ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಈ ಬಾರಿಯ ಶಬರಿ ಮಲೆ ಯಾತ್ರೆಯನ್ನು ಮೊಟಕುಗೊಳಿಸಿದ್ದಾರೆ. ಎಲ್ಲೆಡೆ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಶಿವಣ್ಣ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಪ್ರತಿ ಬಾರಿಯಂತೆ ಈ ಬಾರಿ ಕೂಡ ಶಿವಣ್ಣ ಮಾಲೆ ಧರಿಸಿ ತಮ್ಮ ತಂಡದೊಂದಿಗೆ ಶಬರಿಮಲೆಯ ಸ್ವಾಮಿ ಅಯ್ಯಪ್ಪ ದರ್ಶನಕ್ಕೆ ಹೋಗಲು ಅಣಿಯಾಗಿದ್ದರು. ಆದರೆ ಕೊರೋನಾ ವೈರಸ್ ಬಗೆಗಿನ ಮುಂಜಾಗ್ರತ ಕ್ರಮವಾಗಿ ಶಬರಿ ಮಲೆ ಯಾತ್ರೆಯನ್ನು ರದ್ದು ಮಾಡಿದ್ದಾರೆ.
ಯಾತ್ರೆಯನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಪೂಜೆ ಮಾಡಿ ಮಾಲೆ ಬಿಚ್ಚಿಟ್ಟಿದ್ದಾರೆ ಎಂದು ಶಿವಣ್ಣನ ಆಪ್ತ ಮೂಲಗಳು ತಿಳಿಸಿವೆ. ಹಾಗೆಯೇ ಈ ಪೂಜೆಯಲ್ಲಿ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಕುಟುಂಬ ಸದಸ್ಯರು ಭಾಗಿಯಾಗಿದ್ದಾರೆ.
ನಿರ್ದೇಶಕ ರಘುರಾಮ್ ಸೇರಿದಂತೆ ಶಿವಣ್ಣನ ಆಪ್ತ ಬಳಗ ಫೆಬ್ರವರಿ 21ರಂದು ಮಾಲೆ ಧರಿಸಿತ್ತು. ಹಾಗೆಯೇ ಮಾರ್ಚ್ 15 ರಂದು ಶಬರಿಮಲೆಗೆ ತೆರಳು ನಿರ್ಧರಿಸಿದ್ದರು. ಆದರೆ ಕೇರಳದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಅನೇಕ ದೇವಾಲಯಗಳ ಆಡಳಿತ ಮಂಡಳಿ ಸಾಮೂಹಿಕ ಭೇಟಿಗೆ ಅವಕಾಶ ನೀಡಲಾಗುತ್ತಿಲ್ಲ.
ಇನ್ನು ಶಬರಿಮಲೆ ದೇವಸ್ಥಾನ ಮಂಡಳಿ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಈಗ ಭಕ್ತರು ಬರುವುದು ಒಳ್ಳೆಯದಲ್ಲ ಎಂದು ತಿಳಿಸಿದೆ. ಹೀಗಾಗಿ ಶಿವಣ್ಣ ಯಾತ್ರೆಯನ್ನು ರದ್ದು ಮಾಡಿ, ಜಾಲಹಳ್ಳಿಯ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ