ಮೆಟಾವರ್ಸ್ (Metaverse) ಎಂಬ ಪದ ಕೇಳಿದಾಗಲೆಲ್ಲಾ ಸಾಮಾನ್ಯವಾಗಿ ಇಂಟರ್ ನೆಟ್ (Internet) ಯುಗದ ಮತ್ತೊಂದು ಪ್ರಪಂಚ ಕಣ್ಣುಮುಂದೆ ಬರುತ್ತದೆ ಎನ್ನಬಹುದು. ಈಗಾಗಲೇ ಮೆಟಾವರ್ಸ್ ತಂತ್ರಜ್ಞಾನ (Metaverse technology) ಜಗತ್ತಿನೆಲ್ಲೆಡೆ ಗಮನಸೆಳೆಯುತ್ತಿದೆ. ಕೆಲವರು ಇದು ವರ್ಚುವಲ್ ರಿಯಾಲಿಟಿಯ ಮತ್ತೊಂದು ಅಭಿವೃದ್ಧಿಗೊಂಡ ತಂತ್ರಜ್ಞಾನ ಎನ್ನುತ್ತಿದ್ದಾರೆ. ಹಲವಾರು ತಜ್ಞರ ಪ್ರಕಾರ ಮೆಟಾವರ್ಸ್ ಎಂಬುದು ಮುಂದಿನ ಭವಿಷ್ಯ. ಮುಂಬರುವ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳನ್ನು ಮೆಟಾವರ್ಸ್ ತಂತ್ರಜ್ಞಾನ ಆವರಿಸಿಕೊಳ್ಳುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ (Students) ಇದರ ಬಗ್ಗೆ ಅರಿವು ಮೂಡಿಸಲು ಮತ್ತು ಕಲಿಯಲು ಫೇಸ್ಬುಕ್ನ ಪೋಷಕ ಕಂಪನಿ ಮೆಟಾ (Meta) ಮತ್ತು ಫ್ರೆಂಚ್ ಡಿಜಿಟಲ್ ತರಬೇತಿ ಸಂಸ್ಥೆ ಸಿಂಪ್ಲಾನ್ ಎರಡೂ ಸೇರಿ ಫ್ರಾನ್ಸ್ ನಲ್ಲಿ "ಮೆಟಾವರ್ಸ್ ಅಕಾಡೆಮಿ"ಯನ್ನು ಆರಂಭಿಸಲು ನಿರ್ಧರಿಸಿವೆ.
ಫ್ರಾನ್ಸ್ನಲ್ಲಿ ಮೆಟಾವರ್ಸ್ ಶಿಕ್ಷಣ ಕೇಂದ್ರ
ಫ್ರಾನ್ಸ್ನಲ್ಲಿ ಹೊಸ ಶೈಕ್ಷಣಿಕ ವರ್ಷದಲ್ಲಿ ಮೆಟಾವರ್ಸ್ ಶಿಕ್ಷಣ ಕೇಂದ್ರವನ್ನು ಪ್ರಾರಂಭಿಸುವುದಾಗಿ ಕಂಪನಿಗಳು ಈ ವಾರದ ಆರಂಭದಲ್ಲಿ ಅಧಿಕೃತವಾಗಿ ತಿಳಿಸಿವೆ. ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿರುವ ಮೆಟಾ ಸಂಸ್ಥೆ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಫ್ರಾನ್ಸ್ ನ ಶಿಕ್ಷಣ ಸಂಸ್ಥೆಯೊಂದಿಗೆ ಡಿಜಿಟಲ್ ತರಬೇತಿ ನೀಡಲು ಸಹಕರಿಸಲು ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಶಿಕ್ಷಣದ ಅಗತ್ಯ ಅಂಶವಾಗಿ, ವಿದ್ಯಾರ್ಥಿಗಳಿಗೆ ಫೇಸ್ಬುಕ್ ಮತ್ತು ಇತರ ಸಾಮಾಜಿಕ ನೆಟ್ವರ್ಕಿಂಗ್, ವೆಬ್ಸೈಟ್ಗಳ ವ್ಯಾಪಕ ಶ್ರೇಣಿ ಕುರಿತಾದ ಅಧ್ಯಯನ ಸಾಮಗ್ರಿ ಬಗ್ಗೆ ಕಲಿಸುವ ಯೋಜನೆಯನ್ನು ಹಾಕಿಕೊಂಡಿದೆ.
ಇದನ್ನೂ ಓದಿ: WhatsApp ಬಳಕೆದಾರರಿಗೆ ಸಿಹಿಸುದ್ದಿ ನೀಡಿದ ಮಾರ್ಕ್ ಜುಕರ್ಬರ್ಗ್! ಹೊಸ ವೈಶಿಷ್ಟ್ಯದ ಬಗ್ಗೆ ಹೇಳಿದ ಮೆಟಾ ಸಿಇಒ
ಸಿಂಪ್ಲಾನ್ ಸಹ-ಸಂಸ್ಥಾಪಕ ಮತ್ತು ಸಿಇಒ ಫ್ರೆಡ್ರಿಕ್ ಬಾರ್ಡೊ ಈ ಬಗ್ಗೆ ಮಾತನಾಡಿ, ಬೋಧನಾ ವಿಧಾನವು ವ್ಯಕ್ತಿಗತವಾಗಿರುತ್ತದೆ ಮತ್ತು ಯೋಜನೆಗಳ ಸುತ್ತ ಗಮನ ಹರಿಸುತ್ತದೆ. ಜೊತೆಗೆ 3D ಪ್ರಪಂಚ ಮತ್ತು ವರ್ಚುವಲ್ ವಿಶ್ವಗಳಲ್ಲಿನ ಪರಸ್ಪರ ಕ್ರಿಯೆಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ತಿಳಿಸಿದ್ದಾರೆ. ದಕ್ಷಿಣ ಯುರೋಪ್ನ ಮೆಟಾದ ಉಪಾಧ್ಯಕ್ಷ ಲಾರೆಂಟ್ ಸೊಲ್ಲಿ “ಒಟ್ಟು ನೂರು ವಿದ್ಯಾರ್ಥಿಗಳು ಎರಡು ಹಂತಗಳಲ್ಲಿ ಉಚಿತ ತರಬೇತಿಯನ್ನು ಪಡೆಯುತ್ತಾರೆ. ಪರಿಣಿತ ತಂತ್ರಜ್ಞಾನ ಅಭಿವರ್ಧಕರು ಮಕ್ಕಳಿಗೆ ಕಲಿಸಿ ಕೊಡುತ್ತಾರೆ” ಎಂದು ತಿಳಿಸಿದರು.
VNTANA ನೊಂದಿಗೆ ಪಾಲುದಾರಿಕೆಯನ್ನು ತೆಗೆದುಕೊಂಡ ಮೆಟಾ
ಈ ಮೊದಲು ಮಾರ್ಚ್ನಲ್ಲಿ, ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಾದ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಗೆ 3D ಜಾಹೀರಾತುಗಳನ್ನು ತರಲು ಮೆಟಾ ಐಕಾಮರ್ಸ್ ತಂತ್ರಜ್ಞಾನ ಸಂಸ್ಥೆ VNTANA ನೊಂದಿಗೆ ಪಾಲುದಾರಿಕೆಯನ್ನು ತೆಗೆದುಕೊಂಡಿದೆ. ಯುಎಸ್ ತಂತ್ರಜ್ಞಾನ ದೈತ್ಯ, ಕಾರ್ಯತಂತ್ರದ ಆದ್ಯತೆಯಾದ ಮೆಟಾವರ್ಸ್ ಅನ್ನು ನಿರ್ಮಿಸಲು ಐದು ವರ್ಷಗಳಲ್ಲಿ ಯುರೋಪ್ನಲ್ಲಿ 10,000 ಉದ್ಯೋಗಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ ಎಂದು ಕಳೆದ ವರ್ಷ ಮೆಟಾ ಹೇಳಿತ್ತು. ಡಿಜಿಟಲ್ ಪ್ರಪಂಚವು ವರ್ಧಿತ ಅಥವಾ ವರ್ಚುವಲ್ ರಿಯಾಲಿಟಿ ಮೂಲಕ ನೈಜ ಜೀವನವನ್ನು ಮರುಸೃಷ್ಟಿಸಲು ಮತ್ತು ವೆಬ್ ಅನ್ನು ತೆಗೆದುಕೊಳ್ಳುವ ಗುರಿಯನ್ನು ಈ ಯೋಜನೆ ಹೊಂದಿದೆ.
ಮೆಟಾ ಆರಂಭಿಸುತ್ತಿರುವ ಮೆಟಾವರ್ಸ್ ಅಕಾಡೆಮಿಯಲ್ಲಿ ಈ ಮೆಟಾವರ್ಸ್ ಎಂದರೇನು? ಅದರ ಪರಿಕಲ್ಪನೆ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
ಮೆಟಾವರ್ಸ್ ಎಂದರೇನು ?
ಇದೊಂದು "ವರ್ಚುವಲ್ ಪರಿಸರ". ಅಂದರೆ ನೀವು ಇಂಟರ್ನೆಟ್ ಅನ್ನು ಪರದೆಯ ಮೇಲೆ ನೋಡುವ ಬದಲು ನಿಮ್ಮ ಸುತ್ತಲೂ ಇರಿಸಬಹುದು. ಇದು ವರ್ಚುವಲ್ ರಿಯಾಲಿಟಿ ಹೆಡ್ಸೆಟ್ಗಳು, ವರ್ಧಿತ ರಿಯಾಲಿಟಿ ಗ್ಲಾಸ್ಗಳು, ಸ್ಮಾರ್ಟ್ಫೋನ್ ಅಪ್ಲಿಕೇಶನ್ಗಳು ಅಥವಾ ಇತರ ಸಾಧನಗಳನ್ನು ಬಳಸಿಕೊಂಡು ಜನರನ್ನು ಭೇಟಿಯಾಗಲು ಬಳಸಬಹುದಾಗಿದೆ. ಅಂದರೆ ವರ್ಚುವಲ್ ಪ್ರಂಪಚದಲ್ಲಿ ಇಂಟರ್ನೆಟ್ ಮೂಲಕವೇ ಎಲ್ಲರನ್ನೂ ಸಂಪರ್ಕಿಸಬಹುದು. ಈ ರೀತಿಯ ಕಲ್ಪನೆ ಭವಿಷ್ಯದ ಸಂಪರ್ಕದ ವಿಕಸನವಾಗಿದೆ. ಇಲ್ಲಿ ಎಲ್ಲಾ ವಿಷಯಗಳು ತಡೆರಹಿತವಾಗಿದ್ದು, ನಿಮ್ಮ ಭೌತಿಕ ಜೀವನವನ್ನು ಹೇಗೆ ಜೀವಿಸುತ್ತೀರೋ ಅದೇ ರೀತಿಯಲ್ಲಿ ನಿಮ್ಮ ವರ್ಚುವಲ್ ಜೀವನವನ್ನು ನೀವು ಅನುಭವಿಸಬಹುದು ಎಂಬ ಪರಿಕಲ್ಪನೆಯನ್ನು ಹೊಂದಿದೆ.
ಇದನ್ನೂ ಓದಿ: Telegram: ಇನ್ಮುಂದೆ 'ಟೆಲಿಗ್ರಾಮ್' ಪ್ರೀಮಿಯಂ ಬಳಕೆಗೆ ಹಣ ಪಾವತಿಸಬೇಕು; ಇದೇ ತಿಂಗಳಿಂದ ಆರಂಭವಾಗಲಿದೆ ಹೊಸ ಪ್ಲ್ಯಾನ್
ಮೆಟಾದೊಂದಿಗೆ ಕೆಲಸ ಮಾಡುವ ಫ್ರೆಂಚ್ ಸಂಸ್ಥೆ ಸಿಂಪ್ಲಾನ್ ರಾಜಧಾನಿ ಪ್ಯಾರಿಸ್ , ಲಿಯಾನ್, ಮಾರ್ಸಿಲ್ಲೆ ಮತ್ತು ನೈಸ್ ಸೇರಿದಂತೆ ಇತರ ನಗರಗಳ 20 ವಿದ್ಯಾರ್ಥಿಗಳಿಗೆ ಮೆಟಾವರ್ಸ್ ಅಕಾಡೆಮಿಯು ಪ್ರತಿ ವರ್ಷ ತರಬೇತಿ ನೀಡಲು ನಿರ್ಧರಿಸಿದೆ. ಫೇಸ್ಬುಕ್ ತನ್ನ ಹೆಸರನ್ನು ಮೆಟಾ ಎಂದು ಬದಲಾಯಿಸಿದಾಗಿನಿಂದ ಮಾರ್ಕ್ ಜುಕರ್ಬರ್ಗ್ ಅವರ ಸಮಯ ಮತ್ತು ಶ್ರಮದ ಗಮನಾರ್ಹ ಪ್ರಮಾಣವನ್ನು ಮೆಟಾವರ್ಸ್ಗೆ ಸಂಬಂಧಿಸಿದ ವಿವಿಧ ಉಪಕ್ರಮಗಳ ಮೇಲೆ ಕೇಂದ್ರೀಕರಿಸಿದ್ದಾರೆ ಎಂದರೆ ತಪ್ಪಾಗಲಾರದು. ಅವುಗಳಲ್ಲಿ ಮೆಟಾವರ್ಸ್ ಅಕಾಡೆಮಿ ಸಹ ಪ್ರಮುಖವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ