ಜನಪ್ರಿಯ ಮೈಕ್ರೋ ಬ್ಲಾಗಿಂಗ್ ತಾಣವಾಗಿರುವ ಟ್ವಿಟರ್ (Twitter) ಕಳೆದ ವರ್ಷದಿಂದ ಭಾರೀ ಮಾತುಕತೆಯಲ್ಲೇ ಇದೆ. ಅದ್ರಲ್ಲೂ ಎಲಾನ್ ಮಸ್ಕ್ ಟ್ವಿಟರ್ ಒಡೆತನವನ್ನು ಖರೀದಿಸಿದ ನಂತರ ಬಹಳಷ್ಟು ಬದಲಾವಣೆಯೂ ಆಗಿದೆ. ಜೊತೆಗೆ ಚರ್ಚೆಗೂ ಒಳಗಾಗಿದೆ. ಕೆಲ ತಿಂಗಳ ಹಿಂದೆ ಟ್ವಿಟರ್ ತನ್ನ ಅಕ್ಷರದ ಮಿತಿಯನ್ನು ಏರಿಕೆ ಮಾಡುವಲ್ಲಿ ಸಫಲತೆಯನ್ನು ಕಂಡಿತ್ತು. ಇದೀಗ ಮತ್ತೆ ಹೊಸ ಬದಲಾವಣೆಯನ್ನು ಮಾಡಲು ಮುಂದಾಗಿದೆ. ಇನ್ಮುಂದೆ ಅಕ್ಷರ ಮಿತಿ ಮತ್ತಷ್ಟು ಏರಿಕೆಯಾಗಲಿದೆ ಎಂದು ಟ್ವಿಟರ್ ಸಿಇಒ (Elon Musk) ಹೇಳಿದ್ದಾರೆ. ಇದರಿಂದ ಟ್ವೀಟ್ (Tweet) ಅನ್ನು ಯಾವುದೇ ಸಮಸ್ಯೆಗಳಿಲ್ಲದೆ ಮಾಡಬಹುದು.
2017ರಲ್ಲಿ ಮೊದಲ ಬಾರಿಗೆ ಅಕ್ಷರ ಮಿತಿಯನ್ನು ಹೆಚ್ಚಿಸಿದ್ದ ಟ್ವಿಟರ್ ಅಕ್ಷರಗಳ ಮಿತಿಯನ್ನು 140 ಅಕ್ಷರಗಳಿಂದ 280 ಅಕ್ಷರಗಳಿಗೆ ಏರಿಕೆ ಮಾಡಿತ್ತು. ನಂತರ ಪಾವತಿಸಿ 'ಟ್ವಿಟರ್ ಬ್ಲೂ' ಚಂದಾದಾರಿಕೆ ಪಡೆಯುವ ಬಳಕೆದಾರರಿಗೆ 4 ಸಾವಿರ ಅಕ್ಷರಗಳನ್ನು ಬಳಸಿ ಟ್ವೀಟ್ ಮಾಡಬಹುದಾದ ಸೌಲಭ್ಯ ಒದಗಿಸಿತ್ತು. ಇದೀಗ ಟ್ವಿಟರ್‌ನಲ್ಲಿ ಅಕ್ಷರ ಮಿತಿಯನ್ನು ಶೀಘ್ರದಲ್ಲೇ 10 ಸಾವಿರಕ್ಕೆ ಏರಿಸಲಾಗುವುದು ಎಂದು ಟ್ವಿಟರ್ ಸಂಸ್ಥೆಯ ಮಾಲಿಕ ಹಾಗೂ ಮುಖ್ಯಸ್ಥರಾದ ಉದ್ಯಮಿ ಎಲಾನ್ ಮಸ್ಕ್ ಅವರು ಘೋಷಿಸಿದ್ದಾರೆ.
ಟ್ವಿಟರ್‌ನಲ್ಲಿ ಹೊಸ ಅಪ್ಡೇಟ್
ಇದುವರೆಗೆ ಟ್ವಿಟರ್ ಬಳಕೆದಾರರು ಯಾವುದೇ ಟ್ವೀಟ್ ಮಾಡಬೇಕೆಂದಿದ್ದರು ಅದರಲ್ಲಿ 28 ಅಕ್ಷರಗಳ ಮಿತಿಯಿತ್ತು. ಆದರೆ ಪ್ರೀಮಿಯಂ ಸದಸ್ಯತ್ವ ಹೊಂದಿರುವವರಿಗೆ ಮಾತ್ರ 4 ಸಾವಿರ ಅಕ್ಷರಗಳೊಂದಿಗೆ ಟ್ವೀಟ್ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಇನ್ಮುಂದೆ ಟ್ವಿಟರ್‌ನಲ್ಲಿ 10,000 ಅಕ್ಷರಗಳೊಂದಿಗೆ ಟ್ವೀಟ್‌ಗಳನ್ನು ಪೋಸ್ಟ್ ಮಾಡಲು ಜನರಿಗೆ ಅವಕಾಶ ನೀಡುವಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಈ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಬಳಕೆದಾರರಿಗೆ ಹೊರತರಲಾಗುವುದು ಎಂದು ಎಲಾನ್ ಮಸ್ಕ್ ಅವರು ದೃಢಪಡಿಸಿದ್ದಾರೆ.
ಇದನ್ನೂ ಓದಿ: ಎಸಿ, ಫ್ಯಾನ್ಗೆ ಟಕ್ಕರ್ ನೀಡುವಂತಹ ಈ ಮಿನಿ ಏರ್ ಕೂಲರ್! ಕೇವಲ 449 ರೂಪಾಯಿ
ಯಾರಿಗೆಲ್ಲಾ ಲಭ್ಯವಾಗುತ್ತದೆ?
ಇನ್ನು ಈ ಮುಂಬರುವ ವೈಶಿಷ್ಟ್ಯವು ಕಂಪೆನಿಯ ಟ್ವಿಟ್ಟರ್ ಬ್ಲೂ ಚಂದಾದಾರಿಕೆಗೆ ಮಾತ್ರ ಸೀಮಿತವಾಗಿದೆಯೇ ಅಥವಾ ಎಲ್ಲಾ ಬಳಕೆದಾರರು ಈ ವೈಶಿಷ್ಟ್ಯವನ್ನು ಆನಂದಿಸುತ್ತಾರೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.ಇನ್ನು ಕೆಲವೊಂದು ವರದಿಗಳು ಎಲ್ಲಾ ಬಳಕೆದಾರರಿಗು ಈ ಸೇವೆ ಲಭ್ಯವಾಗುತ್ತದೆ ಎಂದು ಹೇಳಲಾಗಿದೆ.
ಎಲಾನ್ ಮಸ್ಕ್ ಅವರು ಇತ್ತೀಚೆಗೆ ಟ್ವಿಟರ್‌ನ ಹೊಸ ಸಿಇಒ ಎಂದು ನಾಯಿ ಫೋಟೋ ಹಾಕ ಟ್ವೀಟ್ ಮಾಡಿದ್ದರು.
ಎಲಾನ್ ಮಸ್ಕ್ ಅವರ ಟ್ವೀಟ್
ಬಿಲಿಯನ್ ಡಾಲರ್ ಉದ್ಯಮಿ, ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಸಿಇಒ ಆದ ನಂತರ ಹಳೆ ಉದ್ಯೋಗಿಗಳನ್ನು ವಜಾ ಮಾಡಿ, ಹೊಸ ಉದ್ಯೋಗಿಗಳನ್ನೇ ಆಯ್ಕೆ ಮಾಡ್ತಾ ಇದ್ದಾರೆ. ಈ ಮಧ್ಯೆ ಟ್ವಿಟರ್ಗೆ ಹೊಸ ಸಿಇಒ ಆಗಿ ಹೊಸಬರನ್ನು ಆಯ್ಕೆ ಮಾಡಿದ್ದು, ಹೊಸ ಸಿಇಒನ ಫೋಟೋವನ್ನು ಸಹ ಟ್ವೀಟ್ ಮಾಡಿದ್ದಾರೆ. ಹೊಸ ಸಿಇಒ ಫೋಟೋ ಹಂಚಿಕೊಂಡಿರುವ ಎಲಾನ್ ಮಸ್ಕ್ "The new CEO of Twitter is amazing" ಎಂದು ಟೈಟಲ್ ಹಾಕಿದ್ದಾರೆ. ಆದರೆ ಟ್ವಿಟರ್‌ನ ಹೊಸ ಸಿಇಒ ಯಾವುದೇ ವ್ಯಕ್ತಿಯಲ್ಲ, ಬದಲಾಗಿ ನಾಯಿಯನ್ನು ಸಿಇಒ ಎಂದು ಹೇಳಿಕೊಂಡು ಫೋಟೋ ಹಾಕಿದ್ದಾರೆ. ಈ ನಾಯಿ ಎಲಾನ್ ಮಸ್ಕ್ ಅವರ ಮುದ್ದಿನ ನಾಯಿ, ಫ್ಲೋಕಿ ಎಂಬುದಾಗಿದೆ.
ಸಿಇಒ ಕುರ್ಚಿಯ ಮೇಲೆ ಕುಳಿತ ನಾಯಿ
ಇನ್ನು ಎಲಾನ್ ಮಸ್ಕ್ ಅವರ ಮುದ್ದಿನ ನಾಯಿ ಫ್ಲೋಕಿಗೆ ಶಿಬಾ ಇನು ಎಂಬ ಇನ್ನೊಂದು ಹೆಸರು ಸಹ ಇದೆ. ಎಲಾನ್ ಮಸ್ಕ್ ಅವರು ತಮ್ಮ ನಾಯಿಯನ್ನು ಆಫೀಸಿನಲ್ಲಿ ಕೂರಿಸಿ ಸಿಇಒ ಎಂದು ಕರೆದ ಮೇಲೆ, ಈ ನಾಯಿಯನ್ನು ಕುರಿತು ಹೊಗಳಿದ್ದಾರೆ. ಮಸ್ಕ್ ಅವರು ತನ್ನ ಫ್ಲೋಕಿ ಎಂಬ ನಾಯಿಯನ್ನು ಸಿಇಒ ಕುರ್ಚಿ ಮೇಲೆ ಕೂರಿಸಿ, ನಾಯಿಯ ಮುಂದೆ ಹಲವು ಫೈಲ್ಗಳನ್ನು ಇಟ್ಟಿದ್ದಾರೆ. ನಂತರ ಫೋಟೋ ತೆಗೆದು, ಈತ ಟ್ವಿಟರ್‌ನ ಹೊಸ ಸಿಇಒ, ಯಾವುದೇ ಇತರೆ ವ್ಯಕ್ತಿಗಳಿಗಿಂತ ಈತನೇ ಬೆಸ್ಟ್ ಎಂದು ಟ್ವೀಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ