ಐಟಿ ಕಂಪನಿಗಳು (IT Company) ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು ಉದ್ಯೋಗಿ ಕಡಿತದಂತಹ ನಿರ್ಧಾರಗಳನ್ನು ಜಾರಿಗೆ ತರುತ್ತಿವೆ. ಈ ದಿಸೆಯಲ್ಲಿ ಫೇಸ್‌ಬುಕ್ (Facebook), ಟ್ವಿಟರ್ (Twitter), ಗೂಗಲ್ (Google) ಸಾಕಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದೀಗ ಟು ಸಿಂಪಲ್ ಹೋಲ್ಡಿಂಗ್ಸ್ ಇಂಕ್ ಸ್ಟಾರ್ಟಪ್ ಕಂಪನಿಯು (TuSimple Holdings Inc) ಮುಂದಿನ ವಾರ ತನ್ನ ಅರ್ಧದಷ್ಟು ಉದ್ಯೋಗಿಗಳನ್ನು ಕಡಿತಗೊಳಿಸಲು ಯೋಜಿಸಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಸಂಸ್ಥೆಯ ಉದ್ಯೋಗಿ ಕಡಿತವು 700 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ ಎಂಬುದಾಗಿ ಸುದ್ದಿಮೂಲಗಳು ವರದಿಮಾಡಿವೆ. ಈ ನಿರ್ಧಾರ ಕಂಪನಿಯ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.
ಈ ಹಿಂದೆ ಗೂಗಲ್, ಮೆಟಾ ಕಂಪನಿಗಳು ತನ್ನ ಕಂಪನಿಯ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ ತನ್ನ ಉದ್ಯೋಗಿಗಳನ್ನು ವಜಾ ಮಾಡಿತ್ತು. ಇದೀಗ ಈ ನಿಯಮವನ್ನು ಟುಸಿಂಪಲ್ ಸ್ಟಾರ್ಟಪ್ ಕಂಪನಿ ಕೈಗೊಂಡಿದೆ. ಇದು 700 ಉದ್ಯೋಗಿಗಳ ಮೇಲೆ ಪ್ರಭಾವ ಬೀರಲಿದೆ.
ಪ್ರತಿಕ್ರಿಯೆ ನೀಡದ ಸಂಸ್ಥೆ
ರಾಯಿಟರ್ಸ್ ಕಮೆಂಟ್‌ಗೆ ಸಂಸ್ಥೆ ಕೂಡಲೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ವರದಿಯಾಗಿದೆ. ಸ್ಟಾರ್ಟಪ್ ಕಂಪನಿಯು ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಸಿಯೋಡಿ ಹೌ ಅವರನ್ನು ವಜಾಗೊಳಿಸಿದ ನಂತರ ಮಂಡಳಿಯು ಆಂತರಿಕ ತನಿಖೆಗಳನ್ನು ಕೈಗೊಂಡಿದ್ದು ಚೀನಾದಲ್ಲಿ ಸ್ವಾಯತ್ತ ಟ್ರಕ್‌ಗಳಲ್ಲಿ ಕಾರ್ಯನಿರ್ವಹಿಸುವ ಹೈಡ್ರೋನ್ ಇಂಕ್ ಸಂಸ್ಥೆಗಾಗಿ ಕೆಲವೊಂದು ಉದ್ಯೋಗಿಗಳು ಸಂಬಳಕ್ಕಾಗಿ ಕೆಲವೊಂದು ಗಂಟೆಗಳ ಕಾಲ ಕಾರ್ಯನಿರ್ವಹಿಸಿರುವುದು ತಿಳಿದುಬಂದಿದ್ದು, ಈ ಬೆನ್ನಲ್ಲೇ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ.
ಇದನ್ನೂ ಓದಿ: ನ್ಯಾನೊಟ್ಯೂಬ್‌ಗಳನ್ನು ತಯಾರಿಸುವ ಬೆಂಗಳೂರಿನ ದೊಡ್ಡ ಸಂಸ್ಥೆ; ಇದು ಟೆಸ್ಲಾದ ಮೇಲೆ ಪ್ರಭಾವ ಬೀರಿದ್ದು ಹೇಗೆ?
ನಾಯಕತ್ವ ಬದಲಾವಣೆ ಮಾಡಿರುವ ಸ್ಟಾರ್ಟಪ್
ನವೆಂಬರ್‌ನಲ್ಲಿ, TuSimple ಸ್ಟಾರ್ಟಪ್ ತನ್ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚೆಂಗ್ ಲುವನ್ನು ಮರುನೇಮಕಗೊಳಿಸಿತು ಹಾಗೂ ಜೊತೆಗೆ ನಾಲ್ಕು ಸ್ವತಂತ್ರ ನಿರ್ದೇಶಕರನ್ನು ತೆಗೆದುಹಾಕಿತು ಮತ್ತು ಸಹ-ಸಂಸ್ಥಾಪಕ ಮತ್ತು ಪ್ರಮುಖ ಷೇರುದಾರ ಮೊ ಚೆನ್ ಅವರನ್ನು ಮಂಡಳಿಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಿತು.
ಸ್ಯಾನ್ ಡಿಯಾಗೋ ಮೂಲದ ಸ್ಟಾರ್ಟಪ್ ಕಂಪನಿ ಟು ಸಿಂಪಲ್, ವಾರದ ಕೆಲವು ದಿನಗಳು ಕಚೇರಿಗಳನ್ನು ಮುಚ್ಚಲಾಗುತ್ತದೆ ಎಂದು ಉದ್ಯೋಗಿಗಳಿಗೆ ತಿಳಿಸಿದ್ದು ಉದ್ಯೋಗಿ ವಜಾಗೊಳಿಸುವಿಕೆ ಈ ದಿನಗಳಲ್ಲೇ ಘೋಷಣೆಯಾಗಲಿದೆ ಎಂಬುದಾಗಿ ಸಿಬ್ಬಂದಿ ವಲಯದಿಂದ ವರದಿಯಾಗಿದೆ.
ವೆಚ್ಚಕಡಿತದ ಹಿನ್ನಲೆಯಲ್ಲಿ ಸಾಕಷ್ಟು ಕ್ರಮಜಾರಿ
ಸ್ಟಾರ್ಟಪ್ ವೆಚ್ಚವನ್ನು ಕಡಿತಗೊಳಿಸುವ ಹಿನ್ನಲೆಯಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಸ್ವಯಂ-ಚಾಲನಾ ಟ್ರಕ್‌ಗಳ ವ್ಯಾಪಾರದಲ್ಲಿ ಕುಸಿತ, ಪ್ರಮುಖ ವ್ಯಾಪಾರ ಪಾಲುದಾರಿಕೆಗಳ ನಷ್ಟ, ಇಬ್ಬರು ಸಿಇಒ ಗಳ ಬದಲಾವಣೆ, ಷೇರು ಬೆಲೆ ಕುಸಿತ ಹೀಗೆ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದು ಬಿಕ್ಕಟ್ಟುಗಳ ಸರಣಿಯಿಂದ ತತ್ತರಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಸ್ಟಾರ್ಟಪ್ ತನ್ನ ತಂತ್ರಜ್ಞಾನವನ್ನು ಇನ್ನೂ ಪರೀಕ್ಷಾ ಹಂತದಲ್ಲಿ ಇರಿಸಿರುವುದರಿಂದ ಗಮನಾರ್ಹ ಆದಾಯವನ್ನು ಪಡೆಯುವಲ್ಲಿ ವಿಫಲತೆಯನ್ನು ಅನುಭವಿಸಿದೆ ಎಂದು ವರದಿಯಾಗಿದೆ.
ನಷ್ಟದಲ್ಲೇ ಮುಂದುವರಿಯುತ್ತಿದ್ದ ಸಂಸ್ಥೆ
ವರ್ಷದ ಮೊದಲಾರ್ಧದಲ್ಲಿ, ಸಂಸ್ಥೆಯು $220.5 ಮಿಲಿಯನ್ ನಷ್ಟದಲ್ಲಿ $4.9 ಮಿಲಿಯನ್ ಆದಾಯವನ್ನು ವರದಿ ಮಾಡಿದೆ. ಸ್ವಯಂಚಾಲಿತ ಟ್ರಕ್‌ಗಳನ್ನಿರಿಸಿಕೊಂಡು ಸಾಗಣೆದಾರರಿಗೆ ಸರಕು ಸಾಗಿಸುವ ಸಂಸ್ಥೆಯ ಯೋಜನೆಯಿಂದ ಆದಾಯ ಹೆಚ್ಚು ಬಂದಿದೆಯಾದರೂ ಸಂಸ್ಥೆ ಪಾಲುದಾರ ಕಂಪನಿಯಾದ McLane ಕಂಪನಿ ಇಂಕ್ ಸ್ಟಾರ್ಟಪ್‌ನೊಂದಿಗೆ ಒಪ್ಪಂದ ಮುರಿದುಕೊಂಡು ದೂರ ಸರಿದಿದೆ ಎಂಬುದಾಗಿ ಸಂಸ್ಥೆಯ ಮೂಲಗಳು ತಿಳಿಸಿವೆ.
ಹಿಂದೆ ಸರಿದ ಪಾಲುದಾರ ಕಂಪನಿ
ಸ್ಟಾರ್ಟಪ್‌ಗಳಲ್ಲಿ ನಡೆಯುತ್ತಿರುವ ಹಲವಾರು ಬದಲಾವಣೆ ಬಗ್ಗೆ ಪಾಲುದಾರಿಕೆ ಸಂಸ್ಥೆ ಮೆಕ್‌ಲ್ಯಾನ್‌ಗೆ ತಿಳಿದುಬಂದಿದ್ದು, ಸ್ಟಾರ್ಟಪ್‌ನೊಂದಿಗೆ ವ್ಯಾಪಾರ ಸಂಬಂಧವನ್ನು ನಿರ್ಣಯಿಸುವ ಪ್ರಕ್ರಿಯೆಯಲ್ಲಿದ್ದೇವೆ ಹಾಗೂ ಸರಿಯಾದ ಸಮಯದಲ್ಲಿ ಮುಂದಿನ ಕ್ರಮವನ್ನು ತಿಳಿಸುವುದಾಗಿ ಮ್ಯಾಕ್‌ಲೇನ್‌ನ ಮುಖ್ಯ ಆಡಳಿತ ಅಧಿಕಾರಿ ಲ್ಯಾರಿ ಪಾರ್ಸನ್ಸ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಕುಸಿದ ಕಂಪನಿಯ ಷೇರು ಮೌಲ್ಯ
TuSimple ನಿಯಂತ್ರಕರು ಮತ್ತು ಸಾರ್ವಜನಿಕ ಷೇರು ಮಾರುಕಟ್ಟೆ ನಿಯಮಗಳ ಅನುಸರಣೆಗೆ ಮರಳುವ ಪ್ರಯತ್ನದಲ್ಲಿ ನಾಯಕತ್ವ ಬದಲಾವಣೆಗಳನ್ನು ಘೋಷಿಸಿದೆ. ಸ್ಟಾರ್ಟಪ್ ತನ್ನ ಸ್ಟಾಕ್ ವಹಿವಾಟನ್ನು $ 1.54 ಕ್ಕೆ ಮುಚ್ಚಿದ್ದು, ಕಳೆದ ಎರಡು ತಿಂಗಳಲ್ಲಿ ಇದು 75% ಕುಸಿತಕ್ಕೆ ಕಾರಣವಾಗಿದೆ ಹಾಗೂ ಸಂಸ್ಥೆಯ 2021 ರ ಆರಂಭಿಕ ಸಾರ್ವಜನಿಕ ಕೊಡುಗೆ ಬೆಲೆಯಿಂದ 96% ಕಡಿಮೆಯಾಗಿದೆ ಎಂದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ