ತಂತ್ರಜ್ಞಾನದಲ್ಲಿ (Technology) ಹೊಸ ಹೊಸ ಸಾಧನೆಯಾಗುತ್ತಿರುವಂತೆ ನವೀನ ಕ್ರಾಂತಿಗಳು ನಡೆಯುತ್ತಿವೆ. ಇಂದಿನ ದಿನಗಳಲ್ಲಿ ಚಾಟ್‌ಜಿಪಿಟಿ (ChatGPT) ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಇದರಿಂದಾಗಿ ಹೆಚ್ಚಿನವರು ಕೃತಕ ಬುದ್ಧಿಮತ್ತೆಯತ್ತ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಗೂಗಲ್ (Google), ಮೈಕ್ರೋಸಾಫ್ಟ್, ಮೆಟಾ ಎಐ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುತ್ತಿದ್ದು ಕೃತಕ ಬುದ್ಧಿಮತ್ತೆಯ (Artificial Intelligence) ಕ್ಷೇತ್ರದಲ್ಲಿ ಸಾಧನೆ ಮಾಡುವುದೇ ಮುಖ್ಯ ಗಮನವಾಗಿರಿಸಿಕೊಂಡಿದೆ. ಇತ್ತೀಚಿನ ವರದಿಗಳ ಪ್ರಕಾರ ಎಲಾನ್ ಮಸ್ಕ್ (Elon Musk) ಕೂಡ X.AI ಎಂಬ ತನ್ನ ಹೊಸ AI ಕಂಪೆನಿಯನ್ನು ಪ್ರಾರಂಭಿಸಲು ಸಜ್ಜಾಗುತ್ತಿದ್ದಾರೆ.
ಹಣ ದೋಚುವ ಹೊಸ ವಂಚನೆಯ ಜಾಲ
ಕೃತಕ ಬುದ್ಧಿಮತ್ತೆಯ ಪರಿಕಲ್ಪನೆಯು ಹಲವು ವರ್ಷಗಳಿಂದಲೂ ಇದೆಯಾದರೂ, ಅದರ ಜನಪ್ರಿಯತೆಯು ಚಾಟ್‌ಜಿಪಿಟಿ ಮತ್ತು DALL.E ನಂತಹ ಓಪನ್ ಎಐನ (OpenAI) ನ ಸಾಧನಗಳ ಪ್ರಾರಂಭದೊಂದಿಗೆ ಹೊಸ ಮೈಲಿಗಲ್ಲನ್ನು ಸಾಧಿಸಿತು. ಕೃತಕ ಬುದ್ಧಿಮತ್ತೆ ಸಾಧನೆಗಳನ್ನು ಮಾಡುತ್ತಿರುವುದರ ನಡುವೆ ಖ್ಯಾತಿ ಗಳಿಸುತ್ತಿರುವುದರೊಂದಿಗೆ ಈ ತಂತ್ರಜ್ಞಾನವನ್ನು ತಮ್ಮ ದುಷ್ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವವರ ಸಂಖ್ಯೆ ಕೂಡ ಅಧಿಕವಾಗುತ್ತಿದೆ.
ಎಐಯ ಕರಾಳ ರೂಪವನ್ನು ಹಾಗೂ ಅದನ್ನು ತಮ್ಮ ಲಾಭಕ್ಕಾಗಿ ದುರುಳರು ಹೇಗೆ ಬಳಸಿಕೊಳ್ಳಬಹುದು ಎಂಬ ಅಂಶದ ಬಗ್ಗೆ ತಜ್ಞರು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮ್ಯಾನ್ ಕೂಡ ಈ ಹಿಂದೆ AI ಯ ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ಎಲ್ಲಾ ವಿದ್ಯಮಾನಗಳ ನಡುವೆಯೇ ಹೊಸದಾದ ಘಟನೆಯೊಂದು ನಡೆದಿದ್ದು, ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ದುಷ್ಕರ್ಮಿಗಳು ಹಣ ದೋಚುವ ಹೊಸ ತಂತ್ರ ನೇಯ್ದಿದ್ದಾರೆ.
ಇದನ್ನೂ ಓದಿ: ಪವರ್ ಪ್ಲಗ್ನಲ್ಲಿರೋ ಈ ಫೀಚರ್ ನೀವು ನೋಡಿದ್ದೀರಾ? ಈ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತೇ ಇಲ್ಲ
ನಡೆದ ಘಟನೆಯಾದರೂ ಏನು?
ಅರಿಜೋನಾದ ಜೆನ್ನಿಫರ್ ಡಿಸ್ಟೆಫಾನೊ ಎಂಬ ಮಹಿಳೆಗೆ ಒಂದು ದಿನ ಅಪರಿಚಿತ ಸಂಖ್ಯೆಯಿಂದ ಬಂದ ಕರೆ ಆಕೆಯನ್ನು ಭಯಭೀತಗೊಳಿಸಿತು. ಟ್ರಿಪ್‌ಗೆ ಹೋಗಿದ್ದ ಅವರ 15 ರ ಹರೆಯದ ಮಗಳು ಅಳುತ್ತಿರುವ ಧ್ವನಿ ಕೇಳಿಬಂದಿತ್ತು.
ಮಾಧ್ಯಮಕ್ಕೆ ಈ ಘಟನೆಯ ಬಗ್ಗೆ ತಿಳಿಸಿರುವ ಆಕೆ, ತಮ್ಮ ಮಗಳು ಟ್ರಿಪ್‌ಗೆ ಹೋಗಿದ್ದಳು ಆದರೆ ತಮ್ಮ ಮಗಳು ಅಳುತ್ತಾ ಫೋನ್ ಮಾಡಿರುವುದು ಅವರಲ್ಲಿ ಭಯ ಹುಟ್ಟುಹಾಕಿತ್ತು.
ಹಣ ನೀಡಲು ಒತ್ತಾಯ
ಮಗಳ ಧ್ವನಿಯ ನಂತರ ಗಂಡಸಿನ ಸ್ವರವೊಂದು ಕೇಳಿಬಂದಿದ್ದು, ನನಗೆ ನಿಮ್ಮ ಮಗಳು ದೊರಕಿದ್ದಾಳೆ. ಇದೀಗ ಆಕೆಯನ್ನು ನಾವು ನಮ್ಮ ಡ್ರಗ್ಸ್ ಜಾಲಕ್ಕಾಗಿ ಬಳಸಿಕೊಳ್ಳುತ್ತಿದ್ದೇವೆ.
ನೀವು ಪೊಲೀಸರಿಗೆ ಬೇಕಾದರೂ ಕರೆ ಮಾಡಬಹುದು ಬೇರಾರಿಗೂ ಬೇಕಾದರೂ ಕರೆ ಮಾಡಿ. ಡ್ರಗ್ಸ್‌ನಿಂದ ತುಂಬಿದ ಚೀಲವನ್ನು ಅವಳ ಮೂಲಕ ರವಾನಿಸುತ್ತಿದ್ದೇನೆ. ಮೆಕ್ಸಿಕೋ ನಗರದಲ್ಲಿ ಆಕೆಯನ್ನು ಡ್ರಾಪ್ ಮಾಡುತ್ತೇನೆ ಎಂಬ ಧ್ವನಿ ಆ ಕಡೆಯಿಂದ ಮಾತನಾಡಿದ್ದಾಗಿ ಜೆನ್ನಿಫರ್ ತಿಳಿಸಿದ್ದಾರೆ.
ನಿಮ್ಮ ಮಗಳು ಸುರಕ್ಷಿತವಾಗಿ ಯಾವುದೇ ಪ್ರಕರಣದಲ್ಲಿ ಸಿಲುಕಿ ಹಾಕಿಕೊಳ್ಳದೇ ನಿಮ್ಮ ಬಳಿಗೆ ಮರಳಿ ಬೇಕೆಂದರೆ USD 1 ಮಿಲಿಯನ್ ಹಣ ನೀಡಬೇಕಾಗಿ ಬೇಡಿಕೆ ಇಟ್ಟಿರುವುದನ್ನು ಜೆನ್ನಿಫರ್ ತಿಳಿಸಿದ್ದಾರೆ. ತಮ್ಮ ಬಳಿ ಅಷ್ಟೊಂದು ಹಣವಿಲ್ಲವೆಂದು ಜೆನ್ನಿಫರ್ ತಿಳಿಸಿದಾಗ ಆ ವ್ಯಕ್ತಿ USD 50,000 ಗೆ ಒಪ್ಪಿಕೊಂಡನು ಎಂದು ಮಾಧ್ಯಮಕ್ಕೆ ಜೆನ್ನಿಫರ್ ತಿಳಿಸಿದ್ದಾರೆ.
ಜಾಗೃತರಾದ ಜೆನ್ನಿಫರ್
ಜೆನ್ನಿಫರ್ ಅಪರಿಚಿತ ವ್ಯಕ್ತಿಯಿಂದ ಕರೆ ಸ್ವೀಕರಿಸಿದ ಸಮಯದಲ್ಲಿ ಮಗಳು ಡ್ಯಾನ್ಸ್ ಸ್ಟುಡಿಯೋದಲ್ಲಿದ್ದರು ಹಾಗೂ ಅವರೊಂದಿಗೆ ಮಗಳ ಸಹಪಾಠಿಯ ತಾಯಿ ಕೂಡ ಜತೆಗಿದ್ದರು.
ಈ ಸಮಯದಲ್ಲಿ ಅವರು ಜೆನ್ನಿಫರ್‌ಗೆ ಧೈರ್ಯನೀಡಿದ್ದು ಕೂಡಲೇ ಪೊಲೀಸರಿಗೆ ಕರೆ ಮಾಡಿದರು. ಜೆನ್ನಿಫರ್‌ನ ಮಗಳು ತಮ್ಮ ಟ್ರಿಪ್‌ನಲ್ಲಿ ಸುರಕ್ಷಿತವಾಗಿರುವುದು ತಿಳಿದುಬಂದಿತು. ಆದರೆ ಜೆನ್ನಿಫರ್ ತಮ್ಮ ಮಗಳ ಅದೇ ಧ್ವನಿಯನ್ನು ಫೋನ್‌ನಲ್ಲಿ ಆಲಿಸಿದ್ದಾಗಿ ತಿಳಿಸಿದ್ದಾರೆ.
ಎಚ್ಚರಿಕೆಯಿಂದಿರಲು ವಿನಂತಿ
ಇದೇ ಘಟನೆಯನ್ನು ಜೆನ್ನಿಫರ್ ತಮ್ಮ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು ಇಂತಹ ಘಟನೆಗಳಿಂದ ಎಚ್ಚರಿಕೆಯಿಂದಿರುವಂತೆ ಅವರು ತಿಳಿಸಿದ್ದಾರೆ. ಇಂತಹ ವಂಚನೆಗಳಿಗೆ ಬಲಿಯಾಗದಿರಿ ಎಂಬ ಸಂದೇಶವನ್ನು ಆಕೆ ನೀಡಿದ್ದಾರೆ. ನಿಮ್ಮ ಪ್ರೀತಿಪಾತ್ರರ ಧ್ವನಿಯನ್ನು ಬಳಸಿಕೊಂಡು ವಂಚಿಸುವ ಹೊಸ ಎಐ ಜಾಲ ಇದೀಗ ಹೆಚ್ಚಾಗುತ್ತಿದೆ ಎಂದು ಜೆನ್ನಿಫರ್ ಎಚ್ಚರಿಸಿದ್ದಾರೆ.
ಸಾರ್ವಜನಿಕ ಜಾಗೃತಿ ಮೂಡಿಸಲು ಕರೆ
ಸಾರ್ವಜನಿಕ ಜಾಗೃತಿ ಮೂಡಿಸುವ ಮೂಲಕವೇ ಇಂತಹ ಕೃತ್ಯಗಳನ್ನು ಮಟ್ಟಹಾಕಬಹುದು ಎಂದು ಜೆನ್ನಿಫರ್ ತಿಳಿಸಿದ್ದಾರೆ. ಇಂತಹ ಘಟನೆಗಳು ನಿಮ್ಮ ಅಕ್ಕಪಕ್ಕದಲ್ಲಿ ಅಥವಾ ಸಮೀಪ ನಡೆದಲ್ಲಿ ಅದನ್ನು ಕೂಡಲೇ ವರದಿ ಮಾಡಿ, ಇದರಿಂದ ಇತರರು ಎಚ್ಚರಿಕೆಯಿಂದ ಇರಲು ಸಾಧ್ಯವಾಗುತ್ತದೆ ಎಂದು ಜೆನ್ನಿಫರ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ