ಟೆಕ್ ದೈತ್ಯ ಗೂಗಲ್ (Google) ಇತ್ತೀಚೆಗೆ ತನ್ನ ಸೇವೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡುತ್ತಿದೆ. ಅದ್ರಲ್ಲೂ ಕೆಲವೊಂದು ಫೀಚರ್ಸ್ಗಳನ್ನು ಸಹ ಅಪ್ಲಿಕೇಶನ್ನಲ್ಲಿ ನಿಲ್ಲಿಸಿದೆ. ಸರ್ಚ್ ಇಂಜಿನ್ ದೈತ್ಯ ಗೂಗಲ್ ಸ್ಟೇಡಿಯಾ(Stadia Gaming) ಗೇಮಿಂಗ್ ಸೇವೆಯನ್ನು ಇತ್ತೀಚೆಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಿದ ನಂತರ ಮತ್ತೊಂದು ಸೇವೆಯನ್ನು ಬಂದ್ ಮಾಡುವುದಾಗಿ ಘೋಷಿಸಿದೆ. ಗೂಗಲ್‌ನಲ್ಲಿ ಬಳಕೆಯಲ್ಲಿದ್ದ ಹಳೆಯ ಸೇವೆಗಳು ಸ್ಥಗಿತವಾಗುವುದು, ಹಾಗೆಯೇ ಬಳಕೆದಾರರಿಗೆ ಹೊಸ ಸೇವೆಗಳನ್ನು ಪರಿಚಯ ಮಾಡುವುದು ಸಹಜವಾಗಿದೆ.
ಈಗಾಗಲೇ ಗೂಗಲ್ ತನ್ನ ಹಲವಾರು ಸೇವೆಗಳನ್ನು ಬಂದ್ ಮಾಡಿದೆ. ಹೊಸ ಘೋಷಣೆಯಲ್ಲಿ ಜನಪ್ರಿಯ ಸರ್ಚ್ ಇಂಜಿನ್‌ನ ಮತ್ತೊಂದು ಸೇವೆ ಇನ್ಮುಂದೆ ಅಸ್ತಿತ್ವದಲ್ಲಿರಲ್ಲ ಎಂದು ಹೇಳಿದೆ.
ಗೂಗಲ್‌ನ ಈ ಸೇವೆ ಬಂದ್
ಗೂಗಲ್ ಪ್ರಸ್ತುತ ಐಒಎಸ್ ಮತ್ತು ಆಂಡ್ರಾಯ್ಡ್‌ಗಳಿಗೆ ಲಭ್ಯವಿದ್ದ ಗೂಗಲ್ ನೌ (Google Now) ಲಾಂಚರ್ ಅನ್ನು ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದೆ. ಈ ಸೇವೆ ಸುಮಾರು 10 ವರ್ಷಗಳಿಂದ ಬಳಕೆದಾರರಿಗೆ ಸೇವೆಯಲ್ಲಿದ್ದು, ದಶಕದ ನಂತರ ಗೂಗಲ್ ನೌ ಸಂಪೂರ್ಣವಾಗಿ ಸೇವೆಯನ್ನು ನಿಲ್ಲಿಸಲು ನಿರ್ಧರಿಸಿದೆ.
ಇದನ್ನೂ ಓದಿ: ಡಿಮಾರ್ಟ್, ಬಿಗ್ ಬಾಸ್ಕೆಟ್, ಬಿಗ್ ಬಜಾರ್‌ನ ಫೇಕ್ ವೆಬ್‌ಸೈಟ್! ವಂಚಿಸೋ ಅಕೌಂಟ್ಗಳ ಬಗ್ಗೆ ತಿಳಿದುಕೊಳ್ಳೋದು ಹೇಗೆ?
ಯಾವಾಗ ಬಂದ್ ಆಗುತ್ತಿದೆ ಗೂಗಲ್ ನೌ ಲಾಂಚರ್?
ವರದಿಗಳು ತಿಳಿಸಿರುವ ಪ್ರಕಾರ ಈ ತಿಂಗಳ ಅಂತ್ಯದ ವೇಳೆಗೆ ಗೂಗಲ್ ನೌ ಲಾಂಚರ್ ಬಂದ್ ಆಗಲಿದೆ ಎನ್ನಲಾಗಿದೆ.
2012 ರಲ್ಲಿ ಆರಂಭವಾಗಿದ್ದ ಗೂಗಲ್ ನೌ
2012 ರಲ್ಲಿ ಪ್ರಾರಂಭವಾದ, Google Now ಸರಳವಾದ ಲಾಂಚರ್ ಆಗಿದ್ದು, ಇದನ್ನು ಆರಂಭದಲ್ಲಿ ಗೂಗಲ್ ಎಕ್ಸಿಪೀರಿಯನ್ಸ್ ಲಾಂಚರ್ (GEL) ಎಂದು ಹೆಸರಿಸಲಾಗಿತ್ತು. ಆದರೆ ನಂತರ 2014 ರಲ್ಲಿ, ಕಂಪೆನಿಯು ಗೂಗಲ್ ಪ್ಲೇ ಸ್ಟೋರ್ ಮೂಲಕ ಎಲ್ಲಾ ಆಂಡ್ರಾಯ್ಡ್ 4.1+ ಸಾಧನಗಳಿಗೆ ಗೂಗಲ್ ಲಾಂಚರ್ ಆಗಿ ತನ್ನ ಬಿಡುಗಡೆಯನ್ನು ಪ್ರಾರಂಭಿಸಿತು.
ಮಾಹಿತಿ ಕಾರ್ಡ್‌ಗಳ ರೂಪದಲ್ಲಿ ಅಗತ್ಯವಿರುವ ಮಾಹಿತಿಯನ್ನು ಬಳಕೆದಾರರಿಗೆ ಪೂರ್ವಭಾವಿಯಾಗಿ ತಲುಪಿಸುವ ಕೆಲಸವನ್ನು ಈ ಗೂಗಲ್ ನೌ ಮಾಡುತ್ತಿತ್ತು. GNL Google ಅಪ್ಲಿಕೇಶನ್‌ನ ಮೂಲಕ ಕೆಲವು ನವೀಕರಣಗಳನ್ನು ಸ್ವೀಕರಿಸಿದ್ದರೂ ಇದರ ಬಳಕೆ ಕ್ರಮೇಣ ಕಡಿಮೆಯಾಗಿತ್ತು.
ನಂತರ ಹಂತಹಂತವಾಗಿ ಇದರ ಬಳಕೆ ಕುಗ್ಗುತ್ತಿದ್ದಂತೆ, ಇದನ್ನು ಮುಚ್ಚುವ ನಿರ್ಧಾರವನ್ನು ಗೂಗಲ್ ತೆಗೆದುಕೊಳ್ಳಲು ನಿರ್ಧರಿಸಿತು. ಸುಮಾರು 2017 ರಿಂದ ಗೂಗಲ್ ನೌ ಸೇವೆ ಸ್ಥಗಿತವಾಗುತ್ತದೆ ಎನ್ನಲಾಗಿತ್ತು.
ನಂತರ ಬಂದ ಫೋನ್‌ಗಳಲ್ಲೂ ಈ ಸೇವೆ ಇರಲಿಲ್ಲ. ಕೊನೆಯದಾಗಿ ಗೂಗಲ್ ಸ್ಮಾರ್ಟ್‌ಫೋನ್‌ಗಳಾದ Google Nexus 5X ಮತ್ತು 6P ಗಳಲ್ಲಿ ಗೂಗಲ್ ನೌ ಲಾಂಚರ್ ಕಂಡುಬಂದಿತ್ತು. ಅಧಿಕೃತವಾಗಿ Google 2018 ರಿಂದ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸೇವೆಯನ್ನು ತೆಗೆದುಹಾಕಿತು.
ಸ್ಟೇಡಿಯಾ, ಕರೆಂಟ್ ಸೇವೆಯೂ ಈ ವರ್ಷ ಬಂದ್
ಸರ್ಚ್ ಇಂಜಿನ್ ದೈತ್ಯ ಗೂಗಲ್ ಗೇಮಿಂಗ್ ಪ್ರಿಯರಿಗಾಗಿ ಪ್ರಾರಂಭಿಸಿದ್ದ ಸ್ಟೇಡಿಯಾ(Stadia) ಗೇಮಿಂಗ್ ಸೇವೆಯನ್ನು ಸಹ ಈ ವರ್ಷದ ಜನವರಿ 18ರಿಂದ ಬಂದ್ ಮಾಡಿದೆ.
ಮೂರು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಈ ಸೇವೆ ಗೇಮಿಂಗ್ ಪ್ರಿಯರನ್ನು ಆಕರ್ಷಿಸುವಲ್ಲಿ ವಿಫಲವಾದ ಕಾರಣ ಗೂಗಲ್ ಇದನ್ನು ನಿಲ್ಲಿಸಿತು. ಗೂಗಲ್ ಈ ಸೇವೆಯ ಮೂಲಕ ವಿಡಿಯೋ ಗೇಮ್ ಕನ್ಸೋಲ್ ದೈತ್ಯರನ್ನು ಸೆಳೆಯುವುದಕ್ಕೆ ಮುಂದಾಗಿತ್ತು. ಆದರೆ ಇದು ಅಷ್ಟೊಂದು ಯಶಸ್ವಿಯಾಗದ ಕಾರಣ ಇದನ್ನು ಸ್ಟಾಪ್ ಮಾಡುವುದಾಗಿ ಗೂಗಲ್ ತನ್ನ ಘೋಷಣೆಯಲ್ಲಿ ತಿಳಿಸಿತ್ತು.
ಹಾಗೆಯೇ ಗೂಗಲ್ ನೌ ಲಾಂಚರ್ ಜೊತೆ ಜೊತೆಯೇ 3 ವರ್ಷಗಳ ಹಳೆಯ ಸೇವೆ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಗೂಗಲ್ ಪ್ಲಸ್‌ನ ಕಾರ್ಯ-ಕೇಂದ್ರಿತ ಆವೃತ್ತಿಯಾದ ಕರೆಂಟ್ಸ್ ಅನ್ನು ಸ್ಥಗಿತಗೊಳಿಸುವುದನ್ನು ಖಚಿತಪಡಿಸಿದೆ. ಈ ಸೇವೆಗೂ ಬಳಕೆದಾರರ ಕೊರತೆ ಎದುರಾಗಿತ್ತು, ಹೀಗಾಗಿ ಟೆಕ್ ದೈತ್ಯ 2019 ರಲ್ಲಿ ಪರಿಚಯಿಸಿದ್ದ ಇದನ್ನು ಮುಚ್ಚಲು ನಿರ್ಧರಿಸಿದ್ದು, ಇತ್ತೀಚೆಗೆ Gmail ಗೆ ಸಂಯೋಜಿಸಲಾಗುವುದು ಎಂದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ