ಪ್ರಸ್ತುತ ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಜನಪ್ರಿಯವಾಗುತ್ತಿವೆ. ಅಮೆಜಾನ್ ಫ್ರೈಮ್, ನೆಟ್‌ಫ್ಲಿಕ್ಸ್ (Netflix ), ವೂಟ್ ಹೀಗೆ ಯಾರಾದರು ಹಣ ಪಾವತಿಸಿ ಒಂದು ಅಕೌಂಟ್ ಕ್ರಿಯೇಟ್ ಮಾಡಿಕೊಂಡರೆ ಮುಗಿಯಿತು. ಆ ಅಕೌಂಟ್‌ನ ಪಾಸ್‌ವರ್ಡ್ (Password) ಅನ್ನು ಮಿತಿಗೆ ಅನುಗುಣವಾಗಿ ತಮ್ಮ ಸ್ನೇಹಿತರಿಗೆ ಕುಟುಂಬದವರೊಟ್ಟಿಗೆ ಹಂಚಿಕೊಳ್ಳುತ್ತಾರೆ. ಈ ನೀತಿಯನ್ನು ಕೆಲ ಒಟಿಟಿ ವೇದಿಗೆಳು ಅನುಮತಿಸುತ್ತವೆ.
ಹೊಸ ನೀತಿ ಬಗ್ಗೆ ದೃಢಪಡಿಸಿದ ಸಿಇಒ
ಆದರೆ ನೆಟ್‌ಫ್ಲಿಕ್ಸ್ ತನ್ನ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದೆ. ಒಂದೇ ಅಕೌಂಟ್ ಪಾಸ್‌ವರ್ಡ್‌ನಲ್ಲಿ ಸ್ನೇಹಿತರು, ಸಂಬಂಧಿಕರೆಲ್ಲರೂ ನೆಟ್‌ಫ್ಲಿಕ್ಸ್ ಪ್ಲಾಟ್‌ಫಾರ್ಮ್ ಪ್ರವೇಶಿಸುವುದಕ್ಕೆ ಇದ್ದ ಅವಕಾಶಕ್ಕೆ ಬ್ರೇಕ್ ಹಾಕುವುದಾಗಿ ಹೇಳಿತ್ತು.
ಈ ವಿಚಾರದ ಬಗ್ಗೆ ಹಲವು ಗೊಂದಲಗಳಿದ್ದವು. ಆದರೆ ಈ ನೀತಿಯನ್ನು ಹೊಸ ಸಿಇಒ ದೃಢಪಡಿಸಿದ್ದಾರೆ. ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಹಂಚಿಕೆ ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಕೊನೆಗೊಳ್ಳುತ್ತದೆ ಎಂದು ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ.
ಆದಾಯವನ್ನು ಹೆಚ್ಚಿಸಲು ಮತ್ತು ಚಂದಾದಾರರನ್ನು ಪಡೆಯಲು, ನೆಟ್‌ಫ್ಲಿಕ್ಸ್ ಇತ್ತೀಚೆಗೆ ಆಯ್ದ ಮಾರುಕಟ್ಟೆಗಳಲ್ಲಿ ಜಾಹೀರಾತು-ಬೆಂಬಲಿತ ಚಂದಾದಾರಿಕೆ ಯೋಜನೆಯನ್ನು ಪರಿಚಯಿಸಿತು. ಹೆಚ್ಚುವರಿಯಾಗಿ, ಈಗ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಹಂಚಿಕೆಯನ್ನು ಮೊಟಕುಗೊಳಿಸಿ ಬಳಕೆಗೆ ಪಾವತಿ ಮಾಡಬೇಕು ಎಂದು ಹೇಳಿದೆ.
"ಪಾಸ್‌ವರ್ಡ್ ಹಂಚಿಕೆ ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಕೊನೆಗೊಳ್ಳುತ್ತದೆ"
ಹಿಂದಿನ ನೆಟ್‌ಫ್ಲಿಕ್ಸ್ ಸಿಇಒ ರೀಡ್ ಹೇಸ್ಟಿಂಗ್ಸ್ ಕಳೆದ ವರ್ಷ ಪಾಸ್‌ವರ್ಡ್ ಹಂಚಿಕೆ ಆಯ್ಕೆಯು ಕೊನೆಗೊಳ್ಳುತ್ತದೆ ಎಂದು ಹೇಳಿದ್ದರು. ಆದರೆ ಹೊಸದಾಗಿ ಬಂದ ಸಿಇಒ ಗ್ರೆಗ್ ಪೀಟರ್ಸ್ ಮತ್ತು ಟೆಡ್ ಸರಂಡೋಸ್ ಬ್ಲೂಮ್‌ಬರ್ಗ್‌ಗೆ ಸಂದರ್ಶನವೊಂದರಲ್ಲಿ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಹಂಚಿಕೆ ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ.
ನೆಟ್‌ಫ್ಲಿಕ್ಸ್ ಬಳಸಲು ಸ್ನೇಹಿತರು ಮತ್ತು ಇತರರನ್ನು ಅವಲಂಬಿಸಿರುವ ಭಾರತೀಯರು ಪ್ಲಾಟ್‌ಫಾರ್ಮ್ ಅನ್ನು ಬಳಸಲು ಶೀಘ್ರದಲ್ಲೇ ಪಾವತಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬಳಕೆದಾರರ ಸಂಖ್ಯೆ ಹೆಚ್ಚುತ್ತದೆ
ಅಂದರೆ ಇನ್ನುಮುಂದೆ ಒಬ್ಬರ ಪಾಸ್‌ವರ್ಡ್ ಅನ್ನು ಇನ್ನೊಬ್ಬರು ಬಳಸಲು ಸಾಧ್ಯವಿಲ್ಲ. ನೀವು ನೆಟ್‌ಫ್ಲಿಕ್ಸ್ ಅಕೌಂಟ್ ಬಳಸಬೇಕಾದರೆ ನಿಮ್ಮದೇ ಸ್ವಂತ ಅಕೌಂಟ್ ಹೊಂದುವುದು ಅನಿವಾರ್ಯವಾಗಲಿದೆ.
ಚಂದಾದಾರರ ಸಂಖ್ಯೆಯ ಕುಸಿತವನ್ನು ತಡೆಗಟ್ಟಲು ನೆಟ್‌ಫ್ಲಿಕ್ಸ್ ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ. ಈ ನಿಯಮವನ್ನು ಅಧಿಕೃತವಾಗಿ ಜಾರಿಗೆ ತಂದರೆ 15-20 ಮಿಲಿಯನ್ ಚಂದಾದಾರರು ಹೆಚ್ಚಾಗುತ್ತಾರೆ ಎಂದು ಸಿಇಒ ಗ್ರೆಗ್ ಪೀಟರ್ಸ್ ತಿಳಿಸಿದರು.
ನೆಟ್‌ಫ್ಲಿಕ್ಸ್ ಹೊಸ ಪಾಸ್‌ವರ್ಡ್ ಶೇರ್ ಶುಲ್ಕದ ಆಯ್ಕೆಯನ್ನು ಕೋಸ್ಟಾ ರಿಕಾ, ಚಿಲಿ, ಪೆರು ಮತ್ತು ಇನ್ನೂ ಕೆಲವು ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ಪರೀಕ್ಷಿಸುತ್ತಿದೆ.
ಈ ದೇಶಗಳಲ್ಲಿ ಸ್ನೇಹಿತರ ನೆಟ್‌ಫ್ಲಿಕ್ಸ್ ಖಾತೆಯನ್ನು ಬಳಸಲು ಬಯಸುವ ಜನರು $3 (ಅಂದಾಜು 250ರೂ) ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ. ಇದೇ ವಿಧಾನ ಭಾರತದಲ್ಲಿಯೂ ಕೂಡ ಜಾರಿಗೆ ಬರಲಿದ್ದು, ಇಲ್ಲಿ ಪ್ರತಿ ಪ್ರೊಫೈಲ್‌ಗೆ ಎಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ ಅನ್ನೊದು ಇನ್ನು ಬಹಿರಂಗವಾಗಿಲ್ಲ.
ಮಾರ್ಚ್ 2023 ರಿಂದ ಜಾರಿ?
ಕೆಲ ಬಲ್ಲ ಮಾಹಿತಿಗಳು ಹೇಳಿರುವ ಪ್ರಕಾರ ನೆಟ್‌ಫ್ಲಿಕ್ಸ್ ಮಾರ್ಚ್ 2023 ರಿಂದ ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಪಾಸ್‌ವರ್ಡ್ ಹಂಚಿಕೆಯನ್ನು ಕೊನೆಗೊಳಿಸುವ ನೀತಿಯನ್ನು ಹೊರತರಲಿದೆ ಎನ್ನಲಾಗಿದೆ.
ಪಾಸ್‌ವರ್ಡ್ ಹಂಚಿಕೆಯನ್ನು ಹೇಗೆ ಗುರುತಿಸಲಾಗುತ್ತದೆ?
ಐಪಿ ವಿಳಾಸಗಳು, ಸಾಧನ ಐಡಿಗಳು ಮತ್ತು ಖಾತೆ ಚಟುವಟಿಕೆಯ ಮೂಲಕ ನೆಟ್‌ಫ್ಲಿಕ್ಸ್ ಹೊಸ ಪಾಸ್‌ವರ್ಡ್ ಹಂಚಿಕೆ ನಿಯಮವನ್ನು ಜಾರಿಗೊಳಿಸುತ್ತದೆ ಎಂದು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಈ ಹಿಂದೆ ತಿಳಿಸಿತ್ತು.
ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಪಡೆಯಲು ಹೆಚ್ಚು ಪಾವತಿಸಲು ಬಯಸದ ಬಳಕೆದಾರರನ್ನು ಆಕರ್ಷಿಸಲು ಇತ್ತೀಚೆಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ $6.99 ನಲ್ಲಿ ಹೊಸ ಕೈಗೆಟುಕುವ ಜಾಹೀರಾತು-ಬೆಂಬಲಿತ ಯೋಜನೆಯನ್ನು ಪ್ರಾರಂಭಿಸಿತು.
ಇನ್ನೂ ಭಾರತದಲ್ಲಿ, ನೆಟ್‌ಫ್ಲಿಕ್ಸ್ ನಾಲ್ಕು ಯೋಜನೆಗಳನ್ನು ನೀಡುತ್ತಿದೆ. ಇದರಲ್ಲಿ 149ರೂ. ಬೆಲೆಯ ಮೊಬೈಲ್-ಓನ್ಲಿ ಪ್ಲಾನ್, 199ರೂ. ಬೆಲೆಯ ಬೇಸಿಕ್ ಪ್ಲಾನ್, 499ರೂ. ಬೆಲೆಯ ಸ್ಟ್ಯಾಂಡರ್ಡ್ ಪ್ಲಾನ್ ಮತ್ತು 649ರೂ. ಬೆಲೆಯ ಪ್ರೀಮಿಯಂ ಪ್ಲಾನ್‌ಗಳು ಸೇರಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ