ಶಹನಾಯಿ ವಾದಕ ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ 102ನೇ ಹುಟ್ಟುಹಬ್ಬಕ್ಕೆ ಡೂಡಲ್ ಗೌರವ

news18
Updated:March 21, 2018, 5:04 PM IST
ಶಹನಾಯಿ ವಾದಕ ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ 102ನೇ ಹುಟ್ಟುಹಬ್ಬಕ್ಕೆ ಡೂಡಲ್ ಗೌರವ
news18
Updated: March 21, 2018, 5:04 PM IST
ನ್ಯೂಸ್ 18 ಕನ್ನಡ 

ಸುಪ್ರಸಿದ್ದ ಶಹನಾಯಿ ವಾದಕ ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ಅವರ 102ನೇ ಹುಟ್ಟುಹಬ್ಬದ ಪ್ರಯುಕ್ತ ಗೂಗಲ್ ತನ್ನ ಡೂಡಲ್‌ ಮೂಲಕ ವಿಶೇಷ ಗೌರವ ನೀಡಿದೆ. ಶಹನಾಯಿ ವಾದನಕ್ಕೆ ಶಾಸ್ತ್ರೀಯ ಟಚ್ ನೀಡಿ ಭಾರತವಷ್ಟೇ ಅಲ್ಲದೆ ವಿಶ್ವಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ಶಹನಾಯಿ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನ್‌ ಅವರಿಗೆ ಸಲ್ಲುತ್ತದೆ.

ಬಿಹಾರದ ದಮ್ರಾವ್​ನ ಸಾಂಪ್ರದಾಯಿಕ ಮುಸ್ಲಿಂ ಕುಟುಂಬದಲ್ಲಿ ಖಮರುದ್ದೀನ್ ಖಾನ್ ಆಗಿ ಜನಿಸಿದ ಇವರಿಗೆ ಬಿಸ್ಮಿಲ್ಲಾ ಅನ್ನೋದು ಅವರ ಅಜ್ಜ ಇಟ್ಟ ಹೆಸರು. ಅದೇ ಹೆಸರಿನಿಂದ ಅವರು ಮುಂದೆ ಪ್ರಸಿದ್ದಿಯಾದರು.

ತಮ್ಮ 14ನೇ ವಯಸ್ಸಿನಲ್ಲೇ ಕಾರ್ಯಕ್ರಮಗಳನ್ನು ಕೊಡಲು ಶುರುಮಾಡಿದ ಬಿಸ್ಮಿಲ್ಲಾ ಖಾನ್‌, ಕೊಲ್ಕತ್ತಾದಲ್ಲಿ ನಡೆದ ಸಂಗೀತ ಸಮ್ಮೇಳನದಲ್ಲಿ ಶಹನಾಯಿ ನುಡಿಸುವ ಮೂಲಕ ಮೊದಲ ಬಾರಿಗೆ ಪ್ರಸಿದ್ಧಿಗೆ ಬಂದಿದ್ದರು. ಮುಂದೆ ಈಡನ್​ಬರ್ಗ್​ನಲ್ಲಿ ಸಂಗೀತ ಕಾರ್ಯಕ್ರಮ ನೀಡುವ ಮೂಲಕ ಶಹನಾಯಿ ವಾದನವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದರು.

1947ರ ಭಾರತದ ಸ್ವಾತಂತ್ರ್ಯದ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಹಾಗೂ ಮೊದಲ ಗಣರಾಜ್ಯೋತ್ಸವ ಸಂದರ್ಭದಲ್ಲಿ ಇವರು ನುಡಿಸಿದ ಶಹನಾಯಿ ನಾದಕ್ಕೆ ಜನರಿಂದ ಮೆಚ್ಚುಗೆಯ ಮಹಾಪೂರವೇ ಹರಿಯಿತು. ಇಂಥಾ ಅಪರೂಪದ ಸಂಗೀತವಾದಕನ ಕುರಿತಂತೆ ಚೆನ್ನೈಯ ಮೂಲದ ವಿಜಯ್ ಕೃಷ್‌ ಅವರು ರಚಿಸಿದ ಕಲಾಕೃತಿಯ ಮೂಲಕ ಗೂಗಲ್‌, ತನ್ನ ಡೂಡಲ್‌ನಲ್ಲಿ ಗೌರವ ಅರ್ಪಿಸಿದೆ.

1977ರಲ್ಲಿ ಬಿಡುಗಡೆಯಾದ ಕನ್ನಡದ ಸನಾದಿ ಅಪ್ಪಣ್ಣ ಚಲನಚಿತ್ರದಲ್ಲಿ ಡಾ.ರಾಜ್‍ಕುಮಾರ್ ಅವರು ಶಹನಾಯಿ ವಾದಕರಾಗಿ ಅಭಿನಯಿಸಿದ ದೃಶ್ಯಗಳಿಗೆ ಅವಶ್ಯಕವಾಗಿದ್ದ ಶಹನಾಯಿ ವಾದನವನ್ನು ಬಿಸ್ಮಿಲ್ಲಾ ಖಾನ್ ಅವರು ನುಡಿಸಿದ್ದಾರೆ.

ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಎಸ್.ಜಾನಕಿಯವರು ಹಾಡಿರುವ ಕರೆದರೂ ಕೇಳದೆ ಎಂಬ ಹಾಡಿನಲ್ಲಿ ಬರುವ ಶಹನಾಯಿ ವಾದನವನ್ನು ಬಿಸ್ಮಿಲ್ಲಾ ಖಾನರು ನುಡಿಸಿದ್ದಾರೆ. ಉಸ್ತಾದ್ ಅವರಿಗೆ ಭಾರತರತ್ನ, ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗಳು ಸಂದಿವೆ. ಇವರು ಆಗಸ್ಟ್ 21, 2006ರಂದು ನಿಧನರಾದರು.

 
First published:March 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ