ನಾವು ಒಮ್ಮೊಮ್ಮೆ ಕೆಲ ಉತ್ಪನ್ನಗಳನ್ನು (Product) ಆ ಉತ್ಪನ್ನದ ಸಂಸ್ಥೆಯು ಆ ಉತ್ಪನ್ನದ ಬಗ್ಗೆ ಇರುವ ಕೆಲ ವಿಶಿಷ್ಟತೆಗಳು ಅಥವಾ ವೈಶಿಷ್ಟ್ಯದ (Feature) ಬಗ್ಗೆ ಹೇಳಿದಾಗ ಆಕರ್ಷಿತರಾಗಿ ತೆಗೆದುಕೊಳ್ಳುತ್ತೇವೆ. ಅಂದರೆ ನಮಗೆ ಆ ಉತ್ಪನ್ನ ತಯಾರಕರು ಹೇಳಿರುವ ಒಂದು ವಿಶೇಷತೆಯೇ ಆ ಉತ್ಪನ್ನವನ್ನು ಕೊಳ್ಳುವಂತೆ ಪ್ರೇರೇಪಿಸುತ್ತದೆ ಎಂದು ಹೇಳಬಹುದು. ಆದರೆ, ಒಮ್ಮೆ ಯೋಚಿಸಿ ನಿಮಗೆ ಸ್ಮಾರ್ಟ್ ಫೋನಿನ (Smart Phone) ಯಾವುದೋ ಒಂದು ವೈಶಿಷ್ಟ್ಯವು ಸಾಕಷ್ಟು ಪ್ರಭಾವ ಬೀರಿ ನೀವು ಅದನ್ನು ಅದರ ಆ ವೈಶಿಷ್ಟ್ಯಕ್ಕಾಗಿಯೇ ತೆಗೆದುಕೊಳ್ಳುವಂತೆ ಮಾಡಿರುತ್ತದೆ ಹಾಗೂ ನೀವು ಒಂದೊಮ್ಮೆ ಅದನ್ನು ದೊಡ್ಡ ಬೆಲೆ ತೆತ್ತು ಖರೀದಿಸಿದ ನಂತರ ಗೊತ್ತಾಗುತ್ತದೆ ಅದರಲ್ಲಿ ಆ ವೈಶಿಷ್ಟ್ಯ ಇಲ್ಲವೆಂದು. ಆಗ ನಿಮ್ಮ ಪರಿಸ್ಥಿತಿ ಏನಾಗಬೇಡ ಹೇಳಿ.
ಹೌದು, ಕೆಲವೊಮ್ಮೆ ಕೆಲ ಬ್ರ್ಯಾಂಡುಗಳು ಹೆಚ್ಚು ಪರಿಶೀಲಿಸದೆ/ಪರೀಕ್ಷಿಸದೆ ಏನೋ ಒಂದು ವೈಶಿಷ್ಟ್ಯ ಇದೆ ಎಂದು ಹೇಳಿ ತಮ್ಮ ಉತ್ಪನ್ನ ಹೆಚ್ಚು ಮಾರಾಟ ಮಾಡಲು ಪ್ರಯತ್ನಿಸುತ್ತವೆ ಹಾಗೂ ನಂತರ ವಾಸ್ತವತೆ ಗೊತ್ತಾದ ಮೇಲೆ ದಂಡ ತೆರದೇ ಬೇರೆ ಆಯ್ಕೆಯೇ ಅವಕ್ಕಿರುವುದಿಲ್ಲ. ಸದ್ಯ, ಈಗ ಅಂತಹುದ್ದೆ ಒಂದು ಘಟನೆ ದೂರದ ಆಸ್ಟ್ರೇಲಿಯಾದಿಂದ ಬೆಳೆಕಿಗೆ ಬಂದಿದೆ.
ಸ್ಯಾಮ್ಸಂಗ್ ಸಂಸ್ಥೆಗೆ ಆಸ್ಟ್ರೇಲಿಯಾದಲ್ಲಿ ದಂಡ
ಜಗತ್ತಿನ ದೊಡ್ಡ ಸ್ಮಾರ್ಟ್ ಫೋನ್ ಉತ್ಪಾದಕರ ಪೈಕಿ ಮಂಚೂಣಿಯಲ್ಲಿರುವ ಸ್ಯಾಮ್ಸಂಗ್ ಸಂಸ್ಥೆಗೆ ಈಗ ವರದಿಯಾಗಿರುವಂತೆ ಆಸ್ಟ್ರೇಲಿಯಾದಲ್ಲಿ 9.65 ಮಿಲಿಯನ್ ಡಾಲರ್ ಎಂದರೆ ಭಾರತೀಯ ಕರೆನ್ಸಿಯಲ್ಲಿ 75.50 ಕೋಟಿ ರೂಪಾಯಿಗಳ ದಂಡ ವಿಧಿಸಲಾಗಿದೆ. ಈಗ ವರದಿಯಾಗಿರುವಂತೆ ಆಸ್ಟ್ರೇಲಿಯಾದ ಕಾಂಪಿಟೇಷನ್ ಕಮಿಷನ್ ಈ ಬಗ್ಗೆ ಸ್ಯಾಮ್ಸಂಗ್ ಸಂಸ್ಥೆ ತನ್ನ ಸ್ಮಾರ್ಟ್ ಫೋನಾದ ಗ್ಯಾಲಕ್ಸಿಯ ವೈಶಿಷ್ಟ್ಯವೊಂದನ್ನು ತಪ್ಪಾಗಿ ಕ್ಲೈಮ್ ಮಾಡಿ ಜನರನ್ನು ದಾರಿ ತಪ್ಪಿಸಿರುವ ಅಂಶಕ್ಕೆ ಪ್ರತಿಯಾಗಿ ದಂಡ ವಿಧಿಸಿದೆ ಎನ್ನಲಾಗಿದೆ.
ಗ್ರಾಹಕರಿಗೆ ದಾರಿ ತಪ್ಪಿಸಿರುವ ಬಗ್ಗೆ ಒಪ್ಪಿಕೊಂಡ ಸ್ಯಾಮ್ಸಂಗ್
ರೈಟರ್ಸ್ ವರದಿ ಮಾಡಿರುವಂತೆ ಆಸ್ಟ್ರೇಲಿಯಾದ ಕಾಂಪಿಟೇಷನ್ ಆಂಡ್ ಕನ್ಸ್ಯೂಮರ್ ಕಮಿಷನ್ (ಎಸಿಸಿಸಿ), ಸ್ಯಾಮ್ಸಂಗ್ ಸಂಸ್ಥೆಯ ಆಸ್ಟ್ರೇಲಿಯಾದ ಘಟಕವು ತನ್ನ ಸ್ಮಾರ್ಟ್ ಫೋನಿನಲ್ಲಿ ನೀರು ನಿರೋಧಕ ಅಂಶಗಳಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ದಾರಿ ತಪ್ಪಿಸಿರುವ ಬಗ್ಗೆ ಒಪ್ಪಿಕೊಂಡಿರುವುದಾಗಿ ಹೇಳಿದೆ.
ಇದನ್ನೂ ಓದಿ: Cloudflare ಸ್ಥಗಿತ: '500 ಆಂತರಿಕ ಸರ್ವರ್ ಎರರ್' ಎದುರಿಸಿದ ವೆಬ್ಸೈಟ್ಗಳು! ಇದಕ್ಕೆ ಕಾರಣವೇನು ಗೊತ್ತಾ?
ಈ ವಿಷಯಕ್ಕೆ ಸಂಬಂಧಿಸಿದಂತೆ ಎಸಿಸಿಸಿಯು 2019 ರಲ್ಲೇ ಸ್ಯಾಮ್ಸಂಗ್ ಸಂಸ್ಥೆಯ ಮೇಲೆ ಪ್ರಕರಣ ದಾಖಲಿಸಿತ್ತು. ಆ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರು ಸಂಸ್ಥೆಯು ಗ್ರಾಹಕರನ್ನು "ತಪ್ಪು ದಾರಿಗೆಳೆಯುವಂತೆ" ತಮ್ಮ ಫೋನು ಎಲ್ಲ ರೀತಿಯ ಅಥವಾ ಪ್ರಕಾರಗಳ ನೀರಿನಲ್ಲಿ ಬಳಸಲು ಸಮರ್ಥವಾಗಿರುವುದಾಗಿ ಹೇಳಿಕೆ ನೀಡಿರುವುದಾಗಿ ಹೇಳಿದ್ದರೆನ್ನಲಾಗಿದೆ.
ಸ್ಯಾಮ್ಸಂಗ್ ಬಿತ್ತರಿಸಿದ ಆ ಜಾಹಿರಾತು ಯಾವುದು
ಸಂಸ್ಥೆಯ ಪ್ರಕಾರ, ಅದು ಮಾರ್ಚ್ 2016 ರಿಂದ ಅಕ್ಟೋಬರ್ 2018 ರ ಅವಧಿಯ ಮಧ್ಯೆ ಸ್ಯಾಮ್ಸಂಗ್ ಜಾಹೀರಾತೊಂದನ್ನು ಬಿತ್ತರಿಸಿತ್ತು ಹಾಗೂ ಅದರಲ್ಲಿ ಅದು ತನ್ನ ಫೋನನ್ನು ಸಾಮಾನ್ಯ ನೀರು ಅಥವಾ ಸಮುದ್ರ ನೀರು ಎರಡರಲ್ಲೂ ಬಳಸಬಹುದು ಎಂದು ಹೇಳಿಕೊಂಡಿತ್ತು. ಅದಾದ ಬಳಿಕ ಹಲವಾರು ದೂರುಗಳು ಬಂದವು ಹಾಗೂ ಹಲವರು ಆ ಫೋನ್ ನೀರಿನಲ್ಲಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದರೆ ಇನ್ನೂ ಕೆಲವರು ಆ ಫೋನನ್ನು ನೀರಿನಲ್ಲಿ ಬಳಸಲು ಪ್ರಾರಂಭಿಸಿದಾಗ ಅದು ಕೆಲಸ ಮಾಡುವುದನ್ನೇ ನಿಲ್ಲಿಸಿತು ಎಂದು ದೂರಿದ್ದರು.
ಇದನ್ನೂ ಓದಿ: Beware! ವಿದ್ಯುತ್ ಬಿಲ್ ಪಾವತಿಗೆ ಸಂಬಂಧಿಸಿದಂತೆ ಏನಾದ್ರೂ ಮೆಸೇಜ್ ಬಂದಿದ್ಯಾ? ಅದು ಸ್ಕ್ಯಾಮ್ ಆಗಿರಬಹುದು ಎಚ್ಚರ !
ಎಸಿಸಿಸಿಯ ಮುಖ್ಯಸ್ಥರು ಈ ಸಂದರ್ಭದಲ್ಲಿ ಸ್ಯಾಮ್ಸಂಗ್ ಸಂಸ್ಥೆಯು ತನ್ನ ಆ ಫೋನನ್ನು ಪರಿಣಾಮಕಾರಿಯಾಗಿ ಮಾರಾಟ ಮಾಡಲು ಆ ಫೋನಿನ ಬಗ್ಗೆ ಮಾಡಿದ್ದ ಕ್ಲೈಮ್ ಅಂದರೆ ಅದು ಎಲ್ಲ ಬಗೆಯ ನೀರಿನಲ್ಲಿ ಬಳಸಬಹುದಾಗಿದೆ ಎಂಬ ಅಂಶವು ಪ್ರಮುಖವಾಗಿತ್ತು ಎಂದು ಹೇಳಿದ್ದಾರೆ. ಏಕೆಂದರೆ, ಈ ಒಂದು ಹೇಳಿಕೆಯಿಂದಲೇ ಬಹಳಷ್ಟು ಜನರು ಈ ಫೋನನ್ನು ಖರೀದಿ ಮಾಡಿದ್ದರು ಎಂದು ತಿಳೀದುಬಂದಿದ್ದು ಆದರೆ ಆ ಕ್ಲೈಮ್ ವಾಸ್ತವದಲ್ಲಿ ಸರಿಯಾಗಿಲ್ಲ ಎಂದು ಕಂಡು ಬಂದಿದೆ. ಹಾಗಾಗಿ ಪ್ರಾಧಿಕಾರವು ಆಸ್ಟ್ರೇಲಿಯಾದ ಸ್ಯಾಮ್ಸಂಗ್ ಘಟಕವನ್ನು ಕುರಿತು ಜನರನ್ನು ತಪ್ಪು ದಾರಿಗೆಳೆದಿರುವ ಬಗ್ಗೆ ಹಾಗೂ ಅದನ್ನು ಅವರು ಒಪ್ಪಿಕೊಂಡಿರುವುದರಿಂದ ಇಷ್ಟು ಮೊತ್ತದ ದಂಡ ವಿಧಿಸಿದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ