ಅಕ್ಟೋಬರ್ನಲ್ಲಿ ಬಿಲಿಯನೇರ್ ಎಲೋನ್ ಮಸ್ಕ್ ( Elon Musk) ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಅವರು ಯುನೈಟೆಡ್ ಸ್ಟೇಟ್ಸ್ನ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಪ್ರಧಾನ ಕಚೇರಿಯ ಫೋಟೋವನ್ನು ಹಂಚಿಕೊಂಡಿದ್ದರು. ಈ ಪ್ರಧಾನ ಕಚೇರಿ ಒಂದಲ್ಲ ಒಂದು ಕಾರಣಗಳಿಗೆ ಸುದ್ದಿಯಾಗುತ್ತಲೇ ಇದೆ. ಮಸ್ಕ್ ಮಗ ಪ್ರಧಾನ ಕಚೇರಿಗೆ ಬಂದಿದ್ದಾಗಿ ಈ ಹಿಂದೆ ಸುದ್ದಿಯಾಗಿತ್ತು, ನಂತರ ಮಸ್ಕ್ ಹಂಚಿಕೊಂಡ ಹೆಡ್ ಆಫೀಸ್ ಫೋಟೋಗಳು ವೈರಲ್ ಆಗಿದ್ದವು. ಸದ್ಯ ಬಂದಿರುವ ವರದಿ ಪ್ರಕಾರ, ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಟ್ವಿಟರ್ (Twitter) ಪ್ರಧಾನ ಕಚೇರಿ ವಿಶೇಷವಾಗಿ ಸುದ್ದಿಯಲ್ಲಿದೆ. ಈಗ ಟ್ವಿಟರ್ ಪ್ರಧಾನ ಕಚೇರಿಯ ಕೆಲ ಕೊಠಡಿಗಳನ್ನು ಬೆಡ್ರೂಂ ಆಗಿ ಪರಿವರ್ತಿಸಲಾಗಿದೆ ಎಂಬುದರ ಬಗ್ಗೆ ವರದಿಯೊಂದು (Report) ಕೇಳಿ ಬರುತ್ತಿದೆ.
ಫೋರ್ಬ್ಸ್ನ ವರದಿಯ ಪ್ರಕಾರ, ಟ್ವಿಟರ್ನ ಹೊಸ ಮಾಲೀಕ ಮಸ್ಕ್, ಸ್ಯಾನ್ ಫ್ರಾನ್ಸಿಸ್ಕೋದ ಟ್ವಿಟರ್ ಪ್ರಧಾನ ಕಚೇರಿಯಲ್ಲಿನ ಹಲವಾರು ಕೊಠಡಿಗಳನ್ನು ಸಣ್ಣ ಬೆಡ್ ರೂಂ ಆಗಿ ಪರಿವರ್ತಿಸಿದ್ದಾರೆ ಎನ್ನಲಾಗಿದೆ.
ಪ್ರಧಾನ ಕಚೇರಿಯಲ್ಲಿ ಬೆಡ್ರೂಂ ವ್ಯವಸ್ಥೆ
ಹೆಚ್ಚಿನ ಕೆಲಸವಿದ್ದಾಗ ಮತ್ತು ಅಗತ್ಯವಿದ್ದಾಗ ಕಚೇರಿಯಲ್ಲಿ ಉಳಿಯುವ ಸಂಸ್ಕೃತಿಗೆ ಒಪ್ಪಿಕೊಳ್ಳಬೇಕೆಂದು ಎಲೋನ್ ಮಸ್ಕ್ ಉದ್ಯೋಗಿಗಳನ್ನು ಕೇಳಿಕೊಂಡಿದ್ದರು. ಇದಕ್ಕೆ ಒಪ್ಪಿಗೆ ನೀಡಿ ಟ್ವಿಟರ್ನಲ್ಲಿಯೇ ಉಳಿದುಕೊಂಡ ಉದ್ಯೋಗಿಗಳಿಗೆ ಈಗ ಮಸ್ಕ್ ಬೆಡ್ ರೂಂ ಅನ್ನು ಸಹ ನಿರ್ಮಿಸಿದ್ದಾರಂತೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟರ್ ಪ್ರಧಾನ ಕಚೇರಿಯ ಕೆಲ ಕೊಠಡಿಗಳನ್ನು ಮಲಗುವ ಕೋಣೆಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ತಿಳಿದುಬಂದಿದೆ.
ಹೇಗಿದೆ ಮಸ್ಕ್ ನಿರ್ಮಿಸಿದ ಬೆಡ್ ರೂಂ?
ಉದ್ಯೋಗಿಗಳಿಗೆ ಮಸ್ಕ್ ನಿರ್ಮಿಸಿದ ಬೆಡ್ ರೂಂಗಳು ಸಾಕಷ್ಟು ಆರಾಮದಾಯಕವಾಗಿದೆ ಎಂದು ವರದಿಯಾಗಿದೆ. ಹಾಸಿಗೆಗಳು, ಕರ್ಟನ್, ಕಿತ್ತಳೆ ಬಣ್ಣದ ಕಾರ್ಪೆಟ್, ಮರದ ಹಾಸಿಗೆಯ ಪಕ್ಕ ಒಂದು ಮೇಜು, ಕ್ವೀನ್ ಸೈಜ್ ಬೆಡ್, ಟೇಬಲ್ ಲ್ಯಾಂಪ್ ಮತ್ತು ಎರಡು ಆರಾಮ್ ಕುರ್ಚಿ ಮತ್ತು ದೊಡ್ಡದಾದ ಕಾನ್ಫರೆನ್ಸ್-ರೂಮ್ ಟೆಲಿಪ್ರೆಸೆನ್ಸ್ ಮಾನಿಟರ್ ರೂಂನಲ್ಲಿ ಇದೆ ಎಂದು ಫೋರ್ಬ್ಸ್ ವರದಿ ಮಾಡಿದೆ.
ಇದನ್ನೂ ಓದಿ: 2022ರಲ್ಲಿ ವಾಟ್ಸಪ್ನಲ್ಲಿ ಬಂದಂತಹ ಅಪ್ಡೇಟ್ಸ್ ಯಾವುದೆಲ್ಲಾ? ಇಲ್ಲಿದೆ ನೋಡಿ
ಅಲ್ಲದೇ ಪ್ರತಿ ಮಹಡಿಗೆ ಸುಮಾರು ನಾಲ್ಕರಿಂದ ಎಂಟು ಬೆಡ್ರೂಂ ಪಾಡ್ಗಳಿವೆ ಮತ್ತು ಇವು ತುಂಬಾ ಆರಾಮದಾಯಕವಾಗಿವೆ ಎನ್ನಲಾಗಿದೆ.
ಮೊನ್ನೆಯ ಒಂದು ಟ್ವೀಟ್ನಲ್ಲಿ ಮಸ್ಕ್ ತಮ್ಮ ಮಲಗುವ ಬೆಡ್ ಪಕ್ಕದ ಟೇಬಲ್ ಫೋಟೋವನ್ನು ಹಂಚಿಕೊಂಡಿದ್ದರು. ನನ್ನ ಬೆಡ್ ಪಕ್ಕದ ಟೇಬಲ್ ಎಂದು ಶೀರ್ಷಿಕೆ ನೀಡಿದ್ದ ಮಸ್ಕ್ ನಿದ್ರೆ ಬಿಟ್ಟು ಕೆಲಸ ಮಾಡುತ್ತಿದ್ದೇನೆ ಅಂತಾ ಪರೋಕ್ಷವಾಗಿ ಹೇಳುವ ಚಿತ್ರಗಳನ್ನು ಹಂಚಿಕೊಂಡಿದ್ದರು. ಟೇಬಲ್ ಮೇಲೆ ಪಿಸ್ತೂಲ್, ಖಾಲಿಯಾದ ಕೋಕ್ ಬಾಟಲಿಗಳು ಇದ್ದವು.
ಕೆಲಸದಲ್ಲಿ ಹಿಟ್ಲರ್ ಆಗಿದ್ದಾರಾ ಮಸ್ಕ್?
ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಎಲೋನ್ ಮಸ್ಕ್ ಒಂದೊಂದೇ ಕ್ರಮಗಳನ್ನು ಜಾರಿಗೆ ತಂದರು. ಮುಖ್ಯವಾಗಿ ಸಾವಿರಾರು ಉದ್ಯೋಗಿಗಳನ್ನು ಕಿತ್ತೊಗೆಯುವ ಮೂಲಕ ದೊಡ್ಡ ಸುದ್ದಿಯಾದರು.
ಇದಲ್ಲದೇ ವರ್ಕ್ ಫ್ರಮ್ ಹೋಮ್ ನೀತಿಯನ್ನು ಕೈಬಿಟ್ಟು ಎಲ್ಲರಿಗೂ ಕಚೇರಿಯಲ್ಲೇ ಕೆಲಸ ಮಾಡಬೇಕೆಂದು ಆದೇಶಿಸಿದ್ದರು. ಅಲ್ಲದೆ, ಹೆಚ್ಚು ಕೆಲಸ ಮಾಡುವುದನ್ನು ಒಪ್ಪದಿದ್ದರೆ ಕಂಪನಿ ಬಿಟ್ಟು ಹೋಗಬಹುದು ಎಂದು ಖಡಕ್ ಆಗಿ ಹೇಳಿದ್ದರು. ಮಸ್ಕ್ ಅವರ ಕೆಲಸದ ಕಠಿಣ ನೀತಿಗಳಿಗೆ ಬೇಸತ್ತ ಹಲವಾರು ಉದ್ಯೋಗಿಗಳು ಕಂಪನಿ ತೊರೆದಿದ್ದರು.
ದೊಡ್ಡ ಹುದ್ದೆಯಲ್ಲಿದ್ದ ಉದ್ಯೋಗಿಗಳಿಗೆ ಗೇಟ್ ಪಾಸ್ ನೀಡಿದ್ದ ಮಸ್ಕ್
ಸಿಇಒ ಪರಾಗ್ ಅಗರ್ವಾಲ್, ಸಿಎಫ್ಒ ನೆಡ್ ಸೆಗಲ್ ಹಾಗೂ ನೀತಿ ನಿರೂಪಣೆ-ವಿಶ್ವಾಸಾರ್ಹತೆ ಮತ್ತು ಸುರಕ್ಷಾ ವಿಭಾಗದ ಮುಖ್ಯಸ್ಥರಾದ ವಿಜಯಾ ಗಡ್ಡೆ ಅವರನ್ನು ವಜಾಗೊಳಿಸಿದ್ದರು.
ಬಳಿಕ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ್ದರು. ನಂತರ ಮಸ್ಕ್ ಅವರ ಕಠಿಣ ನಿಯಮಗಳನ್ನು ವಿರೋಧಿಸಿ ಅನೇಕ ಉದ್ಯೋಗಿಗಳು ರಾಜೀನಾಮೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ ಈಗ ಟ್ವಿಟರ್ ಪ್ರಧಾನ ಕಚೇರಿಯ ಕೆಲ ಕೊಠಡಿಗಳನ್ನು ಬೆಡ್ರೂಂ ಆಗಿ ಪರಿವರ್ತಿಸಿ ಮಸ್ಕ್ ಸುದ್ದಿಯಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ