ಮತ್ತು ಚೀನಾ ಹಕ್ಕು ಸಾಧಿಸಿದ ಕೆಲವು ಪ್ರದೇಶಗಳನ್ನು ತೋರಿಸಲಾಗಿರಲಿಲ್ಲ. ಈ ಮೂಲಕ ಈ ಪ್ರದೇಶಗಳು ಭಾರತೀಯರಿಗೆ ಸೇರಿದ್ದಲ್ಲ ಎಂಬುದನ್ನು ಬಿಂಬಿಸಿದಂತಿತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ: ಮಾರುಕಟ್ಟೆಗೆ ಲಗ್ಗೆಯಿಡ್ತಿದೆ ಲೆನೋವೋ ಕಂಪನಿಯ ಡಬಲ್ ಡಿಸ್ಪ್ಲೇ ಲ್ಯಾಪ್ಟಾಪ್!
ವಾಟ್ಸಾಪ್ಗೆ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಆಯೋಗದಿಂದ ವರದಿ
ಈ ಪೋಸ್ಟ್ ಅನ್ನು ಗಮನಿಸಿದ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ಟ್ವೀಟ್ ಮಾಡುವ ಮೂಲಕ ವಾಟ್ಸಾಪ್ ಭಾರತದ ನಕ್ಷೆಯಲ್ಲಿ ಮಾಡಿರುವ ತಪ್ಪನ್ನು ಬೇಗ ತಿದ್ದಿಕೊಳ್ಳುವಂತೆ ಹೇಳಿದ್ದಾರೆ. ಇದರಲ್ಲಿ ‘ಆತ್ಮೀಯ ವಾಟ್ಸಾಪ್ ದಯವಿಟ್ಟು ತಾವು ಹಾಕಿರುವ ಭಾರತದ ನಕ್ಷೆಯನ್ನು ಆದಷ್ಟು ಬೇಗ ಸರಿಪಡಿಸಿ, ಭಾರತದಲ್ಲಿ ವ್ಯಾಪಾರ ಮಾಡುವ ಮತ್ತು ಭಾರತದಲ್ಲಿ ವ್ಯವಹಾರವನ್ನು ಮುಂದುವರೆಸಲು ಬಯಸುವ ಎಲ್ಲಾ ಪ್ಲಾಟ್ಫಾರ್ಮ್ಗಳು ಇನ್ನುಮುಂದೆ ಸರಿಯಾದ ನಕ್ಷೆಗಳನ್ನು ಬಳಸಬೇಕು ಎಂದು ಬರೆದಿದ್ದರು.
ವಾಟ್ಸಾಪ್ನಿಂದ ಕ್ಷಮೆಯಾಚನೆ
ವಾಟ್ಸಾಪ್ನ ಈ ಪೋಸ್ಟ್ ನೋಡಿ ಸಚಿವ ರಾಜೀವ್ ಚಂದ್ರಶೇಖರ್ ಅವರ ಟ್ವೀಟ್ ಅನ್ನು ಗಮನಿಸಿದ ವಾಟ್ಸಾಪ್ ತನ್ನ ತಪ್ಪನ್ನು ಅರಿತು ಭಾರತೀಯರಲ್ಲಿ ಕ್ಷಮೆಯಾಚಿಸಿದೆ.
ವಾಟ್ಸಾಪ್ ಹೇಳಿದ್ದೇನು?
ಉದ್ದೇಶಪೂರ್ವಕವಲ್ಲದ ದೋಷವನ್ನು ಸೂಚಿಸಿದ್ದಕ್ಕಾಗಿ ಸಚಿವರಿಗೆ ಧನ್ಯವಾದಗಳು. ನಾವು ತಕ್ಷಣವೇ ಸ್ಟ್ರೀಮ್ ಅನ್ನು ತೆಗೆದುಹಾಕಿದ್ದೇವೆ, ಕ್ಷಮೆಯಾಚಿಸುತ್ತೇವೆ. ಭವಿಷ್ಯದಲ್ಲಿ ನಾವು ಜಾಗರೂಕರಾಗಿರುತ್ತೇವೆ ಎಂದು ಚಂದ್ರಶೇಖರ್ ಅವರ ಟ್ವೀಟ್ಗೆ ವಾಟ್ಸಾಪ್ ಪ್ರತಿಕ್ರಿಯಿಸಿದೆ. ಈ ಮೂಲಕ ವಾಟ್ಸಾಪ್ ಹೊಸ ವರ್ಷದ ಆರಂಭದಲ್ಲೇ ಒಂದು ದೊಡ್ಡ ತಪ್ಪನ್ನು ಮಾಡಿ ಕೆಲವೇ ಸಮಯದಲ್ಲಿ ತಿದ್ದುಕೊಂಡು ಭಾರತೀಯರಲ್ಲಿ ಕ್ಷಮೆಯಾಚಿಸಿದೆ.
ಝೂಮ್ ಸಿಇಓ ಅವರು ಕೂಡ ಇದೇ ತಪ್ಪು ಮಾಡಿದ್ದರು
ಕೆಲವು ದಿನಗಳ ಹಿಂದೆ ಝೂಮ್ ಆ್ಯಪ್ನ ಸಿಇಓ ಆಗಿರುವ ಎರಕ್ ಯುವಾನ್ ಕೂಡ ಇದೇ ರೀತಿ ಒಮ್ಮೆ ತಪ್ಪನ್ನು ಮಾಡಿದ್ದರು.ಈ ತಪ್ಪನ್ನು ತಿದ್ದಿಕೊಳ್ಳಲು ಸಹ ಹೇಳಿದ್ದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್. ಎರಕ್ ಯುವಾನ್ ಅವರು ಕೂಡ ತಮ್ಮ ಟ್ವೀಟ್ನಲ್ಲಿ ತಪ್ಪನ್ನು ಬರೆದಿದ್ದರು. ಅದನ್ನು ಗಮನಿಸಿದ ರಾಜೀವ್ ಚಂದ್ರಶೇಖರ್ ಸರಿಪಡಿಸುವ ಬಗ್ಗೆ ಟ್ವೀಟ್ ಮಾಡಿದ್ದರು. ಅದರಂತೆ ಕ್ಷಮೆಯಾಚಿಸಿದ ಎರಕ್ ಯುವಾನ್ ಆ ಟ್ವೀಟ್ ಅನ್ನು ಡಿಲೀಟ್ ಮಾಡಿ ತಪ್ಪಿನ ಬಗ್ಗೆ ಕ್ಷಮೆಯಾಚಿಸುವ ಮೂಲಕ ಟ್ವೀಟ್ ಬರೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ