TikTok: ಟಿಕ್ ಟಾಕ್ ನಿಷೇಧ: ಮತ್ತೆ ಕೋರ್ಟ್​ ಮೆಟ್ಟಿಲೇರಲಿದೆಯಾ ಜನಪ್ರಿಯ ಆ್ಯಪ್..!

ದೇಶದ ಭದ್ರತೆಗೆ ಅಪಾಯವಿದೆ ಎಂಬ ವಾದವನ್ನು ಮುಂದಿಟ್ಟಿದ್ದರು. ಹೀಗಾಗಿ ಯಾವುದೇ ಕಾರಣಕ್ಕೂ ಆ್ಯಪ್​ ಮೇಲಿನ  ನಿಷೇಧವನ್ನು ತೆರವುಗೊಳಿಸಬಾರದು ಎಂದು ಮನವಿ ಮಾಡಿದರು.

news18-kannada
Updated:June 29, 2020, 10:22 PM IST
TikTok: ಟಿಕ್ ಟಾಕ್ ನಿಷೇಧ: ಮತ್ತೆ ಕೋರ್ಟ್​ ಮೆಟ್ಟಿಲೇರಲಿದೆಯಾ ಜನಪ್ರಿಯ ಆ್ಯಪ್..!
tiktok
  • Share this:
ನವದೆಹಲಿ(ಜೂನ್ 29): ಭಾರತ-ಚೀನಾ ಗಡಿ ಸಂಘರ್ಷದ ಬೆನ್ನಲ್ಲೇ ಇತ್ತ ಚೀನೀ ಆ್ಯಪ್​ಗಳನ್ನು ನಿಷೇಧಿಸಬೇಕೆಂಬ ಒತ್ತಾಯಗಳು ಕೇಳಿ ಬಂದಿದ್ದವು. ಅಲ್ಲದೆ ಇದಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಆಂದೋಲನ ಕೂಡ ನಡೆಸಲಾಗಿತ್ತು. ಅದರಂತೆ ಇದೀಗ ಕೇಂದ್ರ ಸರ್ಕಾರ ಚೀನಾದ 59 ಆ್ಯಪ್​ಗಳನ್ನು ನಿಷೇಧಿಸಿದೆ. ಈ ಅಪ್ಲಿಕೇಶನ್​ಗಳಲ್ಲಿ ಅತ್ಯಂತ ಜನಪ್ರಿಯ ಆ್ಯಪ್ ಟಿಕ್ ಟಾಕ್ ಕೂಡ ಸೇರಿಕೊಂಡಿದೆ ಎಂಬುದು ವಿಶೇಷ.

ಚೀನಾ ಮೂಲದ ಬೈಟ್ ಡ್ಯಾನ್ಸ್​ ಕಂಪೆನಿ ನಿರ್ಮಾಣದ ವಿಡಿಯೋ ಆ್ಯಪ್ ಭಾರತದ ನಂಬರ್ 1 ಮನರಂಜನಾ ಅಪ್ಲಿಕೇಶನ್​ ಆಗಿ ಗುರುತಿಸಿಕೊಂಡಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಭಾವವನ್ನು ಹೊಂದಿದ್ದ ಈ ವಿಡಿಯೊ ಬ್ಲಾಗಿಂಗ್‌ ವೆಬ್‌ಸೈಟ್‌ ಕಳೆದ ವರ್ಷವಷ್ಟೇ ಲಾಭದತ್ತ ಮುಖ ಮಾಡಿತ್ತು.

ಇಕನಾಮಿಕ್ಸ್ ಟೈಮ್ಸ್ ವರದಿ ಪ್ರಕಾರ, ಬೈಟ್‌ಡ್ಯಾನ್ಸ್‌ ಕಂಪೆನಿಯು 2019ರ ಹಣಕಾಸು ವರ್ಷದಲ್ಲಿಒಟ್ಟು 43 ಕೋಟಿ ರೂ. ಆದಾಯವನ್ನು ದಾಖಲಿಸಿದೆ. ಈ ಪೈಕಿ 3.4 ಕೋಟಿ ರೂ. ಲಾಭವನ್ನು ಭಾರತದಿಂದ ಗಳಿಸಿಕೊಂಡಿದೆ.

ಭಾರತದಲ್ಲಿ ಟಿಕ್ ಟಾಕ್ ಬಳಕೆದಾರರ ಸಂಖ್ಯೆಯು 20 ಕೋಟಿಯನ್ನು ಮೀರಿತ್ತು. ಇದರ ಬೆನ್ನಲ್ಲೇ ಡೇಟಾ ಸೋರಿಕೆ ಸೇರಿದಂತೆ ನಾನಾ ವಿವಾದಗಳು ಕೇಳಿ ಬಂದಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಕಂಪೆನಿ, ಭಾರತದಲ್ಲೇ ಡೇಟಾ ಸೆಂಟರ್‌ ಅನ್ನು ಕೂಡ ತೆರೆಯುವುದಾಗಿ ಘೋಷಣೆ ಮಾಡಿತ್ತು.

ಭಾರತೀಯ ಬಳಕೆದಾರರಿಗೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಸೇವೆಯನ್ನು ಒದಗಿಸಲಿದೆ. ಅಲ್ಲದೆ ಮುಂದಿನ 10 ತಿಂಗಳಲ್ಲಿಸುಮಾರು 10 ಕೋಟಿ ಡಾಲರ್‌ ವೆಚ್ಚದಲ್ಲಿ ಡೇಟಾ ಕೇಂದ್ರವನ್ನು ತೆರೆಯಲಿದೆ. ದೇಶದಲ್ಲಿ ಒಟ್ಟು 100 ಕೋಟಿ ಡಾಲರ್‌ ಹೂಡಿಕೆ ಮಾಡಲು ನಿರ್ಧರಿಸಿರುವುದಾಗಿ ಬೈಟ್​ಡ್ಯಾನ್ಸ್​ ಕಂಪೆನಿ ಹೇಳಿಕೊಂಡಿತ್ತು.

ಹಾಗೆಯೇ ಕಳೆದ ಏಪ್ರಿಲ್​ನಲ್ಲಿ ಭಾರತ ಹಾಗೂ ಇತರ ದೇಶಗಳಲ್ಲಿ ಸೇರಿ 10,000 ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದಾಗಿ ಬೈಟ್‌ಡ್ಯಾನ್ಸ್ ಘೋಷಿಸಿತ್ತು. ಭಾರತದಲ್ಲಿ ಸದ್ಯ ಬೈಟ್ ಡ್ಯಾನ್ಸ್ 500 ಉದ್ಯೋಗಿಗಳನ್ನು ಹೊಂದಿದೆ. ಹಾಗೆಯೇ ಈ ವರ್ಷದ ಕಂಪೆನಿ ಮತ್ತಷ್ಟು ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಉದ್ಯೋಗಿಗಳ ಸಂಖ್ಯೆಯನ್ನು 1,000 ಕ್ಕಿಂತ ಹೆಚ್ಚಿಸುವ ನಿರೀಕ್ಷೆಯಿತ್ತು.

ಆದರೆ ಕಳೆದ ಕೆಲ ದಿನಗಳ ಹಿಂದೆ ಗಡಿಯಲ್ಲಿ ಉಂಟಾದ ಸಂಘರ್ಷದಿಂದ ಅನೇಕರು ಟಿಕ್ ಟಾಕ್ ಆ್ಯಪ್ ನ್ನು ಅನ್​ಇನ್​ಸ್ಟಾಲ್ ಮಾಡಿದ್ದರು. ಇದೀಗ ಅದರ ಮುಂದುವರೆದ ಭಾಗದಂತೆ ಮೊಬೈಲ್ ಬಳಕೆದಾರರ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ ಮತ್ತು ಖಾಸಗಿತನಕ್ಕೆ ಅಪಾಯವಿದೆ ಎಂಬ ಕಾರಣದೊಂದಿಗೆ ಭಾರತ ಸರ್ಕಾರ ಟಿಕ್ ಟಾಕ್ ಸೇರಿ 59 ಆ್ಯಪ್​ಗಳ ಮೇಲೆ ನಿಷೇಧ ಹೇರಿದೆ.ಈ ಹಿಂದೆ ಬ್ಯಾನ್ ಆಗಿತ್ತು ಟಿಕ್​ ಟಾಕ್..!
ಕಳೆದ ಏಪ್ರಿಲ್ 18 ರಿಂದ ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪ್ ಸ್ಟೋರ್​ನಿಂದ ಟಿಕ್​ ಟಾಕ್​ ಆ್ಯಪ್​ ಅನ್ನು ಗೂಗಲ್​ ಮತ್ತು ಆ್ಯಪಲ್​ ಸ್ಟೋರ್​ನಿಂದ ತೆಗೆದು ಹಾಕುವಂತೆ ಎಲೆಕ್ಟ್ರಾನಿಕ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚನೆ ನೀಡಿತ್ತು. ಯುವಜನತೆ ಟಿಕ್​ಟಾಕ್​ನಲ್ಲಿ ಅಸಭ್ಯ ವಿಡಿಯೋಗಳನ್ನು ಹರಿಯ ಬಿಡುತ್ತಿದ್ದಾರೆ ಎಂಬ ವ್ಯಾಪಕ ಟೀಕೆಗಳು ಬಂದ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿತ್ತು.

ಇನ್ನು ಈ ಬಗ್ಗೆ ತಮಿಳುನಾಡು ಸರ್ಕಾರ  ಯುವಜನರು ಟಿಕ್​ ಟಾಕ್​ ಆ್ಯಪ್​ ಮೂಲಕ ಸಿದ್ಧಪಡಿಸುವ ವೀಡಿಯೋಗಳನ್ನು ತಡೆಹಿಡಿಯ ಬೇಕೆಂದು ಮದ್ರಾಸ್​ ಹೈಕೋರ್ಟ್​​ ಮೊರೆ ಹೋಗಿತ್ತು. ಇದರ ಬಗ್ಗೆ  ನ್ಯಾ.ಎಸ್‍ಎಸ್ ಸುಂದರ್ ಹಾಗೂ ನ್ಯಾ. ಎನ್ ಕಿರುಬಕರನ್ ನೇತೃತ್ವದ ದ್ವಿಸದಸ್ಯ ಪೀಠ ಅರ್ಜಿಯ ವಿಚಾರಣೆಯನ್ನು ನಡೆಸಿತ್ತು.

ಟಿಕ್‍ಟಾಕ್ ಪರವಾಗಿ  ವಿಚಾರಣೆಗೆ ಹಾಜರಾಗಿದ್ದ ಹಿರಿಯ ವಕೀಲ ಐಸಾಕ್ ಮೋಹನ್‍ಲಾಲ್, ಅಶ್ಲೀಲ ಮತ್ತು ನಗ್ನ ವಿಡಿಯೋಗಳನ್ನು ಅಪ್ಲೋಡ್ ಮಾಡದಂತೆ ಆ್ಯಪ್​ನಲ್ಲಿ ಟೆಕ್ನಾಲಜಿಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಈ ಹಿಂದಿನ ವಿಚಾರಣೆಯ ಸಮಯದಲ್ಲಿ ಕೋರ್ಟ್ ಎತ್ತಿದ ಆಕ್ಷೇಪಗಳಿಗೆ ಸಂಬಂಧಿಸಿದಂತೆ ನಾವು ವಿವಿಧ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ಹಾಗೆಯೇ ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿದ್ದ ಅರವಿಂದ್ ದತಾರ್ ಅವರು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿ ಆನ್‍ಲೈನ್ ಭಾಷಣಕ್ಕೆ ನಿರ್ಬಂಧ ಹೇರಲು ಸಾಧ್ಯವಿಲ್ಲ. ಸಂವಿಧಾನ ವಾಕ್ ಸ್ವಾತಂತ್ರ್ಯಕ್ಕೆ ಅನುಮತಿ ನೀಡಿದೆ. ನ್ಯಾಯಾಂಗದ ಮೂಲಕ ಬಳಕೆದಾರರ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಲು ಆಗುವುದಿಲ್ಲ. ಅಪ್ಲಿಕೇಶನ್ ನಿಷೇಧ ಮಾಡದೇ ಬಳಕೆದಾರರ ಸುರಕ್ಷತೆಯ ಬಗ್ಗೆ ಗಮನ ಹರಿಸುವುದು ಉತ್ತಮ ಎಂದು ತನ್ನ ಅಭಿಪ್ರಾಯವನ್ನು ಮಂಡಿಸಿದರು.

ಇದೇ ವೇಳೆ ಅರ್ಜಿದಾರರು ಚೀನಾ ದೇಶದ ಅಪ್ಲಿಕೇಶನ್ ಇದಾಗಿದ್ದು, ಇದರಿಂದಾಗಿ ದೇಶದ ಭದ್ರತೆಗೆ ಅಪಾಯವಿದೆ ಎಂಬ ವಾದವನ್ನು ಮುಂದಿಟ್ಟಿದ್ದರು. ಹೀಗಾಗಿ ಯಾವುದೇ ಕಾರಣಕ್ಕೂ ಆ್ಯಪ್​ ಮೇಲಿನ  ನಿಷೇಧವನ್ನು ತೆರವುಗೊಳಿಸಬಾರದು ಎಂದು ಮನವಿ ಮಾಡಿದರು. ಎರಡು ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ಬಳಕೆದಾರರಿಗೆ ರಕ್ಷಣೆ ನೀಡಬೇಕೆಂದು ಟಿಕ್ ಟಾಕ್ ಕಂಪನಿಗೆ ಸೂಚಿಸಿತ್ತು. ಅಲ್ಲದೆ ಮಕ್ಕಳ ರಕ್ಷಣೆಗೆ ವಿಶೇಷ ಗಮನಹರಿಸಬೇಕೆಂದು ಹೇಳಿ ತಡೆಯಾಜ್ಞೆಯನ್ನು ತೆರವುಗೊಳಿಸಿತು.

ಇದೀಗ ಮತ್ತೊಮ್ಮೆ ಟಿಕ್ ಟಾಕ್ ಮೇಲಿನ ನಿಷೇಧದಿಂದ ಬೈಟ್​ ಡ್ಯಾನ್ಸ್ ಕಂಪೆನಿಯು ಕೋರ್ಟ್​ ಮೆಟ್ಟಿಲೇರಲಿದೆಯಾ? ಇದಕ್ಕೆ ಸರ್ಕಾರ ಹೇಗೆ ಮರುತ್ತರ ನೀಡಲಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
First published: June 29, 2020, 10:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading