ಫೇಸ್​ಬುಕ್​ಗೆ ಸೆಡ್ಡು ಹೊಡೆಯುತ್ತಾ ಮೈಸೂರಿನ ನಮ್ಮ ಆ್ಯಪ್​?


Updated:July 12, 2018, 1:34 PM IST
ಫೇಸ್​ಬುಕ್​ಗೆ ಸೆಡ್ಡು ಹೊಡೆಯುತ್ತಾ ಮೈಸೂರಿನ ನಮ್ಮ ಆ್ಯಪ್​?

Updated: July 12, 2018, 1:34 PM IST
- ನಟರಾಜ್​ ಕಾರಂತ್​, ನ್ಯೂಸ್​ 18 ಕನ್ನಡ

ಮೈಸೂರು (ಜುಲೈ 12): ಸಾಮಾಜಿಕ ಜಾಲತಾಣಗಳಲ್ಲಿನ ಫೇಕ್​ ನ್ಯೂಸ್​ಗಳಿಂದ, ಪ್ರಯೋಜನಕ್ಕೆ ಬಾರದ ಪೋಸ್ಟ್​ಗಳಿಂದ ಬೇಸರಗೊಂಡಿದ್ದೀರಾ? ಹಾಗಾದರೆ ನಿಮಗೆ ಹೊಸ ವೇದಿಕೆಯೊಂದು ಸಿದ್ಧವಾಗಿದೆ. ಅರಮನೆ ನಗರಿ ಮೈಸೂರಿನ ಟೆಕ್ಕಿಗಳು NammApp (ನಮ್ಮ ಆ್ಯಪ್​) ಎಂಬ ಹೊಸ ಅಪ್ಲಿಕೇಶನ್​ವೊಂದನ್ನು​ ಅಭಿವೃದ್ಧಿ ಪಡಿಸಿದ್ದಾರೆ.

'ಅಡ್ಡ ಹೆಸರಿನಲ್ಲಿ ಮನಸ್ಸು ಬಿಚ್ಚಿ ಮಾತಾಡಿ, ಎಲ್ಲರನ್ನೂ ತಲುಪಿ!' ಎಂಬ ಟ್ಯಾಗ್​ಲೈನ್​ನೊಂದಿಗೆ ಟೆಕ್​ ಮಾರುಕಟ್ಟೆಗೆ ಬಂದ ಈ ಆ್ಯಪ್​ನಲ್ಲಿ ನೀವು ನಿಮ್ಮ ಹೆಸರನ್ನು ಬಿಟ್ಟು ಅಡ್ಡ ಹೆಸರಿನಲ್ಲಿ ಸಂವಹನ ನಡೆಸಬಹುದು. ಇಲ್ಲಿನ ಮತ್ತೊಂದು ಮಹತ್ವದ ವಿಚಾರವೆಂದರೆ ಈ ಆ್ಯಪ್​ ವ್ಯಕ್ತಿಯ ಕುರಿತು ಹೆಚ್ಚು ಫೋಕಸ್​ ಮಾಡುವುದಿಲ್ಲ. ಬದಲಾಗಿ ಚರ್ಚಿಸುವ ವಿಷಯಕ್ಕೆ ಹೆಚ್ಚು ಮನ್ನಣೆ ನೀಡಲಾಗುತ್ತದೆ.

ಅಪ್ಲಿಕೇಶನ್​ನ್ನು ಇಲ್ಲಿ ಡೌನ್​ಲೋಡ್​ ಮಾಡಿ: ನಮ್ಮ ಆ್ಯಪ್​

ದಿನದಿಂದ ದಿನಕ್ಕೆ ಫೇಸ್​ಬುಕ್​, ಟ್ವಿಟರ್​ ನಂತಹ ಸಾಮಾಜಿಕ ಜಾಲತಾಣದಿಂದ ಮಾನಸಿಕ ತೊಂದರೆಗಳೇ ಹೆಚ್ಚಾಗುತ್ತಿವೆ. ಅದೆಷ್ಟೋ ಜನ ಇದರ ಗೀಳಿನಿಂದ ಹೊರ ಬರಲು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಲೇ ಇದ್ದಾರೆ. ಹೀಗಾಗಿ ನಮ್ಮ ಆ್ಯಪ್​ ನಿಮ್ಮನ್ನು ಸಮಾಜಿಕವಾಗಿ ಎಲ್ಲರೊಂದಿಗೆ ಬೆಸೆಯಲು ಬಿಡುತ್ತದೆ ಎನ್ನುತ್ತಾರೆ ಆ್ಯಪ್​ ಅಭಿವೃದ್ಧಿ ಮಾಡಿದ ಮೈಸೂರಿನ ಇಂಜಿನಿಯರ್​ ಬಿ.ಆರ್. ಕಿರಣ್.

ನಮ್ಮ ಆ್ಯಪ್​ನ ಕಾರ್ಯ ನಿರ್ವಹಣೆ ಹೇಗೆ?:
ವ್ಯಕ್ತಿ ಕೇಂದ್ರಿತ ವಿಚಾರಕ್ಕೆ ಹೆಚ್ಚಿನ ಮನ್ನಣೆ ನೀಡದೇ ಕೇವಲ ಒಂದು ವಿಷಯಕ್ಕೆ ಸಂಬಂಧಿಸಿದ ಚರ್ಚೆ, ಪೋಸ್ಟ್​ಗಳನ್ನು ಈ ಆ್ಯಪ್​ನಲ್ಲಿ ನಾವು ಕಾಣಬಹುದು. ಇಲ್ಲಿ ನಿಮ್ಮ ವಿಷಯವೇ ಹೆಚ್ಚು ಮಹತ್ವದ್ದಾಗಿದೆ. ಯಾವುದೇ ಮಾಹಿತಿ ನೀವು ಶೇರ್​ ಮಾಡಿದರೆ ನಮ್ಮ ಆ್ಯಪ್​ನಲ್ಲಿರುವ ಇತರೇ ಬಳಕೇದಾರರಿಗೆ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಅವರ ಪ್ರತಿಕ್ರಿಯೆ ಕೂಡಾ ನಿಮಗೆ ದೊರೆಯುತ್ತದೆ.
Loading...

ಫೇಸ್​ಬುಕ್​ & ಟ್ವಿಟರ್​ನಿಂದ ಹೇಗೆ ಭಿನ್ನ?:
ನೀವೆಲ್ಲರೂ ಗಮನಿಸಿದಂತೆ ಫೇಸ್​ಬುಕ್​ ಹಾಗು ಟ್ವಿಟರ್​ ಹೆಚ್ಚು ಸೆಲೆಬ್ರಿಟಿಗಳಿಗೆ ಮನ್ನಣೆ ನೀಡುತ್ತದೆ. ಆದರಲ್ಲೂ ಮುಖ್ಯವಾಗಿ ಫೇಸ್​ಬುಕ್​ ಕೇವಲ ನಿಮ್ಮ ಸ್ನೇಹಿತರೊಂದಿಗೆ ಸಂವಹನ ನಡೆಸಲು ಮತ್ತು ತಮ್ಮನ್ನು ತಾವು ಹೆಚ್ಚಾಗಿ ತೋರ್ಪಡಿಸಿಕೊಳ್ಳಲು ಬಳಕೆಯಾಗುತ್ತಿದೆ. ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಪರ ವಿರೋಧಗಳು ಚರ್ಚೆಯಾದಾಗಲೂ ಅವರ ಖಾಸಾಗಿ ಮಾಹಿತಿ ಎಲ್ಲರಿಗೂ ಫೇಸ್​ಬುಕ್​ ಹಾಗೂ ಟ್ವಿಟರ್​ನಲ್ಲಿ ಲಭ್ಯವಿರುತ್ತದೆ. ಅನೇಕ ಸಂದರ್ಭದಲ್ಲಿ ಈ ಮಾಹಿತಿಯನ್ನು ಪಡೆದುಕೊಂಡು ಅಪಾಯಗಳು ಸೃಷ್ಟಿಯಾಗುತ್ತವೆ ಎಂದರೆ ಸುಳ್ಳಾಗಲಾರದು.

ಆದರೆ ಈ ಆ್ಯಪ್​ನಲ್ಲಿ ಇದ್ಯಾವುದರ ಭಯವೂ ಇಲ್ಲ, ಏಕೆಂದರೆ ಟ್ಯಾಗ್​ಲೈನ್​ ಸೂಚಿಸಿದಂತೆ ಇಲ್ಲಿ ನೀವು ಅಡ್ಡಹೆಸರಿನಿಂದಲೇ ಗುರುತಿಸಿಕೊಳ್ಳಬೇಕು. ನೀವು ಯಾರು ಏನು ಎಂಬುದರ ಅವಶ್ಯಕತೆ ಯಾರಿಗೂ ಇಲ್ಲ. ಯಾವುದೇ ಬಳಕೆದಾರ ಪೋಸ್ಟ್ ಮಾಡಿದರೂ ಅದು, ನಮ್ಮ ಆಪ್ ಬಳಕೆದಾರರಿಗೆಲ್ಲ ಸಿಗುತ್ತದೆ. ಫೇಸ್​ಬುಕ್ ಹಾಗೂ ಟ್ವಿಟರ್​ಗಳಿಗೆ ಇರುವ ಮಿತಿಯನ್ನು ಮೀರಿ ಹೊಸ ಸ್ವರೂಪ, ಗುಣಲಕ್ಷಣಗಳನ್ನು ಇದು ಹೊಂದಿದೆ.

ಆ್ಯಪ್​ನ ವಿಶೇಷತೆಗಳೇನು?:
ಮೊಟ್ಟಮೊದಲನೇ ವಿಶೇಷತೆಯೆಂದರೆ ಇಲ್ಲಿ ಆಂಗ್ಲ ಬಾಷೆಗೆ ಅವಕಾಶವಿಲ್ಲ, ಕನ್ನಡದವರಿಗಾಗಿಯೇ ಮಾಡಿದ ಆ್ಯಪ್​ ಇದಾಗಿರುವುದರಿಂದ ಇಲ್ಲಿ ನೀವು ಆಂಗ್ಲ ಭಾಷೆಯಲ್ಲಿ ವ್ಯವಹರಿಸಲು ಯತ್ನಿಸಿದರೂ ಅದನ್ನು ಆ್ಯಪ್​ ಸ್ವೀಕರಿಸುವುದಿಲ್ಲ ಬದಲಾಗಿ ಕನ್ನಡದಲ್ಲಿ ಬರೆಯುವಂತೆ ಕೇಳಿಕೊಳ್ಳುತ್ತದೆ.

ನಿಮ್ಮ ಸೆಲ್ಫಿ ಚಿತ್ರಕ್ಕೆ ಅವಕಾಶವಿಲ್ಲ:
ಪ್ರತಿ ಬಾರಿಯೂ ನಿಮ್ಮ ಅಡ್ಡ ಹೆಸರನ್ನು ಬದಲಾಯಿಸುವ ಅವಕಾಶವೂ ಇಲ್ಲಿ ಇರುತ್ತದೆ, ಆದರೆ ನಿಮ್ಮ ಗುರುತನ್ನು ತೋರ್ಪಡಿಸಲು ಯಾವುದೇ ಅವಕಾಶವಿಲ್ಲ. ಸೆಲ್ಫಿ ಹಾಕುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದೇವೆ ಎನ್ನುತ್ತಾರೆ ಟೆಕ್ಕಿ ಕಿರಣ್​.

ನಿಮ್ಮ ಅಭಿಪ್ರಾಯಕ್ಕೆ ಮುಕ್ತ ಆಹ್ವಾನ:
ಫೇಸ್​ಬುಕ್ ಹಾಗೂ ಟ್ವಿಟರ್​ಗಳಲ್ಲಿ ನಡೆಯುವಂತೆ ಗುಂಪುಗಾರಿಕೆಗೆ ಇಲ್ಲಿ ಅವಕಾಶ ಇರುವುದಿಲ್ಲ. ಎಲ್ಲ ಅಭಿಪ್ರಾಯದವರೂ ತಮ್ಮ ದೃಷ್ಟಿಕೋನವನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ನಿಜಕ್ಕೂ ಎಲ್ಲರೂ ಕೂಡಿ ರ್ಚಚಿಸಬಹುದು.

ಪೋಸ್ಟ್​ ಮಾಡುವ ವಿಧಾನ:
ಯಾವುದೇ ರೀತಿಯ ಪೋಸ್ಟ್​ ಹಾಕಲು ಇಲ್ಲಿ ಅವಕಾಶ ಇದೆಯಾದರೂ ಪೋಸ್ಟ್ ಮಾಡುವಾಗಲೇ ಲಭ್ಯವಿರುವ, ಬೇಕಾದ ವಿಷಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಪೋಸ್ಟ್ ಮಾಡಬೇಕು. ಈ ಆ್ಯಪ್​ನೊಳಗೆ ಪೊಸ್ಟ್​ ಮಾಡಲು ಹಾಗೂ ನೋಡಲು ಆರೋಗ್ಯ, ತಮಾಷೆ, ಪ್ರೀತಿ ಪ್ರೇಮ, ಸಂಬಂಧಗಳು ಇತ್ಯಾದಿಯಂತಹ ಕೆಟಗರಿಗಳಿರುತ್ತದೆ. ಇದರಲ್ಲೇ ನೀವು ಪೋಸ್ಟ್​ ಮಾಡಬೇಕು.

ಫೇಸ್​ಬುಕ್​ ಲೈಕ್​ಗಿಂತ ಅಪ್​ವೋಟ್​ ಭಿನ್ನ..!
ಮೊದಲೇ ಹೇಳಿದಂತೆ ಇಲ್ಲಿ ಎಲ್ಲರಿಗೂ ನಿಮ್ಮ ಪೊಸ್ಟ್​ನ್ನು ನೋಡುವ ಅವಕಾಶವಿರುತ್ತದೆ. ಹೀಗಾಗಿ ನೀವು ಪೋಸ್ಟ್ ಮಾಡಿದ ಬಳಿಕ ಆ ಪೋಸ್ಟ್​ಗೆ ಎಲ್ಲರೂ ಕಾಮೆಂಟ್​ ಮಾಡಬಹುದು, ಇಲ್ಲಿ ಅಪ್​ವೋಟ್, ಡೌನ್​ವೋಟ್ ಎಂಬ ಆಯ್ಕೆಗಳಿವೆ. ಬಳಕೆದಾರ ಪ್ರಕಟಿಸಿದ್ದನ್ನು ಇತರ ಬಳಕೆದಾರರು ಓದಿ ಅಪ್​ವೋಟ್ ಮಾಡಿದರೆ ಆ ಪೋಸ್ಟ್ ಅಪ್ಲಿಕೇಷನ್ ಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆದುಕೊಳ್ಳುತ್ತದೆ. ಇಷ್ಟಪಡದೆ ಡೌನ್ ವೋಟ್ ಮಾಡಿದರೆ ಕೆಳಗೆ ಹೋಗುತ್ತದೆ.

ಒಟ್ಟಾರೆ ನಿಮ್ಮ ಪೋಸ್ಟ್​ ಒಂದು ವಾರದವರೆಗೆ ಟಾಪ್​ನಲ್ಲಿ ನಿಲ್ಲುತ್ತದೆ, ಬಳಿಕ ಹೊಸ ಪೋಸ್ಟ್​ ಕಾಣಿಸಿಕೊಳ್ಳುತ್ತದೆ.

ಅಶ್ಲೀಲ, ಕ್ರೌರ್ಯದಂತಹ ಪೋಸ್ಟ್​ಗಳಿಗೆ ಇಲ್ಲ ಅವಕಾಶ!
ಇಲ್ಲಿ ಯಾವುದೇ ಪ್ರಚೋಧನಾಕಾರಿ ಪೋಸ್ಟ್​, ಅಥವಾ ಅಶ್ಲೀಲ ಪೋಸ್ಟ್​ಗಳಿಗೆ ಇಲ್ಲಿ ಅವಕಾಶಗಳಿರುವುದಿಲ್ಲ. ಒಂದು ವೇಳೆ ನೀವು ಅಸಭ್ಯವಾಗಿ ಕಾಮೆಂಟ್​ ಮಾಡಿದರೂ ಅದನ್ನು ಜನರೇ ನಿರ್ಲಕ್ಷಿಸುತ್ತಾರೆ. ಅಲ್ಲದೇ ತಾಂತ್ರಿಕ ತಜ್ಞರು ಇಂತಹ ಕಾಮೆಂಟ್​ಗಳನ್ನು ಬ್ಲಾಕ್​ ಮಾಡುತ್ತಾರೆ. ಇದರಿಂದ ಒಂದು ಉತ್ತಮ ವೇದಿಕೆಯನ್ನು ನಾವು ನಿರ್ಮಿಸಬಹುದು ಎನ್ನುತ್ತಾರೆ ಕಿರಣ್​.

ಟ್ರೆಂಡಿಂಗ್​ನಲ್ಲಿದೆ ನಮ್ಮ ಆ್ಯಪ್​: 

ನಮ್ಮ ಆ್ಯಪ್​ ಕಳೆದ ಒಂದು ವಾರದಿಂದ ಟಾಪ್ 10 ಟ್ರೆಂಡಿಂಗ್​ ಸೋಷಿಯಲ್​ ಆ್ಯಪ್​ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದೆ, ಲೈಕ್​ಯು, ಹೈಕ್​ ಟಾಪ್​ನಂತಹ ಎಲ್ಲಾ ಆ್ಯಪ್​ಗಳಿಗೂ ಸೆಡ್ಡು ಹೊಡೆದಿರು ಕನ್ನಡ ಆ್ಯಪ್​ ಇದಾಗಿದೆ.

ಈ ಆ್ಯಪ್​ನ್ನು ಅಭಿವೃದ್ಧಿ ಪಡಿಸಿದವರು ಮೈಸೂರಿ ಇಂಜಿನಿಯರ್​ಗಳಾದ ಬಿ.ಆರ್. ಕಿರಣ್ ಮತ್ತು ವೈ.ಎಸ್. ಅಲಕನಂದಾ.
ಕನ್ನಡಿಗರಿಗಾಗಿ ಈ ಆ್ಯಪ್​ನ್ನು ನಿರ್ಮಿಸಲಾಗಿದೆ. ಈ ಆ್ಯಪ್​ ಬಿಡಗಡೆ ಸಂದರ್ಭದಲ್ಲಿ ಫೇಸ್​ಬುಕ್​ ಮತ್ತು ಟ್ವಿಟರ್​ನಂತಹ ತಾಣಗಳಿಂದ ನಾವೂ ಭಯಗೊಂಡಿದ್ದೆವು, ಏಕೆಂದರೆ ಅಲ್ಲಿ ಆಗವಂತೆ ಅದೆಷ್ಟೋ ಅಸಭ್ಯ ವರ್ತನೆಗಳು ಇಲ್ಲೂ ನಡೆಯಬಹುದು ಎಂಬ ಆಲೋಚನೆ ನಮ್ಮಲ್ಲಿತ್ತು. ಆದರೆ ನಮ್ಮ ಆ್ಯಪ್​ಗೆ ಧನಾತ್ಮಕ ಪ್ರತಿಕ್ರಿಯೆ ದೊರಕುತ್ತದೆ. ನಾವು ಈ ಆ್ಯಪ್​ನ್ನು ಒಟ್ಟಾರೆ 46 ರಾಷ್ಟ್ರಗಳಲ್ಲಿ ಬಿಡುಗಡೆ ಮಾಡಿದ್ದೆವೆ ಎಂದು ಮಾಹಿತಿ ನೀಡುತ್ತಾರೆ ಕಿರಣ್​.

ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯ

ನಮ್ಮ ಆಪ್ ಆಂಡ್ರಾಯ್ಡ್ ಫೋನ್​ಗಳಲ್ಲಿ ಡೌನ್​ಲೋಡ್ ಮಾಡಿಕೊಳ್ಳಲು ಪ್ಲೇ ಸ್ಟೋರ್​ಗೆ ಭೇಟಿ ಮಾಡಿ NammApp ಎಂದು ಹುಡುಕಬೇಕು ಅಥವಾ 18001235906 ನಂಬರ್​ಗೆ ಮಿಸ್ಡ್ ಕಾಲ್ ನೀಡಿದರೆ ಡೌನ್​ಲೋಡ್ ಕೊಂಡಿ ಇರುವ ಎಸ್​ಎಂಎಸ್ ಬರುತ್ತದೆ.
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...