ಕೊರೋನಾ ಸಂಕಷ್ಟದ ಸಮಯದಲ್ಲಿ ವಿಶ್ವವೇ ಲಾಕ್ಡೌನ್ ಎಂಬ ಬಂಧನಕ್ಕೆ ಒಳಗಾಗಿತ್ತು. ಪ್ರತಿಯೊಂದು ವಿಭಾಗದಲ್ಲೂ ಕಷ್ಟನಷ್ಟಗಳೇ ಉಂಟಾಗುತ್ತಿವೆ. ಕೊರೊನಾ ನಂತರದ ಬದುಕಿನ ಬಗ್ಗೆ ಹೇಳುವಾಗ ಸಾಂಕ್ರಾಮಿಕವು ತನಗಾಗಿ ಬದುಕುವ ಮೂಲಭೂತ ಅಂಶವನ್ನೇ ಅಲುಗಾಡಿಸಿರುವುದು ಕಂಡುಬರುತ್ತದೆ ಹಾಗೂ ಪ್ರಕೃತಿ ಮತ್ತು ಸಹ ಮಾನವರೊಂದಿಗೆ ಸಾಮರಸ್ಯದಿಂದ ಬದುಕುವ ಅಗತ್ಯವನ್ನು ಎತ್ತಿ ತೋರಿಸಿರುವುದು ನಿಚ್ಚಳವಾಗಿದೆ. ಎಲ್ಲಿಂದಲೋ ಬಂದ ಸೂಕ್ಷ್ಮಾಣುಜೀವಿಯಿಂದ ಮಾನವ ಜೀವನವು ಶೀಘ್ರವಾಗಿ ಬದಲಾಗಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಅನಿಶ್ಚಿತತೆಯೆಂಬುದು ಸದಾ ಜೀವನದೊಂದಿಗೇ ಪಯಣಿಸುತ್ತಿರುತ್ತದೆ ಎಂಬುದನ್ನು ತೋರಿಸಿದೆ ಎಂದು ಹೆಚ್ಚಿನ ಅನುಭವಿಗಳು ಹೇಳಿದ್ದಾರೆ. ಕೈಗಾರಿಕಾ ವಲಯದಲ್ಲಿ ಕೂಡ ಕೋವಿಡ್ನ ಕರಿನೆರಳು ದಟ್ಟವಾಗಿ ಪ್ರಭಾವ ಬೀರಿವೆ.
ಹೆಚ್ಚಿನ ಕಂಪೆನಿಗಳು ವರ್ಕ್ ಫ್ರಂ ಹೋಮ್ ಆಯ್ಕೆಯನ್ನು ತನ್ನ ಉದ್ಯೋಗಿಗಳಿಗೆ ನೀಡಿವೆ. ಇನ್ನು ಕೆಲವು ಕಂಪೆನಿಗಳು ಶಿಫ್ಟ್ ಆಧಾರದಲ್ಲಿ ಕೆಲಸ ಮಾಡುತ್ತಿವೆ. ಇನ್ನು ಬಂಬಲ್ ಇಂಕ್ ಎಂಬ ಕಂಪೆನಿಯೊಂದು ತನ್ನ ಉದ್ಯೋಗಿಗಳಿಗೆ ಒಂದು ವಾರ ರಜಾದಿನವನ್ನು ಆನಂದಿಸುವ ಆಫರ್ ಒಂದನ್ನು ನೀಡಿದ್ದು ಕೊರೋನಾದಿಂದ ಉಂಟಾದ ನಷ್ಟವನ್ನು ಮರೆಸಲು ಕೆಲಸದಿಂದ ಕೊಂಚ ಕಾಲ ವಿನಾಯಿತಿಯನ್ನು ನೀಡಿದೆ. ಡೇಟಿಂಗ್ ಮತ್ತು ರಿಲೇಶನ್ಶಿಪ್ ಆ್ಯಪ್ ಆಗಿರುವ ಇದು 700 ಉದ್ಯೋಗಿಗಳನ್ನು ಹೊಂದಿದೆ. ಕೊರೋನಾದಿಂದ ಕಂಗೆಟ್ಟಿದ್ದ ಕೈಗಾರಿಕಾ ವಲಯವನ್ನು ಪುನಶ್ಚೇತನಗೊಳಿಸಲು ಕಂಪೆನಿಗಳು ಹಲವಾರು ವಿಧಾನಗಳನ್ನು ಅನುಸರಿಸುತ್ತಿವೆ.
ಉದ್ಯೋಗಿಗಳನ್ನು ಪುನಃ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಪೂರ್ಣ ಆನಂದದಿಂದ ಕೆಲಸ ಮಾಡಲು ಕಂಪೆನಿಗಳು ಬೇರೆ ಬೇರೆ ಪ್ಯಾಕೇಜ್ಗಳನ್ನು ಘೋಷಿಸುತ್ತಿವೆ. ಅದರಲ್ಲೊಂದು ರಜಾದಿನಗಳನ್ನು ಕಳೆಯುವುದಾಗಿದೆ. ಕೆಲವೊಂದು ಕಂಪೆನಿಗಳು ಉದ್ಯೋಗಿಗಳ ಸಂಪೂರ್ಣ ವ್ಯಾಕ್ಸಿನೇಶನ್ ಪ್ರಕ್ರಿಯೆಯ ಜವಬ್ದಾರಿಯನ್ನು ತೆಗೆದುಕೊಂಡಿದ್ದು ಇನ್ನು ಕೆಲವು ಕಂಪೆನಿಗಳು ಶಾಶ್ವತ ವರ್ಕ್ ಫ್ರಂ ಹೋಮ್ ಯೋಜನೆಯನ್ನು ಕೈಗೊಂಡಿವೆ. ಆದರೆ ಈ ಡೇಟಿಂಗ್ ಆ್ಯಪ್ ರಜಾದಿನವನ್ನು ಒಂದು ಸುಂದರ ತಾಣಗಳಲ್ಲಿ ಕಳೆಯುವ ಯೋಜನೆಯೊಂದನ್ನು ತನ್ನ ಉದ್ಯೋಗಿಗಳಿಗೆ ನೀಡಿದೆ. ಹೆಚ್ಚು ಕಡಿಮೆ ಮೀಟಿಂಗ್ನಲ್ಲೇ ಕಳೆಯುವ ಉದ್ಯೋಗಿಗಳು ಮನೆಯೊಳಗೆ ಬಂಧಿಯಾಗಿದ್ದಾರೆ
ಮನೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಹೆಚ್ಚಿನ ಒತ್ತಡಗಳಿಗೆ ಒಳಗಾಗುತ್ತಿದ್ದಾರೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಹೀಗಾಗಿ ಹೆಚ್ಚಿನ ಉದ್ಯೋಗಿಗಳು ಕೆಲಸವನ್ನು ತೊರೆಯುತ್ತಿದ್ದಾರೆ ಇದರಿಂದ ಉದ್ಯೋಗಿಗಳಿಲ್ಲದೆ ಕಂಪೆನಿಗಳಿಗೆ ನಷ್ಟವುಂಟಾಗುತ್ತಿದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಹಾಗಾಗಿ ಬಂಬಲ್ ಕಂಪೆನಿಯು ತನ್ನ ಸ್ವಂತ ಖರ್ಚಿನಲ್ಲಿ ತನ್ನ ಉದ್ಯೋಗಿಗಳಿಗೆ ರಜಾದಿನಗಳನ್ನು ಆಯೋಜಿಸಿದೆ. ರಜಾದಿನದಲ್ಲಿ ಬರುವ ಪ್ರತಿಯೊಂದು ಖರ್ಚನ್ನು ಕಂಪೆನಿಯೇ ಹೊತ್ತುಕೊಂಡಿದೆ. ಉದ್ಯೋಗಿಗಳು ಈ ಸಮಯದಲ್ಲಿ ಎಲ್ಲಿಗೆ ಬೇಕಾದರೂ ರಜಾ ದಿನಗಳಿಗೆ ಹೋಗಬಹುದು. ಅಲ್ಲಿನ ಎಲ್ಲಾ ಖರ್ಚು ವೆಚ್ಚಗಳನ್ನು ಕಂಪೆನಿಯೇ ಹೊತ್ತುಕೊಳ್ಳಲಿದೆ.
ಕೋವಿಡ್ನಿಂದ ಉದ್ಯೋಗಿಗಳು ಚೇತರಿಕೆಯನ್ನು ಕಂಡುಕೊಳ್ಳಲಿ ಎಂಬುದು ಕಂಪೆನಿಯ ನಿರ್ಧಾರವಾಗಿದೆ. ಈ ರೀತಿಯ ರಜಾದಿನದ ಪ್ಯಾಕೇಜ್ ಅನ್ನು ಉದ್ಯೋಗಿಗಳಿಗೆ ನೀಡುವುದರಿಂದ ಅವರು ಇನ್ನಷ್ಟು ಏಕಾಗ್ರತೆಯಿಂದ ಕೆಲಸ ಮಾಡುತ್ತಾರೆ ಮತ್ತು ಅವರ ಉತ್ಪಾದಕತೆ ಹೆಚ್ಚಾಗುತ್ತದೆ ಎಂಬುದು ಕಂಪೆನಿಯ ಮ್ಯಾನೇಜರ್ನ ಮಾತಾಗಿದೆ. ಬೇರೆ ಬೇರೆ ಕಂಪೆನಿಗಳು ಮನೆಯಲ್ಲೇ ಕೆಲಸ ಮಾಡುವ ಉದ್ಯೋಗಿಗಳಿಗೆ ಬೇರೆ ಬೇರೆ ಉಡುಗೊರೆಗಳನ್ನು ನೀಡಿ ಅವರನ್ನು ಪ್ರೋತ್ಸಾಹಿಸುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ