ಪೇಟಿಎಂ, ಫೋನ್‌ ಪೇ, ಗೂಗಲ್ ಪೇ ಬಳಕೆದಾರರೇ ಎಚ್ಚರ: ಮೊಬೈಲ್​ ಮೂಲಕ ಹಣ ಪಾವತಿಸುವ​ ಮುನ್ನ ಇದನ್ನೊಮ್ಮೆ ಓದಿಕೊಳ್ಳಿ

ಆನ್​ಲೈನ್ ವ್ಯವಹಾರ ನಡೆಸುವಾಗ ಪಬ್ಲಿಕ್ ವೈಫೈ ಬಳಸಬೇಡಿ. ಏಕೆಂದರೆ ಸಾರ್ವಜನಿಕ ಸ್ಥಳಗಳಲ್ಲಿರುವ ವೈಫೈ ಕನೆಕ್ಷನ್​ನನ್ನು ಹ್ಯಾಕರುಗಳು ತುಂಬಾ ಸುಲಭವಾಗಿ ಹ್ಯಾಕ್​ ಮಾಡುತ್ತಾರೆ.

zahir | news18
Updated:January 9, 2019, 6:36 PM IST
ಪೇಟಿಎಂ, ಫೋನ್‌ ಪೇ, ಗೂಗಲ್ ಪೇ ಬಳಕೆದಾರರೇ ಎಚ್ಚರ: ಮೊಬೈಲ್​ ಮೂಲಕ ಹಣ ಪಾವತಿಸುವ​ ಮುನ್ನ ಇದನ್ನೊಮ್ಮೆ ಓದಿಕೊಳ್ಳಿ
ಸಾಂದರ್ಭಿಕ ಚಿತ್ರ
zahir | news18
Updated: January 9, 2019, 6:36 PM IST
ಭಾರತ ನೋಟು ಅಮಾನ್ಯೀಕರಣ ಬಳಿಕ ಡಿಜಿಟಲೀಕರಣದತ್ತ ಮುಖ ಮಾಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯರು ಮೆಲ್ಲನೆ ಕ್ಯಾಶ್​ಲೆಸ್ ವ್ಯವಹಾರಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಆದರೆ ಡಿಜಿಟಲ್​ ವ್ಯವಹಾರದಿಂದ ಗ್ರಾಹಕರಿಗೆ ಎಷ್ಟು ಅನುಕೂಲ ಇದೆಯೋ, ಅಷ್ಟೇ ಅನಾನುಕೂಲವಿದೆ ಎಂಬ ವರದಿಯನ್ನು ಆರ್​ಬಿಐ ನೀಡಿದೆ.

ಆರ್​ಬಿಐ ಬಿಡುಗಡೆ ಮಾಡಿರುವ ವರದಿ ಪ್ರಕಾರ 2016-17 ರ ಅವಧಿಯಲ್ಲಿ ದೇಶದಲ್ಲಿ ಶೇ.55ರಷ್ಟು ಜನವರು ಆನ್​ಲೈನ್​ ಮೂಲಕ ವ್ಯವಹಾರ ನಡೆಸಿದ್ದಾರೆ. ಕಳೆದ ಐದು ವರ್ಷಗಳ ಆನ್​ಲೈನ್​ ವ್ಯವಹಾರದ ಅಂಕಿ ಅಂಶಗಳಿಗೆ ಹೋಲಿಸಿದರೆ ಇದರಲ್ಲಿ ಶೇ.28 ರಷ್ಟು ಅಧಿಕವಾಗಿದೆ. 2016 ರ ಅಕ್ಟೋಬರ್​​ನಲ್ಲಿ 140 ಮಿಲಿಯನ್ ಬಾರಿ ಆನ್​ಲೈನ್​ ವ್ಯವಹಾರ ನಡೆದಿದ್ದರೆ, ಇದರ ಪ್ರಮಾಣ 2017 ರ ಏಪ್ರಿಲ್​ನಲ್ಲಿ 268 ಮಿಲಿಯನ್​ನಷ್ಟು ಏರಿಕೆಯಾಗಿದೆ. ಈ ವಹಿವಾಟಿನಲ್ಲಿ ಆನ್​ಲೈನ್​ ಮೂಲಕ 151.21 ಬಿಲಿಯನ್​ ಡಾಲರ್​ ಹಣ ವಿನಿಮಯವಾಗಿರುವುದು, ಭಾರತದಲ್ಲಿ ಡಿಜಿಟಲ್​ ವ್ಯವಹಾರದಲ್ಲಿ ಕಾಣುತ್ತಿರುವ ಪ್ರಗತಿಗೆ ಸಾಕ್ಷಿಯಾಗಿದೆ.

ಅಗ್ಗದ ಡೇಟಾ ಮತ್ತು ಡಿಜಿಟಲ್ ಇಂಡಿಯಾ:

ಭಾರತದಲ್ಲಿ ಏಕಾಏಕಿ ಡಿಜಿಟಲ್​ ವ್ಯವಹಾರಗಳು ಅಭಿವೃದ್ಧಿಯಾಗಲು ಮೊಬೈಲ್​ ಡೇಟಾಗಳೇ ಮುಖ್ಯ ಕಾರಣ. ಸ್ಮಾರ್ಟ್​ಫೋನ್​ ಆ್ಯಪ್​ಗಳು ಮತ್ತು ಕಡಿಮೆ ದರದ ಡೇಟಾ ಲಭ್ಯವಿರುವುದರಿಂದ ಜನರು  ಮೊಬೈಲ್​ ಮೂಲಕ ಕ್ಯಾಶ್​ಲೆಸ್​ ವ್ಯವಹಾರ ನಡೆಸುತ್ತಿದ್ದಾರೆ. ಒಂದೆಡೆ ಇದರಿಂದ ಲಾಭ ಎನಿಸಿದರೂ, ಬಳಕೆದಾರನ ಅಜಾಗರೂಕತೆಯಿಂದ ಆನ್​ಲೈನ್​ ವಂಚಕರಿಗೆ ಹೊಸ ವೇದಿಕೆ ಸೃಷ್ಟಿಸಿಕೊಟ್ಟಿದೆ.

ಕಳೆದ ವರ್ಷ ಆರ್​ಬಿಐ ಹೊರ ತಂದಿರುವ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ನಡೆಯುವ 10 ಆನ್​ಲೈನ್​ ವ್ಯವಹಾರಗಳಲ್ಲಿ ಒಬ್ಬರು ವಂಚನೆಗೆ ಒಳಗಾಗುತ್ತಿದ್ದಾರೆ. 2015-16 ರಲ್ಲಿ ದೇಶದಲ್ಲಿ 16,468 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದೆ.  2016-17 ರಲ್ಲಿ 13,653 ಪ್ರಕರಣಗಳ ದೂರುಗಳನ್ನು ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಿಸರ್ವ್​ ಬ್ಯಾಂಕ್ ಆಫ್ ಇಂಡಿಯಾ ಅನೇಕ ಕಾನೂನುಗಳನ್ನು ಜಾರಿಗೆ ತಂದರೂ ವಂಚನೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂಬುದೇ ಸತ್ಯ.

ಹೀಗಾಗಿಯೇ ಆನ್​ಲೈನ್​ ವಂಚನೆಯನ್ನು ತಡೆಯಲು ಕಠಿಣ ನಿಲುವನ್ನು ಆರ್​ಬಿಐ ತಳೆದಿದೆ. ಈ ನಿಟ್ಟಿನಲ್ಲಿ ಹೊಸ ಕ್ರಮಕ್ಕಾಗಿ ಆರ್​ಬಿಐ ಡಿಜಿಟಲ್​ ಪಾವತಿ ಸಮಿತಿ ಮುಖ್ಯಸ್ಥರಾಗಿ ಇನ್ಫೋಸಿಸ್​ ಸಹ ಸಂಸ್ಥಾಪಕ ನಂದನ್ ನೀಲೇಕಣಿ ಅವರನ್ನು ಆಯ್ಕೆ ಮಾಡಿದ್ದಾರೆ. ಹಾಗೆಯೇ ಇನ್ನು ಮುಂದೆ ಆನ್​ಲೈನ್ ವ್ಯವಹಾರಗಳಲ್ಲಿ ತೊಡಗಿರುವ ಖಾಸಗಿ ಕಂಪೆನಿಗಳ ಮೇಲೆ ನಿಯಂತ್ರಣ ಹೊಂದಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
Loading...

ಮೊಬೈಲ್ ವ್ಯಾಲೆಟ್:

ದೇಶದಲ್ಲಿ ನಡೆಯುತ್ತಿರುವ ಆನ್​ಲೈನ್​ ವ್ಯವಹಾರದಲ್ಲಿ ಮೊಬೈಲ್​ ವ್ಯಾಲೆಟ್​ಗಳದ್ದೇ ಪಾರುಪತ್ಯ. ಪೇಟಿಎಂ, ಫೋನ್‌ ಪೆ, ಅಮೇಜಾನ್ ಪೆ, ಗೂಗಲ್ ಪೇ ಸೇರಿದಂತೆ ಹಲವಾರು ಮೊಬೈಲ್ ವ್ಯಾಲೆಟ್‌ಗಳು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಆ್ಯಪ್​ಗಳಲ್ಲಿ ಹೆಚ್ಚಿನವು ವಿದೇಶಿ ಮೂಲದ ಈ ಖಾಸಗಿ ಕಂಪೆನಿಗಳು ಎಂಬುದು ವಿಶೇಷ. ಈ ಕಾರಣದಿಂದಲೇ ಯಾವ ಕಂಪೆನಿಗಳು ಸಹ ಗ್ರಾಹಕರನ್ನು ಭೇಟಿಯಾಗಿ ಕೆವೈಸಿ (ಗ್ರಾಹಕರ ಗುರುತು ದಾಖಲೆ) ಪಡೆಯುತ್ತಿಲ್ಲ. ಬದಲಾಗಿ ಗ್ರಾಹಕರು ಬ್ಯಾಂಕ್‌ಗಳಿಗೆ ನೀಡಿರುವ ಆಧಾರ್ ನಂಬರ್ ಸೇರಿದಂತೆ ಇತರೆ ಮಾಹಿತಿಗಳನ್ನು ಬಳಸಿಕೊಂಡು ಡಿಜಿಟಲ್ ಮನಿ ಸೇವೆಯನ್ನು ನೀಡುತ್ತಿವೆ.

ಗ್ರಾಹಕರು  ಗೂಗಲ್ ಪ್ಲೇಸ್ಟೋರ್​ನಿಂದ ಮೊಬೈಲ್​ ವ್ಯಾಲೆಟ್​ ಆ್ಯಪ್​ನ್ನು ಡೌನ್​ಲೋಡ್ ಮಾಡಿಕೊಂಡು ನಿಮ್ಮ ನಂಬರ್​ ನಮೂದಿಸಿದರೆ ಸಾಕು, ವ್ಯಾಲೆಟ್ ಕಾರ್ಯ ನಿರ್ವಹಿಸುತ್ತದೆ. ಉಳಿದೆಲ್ಲ ಮಾಹಿತಿಗಳಾದ ಆಧಾರ್​ ನಂಬರ್​ನಿಂದ ಬ್ಯಾಂಕ್ ಖಾತೆವರೆಗಿನ  ಮಾಹಿತಿಗಳು ಮೊಬೈಲ್​ ವ್ಯಾಲೆಟ್​ ಸಂಸ್ಥೆಗೆ ಮೊಬೈಲ್​ ನಂಬರ್​​ ಮೂಲಕ ಲಭ್ಯವಾಗುತ್ತದೆ. ಆದರೆ ಇದೊಂದು ಸಂಪೂರ್ಣ ಕಾನೂನಿಗೆ ವಿರುದ್ಧವಾದ ನಡೆಯಾಗಿದೆ. ಸುಪ್ರೀಂ ಕೋರ್ಟ್​ ಆದೇಶದ ಅನ್ವಯ, 2018 ಅಕ್ಟೋಬರ್ ಆಧಾರ್ ಕಾಯ್ದೆ ಸೆಕ್ಷನ್ 57 ರ ಪ್ರಕಾರ ಈ ರೀತಿಯಾಗಿ ಬಳಕೆದಾರರ ಬ್ಯಾಂಕ್​ ಖಾತೆಯ ಮಾಹಿತಿಗಳು ಯಾವುದೇ ಸಂಸ್ಥೆ ಪಡೆಯುವಂತಿಲ್ಲ.

2018 ಅಕ್ಟೋಬರ್‌ನಲ್ಲಿ ಆಧಾರ್ ಸಂಖ್ಯೆ ಕಡ್ಡಾಯದ ಕುರಿತು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಲ್ಲಿ ಮೊಬೈಲ್ ಸಂಖ್ಯೆ ಪಡೆಯಲು ಅಧಾರ್‌ ನೀಡಬೇಕಿಲ್ಲ ಎಂದು ತಿಳಿಸಿತ್ತು. ಇದರಿಂದ ಗ್ರಾಹಕನ ಮೊಬೈಲ್‌ ನಂಬರ್ ಮೂಲಕ ಬಳಕೆದಾರನ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದ ಮೊಬೈಲ್ ವ್ಯಾಲೆಟ್ ಕಂಪೆನಿಗಳಿಗೆ ಸುಪ್ರೀಂನ ಈ ತೀರ್ಪು ಎಚ್ಚರಿಕೆಯಾಗಿತ್ತು. ಈ ಬಗ್ಗೆ ಇಷ್ಟು ದಿನ ತನ್ನ ನಿಲುವನ್ನು ಸ್ಪಷ್ಟಪಡಿಸದ ಆರ್​ಬಿಐ ಈಗ ಸುಪ್ರೀಂನ ತೀರ್ಪನ್ನು ಪಾಲಿಸುವ ನಿಟ್ಟಿನಲ್ಲಿ ಮಹತ್ವ ಹೆಜ್ಜೆ ಇಡಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ ಮಾರ್ಚ್ ಅಂತ್ಯದ ವೇಳೆ ಮೊಬೈಲ್ ವ್ಯಾಲೆಟ್‌ ಕಂಪೆನಿಗಳು ನೇರವಾಗಿ ಗ್ರಾಹಕರ ಹೆಬ್ಬೆರಳಿನ ಗುರುತು (ಬಯೋ ಮೆಟ್ರಿಕ್) ಪಡೆದು ಆ ಬಳಿಕ ಸೇವೆ ಒದಗಿಸಬೇಕಾಗುತ್ತದೆ. ಇಲ್ಲದಿದ್ದರೆ ಅಂತಹ ಕಂಪೆನಿಯ ಮಾನ್ಯತೆಯನ್ನು ರದ್ದು ಮಾಡಲಾಗುವುದು ಎಂದು ಎಚ್ಚರಿಸಿದೆ. ಆರ್‌ಬಿಐ ತೆಗೆದುಕೊಂಡಿರುವ ಈ ತೀರ್ಮಾನದಿಂದ ಆನ್‌ಲೈನ್ ವಂಚನೆಗಳಿಗೆ ಕಡಿವಾಣ ಬೀಳುವ ಸಾಧ್ಯತೆಯಿದೆ ಎನ್ನಲಾಗಿದೆ. ಇದೇ ವೇಳೆ, ಕಡಿಮೆ ಕಾಲಮಿತಿಯಲ್ಲಿ ಕಂಪನಿಗಳು ಗ್ರಾಹಕರಿಂದ ನೇರವಾಗಿ ಕೆವೈಸಿ ಮಾಹಿತಿ ಪಡೆದುಕೊಳ್ಳುವುದು ಕಷ್ಟ ಎನ್ನಲಾಗುತ್ತಿದೆ. ಇದರಿಂದ ಒಂದಷ್ಟು ಮೊಬೈಲ್​ ವ್ಯಾಲೆಟ್​ ಕಂಪೆನಿಗಳು ದೇಶದಲ್ಲಿ ಸೇವೆಯನ್ನು ನಿಲ್ಲಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಡಿಜಿಟಲ್ ಪಾವತಿ ಸಮಿತಿ: 

ಆನ್​ಲೈನ್​ ವಂಚನೆಗಳಿಗೆ ಕಡಿವಾಣ ಹಾಕಲು ಆರ್​ಬಿಐ ಡಿಜಿಟಲ್ ಪಾವತಿ ಸಮಿತಿಯನ್ನು ರೂಪಿಸಿದೆ. ಇನ್ಫೋಸಿಸ್​ನ ಸಹ ಸಂಸ್ಥಾಪಕರು ಹಾಗೂ ಭಾರತ ವಿಶಿಷ್ಠ ಗುರುತು ಪ್ರಾಧಿಕಾರದ(ಯುಐಡಿಎಐ) ಮಾಜಿ ಅಧ್ಯಕ್ಷ ನಂದನ್ ನೀಲೆಕಣಿ ಮುಖ್ಯಸ್ಥರಾಗಿರುವ ಈ ಸಮತಿಯಲ್ಲಿ ಐದು ಮಂದಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಸಮತಿಯು ಮಂದಿನ 90 ದಿನಗಳ ಒಳಗಾಗಿ ಆನ್​ಲೈನ್ ವಂಚನೆಯನ್ನು ತಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತಾದ ವರದಿಯನ್ನು ಆರ್​ಬಿಐಗೆ ಸಲ್ಲಿಸಬೇಕಿದೆ.

ಸಮಿತಿಯ ಜವಾಬ್ದಾರಿಗಳು:

*ದೇಶದಲ್ಲಿರುವ ಡಿಜಿಟಲ್ ಪಾವತಿಗಳ ಪರಿಶೀಲನೆ ಮತ್ತು ವರದಿ ಸಿದ್ದಪಡಿಸುವುದು
*ಸರಕಾರಿ ಹಾಗೂ ಖಾಸಗಿ ಬ್ಯಾಂಕಿಂಗ್ ಸೇವೆಗಳ ನಡುವಿನ ಅಂತರವನ್ನು ಸರಿದೂಗಿಸಲು ಸೂಕ್ತ ಮಾರ್ಗೋಪಾಯ ತಿಳಿಸುವುದು
*ದೇಶದ ಹಣಕಾಸು ವ್ಯವಸ್ಥೆಯಲ್ಲಿ ಡಿಜಿಟಲ್ ಪಾವತಿಗಳ ಪ್ರಮಾಣದ ಮಾಹಿತಿ ಒದಗಿಸುವುದು
* ಡಿಜಿಟಲ್ ಪಾವತಿಗಳ ಪರಿಣಾಮಕಾರಿ ಬಳಕೆಯಿಂದ ದೇಶದ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ವಿಶ್ಲೇಷಣೆ ನೀಡುವುದು
* ಡಿಜಿಟಲ್ ಪಾವತಿಗಳ ಸುರಕ್ಷತೆ ಹಾಗೂ ಭದ್ರತೆಯನ್ನು ಬಲಪಡಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸುವುದು
*ಡಿಜಿಟಲ್ ವ್ಯವಹಾರ ನಡೆಸುವ ಗ್ರಾಹಕನ ವಿಶ್ವಾಸವನ್ನು ಹೆಚ್ಚಿಸುವ ಮಾರ್ಗಸೂಚಿ ನೀಡುವುದು.

ಗ್ರಾಹಕರು ಕೈಗೊಳ್ಳಬೇಕಾದ ಕ್ರಮಗಳು:

ಆನ್‌ಲೈನ್ ವಂಚನೆಯನ್ನು ತಡೆಯಲು ಅರ್‌ಬಿಐ ಎಷ್ಟೇ ಪರಿಣಾಮಕಾರಿ ನಿಯಮಗಳನ್ನು ಜಾರಿಗೆ ತಂದರೂ ಸಹ ಸೈಬರ್ ವಂಚನೆಯನ್ನು ನಿಯಂತ್ರಿಸುವುದು ಅಸಾಧ್ಯ ಎನ್ನಲಾಗುತ್ತಿದೆ. ಹೀಗಾಗಿ ಡಿಜಿಟಲ್ ವ್ಯವಹಾರದಲ್ಲಿ ತೊಡಗುವ ಗ್ರಾಹಕರೇ ಎಚ್ಚರವಹಿಸಬೇಕಾಗುತ್ತದೆ. ವಂಚನೆಯಿಂದ ಪಾರಾಗಲು ಗ್ರಾಹಕರು ಕೈಗೊಳ್ಳಬೇಕಾದ ಸೂಕ್ತ ಎಚ್ಚರಿಕಾ ಕ್ರಮಗಳು ಇಲ್ಲಿವೆ.

ಇಂಟರ್​ನೆಟ್​ ಬಳಕೆ ವೇಳೆ ಎಚ್ಚರ
ಮೊಬೈಲ್​ನಲ್ಲಿ ಇಂಟರ್​ನೆಟ್​ ಬಳಸುವಾಗ ಕೆಲವೊಂದು ಬಾರಿ ಅನೇಕ ವೆಬ್​ಸೈಟ್​ಗಳಲ್ಲಿ ಆಫರ್​ಗಳನ್ನು ತೋರಿಸಲಾಗುತ್ತದೆ. ಇಂತಹ ಲಿಂಕ್​ಗಳನ್ನು ಬಳಸಿ ನೀವು ಹಣ ಸಂದಾಯ ಮಾಡಿದರೆ ಮೋಸ ಹೋಗುತ್ತೀರಿ. ಯಾವುದೇ ಆನ್​ಲೈನ್ ಶಾಪಿಂಗ್​ ನಡೆಸುವಾಗಲೂ ನಂಬಿಕಾರ್ಹವೇ ಎಂಬುದನ್ನು ದೃಢಪಡಿಸಿಕೊಳ್ಳುವುದು ಉತ್ತಮ.

ಕ್ಲಿಕ್ ಮಾಡಬೇಡಿ
ನೀವು ಬ್ರೌಸರ್​ ಅಥವಾ ಇತರೆ ಪೇಜ್​ಗಳಲ್ಲಿರುವ ವೆಬ್​ಸೈಟ್​ನ ಹೆಸರನ್ನು ನೋಡಿ ಕ್ಲಿಕ್ ಮಾಡಬೇಡಿ. ಅದರ ಬದಲಾಗಿ ನೇರವಾಗಿ ಟೈಪಿಸಿ ವೆಬ್​ಸೈಟ್​ಗಳಿಗೆ ಬೇಟಿ ನೀಡುವುದು ಸೂಕ್ತ. ಏಕೆಂದರೆ ಸೈಬರ್​ ವಂಚಕರು ನಕಲಿ ವೆಬ್​ಸೈಟ್​ಗಳನ್ನು ಸೃಷ್ಟಿಸಿ ಆಫರ್​ಗಳನ್ನು ನೀಡಿರುತ್ತಾರೆ. ಈ ವೇಳೆ ನೀವು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಹುಡುಕಾಟ ನಡೆಸುವ ವೆಬ್​ಸೈಟ್​ನಲ್ಲಿ HTTP ಪಕ್ಕದಲ್ಲಿ S ಎಂಬ ಅಕ್ಷರ ಇದೆಯೇ ಎಂಬುದನ್ನು ಪರೀಕ್ಷಿಸಿ. HTTPS ಎಂಬ ಅಕ್ಷರ ಇದ್ದರೆ ಅಂತಹ ವೆಬ್‌ಸೈಟ್ ಸುರಕ್ಷಿತ ಎಂದರ್ಥ

ಸಂಸ್ಥೆಯ ಬಗ್ಗೆ ಕಣ್ಣಾಡಿಸಿ
ಆನ್​ಲೈನ್​ ವಸ್ತುಗಳನ್ನು ಖರೀದಿಸುವ ಮುನ್ನ ನೀವು ಬಳಸುತ್ತಿರುವ ಶಾಂಪಿಂಗ್ ಸೈಟ್​ ನಂಬಿಕಾರ್ಹವೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಹಲವು ನಕಲಿ ಶಾಪಿಂಗ್ ವೆಬ್​ಸೈಟ್​ಗಳಿದ್ದು, ಇವುಗಳು ನಿಮ್ಮ ಬ್ಯಾಕಿಂಗ್ ಮಾಹಿತಿಗಳನ್ನು ಕದಿಯಲೆಂದೇ ಸೃಷ್ಟಿಸಲಾಗಿರುತ್ತದೆ.

ಪಾಸ್‌ವರ್ಡ್‌ ಬದಲಿಸಿ
ನೀವು ಎರಡಕ್ಕಿಂತ ಹೆಚ್ಚು ಬಾರಿ ನೆಟ್​ ಬ್ಯಾಂಕಿಂಗ್ ಆ್ಯಪ್​ ಬಳಸಿ ಹಣ ಪಾವತಿ ಮಾಡಿದ್ದರೆ, ಪಾಸ್​ವರ್ಡ್​ ಅನ್ನು ಬದಲಿಸುವುದು ಉತ್ತಮ. ಒಂದೇ ಪಾಸ್​ವರ್ಡ್​ ಬಳಸಿ ಆನ್​ಲೈನ್ ವ್ಯವಹಾರ ಮಾಡುತ್ತಿದ್ದರೆ ನಿಮ್ಮ ಬ್ಯಾಂಕಿಂಗ್​ ಮಾಹಿತಿಗಳು ಹ್ಯಾಕರ್​ಗಳಿಗೆ ಸುಲಭವಾಗಿ ಕದಿಯಲು ಸಹಾಯವಾಗಲಿದೆ.

ಉಚಿತ ವೈಫೈ ಬಳಸಬೇಡಿ
ಆನ್​ಲೈನ್ ವ್ಯವಹಾರ ನಡೆಸುವಾಗ ಪಬ್ಲಿಕ್ ವೈಫೈ ಬಳಸಬೇಡಿ. ಏಕೆಂದರೆ ಸಾರ್ವಜನಿಕ ಸ್ಥಳಗಳಲ್ಲಿರುವ ವೈಫೈ ಕನೆಕ್ಷನ್​ನನ್ನು ಹ್ಯಾಕರುಗಳು ತುಂಬಾ ಸುಲಭವಾಗಿ ಹ್ಯಾಕ್​ ಮಾಡುತ್ತಾರೆ. ಇದರಿಂದ ನಿಮ್ಮ ಬ್ಯಾಂಕ್ ಖಾತೆಯ ವಿವರಗಳು ಹ್ಯಾಕರುಗಳು ಕದಿಯಲು ಸುಲಭವಾಗುತ್ತದೆ. ಹೀಗಾಗಿ ಆನ್​ಲೈನ್​ ವ್ಯವಹಾರದ ವೇಳೆ ಪಬ್ಲಿಕ್ ವೈಫೈ ಬಳಸುವುದು ಸುರಕ್ಷಿತವಲ್ಲ.

ಇದನ್ನೂ ಓದಿ: ಫೇಸ್​ಬುಕ್​, ವಾಟ್ಸ್​ಆ್ಯಪ್​ ಬಳಕೆದಾರರ ಗಮನಕ್ಕೆ: ಈ ಆ್ಯಪ್​ಗಳನ್ನು ಬಳಸಿ ನಿಮ್ಮ ಸಂಪೂರ್ಣ ಮಾಹಿತಿಯನ್ನು ಕದಿಯಲಾಗುತ್ತಿದೆ..!

ಲಾಗೌಟ್ ಮಾಡಿ
ನೆಟ್​ ಬ್ಯಾಂಕಿಂಗ್ ಅಥವಾ ಆನ್​ಲೈನ್ ವಹಿವಾಟಿನ ಬಳಿಕ ನಿಮ್ಮ ಖಾತೆಯನ್ನು ಲಾಗೌಟ್ ಮಾಡಲು ಮರೆಯಬೇಡಿ. ಇಲ್ಲದಿದ್ದರೆ ಇನ್ಯಾವುದೋ ರೀತಿಯಲ್ಲಿ ನಿಮ್ಮ ಖಾಸಗಿ ಮಾಹಿತಿಗಳು ಹ್ಯಾಕರುಗಳ ಪಾಲಾಗುವ ಸಾಧ್ಯತೆ ಇರುತ್ತದೆ.

ಆ್ಯಪ್​ ಡೌನ್​ಲೋಡ್​ ಮುನ್ನ ಯೋಚಿಸಿ
ಅನೇಕ ಮೊಬೈಲ್​ ವ್ಯಾಲೆಟ್, ಶಾಪಿಂಗ್ ಆ್ಯಪ್​ಗಳು ಡೌನ್​ಲೋಡ್​ಗೆ ಲಭ್ಯವಿರುತ್ತದೆ. ಇಂತಹ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡುವ ಮುನ್ನ ಪರೀಕ್ಷಿಸಿಕೊಳ್ಳಿ. ಏಕೆಂದರೆ ಬಳಕೆದಾರರ ಮಾಹಿತಿಗಳನ್ನು ಕದಿಯಲೆಂದೇ ಹಲವು ನಕಲಿ ಆ್ಯಪ್​ಗಳಿದ್ದು, ಇಂತಹ ಅಪ್ಲಿಕೇಶನ್​ಗಳ ಬಗ್ಗೆ ಎಚ್ಚರದಿಂದಿರಿ.

First published:January 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...