ಈಗಂತೂ ಈ ಆಧುನಿಕ ಜಗತ್ತಿನ ತಂತ್ರಜ್ಞಾನದಲ್ಲಿ ನಮ್ಮ ಡೇಟಾ (Data) ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬುದರ ಬಗ್ಗೆ ನಮಗೆ ಒಂದು ಸಂದೇಹ ಯಾವಾಗಲೂ ಇದ್ದೇ ಇರುತ್ತದೆ ಮತ್ತು ಇದು ಪ್ರಸ್ತುತ ನಡೆಯುತ್ತಿರುವ ಕೆಲವು ಅಹಿತಕರ ಘಟನೆಗಳನ್ನು ನೋಡುತ್ತಿದ್ದರೆ, ಇದನ್ನು ಸಂದೇಹಾತ್ಮಕವಾಗಿ ನೋಡುವುದು ತಪ್ಪಲ್ಲ ಎಂದು ಅನ್ನಿಸುತ್ತದೆ. ಇಲ್ಲಿಯೂ ಸಹ ಅದೇ ರೀತಿಯ ಒಂದು ಸಂದೇಹ ಹರಿದಾಡುತ್ತಿದೆ ನೋಡಿ. ಕಳೆದ ವಾರವಷ್ಟೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank) ಒಂದು ಮಹತ್ವದ ಕ್ರಮ ಕೈಗೊಂಡಿತ್ತು. ಅದರಲ್ಲಿ ಆರ್ಬಿಐನ (RBI) ಮುಂದಿನ ಆದೇಶದವರೆಗೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಯಾವುದೇ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳಬಾರದು ಎಂದು ನಿರ್ದೇಶನ ನೀಡಿತ್ತು.
ಇತ್ತೀಚಿನ ಬ್ಲೂಮ್ಬರ್ಗ್ ವರದಿಯು ಪಾವತಿ ಬ್ಯಾಂಕ್ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಪರೋಕ್ಷವಾಗಿ ಪಾಲನ್ನು ಹೊಂದಿರುವ ಚೀನಾದ ಘಟಕಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ ಎಂದು ಬಹಿರಂಗಪಡಿಸಿತ್ತು. ಇದು ಆರ್ಬಿಐನ ಮಾರ್ಗಸೂಚಿಗಳಿಗೆ ವಿರುದ್ಧವಾಗಿದ್ದು, ವರದಿಯು ಚೀನಾದೊಂದಿಗೆ ಹಂಚಿಕೊಳ್ಳಲಾದ ಡೇಟಾ ಯಾವುದು ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯನ್ನು ಬಹಿರಂಗಪಡಿಸಿರಲಿಲ್ಲ.
ಆರ್ಬಿಐನ ಮಾರ್ಗಸೂಚಿಗಳ ಪ್ರಕಾರ, ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಪಾವತಿ ಕಂಪನಿಗಳು ವಹಿವಾಟಿನ ಡೇಟಾವನ್ನು ಸ್ಥಳೀಯ ಸರ್ವರ್ಗಳಲ್ಲಿ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆಯೇ ಎನ್ನುವುದನ್ನು ತುಂಬಾನೇ ಗಂಭೀರವಾಗಿ ನಿಗಾ ಇಡಬೇಕು ಎಂಬುದಾಗಿದೆ. ಆದರೆ ಈ ಬ್ಲೂಮ್ಬರ್ಗ್ ವರದಿಯು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಕೆಲಸವನ್ನು ಚೆನ್ನಾಗಿ ಮಾಡುತ್ತಿದೆಯೇ ಎನ್ನುವುದರ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ ಎಂದು ಹೇಳಲಾಗುತ್ತಿದೆ.
ಡೇಟಾ ಸೋರಿಕೆ ಹಕ್ಕುಗಳ ಬಗ್ಗೆ ಪೇಟಿಎಂ ಹೇಳಿದ್ದೇನು ನೋಡಿ..
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಕ್ತಾರರು ಡೇಟಾ ಸೋರಿಕೆಯನ್ನು ನಿರಾಕರಿಸಿದ್ದಾರೆ ಮತ್ತು "ಇತ್ತೀಚೆಗೆ ಬ್ಲೂಮ್ಬರ್ಗ್ ಮಾಧ್ಯಮದಲ್ಲಿ ಚೀನಾದ ಸಂಸ್ಥೆಗಳಿಗೆ ಡೇಟಾವನ್ನು ಕಳುಹಿಸಿ ಕೊಡಲಾಗುತ್ತಿದೆ ಎಂಬ ವರದಿ ಸಂಪೂರ್ಣವಾಗಿ ಸುಳ್ಳು" ಎಂದು ಹೇಳಿದ್ದಾರೆ.
"ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸಂಪೂರ್ಣವಾಗಿ ಸ್ವದೇಶಿ ಬ್ಯಾಂಕ್ ಎಂದು ಹೇಳಲು ನಾವು ಹೆಮ್ಮೆ ಪಡುತ್ತೇವೆ ಮತ್ತು ಡೇಟಾ ಸ್ಥಳೀಕರಣದ ಬಗ್ಗೆ ಆರ್ಬಿಐನ ನಿರ್ದೇಶನಗಳಿಗೆ ಸಂಪೂರ್ಣವಾಗಿ ಬದ್ಧವಾಗಿದೆ. ಬ್ಯಾಂಕಿನ ಎಲ್ಲಾ ದತ್ತಾಂಶಗಳು ದೇಶದೊಳಗೆ ಇವೆ. ನಾವು ಡಿಜಿಟಲ್ ಇಂಡಿಯಾ ಉಪಕ್ರಮದ ನಿಜವಾದ ವಿಶ್ವಾಸಿಗಳು" ಎಂದು ವಕ್ತಾರರು ಹೇಳಿದರು.
ಇದನ್ನೂ ಓದಿ: Rent AC Online: ಬೇಸಿಗೆಯ ಸೆಕೆ ತಡೆಯಲಾಗುತ್ತಿಲ್ವಾ? ಇಲ್ಲಿ ಎಸಿ ಬಾಡಿಗೆಗೆ ಸಿಗುತ್ತೆ ನೋಡಿ..
ಕಳೆದ ವಾರವಷ್ಟೇ ಸೆಂಟ್ರಲ್ ಬ್ಯಾಂಕ್ ಸಮಗ್ರ ಐಟಿ ಲೆಕ್ಕಪರಿಶೋಧನೆ ನಡೆಸಲು ಬಾಹ್ಯ ಸಂಸ್ಥೆಯನ್ನು ನೇಮಿಸುವಂತೆ ಪೇಮೆಂಟ್ಸ್ ಬ್ಯಾಂಕ್ಗೆ ಹೇಳಿದ್ದಾರೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ಗೆ ಆರ್ಬಿಐ ನೀಡಿರುವ ನಿರ್ದೇಶನ
ಕಳೆದ ವಾರ ಹೊರಡಿಸಿದ ಆರ್ಬಿಐನ ನಿರ್ದೇಶನವು, "ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಸೆಕ್ಷನ್ 35ಎ ಅಡಿಯಲ್ಲಿ, ತನ್ನ ಅಧಿಕಾರವನ್ನು ಚಲಾಯಿಸುವ ಮೂಲಕ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ಗೆ ತಕ್ಷಣದಿಂದ ಜಾರಿಗೆ ಬರುವಂತೆ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದನ್ನು ನಿಲ್ಲಿಸುವಂತೆ ನಿರ್ದೇಶನ ನೀಡಿದೆ" ಎಂದು ಉಲ್ಲೇಖಿಸಿದೆ.
"ಮೊದಲು ಐಟಿ ಲೆಕ್ಕಪರಿಶೋಧಕರ ವರದಿಯನ್ನು ಆರ್ಬಿಐ ಪರಿಶೀಲಿಸಿದ ನಂತರ ಮತ್ತು ಆರ್ಬಿಐ ಅನುಮತಿಯನ್ನು ನೀಡಿದರೆ ಮಾತ್ರವೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದು" ಎಂದು ಸೆಂಟ್ರಲ್ ಬ್ಯಾಂಕ್ ಕಳೆದ ವಾರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Android apps: ರೈತರೇ.. ಬೆಳೆ ಮತ್ತು ಮಾರುಕಟ್ಟೆ ಬಗ್ಗೆ ಸರಿಯಾದ ಮಾಹಿತಿ ಒದಗಿಸುವ ಆ್ಯಪ್ಗಳಿವು
ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿರುವ ಪೇಟಿಎಂ ಪೇಮೆಂಟ್ಸ್ ವಕ್ತಾರರು "ಇತ್ತೀಚಿನ ಆರ್ಬಿಐ ನಿರ್ದೇಶನವು ನಮ್ಮ ಪ್ರಸ್ತುತ ಗ್ರಾಹಕರ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಮತ್ತು ಅವರು ನಮ್ಮ ಬ್ಯಾಂಕಿಂಗ್ ಸೇವೆಗಳನ್ನು ತಡೆ ರಹಿತವಾಗಿ ಬಳಸುವುದನ್ನು ಮುಂದುವರಿಸಬಹುದು ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ. ನಾವು ಆರ್ಬಿಐನ ನಿರ್ದೇಶನಗಳನ್ನು ಅನುಸರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ನಮ್ಮ ಗ್ರಾಹಕರಿಗೆ ಯಾವುದೇ ಅನಾನುಕೂಲತೆ ಆಗದಂತೆ ನೋಡಿಕೊಳ್ಳುವುದಕ್ಕೆ ನಾವು ಬದ್ಧರಾಗಿದ್ದೇವೆ" ಎಂದು ಹೇಳಿದ್ದಾರೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಅಧಿಕೃತ ವೆಬ್ಸೈಟ್ ಪ್ರಕಾರ, ಇದು ಪ್ರಸ್ತುತ 300 ಮಿಲಿಯನ್ಗೂ ಹೆಚ್ಚು ವ್ಯಾಲೆಟ್ಗಳು ಮತ್ತು 60 ಮಿಲಿಯನ್ ಬ್ಯಾಂಕ್ ಖಾತೆಗಳನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ