ಜಿಯೋ ನಿಮಿಷಕ್ಕೆ 6 ಪೈಸೆ ಐಯುಸಿ ದರ ವಿಧಿಸಲು ಏನು ಕಾರಣ? ಮಿಸ್ಡ್ ಕಾಲ್ ಭೂತದ ಪಾತ್ರವೇನು?

ಕಳೆದ ಮೂರು ವರ್ಷದಲ್ಲಿ ಏರ್ಟೆಲ್, ವೊಡಾಫೋನ್ ಸಂಸ್ಥೆಗಳಿಗೆ ಐಯುಸಿ ದರವಾಗಿ 13,500 ಕೋಟಿ ರೂ ಪಾವತಿ ಮಾಡಿರುವುದಾಗಿ ರಿಲಾಯನ್ಸ್ ಜಿಯೋ ಸಂಸ್ಥೆ ಹೇಳಿಕೊಂಡಿದೆ. ಐಯುಸಿ ದರ ಶೂನ್ಯ ಆಗುವವರೆಗೂ ಗ್ರಾಹಕರಿಗೆ ಈ ಹೊರೆ ವರ್ಗಾಯಿಸುವುದಾಗಿ ಜಿಯೋ ಸ್ಪಷ್ಟಪಡಿಸಿದೆ.

Vijayasarthy SN | news18
Updated:October 9, 2019, 6:50 PM IST
ಜಿಯೋ ನಿಮಿಷಕ್ಕೆ 6 ಪೈಸೆ ಐಯುಸಿ ದರ ವಿಧಿಸಲು ಏನು ಕಾರಣ? ಮಿಸ್ಡ್ ಕಾಲ್ ಭೂತದ ಪಾತ್ರವೇನು?
ರಿಲಾಯನ್ಸ್ ಜಿಯೋ
  • News18
  • Last Updated: October 9, 2019, 6:50 PM IST
  • Share this:
ರಿಲಾಯನ್ಸ್ ಜಿಯೋ ಸಂಸ್ಥೆ ಇದೇ ಮೊದಲ ಬಾರಿಗೆ ತನ್ನ ವಾಯ್ಸ್ ಕಾಲ್​ಗೆ ದರ ವಿಧಿಸುತ್ತಿದೆ. ಟೆಲಿಕಾಂ ಆಪರೇಟರ್​ಗಳ ವ್ಯಾವಹಾರಿಕ ತಿಕ್ಕಾಟದ ಮಧ್ಯೆ ತನ್ನ ಗ್ರಾಹಕರಿಗೆ ಐಯುಸಿ ದರ ವಿಧಿಸುವುದು ಅನಿವಾರ್ಯ ಎಂದು ಜಿಯೋ ಹೇಳಿಕೊಂಡಿದೆ. ಏರ್​ಟೆಲ್, ವೊಡಾಫೋನ್​ನಂತ ಬೇರೆ ನೆಟ್ವರ್ಕ್​ಗೆ ಕರೆ ಮಾಡುವ ಜಿಯೋ ಗ್ರಾಹಕರು ನಿಮಿಷಕ್ಕೆ 6 ಪೈಸೆ ದರ ತೆರಬೇಕಾಗಿದೆ. ಇಷ್ಟಾದರೂ ಇದು ಬೇರೆ ಟೆಲಿಕಾಂ ಆಪರೇಟುಗಳು ವಿಧಿಸುವ ದರಕ್ಕಿಂತ ಕಡಿಮೆಯೇ ಆಗಿದೆ.

ಏನಿದು ಐಯುಸಿ?:

ಐಯುಸಿ ಎಂದರೆ ಇಂಟರ್​ ಕನೆಕ್ಟ್ ಯೂಸೇಜ್ ಚಾರ್ಜ್. ಬೇರೆ ನೆಟ್ವರ್ಕ್​ಗೆ ಮಾಡುವ ಕರೆಗೆ ವಿಧಿಸಲಾಗುವ ದರ ಇದಾಗಿದೆ. ಅಂದರೆ, ಜಿಯೋ ನೆಟ್ವರ್ಕ್​ನಿಂದ ಏರ್​ಟೆಲ್​ನಂತಹ ಬೇರೆ ನೆಟ್ವರ್ಕ್​ಗೆ ಗ್ರಾಹಕರು ಕರೆ ಮಾಡಿದಾಗ, ಆ ನೆಟ್ವರ್ಕ್​ಗೆ ಜಿಯೋ ಸಂಸ್ಥೆ ಇಂತಿಷ್ಟು ದರ ಪಾವತಿಸಬೇಕಾಗುತ್ತದೆ. ಈ ದರವೇ ಐಯುಸಿ ಆಗಿದೆ. ಟ್ರಾಯ್ ಸಂಸ್ಥೆಯೇ ಈ ಐಯುಸಿ ದರವನ್ನು ನಿಗದಿ ಮಾಡಿದೆ. 2017ಕ್ಕಿಂತ ಮುಂಚೆ 14 ಪೈಸೆ ಇದ್ದ ಐಯುಸಿ ದರವನ್ನು ಜಿಯೋ 6 ಪೈಸೆಗೆ ಇಳಿಕೆ ಮಾಡಿದೆ.

ಇದನ್ನೂ ಓದಿ: ಭಾರತೀಯರು ಇಂತಹ ಫೋನ್​​ ಇಷ್ಟ ಪಡ್ತಾರಂತೆ! ಸಮೀಕ್ಷೆಯಲ್ಲಿ ಮೊದಲ ಸ್ಥಾನ ಯಾವ ಸ್ಮಾರ್ಟ್​ಫೋನಿಗೆ ಗೊತ್ತಾ?

ಏರ್​ಟೆಲ್, ವೊಡಾಫೋನ್ ಸಂಸ್ಥೆಗಳು ಐಯುಸಿ ದರವನ್ನು ತನ್ನ ಗ್ರಾಹಕರಿಂದಲೇ ಭರಿಸುತ್ತದೆ. ಜಿಯೋ ಸಂಸ್ಥೆ ಇದೂವರೆಗೂ ಈ ದರವನ್ನು ತಾನೇ ಭರಿಸುತ್ತಿತ್ತು. ಕಳೆದ ಮೂರು ವರ್ಷದಲ್ಲಿ ಜಿಯೋ ಸಂಸ್ಥೆ ಬರೋಬ್ಬರಿ 13.5 ಸಾವಿರ ಕೋಟಿ ರೂ ಐಯುಸಿ ಮೊತ್ತವನ್ನು ಇತರ ಟೆಲಿಕಾಂ ಆಪರೇಟರುಗಳಿಗೆ ಪಾವತಿ ಮಾಡಿದೆ. ಈ ಹಿನ್ನೆಲೆಯಲ್ಲಿ ಇನ್ಮುಂದಿನ ವೆಚ್ಚವನ್ನು ತನ್ನ ಗ್ರಾಹಕರ ಮೇಲೆ ಹಾಕುವುದು ಅನಿವಾರ್ಯ ಎಂಬುದು ಜಿಯೋ ಹೇಳಿಕೆ.ಜಿಯೋಗೆ ಮಿಸ್ಡ್ ಕಾಲ್ ಕಂಟಕ:ಜಿಯೋ ಸಂಸ್ಥೆ ನಿನ್ನೆಯವರೆಗೂ ಯಾವುದೇ ನೆಟ್ವರ್ಕ್​ಗೆ ಕಾಲ್ ಮಾಡಿದರೂ ದರ ವಿಧಿಸುತ್ತಿರಲಿಲ್ಲ. ಅತ್ತ, ಏರ್​ಟೆಲ್ ಮತ್ತು ವೊಡಾಫೋನ್​ನ 2ಜಿ ಗ್ರಾಹಕರು ವಾಯ್ಸ್ ಕಾಲ್​ಗೆ ದುಬಾರಿ ದರ ತೆರುತ್ತಾರೆ. ಈ ಹಿನ್ನೆಲೆಯಲ್ಲಿ ಆ ನೆಟ್ವರ್ಕ್​ನ ಗ್ರಾಹಕರು ಜಿಯೋ ಗ್ರಾಹಕರಿಗೆ ಮಿಸ್ಡ್ ಕಾಲ್ ಕೊಡುವ ಪ್ರಮಾಣ ಹೆಚ್ಚಾಗಿದೆ. ಜಿಯೋ ಹೇಳಿಕೊಂಡಿರುವ ಪ್ರಕಾರ ಜಿಯೋ ನೆಟ್ವರ್ಕ್​ಗೆ ಪ್ರತೀ ದಿನ 25-30 ಕೋಟಿಯಷ್ಟು ಮಿಸ್ಡ್ ಕಾಲ್ ಬರುತ್ತವಂತೆ. ಇದರಿಂದ ಜಿಯೋ ಗ್ರಾಹಕರು ಮಿಸ್ಡ್ ಕಾಲ್​ಗೆ ಪ್ರತಿಯಾಗಿ ಮಾಡುವ ಫೋನ್ ಕಾಲ್ ಪ್ರಮಾಣ 65-75 ಕೋಟಿ ನಿಮಿಷ ಎಂಬ ಅಂದಾಜು ಇದೆ. ನಿಮಿಷಕ್ಕೆ 6 ಪೈಸೆಯಂತೆ ಜಿಯೋ ಸಂಸ್ಥೆಯೇ ಈ ಹೊರೆಯನ್ನು ಹೊತ್ತುಕೊಳ್ಳುತ್ತಾ ಬಂದಿತ್ತು. ಈಗ ಇದನ್ನು ಗ್ರಾಹಕರ ಹೆಗಲಿಗೇರಿಲು ಜಿಯೋ ನಿರ್ಧರಿಸಿದೆ.

ಇನ್ನು, 2017ರಲ್ಲಿ ಇಂಟರ್​ಕನೆಕ್ಟ್ ಯೂಸೇಜ್ ದರವನ್ನು 14 ಪೈಸೆಯಿಂದ 6 ಪೈಸೆಗೆ ಇಳಿಕೆ ಮಾಡಿದ್ದ ಟೆಲಿಕಾಂ ಆಪರೇಟರ್​ಗಳ ನಿಯಂತ್ರಕ ಸಂಸ್ಥೆ (ಟ್ರಾಯ್) ಮುಂದಿನ ವರ್ಷ ಈ ದರವನ್ನು ಶೂನ್ಯಕ್ಕೆ ಇಳಿಸುವ ಸಾಧ್ಯತೆ ಇದೆ. ಐಯುಸಿ ದರ ಸೊನ್ನೆಯಾಗುವವರೆಗೂ ಜಿಯೋ ತನ್ನ ಗ್ರಾಹಕರಿಗೆ ನಿಮಿಷಕ್ಕೆ 6 ಪೈಸೆ ಐಯುಸಿ ದರ ಹೇರಲು ನಿರ್ಧರಿಸಿದೆ. ಆದರೆ, ಇದು ಅನ್ಯ ನೆಟ್ವರ್ಕ್​ಗೆ ಮಾಡಲಾಗುವ ಕರೆಗೆ ಮಾತ್ರ ವಿಧಿಸುವ ದರವಾಗಿದೆ. ಜಿಯೋದಿಂದ ಜಿಯೋಗೆ ಕರೆ ಉಚಿತವಾಗಿರುತ್ತದೆ. ವಾಟ್ಸಾಪ್, ಫೇಸ್ಬುಕ್ ಇತ್ಯಾದಿ ಇಂಟರ್ನೆಟ್ ಆಧಾರಿತ ಕರೆಗಳಿಗೆ ಯಾವುದೇ ದರ ವಿಧಿಸಲಾಗುವುದಿಲ್ಲ. ಕೇವಲ ಇಂಟರ್ನೆಟ್ ಡೇಟಾಗೆ ಮಾತ್ರ ಹಣ ಪಾವತಿ ಮಾಡಿದರೆ ಸಾಕಾಗುತ್ತದೆ.


ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ