ತಂತ್ರಜ್ಞಾನದ (Technology) ಸಹಾಯದಿಂದ ಇಂದು ಅದೆಷ್ಟೋ ಕೆಲಸಗಳು ಸುಲಭವಾಗಿವೆ. ಮೊಬೈಲ್ (Mobile) ಇದ್ದರೆ ಸಾಕು ಕುಳಿತಲ್ಲಿಂದಲೇ ಎಲ್ಲ ಕೆಲಸವನ್ನೂ ಮಾಡಿಬಿಡಬಹುದು. ಆದರೆ ಅತಿಯಾದರೆ ಅಮೃತವೂ ವಿಷ ಅನ್ನೋ ಹಾಗೆ ಮೊಬೈಲ್ ಬಳಕೆ ಹೆಚ್ಚಾದಂತೆಲ್ಲ ಅಡ್ಡ ಪರಿಣಾಮಗಳೂ ಹೆಚ್ಚಾಗುತ್ತವೆ ಅನ್ನೋದು ಕಟುಸತ್ಯ. ಇನ್ನು ಮೊಬೈಲ್ ನೋಡುವ ಗೀಳಿನಿಂದ ಕಣ್ಣಿನ ದೃಷ್ಟಿಯ ಮೇಲೂ ತೀವ್ರ ಪರಿಣಾಮಗಳುಂಟಾಗುತ್ತವೆ. ಮೊಬೈಲ್ ಸ್ಕ್ರೀನ್‌ಅನ್ನು (Mobile Screen) ಹೆಚ್ಚಾಗಿ ನೋಡುವ ಅದರಲ್ಲೂ ರಾತ್ರಿ ವೇಳೆ ಹೆಚ್ಚಾಗಿ ಮೊಬೈಲ್ ಬಳಸುವವರಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.
ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್
ಬೆಂಗಳೂರಿನ ನಿವಾಸಿಯಾಗಿರುವ 36 ವರ್ಷದ ನಿರ್ಮಲಾ ಶಾನಭಾಗ್ ಅವರಿಗೆ ಸ್ಮಾರ್ಟ್ ಫೋನ್ ವಿಷನ್ ಸಿಂಡ್ರೋಮ್ ಸಮಸ್ಯೆ ಇದ್ದಿದ್ದು ಮೊದಲು ತಿಳಿದಿರಲಿಲ್ಲ. ಅವರಿಗೆ ರಾತ್ರಿ ವೇಳೆ ಎದುರಿಗೆ ಬರುವ ವಾಹನ ಹೆಡ್‌ಲೈಟ್‌ನಿಂದಾಗಿ ವಾಹನ ಚಲಾಯಿಸಲು ತೊಂದರೆಯಾಗುತ್ತಿತ್ತು. ಅಲ್ಲದೇ ಹೆಚ್ಚು ಬೆಳಕಿಗೆ ಒಡ್ಡಿಕೊಂಡಾಗ ಮೈಗ್ರೇನ್ ಊಂಟಾಗುತ್ತಿತ್ತು. ಇದರಿಂದ ವೈದ್ಯರ ಬಳಿ ತೆರಳಿ ಪರೀಕ್ಷೆ ಮಾಡಿಸಿಕೊಂಡರು.
ನಿರ್ಮಲಾ ಅವರ ವರದಿಗಳನ್ನು ಪರೀಕ್ಷಿಸಿದ ನಂತರ ಅವರು ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್‌ನಿಂದ ಬಳಲುತ್ತಿರುವುದು ತಿಳಿದುಬಂದಿದೆ. ನಾರಾಯಣ ನೇತ್ರಾಲಯದ ಡಾ. ರೋಹಿತ್ ಶೆಟ್ಟಿ ಅವರು, “ನಾವು ನಿರ್ಮಲಾ ಅವರಿಗೆ ಸುಧಾರಿತ ಆಪ್ಟಿಕಲ್ ಅಬೆರೇಶನ್ ಮತ್ತು ಬೈನಾಕ್ಯುಲರ್ ಫ್ಯೂಷನ್ ಪರೀಕ್ಷೆಗಳನ್ನು ಮಾಡಿದ್ದೇವೆ. ಕಂಪ್ಯೂಟರ್ ಮತ್ತು ಫೋನ್ ಬಳಕೆ ಮಾಡುತ್ತಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಮದುವೆ ಆಗೋಕೆ ತುದಿಗಾಲಲ್ಲಿ ನಿಂತಿದ್ದೀರಾ? ಹಾಗಾದ್ರೆ ಭಾವೀ ವಧು-ವರರು ಈ ವಿಷಯಗಳನ್ನು ತಿಳಿದಿರಲೇಬೇಕು
ಇದರಿಂದ ಉಂಟಾಗುವ ಸೆಳೆತವನ್ನು ಕಡಿಮೆ ಮಾಡಲು ಮಹಿಳೆಗೆ ಆರು ವಾರಗಳ ತೀವ್ರ ಕಣ್ಣಿನ ವ್ಯಾಯಾಮವನ್ನು ಸೂಚಿಸಲಾಯಿತು " ಎಂದು ಹೇಳಿದ್ದಾರೆ. ಅಲ್ಲದೇ ನಿರ್ಮಲಾ ಅವರು ಸದ್ಯ ರೋಗಲಕ್ಷಣಗಳಿಂದ ಮುಕ್ತರಾಗಿದ್ದಾರೆ. ಹಾಗೆಯೇ ಮೊಬೈಲ್ ಬಳಕೆಯ ಬಗ್ಗೆ ಬಹಳ ಜಾಗರೂಕರಾಗಿದ್ದಾರೆ ಎಂದು ಡಾ. ಶೆಟ್ಟಿ ಹೇಳಿದ್ದಾರೆ.
ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣಿನ ಸಮಸ್ಯೆ
ಶಂಕರ ಐ ಫೌಂಡೇಶನ್‌ನ ಡಾ.ಕೌಶಿಕ್ ಮುರಳಿ ಅವರು, "ಕಣ್ಣಿನ ಮಸೂರವು ಆಕಾರವನ್ನು ಬದಲಾಯಿಸುತ್ತದೆ. ನಾವು ವಸ್ತುವನ್ನು ನೋಡಲು ಮತ್ತು ಓದಲು ಹತ್ತಿರ ಹೋದಾಗ ಕಣ್ಣುಗಳು ಒಮ್ಮುಖವಾಗುತ್ತವೆ. ಈ ಪರದೆಗಳ ಬಳಕೆಯು ಕಣ್ಣಿನ ಕಾರ್ಯವಿಧಾನದ ಮೇಲೆ ಪರಿಣಾಮ ಬೀರುತ್ತದೆ. ಅತಿಯಾದ ಸ್ಮಾರ್ಟ್‌ಫೋನ್ ಬಳಕೆ ತಲೆನೋವು ಮತ್ತು ಕಣ್ಣಿನಿಂದ ಆಗಾಗ ನೀರು ಬರುವಂಥ ಸಮಸ್ಯೆಯನ್ನು ಉಂಟುಮಾಡಬಹುದು ಎಂದು ವಿವರಿಸುತ್ತಾರೆ.
ಇನ್ನು, ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗಳ ಹಿರಿಯ ಸಲಹೆಗಾರ ನರವಿಜ್ಞಾನಿ ಡಾ ಸುಧೀರ್ ಕುಮಾರ್ ಅವರು, "ನಾನು ಅನೇಕ ಸಣ್ಣ ರೋಗಲಕ್ಷಣಗಳ ಪ್ರಕರಣಗಳನ್ನು ನೋಡುತ್ತೇನೆ. ಅಲ್ಲಿ ಜನರು ದೀಪಗಳ ಹೊಳಪಿನ ಬಗ್ಗೆ ದೂರು ನೀಡುತ್ತಾರೆ” ಎಂಬುದರ ಬಗ್ಗೆ ವಿವರಿಸುತ್ತಾರೆ.
ಇತ್ತೀಚಿಗೆ 30 ವರ್ಷದ ಮಹಿಳೆಯೊಬ್ಬರು ಸ್ಮಾರ್ಟ್‌ಫೋನ್ ವಿಷನ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದರು. ಕೆಲಸದ ನಂತರ ರಾತ್ರಿ ಕತ್ತಲೆಯಲ್ಲಿ ತನ್ನ ಸ್ಮಾರ್ಟ್‌ಫೋನ್ ಬಳಸುತ್ತಿದ್ದರು. ಆದರೆ ಆನಂತರ ಆ ಮಹಿಳೆ ರಾತ್ರಿ ಫೋನ್ ನೋಡುವ ಅಭ್ಯಾಸ ನಿಲ್ಲಿಸಿದಂತೆ ಆಕೆಯ ದೃಷ್ಟಿ ಗಮನಾರ್ಹವಾಗಿ ಸುಧಾರಿಸಿತು ಎಂಬುದಾಗಿ ಹೇಳುತ್ತಾರೆ.
ಕಣ್ಣು ಮಿಟುಕಿಸುವುದು ಕಡಿಮೆಯಾಗುತ್ತದೆ!
ಡಿಜಿಟಲ್ ಸಾಧನದ ಬಳಕೆಯ ಹೆಚ್ಚಳದೊಂದಿಗೆ ಕಣ್ಣಿನ ಬ್ಲಿಂಕ್ ದರವು ಕಡಿಮೆಯಾಗಿದೆ ಎಂಬುದಾಗಿ ತಜ್ಞರು ಹೇಳುತ್ತಾರೆ. "ನಾವು ಪರದೆಯ ಮೇಲೆ ಚಿತ್ರಗಳನ್ನು ವೀಕ್ಷಿಸಲು ಅಥವಾ ಬರಹಗಳನ್ನು ಓದುವಾಗ ಕಣ್ಣನ್ನು ತೆರೆದುಕೊಂಡೇ ಇರುತ್ತೇವೆ. ಅಲ್ಲದೇ ಗಮನ ಬೇರೆಡೆ ಇರುವುದರಿಂದ ಕಣ್ಣು ಮಿಟುಕಿಸುವುದನ್ನು ಮರೆಯುತ್ತೇವೆ. ಅಲ್ಲದೇ ಅಪೂರ್ಣವಾಗಿ ಮಿಟುಕಿಸುವ ಪ್ರಮಾಣವು ಹೆಚ್ಚಾಗುತ್ತದೆ. ಇದು ಒಣ ಕಣ್ಣಿನ ಕಾಯಿಲೆಗೆ ಕಾರಣವಾಗಬಹುದು” ಎಂಬುದಾಗಿ ಡಾ. ಮುರಳಿ ಎಚ್ಚರಿಸುತ್ತಾರೆ.
ಇನ್ನು, ಮಲಗುವ ಸಮಯದಲ್ಲಿ ಮೊಬೈಲ್‌ಗಳನ್ನು ಚೆಕ್ ಮಾಡುವುದು ಬಹಳಷ್ಟು ಜನರ ಹವ್ಯಾಸವಾಗಿದೆ. ಮೆಸೇಜ್ ಗಳನ್ನು ಓದುವುದು, ಸಾಮಾಜಿಕ ಜಾಲತಾಣದ ಪೋಸ್ಟ್ ಗಳನ್ನು ನೋಡುವುದು ಸಾಮಾನ್ಯವಾಗಿದೆ. ಆದರೆ ಕತ್ತಲೆಯಲ್ಲಿ ಬ್ರೌಸ್ ಮಾಡುವುದರಿಂದ ಕಣ್ಣುಗಳಿಗೆ ಹಾನಿಯಾಗುತ್ತದೆ ಎಂದು ಡಾ. ಶೆಟ್ಟಿ ಹೇಳುತ್ತಾರೆ. ನೋಡುವ ಸ್ಕ್ರೀನ್ ಚಿಕ್ಕದಾಗಿದ್ದರೆ ಮಕ್ಕಳಲ್ಲಿ ಸಮೀಪದೃಷ್ಟಿ ಸಮಸ್ಯೆ ಉಂಟಾಗುವ ಸಾಧ್ಯತೆಗಳಿರುತ್ತವೆ.
ಅಲ್ಲದೇ ರಾತ್ರಿಯಲ್ಲಿ ಮೊಬೈಲ್‌ಗಳನ್ನು ಬಳಸುವುದರಿಂದ ನಿದ್ರೆಯ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ ಎಂಬುದಾಗಿ ಅವರು ಎಚ್ಚರಿಕೆ ನೀಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ