ಮತದಾನದಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಅಮೆರಿಕದ (America) ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಟ್ವಿಟರ್ (Twitter) ಖಾತೆಯನ್ನು ನಿರ್ಬಂಧಿಸಲಾಗಿತ್ತು. ನೂತನ ಮಾಲೀಕ ಎಲಾನ್ ಮಸ್ಕ್ (Elon Musk) ಟ್ವಿಟರ್ ಚುಕ್ಕಾಣಿ ಹಿಡಿಯುತ್ತಿದ್ದಂತೆ ಬ್ಲಾಕ್ ಆಗಿದ್ದ ಹಲವು ಖಾತೆಗಳನ್ನು ತೆರವುಗೊಳಿಸುತ್ತಿದ್ದಾರೆ. ಮೊನ್ನೆ ತಾನೇ ಖಗೋಳ ವಿಜ್ಞಾನಿಯೊಬ್ಬರ ಖಾತೆಯನ್ನು ಅನ್ಲಾಕ್ (Unlock) ಮಾಡಲಾಗಿತ್ತು, ಇದೀಗ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆ ಸರದಿ.
ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆ ಸಕ್ರೀಯ
ಹೌದು, ಟ್ವಿಟರ್ ಹೊಸ ಮಾಲೀಕ ಎಲಾನ್ ಮಸ್ಕ್ ಮಾಜಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಬಂಧಿಸಲ್ಪಟ್ಟಿದ್ದ ಟ್ವಿಟರ್ ಖಾತೆಗೆ ಚಾಲನೆ ಕೊಟ್ಟಿದ್ದಾರೆ. ಆದರೆ ಅಚ್ಚರಿ ಏನೆಂದರೆ ಈ ಖಾತೆಯನ್ನು ಮರುಸಕ್ರೀಯ ಮಾಡುವುದರ ಬಗ್ಗೆ ಟ್ರಂಪ್ ಯಾವುದೇ ಆಸಕ್ತಿ ತೋರಿಸಿಲ್ಲ. ಟ್ವಿಟರ್ಗೆ ಮರಳಲು ತನಗೆ ಆಸಕ್ತಿಯಿಲ್ಲ ಎಂದು ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ.
ಸಮೀಕ್ಷೆ ನಡೆಸಿದ್ದ ಮಸ್ಕ್
ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಅವರ ಟ್ವಿಟರ್ ಖಾತೆಯ ನಿರ್ಬಂಧವನ್ನು ತೆರವುಗೊಳಿಸಬೇಕೇ? ಬೇಡವೇ? ಎಂದು ಎಲಾನ್ ಮಸ್ಕ್ ಸಮೀಕ್ಷೆಯೊಂದನ್ನು ನಡೆಸಿದ್ದರು. ಅವರ ಪ್ರಶ್ನೆಗೆ ಟ್ರಂಪ್ ಅವರ ಪರ ಅತ್ಯಲ್ಪ ಪ್ರಮಾಣದ ಬಹುಮತ ವ್ಯಕ್ತವಾಗಿತ್ತು. 15 ಮಿಲಿಯನ್ ಟ್ವಿಟರ್ ಬಳಕೆದಾರರು ಸಮೀಕ್ಷೆಯಲ್ಲಿ ಮತ ಚಲಾಯಿಸಿದ್ದರು ಮತ್ತು ಶೇ 51.8ರಷ್ಟು ಮಂದಿ ಅದರ ಪರ ಮತ ಹಾಕಿದ್ದು, ಸಮೀಕ್ಷೆಯ ಫಲಿತಾಂಶದ ನಂತರ ಎಲಾನ್ ಮಸ್ಕ್ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
"ಜನರು ಮಾತನಾಡಿದ್ದಾರೆ. ಟ್ರಂಪ್ ಅವರನ್ನು ಮರು ಸ್ಥಾಪನೆ ಮಾಡಲಾಗುವುದು" ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಮತ್ತೆ ಏರಿಕೆ ಕಾಣುತ್ತಿದೆ ಫಾಲೋವರ್ಗಳ ಸಂಖ್ಯೆ
ಟ್ವಿಟರ್ನಲ್ಲಿ ಟ್ರಂಪ್ ಮಿಲಿಯನ್ಗಟ್ಟಲೇ ಅನುಯಾಯಿಗಳನ್ನು ಹೊಂದಿದ್ದರು. ಟ್ರಂಪ್ ತಮ್ಮ ಖಾತೆ ನಿಷೇಧಕ್ಕೆ ಒಳಗಾಗುವ ಮುನ್ನ 88 ಮಿಲಿಯನ್ಗೂ ಅಧಿಕ ಫಾಲೋವರ್ಗಳನ್ನು ಹೊಂದಿದ್ದರು. ಟ್ವಿಟರ್ ಖಾತೆ ಈಗ ಮರುಜೀವ ಪಡೆಯುತ್ತಿದ್ದಂತೆ ಅನುಯಾಯಿಗಳ ಸಂಖ್ಯೆ ನಿಧಾನವಾಗಿ ಏರಿಕೆ ಕಾಣುತ್ತಿದೆ.
ಶನಿವಾರದ ವೇಳೆಗೆ ಸುಮಾರು 100,000 ಅನುಯಾಯಿಗಳನ್ನು ಹೊಂದಿತ್ತು ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಇನ್ನೂ ಕೆಲವು ಬಳಕೆದಾರರು ಆರಂಭದಲ್ಲಿ ಶನಿವಾರ ಸಂಜೆ ಮರುಸ್ಥಾಪಿಸಲಾದ ಖಾತೆಯನ್ನು ಅನುಸರಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಿದ್ದಾರೆ.
"ಟ್ವಿಟರ್ ಬಗ್ಗೆ ಆಸಕ್ತಿ ಇಲ್ಲ. ಟ್ರೂತ್ ಸೋಷಿಯಲ್ ಚೆನ್ನಾಗಿದೆ"
ರಿಪಬ್ಲಿಕನ್ ಯಹೂದಿ ಒಕ್ಕೂಟದ ವಾರ್ಷಿಕ ನಾಯಕತ್ವ ಸಭೆಯಲ್ಲಿ ಸಮಿತಿಯಿಂದ ಟ್ವಿಟರ್ಗೆ ಮರಳಲು ಯೋಜಿಸಲಾಗಿದೆಯೇ ಎಂದು ಟ್ರಂಪ್ ಅವರನ್ನು ಕೇಳಿದಾಗ "ಅದಕ್ಕೆ ಯಾವುದೇ ಕಾರಣವನ್ನು ನಾನು ಕಾಣುತ್ತಿಲ್ಲ" ಎಂದು ಮಾಜಿ ಅಧ್ಯಕ್ಷರು ವೀಡಿಯೊ ಮೂಲಕ ಹೇಳಿದರು.
ಟ್ರಂಪ್ ಟ್ವಿಟರ್ಗೆ ಮರಳುವ ಬಗ್ಗೆ ಸ್ಪಷ್ಟವಾದ ಉತ್ತರ ನೀಡಿಲ್ಲ. ಬದಲಿಗೆ ಟ್ರಂಪ್ ಮೀಡಿಯಾ ಮತ್ತು ಟೆಕ್ನಾಲಜಿ ಗ್ರೂಪ್ (ಟಿಎಮ್ಟಿಜಿ) ಸ್ಟಾರ್ಟ್ಅಪ್ ಅಭಿವೃದ್ಧಿಪಡಿಸಿದ ತನ್ನ ಹೊಸ ಪ್ಲಾಟ್ಫಾರ್ಮ್ ಟ್ರೂತ್ ಸೋಷಿಯಲ್ನಲ್ಲಿಯೇ ಇರುವುದಾಗಿ ತಿಳಿಸಿದ್ದಾರೆ.
ಇದು ಟ್ವಿಟರ್ಗಿಂತ ಅಸಾಧಾರಣವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. ಸಮೀಕ್ಷೆಯನ್ನು ಸ್ವಾಗತಿಸುತ್ತೇನೆ ಮತ್ತು ಮಸ್ಕ್ನ ಅಭಿಮಾನಿಯಾಗಿದ್ದೇನೆ ಎಂದು ಹೇಳಿದರು,
ಇದನ್ನೂ ಓದಿ: Twitter: ಸರ್ಚ್ ಆಪ್ಶನ್ ಸರಿಪಡಿಸಲು ಎಲಾನ್ ಮಸ್ಕ್ ನೇಮಿಸಿಕೊಂಡದ್ದು ಯಾರನ್ನು ಗೊತ್ತಾ?
ಟ್ರಂಪ್ಗೆ ವೆಲ್ಕಮ್
ಶನಿವಾರ ಅವರ ಹಲವಾರು ರಾಜಕೀಯ ಮಿತ್ರರು ಅವರ ಖಾತೆ ಮರುಸ್ಥಾಪನೆ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಅವರಿಗೆ ಮರಳಿ ಸ್ವಾಗತ ಎಂದು ಹೌಸ್ ರಿಪಬ್ಲಿಕನ್ ಪಾಲ್ ಗೋಸರ್ ಟ್ವೀಟ್ ಮಾಡಿದ್ದಾರೆ.
ಟ್ವಿಟರ್ ಏಕೆ ನಿಷೇಧ ಹೇರಿತ್ತು?
2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಸೋಲು ಖಚಿತವಾಗುತ್ತಿದ್ದಂತೆ ರಿಪಬ್ಲಿಕನ್ ಪಕ್ಷದ ಬೆಂಬಲಿಗರು ಕ್ಯಾಪಿಟೋಲ್ಗೆ ನುಗ್ಗಿ ದಾಂಧಲೆ ನಡೆಸಿದ್ದರು. ಇದಕ್ಕೆ ಟ್ರಂಪ್ ಅವರೇ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪದಲ್ಲಿ ಅವರ ಖಾತೆಯನ್ನು ಟ್ವಿಟರ್ ನಿಷೇಧಿಸಿತ್ತು.
ಈ ಹಿಂದೆಯೂ ಸಮೀಕ್ಷೆ ನಡೆಸಿದ್ದ ಮಸ್ಕ್
ಎಲಾನ್ ಮಸ್ಕ್ ಕೂಡ ಈ ಹಿಂದೆ ಇದೇ ರೀತಿಯ ಸಮೀಕ್ಷೆಗಳನ್ನು ನಡೆಸಿದ್ದರು, ಕಳೆದ ವರ್ಷ ತಮ್ಮ ಎಲೆಕ್ಟ್ರಿಕ್ ಕಾರ್ ಕಂಪನಿ ಟೆಸ್ಲಾದಲ್ಲಿ ಷೇರುಗಳನ್ನು ಮಾರಾಟ ಮಾಡಬೇಕೆ ಎಂದು ಅನುಯಾಯಿಗಳನ್ನು ಕೇಳಿದ್ದರು. ಆ ಸಮೀಕ್ಷೆಯ ನಂತರ, ಅವರು $1 ಬಿಲಿಯನ್ಗಿಂತಲೂ ಹೆಚ್ಚಿನ ಷೇರುಗಳನ್ನು ಮಾರಾಟ ಮಾಡಿದರು.
ಪ್ರಸ್ತುತ ಟ್ರಂಪ್ ಟ್ವಿಟರ್ ಖಾತೆಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಿ ಖಾತೆಯನ್ನು ಸಕ್ರೀಯಗೊಳಿಸಿದ್ದಾರೆ. ವಿವಾದಾತ್ಮಕ ಪ್ರೊಫೈಲ್ ಅನ್ನು ಮರುಸ್ಥಾಪಿಸಬೇಕೆ ಎಂಬ ಸಮೀಕ್ಷೆಯಲ್ಲಿ 51.8 ಶೇಕಡಾ ಪರವಾಗಿ ಮತ್ತು 48.2 ಶೇಕಡಾ ವಿರುದ್ಧವಾಗಿ ಮತ ಹಾಕಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ