ಸಾಮಾನ್ಯವಾಗಿ ಗ್ರಹಗಳು ತಮ್ಮದೇ ಆದ ಚಂದ್ರಗಳನ್ನು (Moons) ಹೊಂದಿರುತ್ತವೆ. ಇದೀಗ ಗುರು ಗ್ರಹದ ಚಂದ್ರಗಳನ್ನು ಅನ್ವೇಷಿಸುವಂತಹ ಬಹುನಿರೀಕ್ಷೆಯ ಹಾಗೂ ಅದ್ಭುತವಾದ ಕಾರ್ಯಕ್ರಮಕ್ಕೆ ಉಪಗ್ರಹ ಉಡಾವಣೆ ಮಾಡಲು ಯುರೋಪ್ (Europe) ಸಿದ್ಧಗೊಂಡಿದೆ.ಪ್ರಸ್ತುತ, ಈಗ ಫ್ರಾನ್ಸ್ ದೇಶದ ಟೌಲೌಸ್ ಎಂಬಲ್ಲಿ ಜ್ಯೂಸ್ ಎಂಬ ಉಪಗ್ರಹದ ಅಂತಿಮ ಘಟ್ಟದ ಪರೀಕ್ಷೆಗಳು ನಡೆಯುತ್ತಿದ್ದು ಒಂದೊಮ್ಮೆ ಇದು ಮುಗಿದ ನಂತರ ಉಪಗ್ರಹವನ್ನು ಉತ್ತರ ಅಮೆರಿಕಾಗೆ (America) ನಭದಲ್ಲಿ ಚಿಮ್ಮಿಸಲು ಕೊಂಡೊಯ್ಯಲಾಗುವುದೆಂದು ಬಿಬಿಸಿ ವರದಿ ಮಾಡಿದೆ. ಏಪ್ರಿಲ್ ತಿಂಗಳಿನಲ್ಲಿ ಈ ಉಪಗ್ರಹ ಉಡಾವಣೆಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ಆರು ಟನ್ನುಗಳಷ್ಟು ತೂಗುವ ಉಪಗ್ರಹವು ತನ್ನಲ್ಲಿರುವ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಯುರೋಪಾ ಸೇರಿದಂತೆ ಗುರುವಿನ ಚಂದ್ರಗಳನ್ನು ಅನ್ವೇಷಿಸಲಿದ್ದು ಅವುಗಳಲ್ಲಿ ಯಾವುದಾದರೂ ಚಂದ್ರ ವಾಸಯೋಗ್ಯವಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಿದೆ.
ಈ ಕಾರ್ಯಾಚರಣೆ ನಿಜಕ್ಕೂ ಅದ್ಭುತ ಎನ್ನುವಂತಾಗಿದ್ದು ಇದರಿಂದ ಏನೆಲ್ಲ ಮಾಹಿತಿ ಸಿಗಬಹುದೆಂಬುದರ ಬಗ್ಗೆ ಸಂಶೋಧಕರ ತಂಡ ಉತ್ಸುಕವಾಗಿದೆ.
ಇದನ್ನೂ ಓದಿ: ವಿಜ್ಞಾನಿಗಳ ಮಹತ್ವದ ಆವಿಷ್ಕಾರ: 9 ಬಿಲಿಯನ್ ಬೆಳಕಿನ ದೂರದ ವರ್ಷಗಳ ರೇಡಿಯೊ ಸಿಗ್ನಲ್ ಸೆರೆ
ಏಕೆಂದರೆ ಜೋವಿಯನ್ ವ್ಯವಸ್ಥೆಯು ಭೂಮಿಗೆ ಸೂರ್ಯನಿಂದ ಬರುವ ಬೆಳಕಿನ ಪ್ರಮಾಣದ 1/25ನೇ ಭಾಗವನ್ನು ಮಾತ್ರವೇ ಪಡೆಯುತ್ತದೆ. ಹಾಗಾಗಿ ಅಲ್ಲಿನ ವಾತಾವರಣ ಹೇಗಿರಬಹುದೆಂಬ ತಿಳಿಯುವ ಉತ್ಸುಕತೆ ಮೂಡದೇ ಇರದು.
ಜೋವಿಯನ್ ವ್ಯವಸ್ಥೆ ಎಂದರೇನು?
ಗುರುಗ್ರಹವು 90ಕ್ಕೂ ಹೆಚ್ಚು ಚಂದ್ರಗಳನ್ನು ಹಾಗೂ ಅವುಗಳ ಉಪಘಟಕಗಳನ್ನು ಹೊಂದಿದೆ. ಈ ಒಟ್ಟಾರೆ ಸಂಗ್ರಹವನ್ನು ಜೋವಿಯನ್ ವ್ಯವಸ್ಥೆ ಎಂದು ಕರೆಯಲಾಗುತ್ತದೆ.
ಗುರುಗ್ರಹದ ಗುರುತ್ವಾಕರ್ಷಣ ಶಕ್ತಿ ಹಾಗೂ ಅದು ತನ್ನ ಚಂದ್ರಗಳನ್ನು ಒಂದು ಹಂತದಲ್ಲಿ ದೂರವಾಗಿ ಇರಿಸಿರುವ ಬಗೆಯನ್ನು ಗಮನಿಸಿದರೆ ಅದರ ಚಂದ್ರಗಳು ಸಾಕಷ್ಟು ಶಕ್ತಿ ಹಾಗೂ ಭೂಗತವಾಗಿರುವ ನೀರಿನ ಮೂಲಗಳನ್ನು ಹೊಂದಿರಬಹುದೆಂದು ವಿಜ್ಞಾನಿಗಳ ಲೆಕ್ಕಾಚಾರವಾಗಿದೆ.
ಮತ್ತು ವೈಜ್ಞಾನಿಕವಾಗಿ ಭೂಮಿಯ ಮೇಲೆ ಎಲ್ಲೆಲ್ಲಿ ನೀರಿದೆಯೋ ಅಲ್ಲಿ ಜೀವನ ಉಪಸ್ಥಿತಿಯು ಸತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈಗ ಗುರುವಿನ ಚಂದ್ರಗಳಲ್ಲಿ ಯಾವುದಾದರೂ ಚಂದ್ರನಲ್ಲಿ ಜೀವನದ ಉಪಸ್ಥಿತಿ ಇದೆಯೋ ಎಂಬುದನ್ನು ಕಂಡುಕೊಳ್ಳುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ ಎಂದಾಗಿದೆ.
ಯುಕೆ ವಿಜ್ಞಾನಿಯ ಅಭಿಪ್ರಾಯ
ಯುಕೆಯ ವಿಜ್ಞಾನಿ ಪ್ರೊಫೆಸರ್ ಎಮ್ಮಾ ಬುನ್ಸ್ ಹೇಳುವಂತೆ ಈಗಾಗಲೇ ಗುರುವಿನ ಒಂದು ಪ್ರಮುಖ ಚಂದ್ರವಾಗಿರುವ ಯುರೋಪಾದ ಮಂಜುಗಡ್ಡೆಯ ಭೂಮಿಯ ಆಳದಲ್ಲಿ ವಿಶಾಲವಾದ ಸಾಗರದ ಉಪಸ್ಥಿತಿಯಿದೆ ಎಂದು ನಂಬಲಾಗಿದೆ. ಈ ಸಾಗರದ ಆಳ ಎಷ್ಟಿದೆ ಎಂದರೆ, ಅದು ಭೂಮಿಯ ಅತಿ ಆಳದ ಸಾಗರದ ಹತ್ತು ಪಟ್ಟು ಎಂದಾಗಿದೆ.
ಈ ಕಾರ್ಯಾಚರಣೆಯಲ್ಲಿ ಉಪಗ್ರಹವು ಒಟ್ಟು 8.5 ವರ್ಷಗಳಷ್ಟು ಪ್ರಯಾಣ ಮಾಡಬೇಕಾಗಿದೆ. ಏಕೆಂದರೆ, ಇದು ಭೂಮಿಯಿಂದ ಸುಮಾರು 6.6 ಬಿಲಿಯನ್ ಕಿ.ಮೀ ಗಳಷ್ಟು ದೂರದಲ್ಲಿದೆ.
ಜ್ಯೂಸ್ ಉಪಗ್ರಹವು ನಿಗದಿಪಡಿಸಿದ ಸಮಯಕ್ಕೆ ಉಡಾವಣೆಗೊಂಡು ಯಾವುದೇ ಅಡಚಣೆ ಇಲ್ಲದೆ ಸಾಗಿದರೆ ಅದು ಗುರುವನ್ನು ಜುಲೈ 2031ಕ್ಕೆ ತಲುಪಲಿದೆ.
ತದನಂತರ ಅದು ಗುರುವಿನ ಮೂರು ಚಂದ್ರಗಳಲ್ಲಿ 35 ಪರೀಕ್ಷೆಗಳನ್ನು ನಡೆಸಿ ಅಂತಿಮವಾಗಿ 2034ರವರೆಗೆ ಗುರುವಿನ ಗೆನಿಮೇಡ್ ಚಂದ್ರನಲ್ಲಿ ಶಾಶ್ವತವಾಗಿ ನೆಲೆಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಒಟ್ಟಾರೆ ಪ್ರತಿಷ್ಠಿತ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯನ್ನು ಯುರೋಪಿಯನ್ ಸ್ಪೇಸ್ ಏಜನ್ಸಿ ಈ ವಾರ ಕೈಗೊಂಡಿದ್ದು ಅಂತಿಮದಲ್ಲಿ "ಉಡಾವಣೆಗಾಗಿ ಸಿದ್ಧ" ಎಂಬ ಘೋಷ ವಾಕ್ಯವನ್ನು ಮೊಳಗಿಸಿದೆ.
1.7 ಬಿಲಿಯನ್ ಡಾಲರ್ ಮೊತ್ತದ ಜ್ಯೂಸ್ ಉಪಗ್ರಹದ ನಿರ್ಮಾಣದಲ್ಲಿ ಪ್ರಮುಖವಾಗಿ ಏರ್ಬಸ್ ಎಂಬ ಏರೋಸ್ಪೇಸ್ ಕಂಪನಿ ತೊಡಗಿಸಿಕೊಂಡಿದೆ.
ಈ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿರುವಂತೆ ಜ್ಯೂಸ್ ಉಪಗ್ರಹದ ಬಹುತೇಕ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು ಕೇವಲ ಕೆಲವೇ ಕೆಲವು ಉಪಕರಣಗಳನ್ನಷ್ಟೇ ಜೋಡಿಸಬೇಕಾಗಿದೆ. ಉಪಗ್ರಹವು ಎಲ್ಲ ಅತ್ಯಾಧುನಿಕ ಪರಿಕರಗಳು, ಹೈ ರಿಸೊಲ್ಯೂಷನ್ ಕ್ಯಾಮೆರಾಗಳು ಹಾಗೂ ಇತರೆ ವೈಜ್ಞಾನಿಕ ಸುಧಾರಿತ ಪರೀಕ್ಷಾ ಘಟಕಗಳನ್ನು ಹೊಂದಿರುವುದಾಗೆ ಏರ್ಬಸ್ ವಕ್ತಾರರು ತಿಳಿಸಿದ್ದಾರೆ.
ರಾಡಾರ್, ಲಿಡಾರ್ ಮುಂತಾದ ಪರಿಕರಗಳಿಂದ ಸುಸಜ್ಜಿತವಾದ ಜ್ಯೂಸ್ ಗುರುವಿನಲ್ಲಿ ಬಯೋಮಾರ್ಕರ್ ಗಳನ್ನಾಗಲಿ ಅಥವಾ ಭೂಗತವಾಗಿರುವ ನೀರಿನ ಮೂಲಗಳಲ್ಲಿರುವ ಆಗುಂತಕ ಜಲಚರಗಳನ್ನಾಗಲಿ ಶೋಧಿಸುವುದಿಲ್ಲ, ಬದಲಾಗಿ ಅದು ಅಲ್ಲಿನ ವಾತಾವರಣವು ವಾಸಯೋಗ್ಯವಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಿದೆ ಎಂಬುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.
ಗುರುಗ್ರಹದ ವಾತಾವರಣ ಅತ್ಯಂತ ಶೀತದಿಂದ ಕೂಡಿರುವುದರಿಂದ ಹಾಗೂ ಅಲ್ಲಿಂದ ಪ್ರಭಾವಶಾಲಿ ವಿಕಿರಣಗಳು ಹೊರಹೊಮ್ಮುವುದರಿಂದ ಅವೆಲ್ಲದರಿಂದ ತಪ್ಪಿಸಿಕೊಂಡು ಕಂಪ್ಯೂಟರ್ ಗಳು ಸುರಕ್ಷಿತವಾಗಿರಲು ಜ್ಯೂಸ್ ಉಪಗ್ರಹದಲ್ಲಿ ಎರಡು ದೊಡ್ಡ ವೌಲ್ಟ್ ಗಳನ್ನು ನಿರ್ಮಿಸಲಾಗಿರುವುದಾಗಿ ಥರ್ಮಲ್ ಆರ್ಕಿಟೆಕ್ಟ್ ಆಗಿರುವ ಸೆವೆರಿನ್ ಡೆಸ್ಕ್ಯಾಂಪ್ಸ್ ಹೇಳಿದ್ದಾರೆ.
ಒಟ್ಟಿನಲ್ಲಿ ಇದೊಂದು ನಿಜಕ್ಕೂ ಅಚ್ಚರಿ ಹಾಗೂ ಕಾತುರತೆಯಿಂದ ಕೂಡಿರುವ ಮಿಷನ್ ಆಗಿದ್ದು ಈ ಬಗ್ಗೆ ಖಗೋಳ ಶಾಸ್ತ್ರಜ್ಞರು ಸಾಕಷ್ಟು ಉತ್ಸಾಹಿತರಾಗಿದ್ದಾರೆ. ಅಷ್ಟಕ್ಕೂ ಗುರುಗ್ರಹದ ಚಂದ್ರ ವಾಸಯೋಗ್ಯವಾಗಿವೆಯೇ ಎಂಬುದನ್ನು ತಿಳಿದುಕೊಳ್ಳಲು ನಾವು ಭೂನಿವಾಸಿಗಳು ಇನ್ನೂ ಎಂಟುವರೆ ವರ್ಷಗಳನ್ನು ಕಾಯಲೇಬೇಕಾದ ಅನಿವಾರ್ಯತೆಯಂತೂ ಇದ್ದೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ