news18-kannada Updated:February 20, 2021, 11:42 AM IST
Photo: Google
ಯಾರು ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್, ಟಿವಿ ಮತ್ತು ಆನ್ಲೈನ್ ಗೇಮ್ಗಳ ಮೇಲೆ ಕಳೆಯುತ್ತಾರೆಯೋ ಅವರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ. ಇಂದಿನ ಯುವ ಜನಾಂಗ ತಮ್ಮ ಹೆಚ್ಚಿನ ಸಮಯವನ್ನು ಆನ್ಲೈನ್ನಲ್ಲಿ ಅಥವಾ ಡಿಜಿಟಲ್ ಪರದೆ ಮೇಲೆ ಕಳೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಮೊಬೈಲ್ ಹಾಗೂ ಟಿವಿ ಇಲ್ಲದೇ ಇದ್ದರೆ ಜಗತ್ತೇ ಮುಳುಗಿ ಹೋಯಿತೇನೋ ಎನ್ನುವ ಒಂದು ಮನೋಭಾವ ಯುವಜನಾಂಗದಲ್ಲಿ ಬೆಳೆದಿದೆ. ಆದರೆ ಈ ಹವ್ಯಾಸ ಜೀವಹಾನಿಗೆ ಕಾರಣವಾಗಬಹುದು ಎನ್ನುವುದು ಅನೇಕರಿಗೆ ಗೊತ್ತಿಲ್ಲ.
ಅಧ್ಯಯನ ಹೇಳೋದೇನು?ಹದಿಹರೆಯದವರು ಅತಿಹೆಚ್ಚು ಮೊಬೈಲ್ ಹಾಗೂ ಟಿವಿ ಹಾಗೂ ಡಿಜಿಟಲ್ ಪರದೆಗಳನ್ನು ನೋಡುವುದರಿಂದ ಅವರಲ್ಲಿ ಆತ್ಮಹತ್ಯಾ ಆಲೋಚನೆಗಳು ಬರುತ್ತವೆ ಎನ್ನುತ್ತಿದೆ ವರದಿ. ಹೀಗೆ ಈ ವರದಿ ಯುವಜನರಿಗೆ ಒಂದು ಎಚ್ಚರಿಕೆಯನ್ನು ನೀಡುತ್ತಿದೆ.
ಈ ಆಧ್ಯಯನವು "ಯೌವನ ಹಾಗೂ ಹದಿಹರೆಯ" ಎನ್ನುವ ಒಂದು ಜರ್ನಲ್ನಲ್ಲಿ ಪ್ರಕಟವಾಗಿದೆ. ಈ ಅಧ್ಯಯನದ ಪ್ರಕಾರ, ಮನೋರಂಜನಾ ಅಪ್ಲಿಕೇಶನ್ಗಳು ಹುಡುಗಿಯರಿಗೆ ಹೆಚ್ಚು ಅಪಾಯಕಾರಿ ಎನ್ನುವುದನ್ನು ತಿಳಿಸುತ್ತದೆ. ಅಲ್ಲದೇ ಅಪ್ಲಿಕೇಶನ್ಗಳಲ್ಲಿ ಹೆಚ್ಚಿನ ಕಾಲ ಓದುವುದನ್ನು ರೂಢಿಸಿಕೊಂಡ ಹುಡುಗರಿಗೂ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತದೆ. ಒಟ್ಟಾರೆಯಾಗಿ ಡಿಜಿಟಲ್ ಪರದೆಗಳಿಗೆ ತಮ್ಮ ಹೆಚ್ಚಿನ ಸಮಯವನ್ನು ಮೀಸಲಿಡುವ ಹದಿಹರೆಯದವರನ್ನು ಈ ವರದಿ ಬೆಚ್ಚಿ ಬೀಳಿಸುತ್ತಿದೆ.
ಅಷ್ಟಕ್ಕೂ ಈ ಅಧ್ಯಯನನ್ನು ಕೆಲವು ದಿನ, ಕಲವು ತಿಂಗಳುಗಳಷ್ಟೇ ಮಾಡಿ ತೀರ್ಮಾನಕ್ಕೆ ಬಂದಿದ್ದಲ್ಲ. ಬದಲಿಗೆ, ಈ ಅಧ್ಯಯನಕ್ಕೆ ಮೀಸಲಿಟ್ಟ ಅವಧಿ ಬರೋಬ್ಬರಿ 10 ವರ್ಷಗಳು. ಹೌದು, 2009ರಿಂದಲೇ ಈ ಅಧ್ಯಯನವನ್ನು ಆರಂಭಿಸಲಾಗಿತ್ತು. ಈ ಅಧ್ಯಯನವನ್ನು ಸುಮಾರು 5000 ಮಕ್ಕಳ ಮೇಲೆ ಮಾಡಲಾಗಿದೆ. 13ಕ್ಕಿಂತ ಹೆಚ್ಚಿನ ವಯಸ್ಸಿನವರ ಮೇಲೆ ಈ ಅಧ್ಯಯನ ನಡೆದಿದೆ. ಹುಡುಗ, ಹುಡುಗಿಯರನ್ನೂ ಒಳಗೊಂಡಿತ್ತು.
ಹದಿಹರೆಯದ ಹುಡುಗಿಯರು ತಮ್ಮ ಹೆಚ್ಚಿನ ಸಮಯವನ್ನು ಟಿವಿ ನೋಡುವುದು, ವಿಡಿಯೋ ಗೇಮ್ ಆಡುವುದು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕಳೆಯುವುದರಿಂದ ಅವರಿಗೆ ಆತ್ಮಹತ್ಯೆಯಂತಹ ಆಲೋಚನೆಗಳು ಮನಸ್ಸಿನಲ್ಲಿ ಮೂಡುತ್ತವೆ ಎನ್ನುತ್ತದೆ ಈ ಅಧ್ಯಯನ. ಇದು ಹುಡುಗಿಯರಿಗಷ್ಟೇ ಸೀಮಿತವಾಗಿಲ್ಲ, ಹದಿಹರೆಯದ ಹುಡುಗರಿಗೂ ಇದು ಅನ್ವಯ. ಅತಿಹೆಚ್ಚು ಡಿಜಿಟಲ್ ಪರದೆಗೆ ಅಂಟಿಕೊಂಡಿರುವ ಹುಡುಗರಿಗೂ ಇದೇ ರೀತಿಯಾದ ಆಲೋಚನೆಗಳು ಮೂಡಿದ್ದು ಅಧ್ಯಯನದಿಂದ ತಿಳಿದು ಬಂದಿದೆ.
ಬ್ರಿಗಮ್ ಯಂಗ್ ಯೂನಿವರ್ಸಿಟಿಯ 'ಸ್ಕೂಲ್ ಆಫ್ ಫ್ಯಾಮಿಲಿ ಲೈಫ್'ನ ಸಹಾಯಕ ನಿರ್ದೇಶಕಿಯಾಗಿರುವ ಲೇಖಕಿ ಸಾರಾ ಕೊಯೆನ್, ಈ ಕುರಿತು ಬೇರೆಯದೇ ಅಭಿಪ್ರಾಯವನ್ನು ಮುಂದಿಡುತ್ತಾರೆ. ಅವರ ಪ್ರಕಾರ, ಯಾವುದೇ ಡಿಜಿಟಲ್ ಪರದೆಯ ಮೇಲೆ ಹೆಚ್ಚು ಸಮಯವನ್ನು ಕಳೆದಯುವುದರಿಂದಲೇ ಆತ್ಮಹತ್ಯಾ ಆಲೋಚನೆಗಳು ಉಂಟಾಗುತ್ತವೆ ಎಂದು ಹೇಳಲಾಗದು. ಆದರೂ ಇವೆರಡರ ಮಧ್ಯೆ ಪರಸ್ಪರ ಸಂಬಂಧವಿದೆ ಎನ್ನುತ್ತಾರೆ. ಅವರು ಮತ್ತಷ್ಟು ಈ ಕುರಿತು ಏನು ಹೇಳುತ್ತಾರೆ ಎನ್ನುವುದನ್ನು ನೀವೇ ನೋಡಿ.ಡಿಜಿಟಲ್ ಸಾಧನಗಳ ಹೆಚ್ಚು ಬಳಕೆಯ ಅಪಾಯಗಳ ಬಗ್ಗೆ ಸಾರಾ ಮತ್ತಷ್ಟು ಬೆಳಕು ಚೆಲ್ಲುತ್ತಾರೆ. ಹದಿಹರೆಯದವರು ಯಾವಾಗಲೂ ಮೊಬೈಲ್, ಟಿವಿ ಹಾಗೂ ಸೋಶಿಯಲ್ ಮಿಡಿಯಾದಲ್ಲಿಯೇ ಇರುವುದರಿದ ಅವರು ತಮ್ಮ ಸುತ್ತಮುತ್ತಲಿನ ಜನರ ಜೊತೆಗೆ ಸಾಕಷ್ಟು ಸಮಯವನ್ನು ಕಳೆಯುವುದಿಲ್ಲ. ಅವರ ಸಮಯವೆಲ್ಲ ವರ್ಚುವಲ್ ಜಗತ್ತಿನಲ್ಲೇ ಕಳೆದು ಹೋಗುತ್ತದೆ. ಟಿಕ್ಟಾಕ್, ಇನ್ಸ್ಟಾಗ್ರಾಮ್ನಂತರ ಸೋಶಿಯಲ್ ಮೀಡಿಯಾಗಳನ್ನು ಸತತವಾಗಿ ಬಳಸುವುದರಿಂದ ಹದಿಹರೆಯದರಿಗೆ ಏಕಾಂಗಿತನ ಕಾಡತೊಡಗುತ್ತದೆ. ಅವರಿಗೆ ಕೀಳರಿಮೆ ಉಂಟಾಗುವ ಜೊತೆಗೆ ಇದು ಅವರನ್ನು ಖಿನ್ನತೆಗೂ ದೂಡುತ್ತದೆ ಎನ್ನುತ್ತಾರೆ ಸಾರಾ.
ಈ ಅಧ್ಯಯನದಲ್ಲಿ ಪಾಲ್ಗೊಂಡ ಸಂಶೋಧಕರು ಎಲ್ಲ ಪೋಷಕರಿಗೂ ಒಂದು ಸಲಹೆಯನ್ನು ನೀಡುತ್ತಾರೆ. " ನಿಮ್ಮ ಮಕ್ಕಳು ಸೋಶಿಯಲ್ ಮಿಡಿಯಾಗಳಲ್ಲಿ ಜನರನ್ನು ಫಾಲೋ ಮಾಡುವುದರಿಂದ ಹೇಗೆ ಫೀಲ್ ಆಗುತ್ತಾರೆ? ಇದರಿಂದ ಅವರಿಗೆ ಏನನಿಸುತ್ತದೆ? ಎನ್ನುವುದನ್ನು ಕೇಳಬೇಕು. ಒಂದುವೇಳೆ ಕೆಲವೊಂದು ನಿರ್ದಿಷ್ಟ ಜನರನ್ನು ಫಾಲೋ ಮಾಡುವಾಗ, ಮಕ್ಕಳು ಮಾನಸಿಕವಾಗಿ ದುರ್ಬಲರಂತೆ ಫೀಲ್ ಆದರೆ, ಅಥವಾ ನೈತಿಕವಾಗಿ ಕುಗ್ಗಿದರೆ, ಆ ಜನರನ್ನು ಸೋಶೀಯಲ್ ಮೀಡಿಯಾಗಳಲ್ಲಿ ಫಾಲೋ ಮಾಡುವುದನ್ನು ಬಿಟ್ಟು, ಕೂಡಲೇ ಆ ಸಾಮಾಜಿಕ ಜಾಲತಾಣವನ್ನು ಡಿಲೀಟ್ ಮಾಡಿ ಹೊರಬರುವುದು ಉತ್ತಮ," ಎಂದು ಹೇಳುತ್ತಾರೆ.
ಡಿಜಿಟಲ್ ಸಾಧನಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿದರೆ, ಹದಿಹರೆಯದವರು ಅನೇಕ ಸಮಸ್ಯೆಗಳಿಂದ ಪಾರಾಗಬಹುದು. ಅಲ್ಲದೇ ತಾವು ಜೀವನದಲ್ಲಿ ಇಟ್ಟುಕೊಂಡಿರುವ ಗುರಿಯಯತ್ತ ಏಕಾಗ್ರತೆಯಿಂದ ಸಾಗಬಹುದು ಅಲ್ಲವೇ?
Published by:
Harshith AS
First published:
February 20, 2021, 11:42 AM IST