news18-kannada Updated:April 8, 2021, 3:31 PM IST
ವಾಟ್ಸ್ಆ್ಯಪ್
ಜಗತ್ತಿನಾದ್ಯಂತ ಕೋವಿಡ್ ಅಲೆ ಹೆಚ್ಚಾಗುತ್ತಿದ್ದು, ಜನರು ಸುರಕ್ಷಿತವಾಗಿರುವಂತೆ, ನಿಯಮಗಳನ್ನು ಪಾಲಿಸುವಂತೆ ಸರ್ಕಾರ ವಿವಿಧ ಹಂತಗಳಲ್ಲಿ ಸಂದೇಶ ರವಾನಿಸುತ್ತಲೇ ಇದೆ. ಇದರ ಬೆನ್ನಲ್ಲೇ 45 ರಿಂದ 59 ವರ್ಷದೊಳಗಿನ ಹಿರಿಯ ನಾಗರಿಕರು ವ್ಯಾಕ್ಸಿನೇಷನ್ ಪಡೆದುಕೊಳ್ಳುವಂತೆ ಕಡ್ಡಾಯ ಮಾಡಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳು ಕೂಡ ಕೈ ಜೋಡಿಸಿದೆ. ಇದೀಗ ಪ್ರಪಂಚದಾದ್ಯಂತ ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೆಂಜಿಂಗ್ ಆ್ಯಪ್ ವಾಟ್ಸ್ಆ್ಯಪ್ ಕೂಡ ಕೋವಿಡ್ ವ್ಯಾಕ್ಸಿನೇಷನ್ಗೆ ಸಂಪೂರ್ಣ ಬೆಂಬಲ ನೀಡಿದ್ದು, ಜಾಗೃತಿ ಮೂಡಿಸುವ ಕಾರಣ ‘ವ್ಯಾಕ್ಸಿನ್ಸ್ ಫಾರ್ ಆಲ್’ ಎಂಬ ಸ್ಟಿಕ್ಕರ್ಸ್ ಪ್ಯಾಕ್ ಅಭಿಯಾನ ಶುರು ಮಾಡಿದೆ. ಇದರ ಉದ್ದೇಶ ಕೋವಿಡ್ ವಿರುದ್ಧ ಬದುಕನ್ನು ಪಣಕ್ಕಿಟ್ಟು ದುಡಿಯುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಮೆಚ್ಚುಗೆ ತೋರಿಸುವುದಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಹಾಗೂ ವಾಟ್ಸ್ಆ್ಯಪ್ ಕಂಪೆನಿ ಜೊತೆಗೂಡಿ ಈ ಸ್ಟಿಕರ್ಸ್ ಪ್ಯಾಕ್ ಅನ್ನು ಅಭಿವೃದ್ಧಿ ಪಡಿಸಿದೆ. ಅಲ್ಲದೇ ವಾಟ್ಸ್ಆ್ಯಪ್ ಕಂಪೆನಿಯು ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಸೇರಿದಂತೆ ಇನ್ನಿತರ 150ಕ್ಕೂ ಹೆಚ್ಚಿನ ರಾಷ್ಟ್ರ, ರಾಜ್ಯ, ಸ್ಥಳೀಯ ಸರ್ಕಾರಗೊಳೊಂದಿಗೆ ಪಾಲುದಾರಿಕೆ ಹೊಂದಿದೆ. ವ್ಯಾಕ್ಸಿನೇಷನ್ ಬಗ್ಗೆ ಮಾಹಿತಿ ಹಾಗೂ ನೋಂದಣಿ ಮಾಹಿತಿ ರವಾನಿಸುವ ಸಲುವಾಗಿ ವಾಟ್ಸ್ಆ್ಯಪ್ ಗ್ರೂಪ್ ಕೂಡ ರಚನೆ ಮಾಡಿದೆ. 23 ವಿಭಿನ್ನವಾದ ಸ್ಟಿಕ್ಕರ್ಸ್ ಅನ್ನು ವಿಶ್ವ ಆರೋಗ್ಯ ಸಂಸ್ಥೆಯ ಪಾಲುದಾರಿಕೆಯಲ್ಲಿ ರಚಿಸಲಾಗಿದೆ.
ಇದನ್ನು ಆ್ಯಂಡ್ರಾಯ್ಡ್, ಐಒಎಸ್, ಸೇರಿದಂತೆ ಇತರೆ ಎಲ್ಲಾ ಮೊಬೈಲ್ಗಳಲ್ಲೂ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿದೆ. ಕೋವಿಡ್ 19 ವ್ಯಾಕ್ಸಿನ್ ಸಾಧ್ಯತೆಗಳ ಬಗ್ಗೆ ಸಂತಸ, ಸಮಾಧಾನ, ಆತ್ಮವಿಶ್ವಾಸವಿರಲಿ ಎನ್ನುವುದೂ ಇದರ ಉದ್ದೇಶ.
ಜಗತ್ತಿನಾದ್ಯಂತ ಕೋವಿಡ್ ನಿಯಂತ್ರಣಕ್ಕಾಗಿ ವ್ಯಾಕ್ಸಿನೇಷನ್ ನೀಡಲಾಗುತ್ತಿದೆ. ಈ ಹೊಸ ಸ್ಟಿಕ್ಕರ್ ಪ್ಯಾಕ್ನ ಉದ್ದೇಶ ಕೋವಿಡ್ ಲೆಕ್ಕಿಸದೆ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರಿಗೂ ಮುಖ್ಯವಾಗಿ ವೈದ್ಯರು, ನರ್ಸ್ಗಳು ಸೇರಿದಂತೆ ಆರೋಗ್ಯ ಇಲಾಖೆಯಲ್ಲಿರುವವರಿಗೆ ಪ್ರಶಂಸೆ ಹಾಗೂ ವ್ಯಾಕ್ಸಿನ್ ಗುರಿಯನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡಿಜಿಟಲ್ ಮಾಧ್ಯಮ ತಂಡದ ಮುಖಂಡರಾದ ಆ್ಯಂಡಿ ಪ್ಯಾಂಟಿಸನ್ ಹೇಳಿದರು.
ಇದರ ಹೊರತಾಗಿಯೂ ಡಬ್ಲ್ಯೂಹೆಚ್ಒ ಹಾಗೂ ಯುನಿಸೆಫ್, ಬೇರೆ ರಾಜ್ಯ ಸರ್ಕಾರಗಳು, ಸಂಘಟನೆಗಳು ಜೊತೆಗೂಡಿ ಕೋವಿಡ್ ಸಹಾಯವಾಣಿಯನ್ನು ಸಹ ಪ್ರಾರಂಭಿಸಲಾಗಿದೆ. ಕೋವಿಡ್ ನೋಂದಣಿ ಹಾಗೂ ಮಾಹಿತಿಯನ್ನು ರವಾನಿಸುವ ಸಲುವಾಗಿ ಭಾರತ, ಅರ್ಜೆಂಟಿನಾ, ಬ್ರೆಜಿಲ್, ಇಂಡೊನೇಷ್ಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ಇತರೆ ರಾಷ್ಟ್ರಗಳು ಕೋವಿಡ್ ಸಹಾಯವಾಣಿಯನ್ನು ಬಳಕೆ ಮಾಡುತ್ತಿದೆ. ಮೊದಲ ಐದು ದಿನಗಳಲ್ಲೇ ಇಂಡೊನೇಷ್ಯಾದ 5 ಲಕ್ಷ ಆರೋಗ್ಯ ಕಾರ್ಯಕರ್ತರು ಸಹಾಯವಾಣಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಮೈಗೌ ಎಂಬ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿರುವ ಭಾರತಕ್ಕೆ ಚಾಟ್ಬಾಟ್ ಎಂಬ ಸಾಫ್ಟ್ವೇರ್ ಮೂಲಕ ಕೋವಿಡ್ಗೆ ಸಂಬಂಧಿಸಿದ ಮಾಹಿತಿಯನ್ನು ನೀಡಲಾಗುತ್ತಿದೆ. ಇದು ಕೊರೋನಾ ಸಹಾಯಕ ಡೆಸ್ಕ್ ಆಗಿದ್ದು, ಕೊರೋನಾ ಕುರಿತಾದ ಮಾಹಿತಿ ರವಾನಿಸುತ್ತಿದೆ ಮತ್ತು ಇದು ನೀಡುವ ಮಾಹಿತಿ ಮೂವತ್ತು ಮಿಲಿಯನ್ ಜನರ ಗಡಿ ದಾಟುತ್ತಿದೆ.
ಒಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಾದ ವಾಟ್ಸ್ಆ್ಯಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಕೂಡ ಕೋವಿಡ್ ಅನ್ನು ಶತಾಯಗತಾಯ ತಡೆಗಟ್ಟಲೇಬೇಕೆಂದು ಪಣತೊಟ್ಟಿದ್ದು, ಸರ್ಕಾರ, ಆರೋಗ್ಯ ಸಂಸ್ಥೆ, ಇನ್ನಿತರ ಸಂಘಟನೆಗಳ ಜೊತೆ ಕೈ ಜೋಡಿಸಿದೆ. ಈ ಸಹಾಯ ಹಸ್ತ ದೇಶ, ಗಡಿಯ ಎಲ್ಲೆಯನ್ನು ಮೀರಿದೆ ಎಂಬುದೇ ಸಮಾಧಾನ.
First published:
April 8, 2021, 3:28 PM IST