ಓಲಾ ಕಂಪೆನಿಯು, ಭಾರತದಲ್ಲಿ ಮುಂಬರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಮಾರಾಟ ಪ್ರಕ್ರಿಯೆಯನ್ನು ಆರಂಭಿಸಿದ 24 ಗಂಟೆಗಳಲ್ಲಿ 1 ಲಕ್ಷ ಬುಕ್ಕಿಂಗ್ ಸ್ವೀಕರಿಸಿದೆ. ಇದೀಗ, ಓಲಾ ಸ್ಕೂಟರ್‌ಗಳು ಡೆಲಿವರಿಗೆ ಸಿದ್ಧವಾದ ಕೂಡಲೇ, ಆ ಸ್ಕೂಟರ್‌ಗಳನ್ನು ನೇರವಾಗಿ ಗ್ರಾಹಕರ ಮನೆಗೆ ಪೂರೈಸುವ ಯೋಜನೆಯನ್ನು ಕಂಪೆನಿ ಮಾಡುತ್ತಿದೆ. ಹೊಸ ಮಾದರಿಯೊಂದಿಗೆ, ಓಲಾ ಖರೀದಿಯ ಸಂಪೂರ್ಣ ಪ್ರಕ್ರಿಯೆಯನ್ನು ಕೇವಲ ತನ್ನ ಮತ್ತು ಗ್ರಾಹಕರ ನಡುವೆ ಅಷ್ಟೇ ಸೀಮಿತವಾಗಿಡಲು ಯೋಜನೆ ರೂಪಿಸುತ್ತಿದ್ದು, ಆ ಮೂಲಕ ಮಧ್ಯವರ್ತಿ ಸಾಂಪ್ರದಾಯಿಕ ಡೀಲರ್‌ಶಿಪ್‍ಗಳನ್ನು ತೆಗೆದು ಹಾಕಲಿದೆ.
ಓಲಾ ಸ್ಕೂಟರನ್ನು ಕಾಯ್ದಿರಿಸಲು ನೀವು 499 ರೂ. ಮುಂಗಡ ಪಾವತಿಸಿದರೆ, ಡೆಲಿವರಿಗಳನ್ನು ನೀಡುವಾಗ ಪಡೆದುಕೊಳ್ಳುವವರಲ್ಲಿ ನೀವು ಮೊದಲಿಗರಾಗಿರುತ್ತೀರಿ. ನೀವು ಓಲಾ ಸ್ಕೂಟರ್ ಮುಂಗಡ ಬುಕ್ಕಿಂಗನ್ನು ಯಾವುದೇ ಸಮಯದಲ್ಲಿ ರದ್ದು ಮಾಡಬಹುದು ಮತ್ತು ಹಣ ವಾಪಸ್ ಪಡೆಯಬಹುದು. ಅದಕ್ಕಾಗಿ ನೀವು ನಿಮ್ಮ ಫೋನ್ ನಂಬರ್ ಮೂಲಕ http://olaelectric.comಗೆ ಲಾಗಿನ್ ಮಾಡಬೇಕು ಮತ್ತು ಒಟಿಪಿ ಮೂಲಕ ಕನ್‍ಫರ್ಮ್ ಮಾಡಬೇಕು. ನೀವು ಯಾವ ವಿಧಾನದ ಮೂಲಕ ಹಣ ಪಾವತಿ ಮಾಡಿರುತ್ತೀರೋ ಅದಕ್ಕೆ, ಆರ್ಡರ್ ರದ್ದು ಮಾಡಿದ 7-10 ದಿನಗಳ ಒಳಗೆ ನಿಮಗೆ ಹಣ ವಾಪಸ್ ಬರುವುದು. ನೀವು ಓಲಾ ಸ್ಕೂಟರನ್ನು ಬೇರೊಬ್ಬರ ಹೆಸರಿಗೂ ವರ್ಗಾಯಿಸಬಹುದು. ಅದಕ್ಕಾಗಿ ನೀವು, support@olaelectric.com. ಅನ್ನು ಸಂಪರ್ಕಿಸಬೇಕು.
ಲಾಗ್ ಇನ್ ಆದ ಮೇಲೆ ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್‍ಗಳು, ಯುಪಿಐ, ಇ-ವ್ಯಾಲೆಟ್‍ಗಳು ಅಥವಾ ಓಲಾ ಮನಿ ಮೂಲಕ 499 ರೂ. ಪಾವತಿಸಿ, ಓಲಾ ಸ್ಕೂಟರ್ ಬುಕ್ ಮಾಡಬಹುದು. ನಿಮಗಿಷ್ಟವಿದ್ದರೆ, ಒಂದಕ್ಕಿಂತಲೂ ಹೆಚ್ಚು ಸ್ಕೂಟರ್‌ಗಳನ್ನು ಬುಕ್ ಮಾಡಬಹುದು.
ಓಲಾ ಸ್ಕೂಟರನ್ನು ಕಾಯ್ದಿರಿಸಲು ಯಾವುದೇ ಕಾಗದಪತ್ರದ ಕೆಲಸದ ಅಗತ್ಯ ಇರುವುದಿಲ್ಲ. ನಿಮ್ಮ ಪೋನ್ ನಂಬರ್ ಮೂಲಕ ಸೈನ್‍ಇನ್ ಆಗಿ, ಒಟಿಪಿ ಮೂಲಕ ಊರ್ಜಿತಗೊಳ್ಳುತ್ತದೆ. ನೀವು ಇಂದು ಓಲಾ ಮುಂಗಡ ಬುಕ್ಕಿಂಗ್ ಮಾಡಿದರೆ, ಓಲಾ ಸ್ಕೂಟರ್ ಡೆಲಿವರಿ ಘೋಷಣೆ ಮಾಡಿದಾಗ, ಖರೀದಿ ಆದ್ಯತೆ ಪಡೆಯುವವರ ಒಂದು ಸಾಲಿಗೆ ನೀವು ಕೂಡ ಸೇರ್ಪಡೆ ಆಗುತ್ತೀರಿ.
ಓಲಾ ಸ್ಕೂಟರ್ , ಪ್ರಮುಖ ಆ್ಯಕ್ಸಲರೇಶನ್, ಅತ್ಯುತ್ತಮ ಶ್ರೇಣಿ ಮತ್ತು ಹಲವು ಪ್ರಥಮ ದರ್ಜೆ ಆವಿಷ್ಕಾರಗಳ ಮೂಲಕ, ಒಂದು ಗೇಮ್ ಚೇಂಜರ್ ಸಾಧನವಾಗಲಿದೆ ಎನ್ನಬಹುದು. ಈ ಸ್ಕೂಟರ್ ಕುರಿತು ಹೆಚ್ಚಿನ ಮಾಹಿತಿಯನ್ನು ತಮ್ಮ ಓಲಾ ವೆಬ್‍ಸೈಟ್‍ನಲ್ಲಿ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಓಲಾ ಕಂಪೆನಿ ಹೇಳಿದೆ.
ಓಲಾ ಸ್ಕೂಟರ್ ಗರಿಷ್ಠ 240 ಕಿಲೋ ಮೀಟರ್ ಸವಾರಿ ವ್ಯಾಪ್ತಿಯನ್ನು ಹೊಂದಿರುತ್ತದೆ ಎಂಬುವುದು ತಿಳಿದಿತ್ತು, ಆದರೆ ಅದು 20 ಕಿಮೀ ವೇಗವನ್ನು ನಿರ್ವಹಿಸಿದಾಗ ಮಾತ್ರ. ಪ್ರಾಯೋಗಿಕವಾಗಿ ಹೇಳುವುದಾದರೆ, ಓಲಾ ಸ್ಕೂಟರ್‌ಗಳು ನಿಜ ಜೀವನದ ಪರಿಸ್ಥಿತಿಗಳಲ್ಲಿ 130-150 ಕಿಮೀ ವ್ಯಾಪ್ತಿಯನ್ನಷ್ಟೇ ಸಾಧಿಸಬಹುದು.
ಚಾರ್ಜಿಂಗ್ ಸ್ಟೇಷನ್‍ನಲ್ಲಿ ನೀವು ಓಲಾ ಸ್ಕೂಟರನ್ನು ಶೂನ್ಯದಿಂದ ಸಂಪೂರ್ಣವಾಗಿ ಚಾರ್ಜ್ ಮಾಡುವುದಾದರೆ ಎರಡೂವರೆ ಗಂಟೆ ಬೇಕಾಗುತ್ತದೆ. ಹೈಪರ್ ಚಾರ್ಜಿಂಗ್ ಸ್ಟೇಷನ್‍ಗಳಲ್ಲಿ ಬ್ಯಾಟರಿಗಳು 18 ನಿಮಿಷದಲ್ಲಿ 50% ಚಾರ್ಜ್ ಆಗುತ್ತವೆ. ಮನೆಯ ರೆಗ್ಯುಲರ್ ಪ್ಲಗ್‍ನಿಂದ ಚಾರ್ಜ್ ಮಾಡುವುದಾದರೆ , ಸಂಪೂರ್ಣ ಚಾರ್ಜ್ ಆಗಲು ಐದೂವರೆ ಗಂಟೆ ಬೇಕು. ಸಂಪೂರ್ಣ ಚಾರ್ಜ್ ಆದಾಗ, ಮಾಲೀಕರಿಗೆ ಆ್ಯಪ್ ಮೂಲಕ ಆ ಕುರಿತ ಸಂದೇಶ ಬರುತ್ತದೆ.
ತಮಿಳುನಾಡಿನಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಹೊಸ ಓಲಾ ಪ್ಲಾಂಟ್‍ನಲ್ಲಿ ಮೊದಲ ಹಂತದ ಸ್ಕೂಟರ್‌ಗಳನ್ನು ಉತ್ಪಾದಿಸಲಾಗುವುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ