ನವದೆಹಲಿ: ಐದು ವರ್ಷಗಳ ಹಿಂದೆ ಜಗತ್ತಿಗೆ ಕಾಲಿಟ್ಟ ರಿಲಾಯನ್ಸ್ ಜಿಯೋ ಈಗಾಗಲೇ ಸಾಕಷ್ಟು ಬೆಳವಣಿಗೆ ಕಂಡಿದೆ. ಟೆಲಿಕಾಂ ಕ್ಷೇತ್ರದಲ್ಲಿ ಪಾರಮ್ಯ ಮೆರೆಯುತ್ತಿದೆ. ಆದರೆ, ಇನ್ನೂ 2ಜಿ ನೆಟ್ವರ್ಕ್ನಲ್ಲೇ ಇರುವ ಕೋಟ್ಯಂತರ ಮಂದಿಯನ್ನ 4ಜಿ ನೆಟ್ವರ್ಕ್ಗೆ ಕರೆತರುವ ದೊಡ್ಡ ಪ್ರಯತ್ನದಲ್ಲಿದೆ. ಜಿಯೋ ಫೋನ್ ಮೂಲಕ ಆ ಕೆಲಸದಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗುತ್ತಿದೆ. ಇದೀಗ ಸ್ಮಾರ್ಟ್ಫೋನ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಲು ಜಿಯೋ ಸಜ್ಜಾಗಿದೆ. ಅದರಲ್ಲೂ ಸ್ಮಾರ್ಟ್ಫೋನ್ನ ಆನ್ಲೈನ್ ಮಾರುಕಟ್ಟೆಗೆ ಸೆಡ್ಡು ಹೊಡೆಯುವ ಮಾಸ್ಟರ್ ಪ್ಲಾನ್ ಮಾಡಿದೆ. ಅಮೇಜಾನ್, ಫ್ಲಿಪ್ಕಾರ್ಟ್ನಂಥ ದೈತ್ಯ ಇ-ಕಾಮರ್ಸ್ ಸಂಸ್ಥೆಗಳು ಆನ್ಲೈನ್ ಎಲೆಕ್ಟ್ರಾನಿಕ್ ವ್ಯವಹಾರದಲ್ಲಿ ಹೊಂದಿರುವ ಪ್ರಾಬಲ್ಯವನ್ನು ಮುರಿಯಲು ರಿಲಾಯನ್ಸ್ ಕಸರತ್ತು ನಡೆಸುತ್ತಿದೆ. ಆ ನಿಟ್ಟಿನಲ್ಲಿ ರಿಲಾಯನ್ಸ್ ಜಿಯೋ ಫೋನ್ ನೆಕ್ಸ್ಟ್ (Jio Phone Next) ಫೋನ್ ಒಂದು ಹೆಜ್ಜೆ.
ಗೂಗಲ್ ಸಂಸ್ಥೆಯ ಸಹಯೋಗದೊಂದಿಗೆ ಜಿಯೋ ಫೋನ್ ನೆಕ್ಸ್ಟ್ ಫೋನನ್ನು ತಯಾರಿಸಲಾಗಿದೆ. ಇದು 5ಜಿ ನೆಟ್ವರ್ಕ್ ಸಾಮರ್ಥ್ಯದ ಫೋನ್ ಆಗಿದ್ದು ಕಡಿಮೆ ಬೆಲೆಯಲ್ಲಿ ಲಭ್ಯ ಇರುತ್ತದೆ. ಈಗಾಗಲೇ ಜಿಯೋ ಫೋನ್ ಎಂಬ ಫೀಚರ್ ಫೋನ್ ತಯಾರಿಸಿ ಬಿಡುಗಡೆ ಮಾಡಲಾಗಿತ್ತು. ಈ ಜಿಯೋ ಫೋನ್ 10 ಕೋಟಿಗೂ ಹೆಚ್ಚು ಹ್ಯಾಂಡ್ಸೆಟ್ಗಳು ಮಾರಾಟವಾಗಿದ್ದವು. ಇದೀಗ ಜಿಯೋ ಫೋನ್ ನೆಕ್ಸ್ಟ್ 30 ಕೋಟಿಯಷ್ಟು ಮಾರಾಟ ಮಾಡುವ ಗುರಿಯನ್ನ ಇಟ್ಟುಕೊಳ್ಳಲಾಗಿದೆ. ಇದೇ ಸೆಪ್ಟಂಬರ್ನಲ್ಲಿ Jio Phone Next ಹೊರಬರಲಿದೆ. ಇದು ಟಚ್ ಸ್ಕ್ರೀನ್ ಆಗಿರಲಿದ್ದು, ಬಹುತೇತ ಆ್ಯಪ್ಗಳನ್ನ ಸಪೋರ್ಟ್ ಮಾಡುತ್ತದೆ. ಭಾರತದಲ್ಲಿ ಈಗಲೂ 2ಜಿ ಹ್ಯಾಂಡ್ಸೆಟ್ ಬಳಸುತ್ತಿರುವ 30 ಕೋಟಿ ಜನರಿದ್ದಾರೆ. ಇವರನ್ನೇ ಬಹುತೇಕವಾಗಿ ಟಾರ್ಗೆಟ್ ಮಾಡಿಕೊಳ್ಳಲಾಗಿದೆ ಎಂದು ದಿ ಕೆನ್ ಡಾಟ್ ಕಾಮ್ ವರದಿಯಲ್ಲಿ ತಿಳಿಸಲಾಗಿದೆ.
ರಿಲಾಯನ್ಸ್ ಸಂಸ್ಥೆ ಈಗಾಗಲೇ ಸ್ಮಾರ್ಟ್ಫೋನ್ ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರಾಟಕ್ಕೆ ಸಮರ್ಪಕವಾದ ಆಫ್ಲೈನ್ ನೆಟ್ವರ್ಕ್ ನಿರ್ಮಿಸುತ್ತಿದೆ. ದಿನೋಪಯೋಗಿ ವಸ್ತುಗಳನ್ನ ಮಾರಾಟ ಮಾಡಲು ದೇಶಾದ್ಯಂತ ವಿವಿಧ ಸ್ಥಳೀಯ ದಿನಸಿ ಅಂಗಡಿಗಳ ಸಹಭಾಗಿತ್ವದೊಂದಿಗೆ ಜಿಯೋ ಮಾರ್ಟ್ ಮಾಡಿ ಅಪಾರ ಯಶಸ್ಸು ಕಂಡ ರಿಲಾಯನ್ನ್ ಈಗ ಅದೇ ಪ್ರಯೋಗವನ್ನು ಎಲೆಕ್ಟ್ರಾನಿಕ್ ಮಳಿಗೆಯಲ್ಲೂ ಮಾಡಹೊರಟಿದೆ. ರಿಲಾಯನ್ಸ್ನಿಂದ ಜಿಯೋಮಾರ್ಟ್ ಡಿಜಿಟಲ್ ಎಂಬ ಹೊಸ ವ್ಯವಹಾರ ಆರಂಭಗೊಳ್ಳಲಿದೆ.
ಇದನ್ನೂ ಓದಿ: ಪಾಲಿಸ್ಟರ್ ಫೈಬರ್ ಮರುಬಳಕೆ ಸಾಮರ್ಥ್ಯ ದುಪ್ಪಟ್ಟುಗೊಳಿಸಲು ಮುಂದಾದ ರಿಲಯನ್ಸ್: ಆಂಧ್ರದಲ್ಲಿ ಪಿಎಸ್ಎಫ್ ಘಟಕ ಸ್ಥಾಪನೆ
ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಸಿಂಹಪಾಲು ಹೊಂದಿರುವುದು ಇ-ಕಾಮರ್ಸ್ ಕಂಪನಿಗಳೇ. ಭಾರತದಲ್ಲಿ ಮಾರಾಟವಾಗುವ ಸ್ಮಾರ್ಟ್ಫೋನ್ಗಳ ಪೈಕಿ ಶೆ. 30-40ರಷ್ಟು ಸ್ಮಾರ್ಟ್ಫೋನ್ಗಳು ಅಮೇಜಾನ್ ಮತ್ತು ಫ್ಲಿಪ್ಕಾರ್ಟ್ ಆ್ಯಪ್ಗಳಲ್ಲೇ ಮಾರಾಟ ಆಗುತ್ತವೆ. ಆಫ್ಲೈನ್ ಮಳಿಗೆಗಳಿಗಿಂತಲೂ ಆನ್ಲೈನ್ನಲ್ಲೇ ಹೆಚ್ಚು ಫೋನ್ಗಳು ಮಾರಾಟವಾಗುತ್ತವೆ. ದೇಶಾದ್ಯಂತ ಇರುವ 500 ರಿಲಾಯನ್ಸ್ ಡಿಜಿಟಲ್ ಮಳಿಗೆಗಳಲ್ಲಿ ಮಾರಾಟ ಆಗಿರುವ ಸ್ಮಾರ್ಟ್ಫೋನ್ಗಳು ಕೇವಲ ಶೇ. 5 ಮಾತ್ರ. ಆ ಮಟ್ಟಕ್ಕೆ ಅಮೇಜಾನ್ ಮತ್ತು ಫ್ಲಿಪ್ಕಾರ್ಟ್ ಸಂಸ್ಥೆಗಳು ಪಾರಮ್ಯ ಮೆರೆದಿವೆ. ದಿ ಕೆನ್ ಡಾಟ್ ಕಾಮ್ ವರದಿ ಪ್ರಕಾರ ಅಮೇಜಾನ್ ಮತ್ತು ಫ್ಲಿಪ್ಕಾರ್ಟ್ ರೀತಿಯಲ್ಲೇ ಜಿಯೋದಿಂದ ಆನ್ಲೈನ್ ಮಾರುಕಟ್ಟೆಸ್ಥಳ ಸೃಷ್ಟಿಯಾಗಲಿದೆಯಂತೆ. ಆ ನಿಟ್ಟಿನಲ್ಲಿ ರಿಲಾಯನ್ಸ್ ಕಾರ್ಯೋನ್ಮುಖವಾಗಿದೆ.
ರಿಲಾಯನ್ಸ್ ಸಂಸ್ಥೆ ತನ್ನ ಆಫ್ಲೈನ್ ನೆಟ್ವರ್ಕ್ ಅನ್ನು ಇನ್ನಷ್ಟು ಬಲಯುತಗೊಳಿಸುವುದರತ್ತ ಗಮನ ಹರಿಸುತ್ತಿದೆ. ರಿಲಾಯನ್ಸ್ ಸ್ಟೋರ್ಸ್ಗಳನ್ನ ಎಲೆಕ್ಟ್ರಾನಿಕ್ ಉತ್ಪನ್ನಗಳ ಸಂಗ್ರಹ ಹಾಗು ವಿಲೇವಾರಿಗೆ ಬಳಸಿಕೊಳ್ಳುವ ಯೋಜನೆ ಇದೆ. ಈ ವಿಚಾರದಲ್ಲಿ ಬೇರೆ ಇ-ಕಾಮರ್ಸ್ ದೈತ್ಯ ಕಂಪನಿಗಳಿಗಿಂತ ರಿಲಾಯನ್ಸ್ ಮೇಲುಗೈ ಹೊಂದಿದೆ.
ಮಾಹಿತಿ ಕೃಪೆ: the-ken.com
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ