Traffic E Challan: ಆನ್‌ಲೈನ್‌ ಮೂಲಕ ಟ್ರಾಫಿಕ್ ಇ-ಚಲನ್ ಕಟ್ಟೋದು ಹೇಗೆ? ಇಲ್ಲಿದೆ ಸರಳ ವಿಧಾನ

E Challan: ಸರ್ಕಾರವು ಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಇ-ಚಲನ್ ನೀಡುವಿಕೆಯನ್ನು ಡಿಜಿಟಲೀಕರಣಗೊಳಿಸಿದೆ ಎಂದು ವರದಿಯಾಗಿದೆ. ಈ ಮೊದಲು ಚಲನ್ ಶುಲ್ಕ ಪಾವತಿಸಲು ಉದ್ದವಾದ ಸರತಿ ಸಾಲಿನಲ್ಲಿ ನಿಂತು ಪರದಾಡಬೇಕಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇತ್ತೀಚಿನ ಕೆಲ ವರ್ಷಗಳನ್ನು ಗಮನಿಸಿದರೆ ಭಾರತದಲ್ಲಿ (India) ಅದರಲ್ಲೂ ವಿಶೇಷವಾಗಿ ಹಲವು ರಾಜ್ಯಗಳಲ್ಲಿ ಇ-ಆಡಳಿತವು ಸಾಕಷ್ಟು ಪ್ರಬುದ್ಧತೆಗೆ ಬರುತ್ತಿರುವುದನ್ನು ಕಾಣಬಹುದು. ತಂತ್ರಜ್ಞಾನಕ್ಕೆ (Technology) ಅನುರೂಪವಾಗಿ ಆಡಳಿತ ಪ್ರಕ್ರಿಯೆಯಲ್ಲೂ ಸಹ ಡಿಜಿಟಲೀಕರಣ (Digitization) ಬಂದರೆ ಅದು ಸಾಕಷ್ಟು ಪಾರದರ್ಶಕತೆಯನ್ನು ತಂದು ಕೊಡುವುದಲ್ಲದೆ ವಿಳಂಬ ನೀತಿಗೂ ತಡೆ ಒಡ್ಡುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ, ಕ್ರಮೇಣವಾಗಿ ಇ-ಆಡಳಿತ ಎಂಬುದು ನಿಧಾನವಾಗಿ ಏರುಗತಿಯಲ್ಲಿ ಸಾಗುತ್ತಿದೆ ಎಂದೇ ಹೇಳಬಹುದು.

  ಈಗ ಇದರ ಮುಂದುವರಿದ ಭಾಗವೆಂಬಂತೆ ಸರ್ಕಾರವು ಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಇ-ಚಲನ್ ನೀಡುವಿಕೆಯನ್ನು ಡಿಜಿಟಲೀಕರಣಗೊಳಿಸಿದೆ ಎಂದು ವರದಿಯಾಗಿದೆ. ಈ ಮೊದಲು ಚಲನ್ ಶುಲ್ಕ ಪಾವತಿಸಲು ಉದ್ದವಾದ ಸರತಿ ಸಾಲಿನಲ್ಲಿ ನಿಂತು ಪರದಾಡಬೇಕಿತ್ತು. ಇದರಿಂದ ಸಮಯ ವ್ಯರ್ಥವಾಗುತ್ತಿದ್ದಲ್ಲದೆ ಕಾಗದದ ವ್ಯಯವೂ ಆಗಿ ಪರಿಸರಕ್ಕೆ ಒಂದು ಬಗೆಯಲ್ಲಿ ನಕಾರಾತ್ಮಕ ಅಂಶವಾಗಿ ಪರಿಗಣಿಸಲ್ಪಡುತ್ತಿತ್ತು. ಆದರೆ, ಈಗ ಜನರು ಆ ಕಷ್ಟದಿಂದ ಮುಕ್ತರಾದಂತಾಗಿದೆ.

  ಈ ಮೂಲಕ ಜನರು ಈಗ ತಮ್ಮ ಮನೆಯಿಂದಲೇ ನಿರಾಯಾಸವಾಗಿ ಆನ್‌ಲೈನ್‌ ಮೂಲಕ ಚಲನ್ ಕಟ್ಟಬಹುದಾಗಿದೆ. ಮೊದಲಿನಂತೆ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲವೇ ಇಲ್ಲ. ಇದಕ್ಕಾಗಿ ಜನರು ರಸ್ತೆ ಸಾರಿಗೆ ಮಂತ್ರಾಲಯದ echallan.parivahan.gov.in ವೆಬ್ ಲಿಂಕನ್ನು ಬಳಸಿ ಆನ್‌ಲೈನ್‌ನಲ್ಲೇ ಚಲನ್ ಅನ್ನು ಪಾವತಿಸಬಹುದಾಗಿದೆ. ಕೇವಲ ಇ-ಚಲನ್ ಕಟ್ಟುವುದು ಮಾತ್ರವಲ್ಲ ಈ ವೆಬ್‌ಸೈಟ್‌ ಮೂಲಕ ನೀವು ಕಟ್ಟಿರುವ ಚಲನ್ನಿನ ಸ್ಥಿತಿಗತಿಯನ್ನೂ ಸಹ ಇದರಲ್ಲಿ ಟ್ರ್ಯಾಕ್ ಮಾಡಬಹುದು. ನಿಮಗೇನಾದರೂ ಅದರಲ್ಲಿ ಪ್ರಮಾದ ಕಂಡುಬಂದಲ್ಲಿ ಆ ಕುರಿತು ನೀವು ದೂರನ್ನೂ ಸಹ ದಾಖಲಿಸಬಹುದಾಗಿದೆ. ಹಾಗಾದರೆ ಇ-ಚಲನ್ ಕಟ್ಟುವ ಪ್ರಕ್ರಿಯೆ ಮತ್ತು ಸ್ಟೇಟಸ್ ನೋಡುವ ಬಗೆ ಹೇಗೆ ಎಂದು ತಿಳಿದುಕೊಳ್ಳೋಣವೇ..?

  ಇದನ್ನೂ ಓದಿ: Video: ಕಿಕ್ಕರ್ ಇಲ್ಲ, ಸೆಲ್ಫ್ ಸ್ಟಾರ್ಟ್ ಆಗುತ್ತಿಲ್ಲ! ಆದ್ರೆ ಸುಲಭವಾಗಿ ಬೈಕ್ ಸ್ಟಾರ್ಟ್​ ಮಾಡಲು ಐಡಿಯಾ ಇಲ್ಲಿದೆ

  ವಿಧಾನ

  1ನೇ ಹಂತ : ಮೊದಲಿಗೆ ನಿಗದಿತ ಯುಆರ್‌‌‌‌‍ಎಲ್ ನಮೂದಿಸಿ ವೆಬ್‌ಸೈಟಿಗೆ ಪ್ರವೇಶಿಸಿ : https://echallan.parivahan.gov.in/index/accused-challan

  2ನೇ ಹಂತ : ತದನಂತರ ಅಲ್ಲಿ ಕಾಣಸಿಗುವ ಚಲನ್ ವಿವರಗಳು ಎಂಬ ಸೆಕ್ಷನ್‍ಗೆ ಹೋಗಿ ಅಲ್ಲಿ ನಿಮ್ಮ ಚಲನ್ ಸಂಖ್ಯೆಯನ್ನು ನಮೂದಿಸಿ.

  3ನೇ ಹಂತ : ಒಂದು ವೇಳೆ ನಿಮ್ಮ ಬಳಿ ಚಲನ್ ಸಂಖ್ಯೆ ಇಲ್ಲದಿದ್ದಲ್ಲಿ, ನಿಮ್ಮ ವಾಹನದ ಸಂಖ್ಯೆ ಹಾಗೂ ಪರವಾನಗಿ ಸಂಖ್ಯೆ ಮೂಲಕವೂ ನಿಮ್ಮ ಚಲನ್ ಅನ್ನು ಹುಡುಕಬಹುದು.

  4ನೇ ಹಂತ : ತದನಂತರ ಕಾಣಸಿಗುವ "ಗೆಟ್ ಡೀಟೇಲ್ಸ್" ಮೇಲೆ ಕ್ಲಿಕ್ ಮಾಡಿ ಹಾಗೂ ಹಣ ಪಾವತಿಸಲು ಮುಂದುವರೆಯಿರಿ. ಹಣ ಪಾವತಿಸಲು ನೀವು ನೆಟ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್, ಗೂಗಲ್ ಪೇ, ಯುಪಿಐ, ಪೇಟಿಎಂ ಮುಂತಾದ ಆಯ್ಕೆಗಳನ್ನು ಬಳಸಬಹುದು.

  5ನೇ ಹಂತ: ಹಣ ಸಂದಾಯವಾಗುತ್ತಿದ್ದಂತೆಯೇ ನಿಮಗೆ ದೃಢೀಕರಣ ಸಂದೇಶ ಸಿಗುತ್ತದೆ ಹಾಗೂ ನಿಮ್ಮ ಟಿಕೆಟ್ ಕ್ಲೋಸ್ ಆಗುತ್ತದೆ.

  ಇದನ್ನೂ ಓದಿ: Jio Plans: ಬರೀ 75 ರೂಪಾಯಿಯ ಪ್ಲಾನ್​​ನಲ್ಲಿದೆ ಇಷ್ಟೆಲ್ಲಾ ಪ್ರಯೋಜನ!

  ಸ್ಟೇಟಸ್ ಚೆಕ್ ಮಾಡುವ ಬಗೆ

  1ನೇ ಹಂತ : ಮೊದಲಿಗೆ ನಿಗದಿತ ಯುಆರ್‌‌‌‌‍ಎಲ್ ನಮೂದಿಸಿ ವೆಬ್‌ಸೈಟಿಗೆ ಪ್ರವೇಶಿಸಿ : https://echallan.parivahan.gov.in

  2ನೇ ಹಂತ : ತದನಂತರ ಅಲ್ಲಿ ಕಾಣಸಿಗುವ 'ಆನ್‌ಲೈನ್‌ ಸರ್ವೀಸಸ್‌' ಮೇಲೆ ಕ್ಲಿಕ್ ಮಾಡಿ ಅದರಲ್ಲಿ 'ಇ-ಚಲನ್ ಸ್ಟೇಟಸ್' ಅನ್ನು ಆಯ್ಕೆ ಮಾಡಿ.

  3ನೇ ಹಂತ : ನಿಮ್ಮ ಇ-ಚಲನ್ ಸಂಖ್ಯೆ ನಮೂದಿಸಿ ಹಾಗೂ ಸರಿಯಾದ ಕ್ಯಾಪ್ಚಾ ಎಂಟರ್ ಮಾಡಿ 'ಗೆಟ್ ಡೀಟೇಲ್ಸ್' ಮೇಲೆ ಕ್ಲಿಕ್ ಮಾಡಿ.

  4ನೇ ಹಂತ : ಇ-ಚಲನ್ ಕುರಿತಾದ ಎಲ್ಲ ಮಾಹಿತಿಯು ವೆಬ್ ಪುಟದ ಕೆಳ ಭಾಗದಲ್ಲಿ ನಿಮಗೆ ಗೋಚರಿಸುತ್ತದೆ.
  Published by:Harshith AS
  First published: