ನವದೆಹಲಿ (ಮೇ 11): ಲಾಕ್ಡೌನ್ ಅವಧಿಯಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಅತಿದೊಡ್ಡ ಬ್ಯಾಂಕ್ ಎಂದು ಹೆಸರಾಗಿರುವ ಎಸ್ಬಿಐ ತನ್ನ ಗ್ರಾಹಕರಿಗೆ ಕೆಲವು ಸಲಹೆಗಳನ್ನು ನೀಡಿದೆ. ಈ ಮೂಲಕ ತನ್ನ 44 ಕೋಟಿಗೂ ಅಧಿಕ ಗ್ರಾಹಕರು ತಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಎಸ್ಬಿಐ ಸಲಹೆ ನೀಡಿದೆ.
ಟ್ವಿಟ್ಟರ್ ಮೂಲಕ ತನ್ನ ಗ್ರಾಹಕರಿಗೆ ಕೆಲವು ಸೂಚನೆಗಳನ್ನು ಎಸ್ಬಿಐ ನೀಡಿದೆ. ಗ್ರಾಹಕರು ಎಚ್ಚರದಿಂದಿದ್ದರೆ ತಮ್ಮ ಹಣವನ್ನು ಕಾಪಾಡಿಕೊಳ್ಳಬಹುದು. ದಿನದಿಂದ ದಿನಕ್ಕೆ ದೇಶದಲ್ಲಿ ಎಟಿಎಂ, ಓಟಿಪಿ, ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದು ಮೋಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಜನರು ಹೆಚ್ಚು ಎಚ್ಚರದಿಂದಿರಬೇಕು. ಈ ಬಗ್ಗೆ ನಾವು ಸದಾ ನಮ್ಮ ಗ್ರಾಹಕರನ್ನು ಎಸ್ಎಂಎಸ್ಗಳ ಮೂಲಕ ಅಲರ್ಟ್ ಮಾಡುತ್ತಿರುತ್ತೇವೆ. ಗ್ರಾಹಕರು ಕಷ್ಟಪಟ್ಟು ದುಡಿದಿರುವ ಹಣ ಬೇರೊಬ್ಬರ ಪಾಲಾಗಬಾರದು ಎಂಬ ಕಾಳಜಿ ನಮ್ಮದು ಎಂದು ಎಸ್ಬಿಐ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಅಚ್ಚರಿಯಾದರೂ ಸತ್ಯ; ತಾನು ಗರ್ಭಿಣಿಯೆಂದು ತಿಳಿಯದೆ ಮಗು ಹೆತ್ತ ಮಹಿಳೆ!
ಕೆಳಕಂಡ 10 ಸಲಹೆಗಳನ್ನು ಪಾಲಿಸುವುದರಿಂದ ಜನರು ತಮ್ಮ ಹಣವನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು.
1. ನೀವು ಎಟಿಎಂಗೆ ಹಣ ತೆಗೆಯಲು ಹೋದಾಗ ಯಾರೂ ನೀವು ನಮೂದಿಸುವ ಪಿನ್ ನಂಬರ್ ನೋಡಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಕ್ಕಪಕ್ಕದಲ್ಲಿ ಯಾರಾದರೂ ಇದ್ದರೆ ಮತ್ತೊಂದು ಕೈಯಿಂದ ಎಟಿಎಂ ಕೀಬೋರ್ಡ್ ಅನ್ನು ಮುಚ್ಚಿಕೊಳ್ಳಿ.
2. ನಿಮ್ಮ ಎಟಿಎಂ ಪಿನ್ ನಂಬರ್ ಅನ್ನು ಮೊಬೈಲ್ನಲ್ಲಿ ಸೇವ್ ಮಾಡಿಕೊಳ್ಳುವ ಅಥವಾ ಬರೆದಿಟ್ಟುಕೊಳ್ಳುವ ಬದಲು ಅದನ್ನು ಜ್ಞಾಪಕದಲ್ಲಿ ಉಳಿಸಿಕೊಳ್ಳಿ.
3. ನೀವು ಎಟಿಎಂ ಪಿನ್ ನಂಬರ್ ಬದಲಾಯಿಸುವಾಗ ನಿಮಗೆ ಸುಲಭವಾಗಿ ನೆನಪಿರಬೇಕು ಎಂದು ಯಾರದಾದರೂ ಹುಟ್ಟಿದ ದಿನಾಂಕ, ವಾರ್ಷಿಕೋತ್ಸವ ಇತ್ಯಾದಿಗಳನ್ನು ಹಾಕಬೇಡಿ. ಅದರಿಂದಾಗಿ ನಿಮ್ಮ ಎಟಿಎಂ ಪಿನ್ ಸಂಖ್ಯೆಯನ್ನು ಊಹಿಸಲು ಸುಲಭವಾಗುತ್ತದೆ. ಹೀಗಾಗಿ, ಒಂದಕ್ಕೊಂದು ಸಂಬಂಧವಿಲ್ಲದ ನಂಬರ್ಗಳನ್ನು ಎಟಿಎಂ ಪಿನ್ ಆಗಿ ಮಾಡಿಕೊಳ್ಳಿ.
ಇದನ್ನೂ ಓದಿ: ಶ್ರಮಿಕ್ ರೈಲಿನಲ್ಲಿನ್ನು 1,700 ಪ್ರಯಾಣಿಕರು, 3 ಕಡೆ ಸ್ಟಾಪ್; ಕಾರ್ಮಿಕರಿಗೆ ಅನುಕೂಲ ಕಲ್ಪಿಸಿದ ರೈಲ್ವೆ ಇಲಾಖೆ
4. ನಿಮ್ಮ ಅಕೌಂಟ್ನಿಂದ ಹಣ ಹೋಗಿದ್ದನ್ನು ಮತ್ತು ಬಂದಿದ್ದನ್ನು ಗಮನಿಸಲು ಎಸ್ಎಂಎಸ್ ನೋಟಿಫಿಕೇಷನ್ ಆ್ಯಕ್ಟಿವ್ ಮಾಡಿಸಿಕೊಳ್ಳಿ. ಆಗ ಯಾರಾದರೂ ನಿಮ್ಮ ಖಾತೆಯಿಂದ ಹಣ ಡ್ರಾ ಮಾಡಿದರೂ ನಿಮಗೆ ತಕ್ಷಣ ನೋಟಿಫಿಕೇಷನ್ ಬರುತ್ತದೆ.
5. ನೀವು ಎಟಿಎಂ ರೂಂ ಪ್ರವೇಶಿಸಿದ ಕೂಡಲೆ ಸುತ್ತಲೂ ಒಮ್ಮೆ ಕಣ್ಣಾಡಿಸಿ. ನಿಮ್ಮ ಎಟಿಎಂ ಪಿನ್ ಕೋಡ್ ಗಮನಿಸಲು ಎಲ್ಲಾದರೂ ಹಿಡನ್ ಕ್ಯಾಮೆರಾಗಳಿವೆಯೇ? ಎಂಬುದನ್ನು ಗಮನಿಸಿ.
6. ನಿಮ್ಮ ಓಟಿಪಿ, ಎಟಿಎಂ ಕಾರ್ಡ್ ಪಿನ್ ನಂಬರ್ ಮತ್ತಿತರ ಯಾವುದೇ ಮಾಹಿತಿಯನ್ನೂ, ಬ್ಯಾಂಕ್ ವಿವರಗಳನ್ನೂ ಯಾರೊಂದಿಗೂ ಹಂಚಿಕೊಳ್ಳಬೇಡಿ.
7. ಮಿಸ್ ಕಾಲ್ ಆಯ್ಕೆಯನ್ನು ಆ್ಯಕ್ಟಿವೇಟ್ ಮಾಡಿಕೊಳ್ಳಿ. ಅದರಿಂದಾಗಿ ನಿಮ್ಮ ಖಾತೆಯ ಎಲ್ಲ ಮಾಹಿತಿಗಳೂ ಬ್ಯಾಂಕ್ನಿಂದ ಆಗಾಗ ಲಭ್ಯವಾಗುತ್ತಿರುತ್ತವೆ
8. ನಿಮ್ಮ ಎಟಿಎಂ ಪಿನ್ ಮತ್ತಿತರ ಬ್ಯಾಂಕ್ ಖಾತೆ ಸಂಬಂಧಿ ಮಾಹಿತಿಗಳನ್ನು ಕೋರುವ ಮೆಸೇಜ್ಗಳಿಗೆ ಯಾವುದೇ ಕಾರಣಕ್ಕೂ ಉತ್ತರಿಸಬೇಡಿ.
9. ಎಟಿಎಂ ಕೇಂದ್ರದೊಳಗೆ ಒಂದು ಬಾರಿ ಓರ್ವ ವ್ಯಕ್ತಿಗೆ ಮಾತ್ರ ಹೋಗಲು ಅವಕಾಶ ಇರುತ್ತದೆ. ನೀವು ಎಟಿಎಂ ಒಳಗೆ ಇದ್ದಾಗ ಯಾರಾದರೂ ಬಂದರೆ ಸೆಕ್ಯುರಿಟಿ ಸಿಬ್ಬಂದಿಯ ಸಹಾಯ ಪಡೆಯಿರಿ.
10. ನೀವು ಎಟಿಎಂ ಸೆಂಟರ್ ಒಳಗಿದ್ದಾಗ ಯಾರಾದರೂ ಬಂದರೆ ಅವರು ನಿಮ್ಮ ಕಾರ್ಡ್ ಪಿನ್ ಕೋಡ್ ಮತ್ತು ಮಾಹಿತಿಯನ್ನು ಕದಿಯುವ ಸಾಧ್ಯತೆ ಇರುತ್ತದೆ. ಹೀಗಾಗಿ, ಎಚ್ಚರದಿಂದಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ