ಇಂದು ಸೋಶಿಯಲ್ ಮೀಡಿಯಾ (Social Media) ಬಳಸದೇ ಇರುವವರು ತುಂಬಾನೇ ವಿರಳ. ಅದರಲ್ಲೂ ಯೂಟ್ಯೂಬ್, ಇನ್‌ಸ್ಟಾಗ್ರಾಂನಂತಹ (Instagram) ಮಾಧ್ಯಮಗಳು ಇಂದು ತೀರಾ ಸಾಮಾನ್ಯವಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿನ ಅವರ ಚಾನೆಲ್‌ಗೆ ಇರುವಂತಹ ಸಬ್‌ಸ್ಕ್ರೈಬರ್ಸ್ ಅಥವಾ ವಿಡಿಯೋಗಳಿಗೆ ಬರುವಂತಹ ವೀವ್ಸ್ ಮೇಲೆ ಸಾಕಷ್ಟು ಹಣವನ್ನೂ ಗಳಿಸಬಹುದು. ಇದರಿಂದಾಗಿಯೇ ಇಂಜಿನಿಯರ್‌ಗಳು, ವೈದ್ಯರು ಹಾಗೆಯೇ ಒಳ್ಳೊಳ್ಳೆ ಕೆಲಸದಲ್ಲಿದ್ದವರು ವೃತ್ತಿಯನ್ನು ಬಿಟ್ಟು ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ (Social Media Influencers) ಆಗಿದ್ದಾರೆ. ಇದರಿಂದ ಅವರ ಆಸಕ್ತಿಯ ಕ್ಷೇತ್ರದಲ್ಲಿ ಕೆಲಸ ಮಾಡುವುದರ ಜೊತೆಗೆ ಒಳ್ಳೆಯ ಆದಾಯವನ್ನೂ ಗಳಿಸುತ್ತಿದ್ದಾರೆ.
ಇಂತಹ ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಅಥವಾ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್‌ಗಳು ಸಾರ್ವಜನಿಕ ಸಂಬಂಧಗಳು ಮತ್ತು ಮಾರ್ಕೆಟಿಂಗ್‌ನಂತಹ ಕ್ಷೇತ್ರಗಳಿಗೆ ಬಹಳ ಉಪಯುಕ್ತವಾದ ಕೌಶಲ್ಯವನ್ನು ಹೊಂದಿದ್ದಾರೆಂದು ಅಂದುಕೊಳ್ಳುತ್ತೇವೆ. ಆದರೆ ಇಂತಹ ಇಂಟರ್ನೆಟ್ ಸೆನ್ಸೇಷನ್ ಆಗಿ ಪ್ರಯಾಣವನ್ನು ಪ್ರಾರಂಭಿಸಿದಾಗ ಆ ಕ್ಷೇತ್ರದಲ್ಲಿ ಬದುಕಲು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅನ್ನೋದೂ ಅಷ್ಟೇ ಸತ್ಯ.
ಇಂದು ಸಾಮಾಜಿಕ ಮಾಧ್ಯಮದ ಇನ್‌ಫ್ಲ್ಯೂಯೆನ್ಸರ್ ಆಗಿರುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು ಎಂಬುದು ನಿಜ. ಇದರಿಂದ ಅವರು ಸೆಲೆಬ್ರಿಟಿಗಳಂತೆಯೇ ಜನರಿಗೆ ಪರಿಚಿತರಾಗುತ್ತಾರೆ. ಅಲ್ಲದೇ ಅವರ ಬ್ಯೂಟಿ, ಟ್ಯಾಲೆಂಟ್ ಹಾಗೂ ಕ್ರಿಯೇಟಿವಿಟಿಯನ್ನು ಜನರು ಇಷ್ಟ ಪಡುತ್ತಾರೆ ಅನ್ನೋದೇನೋ ನಿಜ.
ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಗೂಗಲ್ ಕಂಪೆನಿಯ ಹೊಸ ಸ್ಮಾರ್ಟ್ಫೋನ್!
ಆದರೆ ಈ ವೃತ್ತಿಯು ಇತರ ಉದ್ಯೋಗಗಳಂತೆ ಅನೇಕ ಸಮಸ್ಯೆಗಳನ್ನೂ ಹೊಂದಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರಿಗೂ ಸ್ಪರ್ಧೆ ನೀಡುವಂತೆ ತಮ್ಮ ಸ್ಥಾನವನ್ನು ಕಾಯ್ದಿಟ್ಟುಕೊಳ್ಳಬೇಕು ಎಂದರೆ ಅದು ಸುಲಭವಾಗಿ ಲಭಿಸೋದಿಲ್ಲ. ಅದಕ್ಕಾಗಿ ಕಷ್ಟ ಪಡಬೇಕು. ಹಾಗೆಯೇ ಕೆಲವಷ್ಟು ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ.
ಆಫೀಸ್ ಕೆಲಸವೇ ಬೆಸ್ಟ್ ಎಂದ ಇಂಟರ್‌ನೆಟ್ ಸೆನ್ಸೇಶನ್ ಲೀ ಟಿಲ್ಗ್‌ಮನ್!
ಇನ್‌ಸ್ಟಾಗ್ರಾಂ ಇನ್‌ಫ್ಲ್ಯೂಯೆನ್ಸರ್, ಇಂಟರ್‌ನೆಟ್ ಸೆನ್ಸೇಶನ್ ಲೀ ಟಿಲ್ಗ್‌ಮನ್, ಒಮ್ಮೆ ಇನ್‌ಸ್ಟಾದಲ್ಲಿ ಒಂದೇ ಬ್ರಾಂಡ್ ಪೋಸ್ಟ್‌ಗಾಗಿ ಸುಮಾರು $20,000 ಪಡೆದಿದ್ದರು. ಮಾಧ್ಯಮದ ವರದಿಯ ಪ್ರಕಾರ, ಟೆಕ್ ಪ್ಲಾಟ್‌ಫಾರ್ಮ್‌ನ ಸಾಮಾಜಿಕ ಮಾಧ್ಯಮ ನಿರ್ದೇಶಕರಾಗಿ ಪೂರ್ಣ ಸಮಯದ ಕೆಲಸವನ್ನು ಆರಿಸಿಕೊಂಡಿದ್ದಾರೆ.
ಅಲ್ಲದೇ "ಬ್ರಾಂಡ್" ಆಗುವುದಕ್ಕಿಂತ ಕಚೇರಿಯಲ್ಲಿ ಕೆಲಸ ಮಾಡುವುದು ಸುಲಭ ಎಂಬುದಾಗಿ ಅವರು ಹೇಳಿದ್ದರು. ಹಾಗಿದ್ದರೆ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್ ಯಾವೆಲ್ಲ ಸಮಸ್ಯೆಗಳನ್ನುಎದುರಿಸುತ್ತಾರೆ ಅನ್ನೋದನ್ನು ನೋಡೋಣ.
ಈ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್!
1. ಮಾನಸಿಕ ಆರೋಗ್ಯ: ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಕೆಲವೊಮ್ಮೆ ತಮ್ಮ ಪೋಸ್ಟ್‌ಗಳ ಮೇಲೆ ತೀವ್ರ ಹಿನ್ನಡೆಯನ್ನು ಎದುರಿಸಬಹುದು. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗುತ್ತದೆ. ಈ ಕ್ಷೇತ್ರದ ಜನರು ತಮ್ಮ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಭರದಲ್ಲಿ ಟ್ರೋಲಿಂಗ್ ಮತ್ತು ನಿರಂತರ ಆತಂಕವನ್ನು ಎದುರಿಸಬೇಕಾಗುತ್ತದೆ.
2. ಒತ್ತಡ: ತಮ್ಮ ಫಾಲೋವರ್ಸ್‌ಗಾಗಿ ಹೊಸ ಹೊಸ ವಿಷಯವನ್ನು ಪೋಸ್ಟ್ ಮಾಡಲು ಯೋಚಿಸುತ್ತಿರುತ್ತಾರೆ. ಇದು ಹೆಚ್ಚಿನ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಅತ್ಯಂತ ವೇಗದ ಜಗತ್ತಿನಲ್ಲಿ ಕೆಲಸ ಮಾಡುತ್ತಾರೆ. ಇದು ಅವರ ಮನಸ್ಸಿನ ಮೇಲೆ ದೊಡ್ಡ ಹೊರೆ ಬೀಳುತ್ತದೆ. ಇದು ಆತಂಕ ಮತ್ತು ಖಿನ್ನತೆಗೆ ಕಾರಣವಾಗುಬಹುದು.
3. ಬ್ರ್ಯಾಂಡ್ ಡೀಲ್‌ಗಳ ಮೇಲೆ ಅವಲಂಬನೆ: ಹೆಚ್ಚಿನ ಪ್ರಭಾವಿಗಳು ಆದಾಯಕ್ಕಾಗಿ ಬ್ರ್ಯಾಂಡ್ ಡೀಲ್‌ಗಳ ಮೇಲೆ ಅವಲಂಬಿತರಾಗಿರುತ್ತಾರೆ. ಇದು ಆದಾಯಕ್ಕಾಗಿ ಒಂದು ಕಂಪನಿಯ ಮೇಲೆ ಅತಿಯಾದ ಅವಲಂಬನೆಗೆ ಕಾರಣವಾಗಬಹುದು. ಉದಾಹರಣೆಗೆ, ಟಿಕ್‌ಟಾಕ್‌ನಲ್ಲಿ ತಿಂಗಳಿಗೆ $10,000 ರಿಂದ $12,000 ಗಳಿಸುತ್ತಿದ್ದ ಇನ್‌ಫ್ಲ್ಯೂಯೆನ್ಸರ್ ಕಾರಾ ಸ್ಮಿತ್, ಬ್ರ್ಯಾಂಡ್ ಡೀಲ್‌ಗಳ ಮೇಲೆ ಕಡಿಮೆ ಅವಲಂಬಿತರಾಗಲು ಕಳೆದ ವರ್ಷ ಪೂರ್ಣ ಸಮಯದ ಕೆಲಸವನ್ನು ತೆಗೆದುಕೊಳ್ಳಲು ನಿರ್ಧರಿಸಿದರು.
4. ಯಾವಾಗಲೂ ಜಾಗರೂಕರಾಗಿರಬೇಕು: ಸಾಮಾನ್ಯವಾಗಿ ಬೇರೆ ವೃತ್ತಿಯಲ್ಲಿ ರಜೆಗಳಿರುತ್ತವೆ. ವಿಶ್ರಾಂತಿಗೆ, ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶಗಳಿರುತ್ತವೆ. ಆದರೆ ಸಾಮಾಜಿಕ ಮಾದ್ಯಮದ ಪ್ರಭಾವಿಗಳು ಎದುರಿಸುವ ದೊಡ್ಡ ಸಮಸ್ಯೆಯೆಂದರೆ ಅವರು ಯಾವಾಗಲೂ ಜಾಗರೂಕರಾಗಿರಬೇಕು ಎನ್ನುವುದು. ಇದು ಅತಿಯಾದ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ